ಕಿರಿಕ್ ಮಾಡಿಕೊಂಡು ಕಿರುತೆರೆಯಿಂದ ಬ್ಯಾನ್ ಆಗಿದ್ದ ಕನ್ನಡದ ನಟ-ನಟಿಯರು ಇವರೇ: ಏನಿದು ವಿವಾದ?
ಚಿತ್ರರಂಗವಿರಲಿ, ಇಲ್ಲ ಕಿರುತೆರೆಯೇ ಇರಲಿ. ವಿವಾದಗಳು ಅನ್ನೋದು ಮಾಮೂಲಿಯಾಗಿದೆ. ಸಣ್ಣ ಕಾರಣಕ್ಕೋ, ದೊಡ್ಡ ಕಾರಣಕ್ಕೋ ಕಿತ್ತಾಡಿಕೊಂಡು ಆ ಪ್ರಾಜೆಕ್ಟ್‌ಗಳಿಂದಲೇ ಹೊರ ಬಂದಿರುವ ಸಾಕಷ್ಟು ಉದಾಹರಣೆಗಳು ಇವೆ. ಇದೆಲ್ಲಕ್ಕಿಂತ ಇನ್ನೂ ಒಂದು ಹೆಜ್ಜೆ ಮುಂದೆ ಅಂದರೆ, ಸಿನಿಮಾರಂಗ ಅಥವಾ ಕಿರುತೆರೆಯಿಂದಲೇ ಬ್ಯಾನ್ ಆದ ಉದಾಹರಣೆಗಳು ಕೂಡ ಸಾಕಷ್ಟು ಇವೆ.
ಅದರಲ್ಲೂ ಕಿರಿತೆರೆಯಲ್ಲಿ ಇತ್ತೀಚೆಗೆ ಬ್ಯಾನ್ ಅನ್ನುವ ಪದ ಹೆಚ್ಚಾಗಿ ಕೇಳಿ ಬರುತ್ತಿದೆ. ಅದರಲ್ಲೂ ಕನ್ನಡ ನಟ ನಟಿಯರ ವಿರುದ್ಧವೇ ಬ್ಯಾನ್ ಅನ್ನು ಅಸ್ತ್ರವನ್ನು ನಿರ್ಮಾಣ ಸಂಸ್ಥೆಗಳು ಉಪಯೋಗಿಸಿದ ಸಾಕಷ್ಟು ಉದಾಹರಣೆಗಳು ಕಣ್ಮುಂದೆನೇ ಇವೆ. ಇತ್ತೀಚೆಗಷ್ಟೇ ಇಂತಹ ಒಂದೆರಡು ಘಟನೆಗಳು ಕೂಡ ನಡೆದಿವೆ. ಆದರೆ, ಚಿತ್ರರಂಗದಲ್ಲಾಗಲಿ, ಕಿರುತೆರೆಯಲ್ಲಾಗಿ ಬ್ಯಾನ್ ಮಾಡುವ ಅಧಿಕಾರವಿಲ್ಲ. ಹೀಗಾಗಿ ಈ ಪದವಂತೂ ಬಳಕೆಯಾಗುತ್ತಿದೆ.

ಕೆಲವು ದಶಕಗಳ ಹಿಂದೆ ಜಗ್ಗೇಶ್ ಅವರನ್ನು ಚಿತ್ರರಂಗ ಬ್ಯಾನ್ ಮಾಡಬೇಕು ಅಂತ ನಿರ್ಧರಿಸಿದಾಗ ಅಣ್ಣಾವ್ರ ಅಖಾಡಕ್ಕೆ ಇಳಿದಿದ್ದರು. ಕಲಾವಿದರನ್ನು ಬ್ಯಾನ್ ಮಾಡುತ್ತೇವೆ ಅಂತ ಹೇಳಬಾರದೆಂದು ಜಗ್ಗೇಶ್ ಪರ ಬ್ಯಾಟಿಂಗ್ ಬೀಸಿದ್ದರು. ಹೀಗಾಗಿ ಬ್ಯಾನ್ ಬದಲು ಅಸಹಕಾರ ನೀಡುವ ತಂತ್ರವನ್ನು ಕಂಡುಕೊಂಡಿದ್ದಾರೆ. ಅದೇನೆ ಇದ್ದರೂ ಕನ್ನಡ ಕಿರುತೆರೆಯ ನಟ ನಟಿಯರು ಬ್ಯಾನ್ ಆಗುವಂತಹದ್ದು ಏನು ಮಾಡಿದರು? ಯಾಕೆ ವಿವಾದಕ್ಕೆ ಸಿಕ್ಕಿಕೊಂಡರು? ಆ ನಟರು ಯಾರು? ತಿಳಿಯುವುದಕ್ಕೆ ಮುಂದೆ ಓದಿ.
'ಗಿಣಿರಾಮ' -ನಯನಾ
'ಗಿಣಿರಾಮ', 'ಪಾಪ ಪಾಂಡು ಸೀಸನ್ 2' ಅಂತಹ ಧಾರಾವಾಹಿಗಳಲ್ಲಿ ನಟಿಸಿ ಜನಮನ ಗೆದ್ದಿದ್ದ ನಯನಾ ನಾಗರಾಜ್ ದಿಢೀರನೇ ಕಿರುತೆರೆಯಿಂದ ದೂರ ಆಗಿದ್ದರು. ಕೆಲವು ದಿನಗಳ ಬಳಿಕ ಖುದ್ದಾಗಿ ನಯನಾ ಅವರೇ ಸಂದರ್ಶನವೊಂದರಲ್ಲಿ ತನ್ನನ್ನು ಕಿರುತೆರೆಯಿಂದ ಬ್ಯಾನ್ ಮಾಡಲಾಗಿದೆ ಎಂದು ಹೇಳಿಕೊಂಡಿದ್ದರು. ಅದಕ್ಕೆ ಕಾರಣವನ್ನೂ ನೀಡಿದ್ದರು. 'ಗಿಣಿರಾಮ' ಧಾರಾವಾಹಿಯ ಚಿತ್ರೀಕರಣದ ವೇಳೆ ನಯನಾ ಹಾಗೂ ಕ್ಯಾಮರಾಮ್ಯಾನ್ ನಡುವೆ ಕಿತ್ತಾಟ ಶುರುವಾಗಿತ್ತು. ಅದು ಹಾಗೆ ಬೆಳೆದು ದೊಡ್ಡ ಮಟ್ಟಕ್ಕೆ ಹೋಗಿತ್ತು. ಕೊನೆಗೆ ನಯನಾ ಧಾರಾವಾಹಿಯನ್ನೇ ಬಿಡುವುದಕ್ಕೆ ನಿರ್ಧರಿಸಿದ್ದರು. ಹೀಗಾಗಿ ಧಾರಾವಾಹಿಗೆ ಅಂತ್ಯ ಹಾಡಲಾಗಿತ್ತು. ಬಳಿಕ ನಿರ್ಮಾಣ ಸಂಸ್ಥೆ ನಯನಾರಿಂದ ನಷ್ಟ ಆಗಿದ್ದು, ಧಾರಾವಾಹಿಯಲ್ಲಿ ನಟಿಸದಂತೆ ನಿಷೇಧ ಹೇರಲಾಯಿತು ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.
ತೆಲುಗಿನಲ್ಲಿ ಚಂದನ್ ಕುಮಾರ್
ಕನ್ನಡದ ಮತ್ತೊಬ್ಬ ಸ್ಪುರದ್ರೂಪಿ ನಟ ಚಂದನ್ ಕುಮಾರ್. ಕನ್ನಡದಲ್ಲಿ ಒಂದಿಷ್ಟು ಧಾರಾವಾಹಿಗಳಲ್ಲಿ ನಟಿಸಿದ ಬಳಿಕ ತೆಲುಗು ಧಾರಾವಾಹಿಗಳಿಗೆ ಎಂಟ್ರಿ ಕೊಟ್ಟಿದ್ದರು. ಅಲ್ಲಿಂದ 'ಶ್ರೀಮತಿ ಶ್ರೀನಿವಾಸ್' ಎಂಬ ಧಾರಾವಾಹಿಯಲ್ಲಿ ನಟಿಸುತ್ತಿದ್ದರು. ಧಾರಾವಾಹಿ ಚಿತ್ರೀಕರಣದ ವೇಳೆ ಚಂದನ್ ಕುಮಾರ್ ಹಾಗೂ ಡೈರೆಕ್ಷನ್ ಡಿಪಾರ್ಟ್‌ಮೆಂಟ್ ಮಧ್ಯೆ ಕಿರಿಕ್ ಆಗಿತ್ತು. ಡೈರೆಕ್ಷನ್ ಡಿಪಾರ್ಟ್‌ಮೆಂಟ್ ಇಬ್ಬರು ಸಹ ನಿರ್ದೇಶಕರು ಚಂದನ್ ಹಲ್ಲೆ ಮಾಡಿದ್ದಾರೆಂದು ಆರೋಪಿಸಿದ್ದರು. ಇದರಿಂದ ಕೊಂಡ ತೆಲುಗು ಟೆಲಿವಿಷನ್ ಟೆಕ್ನೀಷಿಯನ್ಸ್ ಮತ್ತು ವರ್ಕರ್ಸ್ ಫೆಡರೇಷನ್ ಅಲ್ಲಿನ ಟೆಲಿವಿಷನ್ ನಿರ್ಮಾಪಕರ ಮಂಡಳಿಗೆ ಪತ್ರ ಬರೆದು, "ತೆಲುಗು ಕಿರುತೆರೆ ಹಾಗೂ ಓಟಿಟಿಯಿಂದ ಚಂದನ್ ಕುಮಾರ್ ಅವರ ಮೇಲೆ ನಿಷೇಧ ಹೇರಬೇಕು" ಎಂದು ಒತ್ತಡ ಹೇರಿದ್ದರು. ಅಲ್ಲಿಂದ ತೆಲುಗು ಕಿರುತೆರೆಯಲ್ಲಿ ಕಾಣಿಸಿಕೊಂಡಿಲ್ಲ.

'ಜೊತೆ ಜೊತೆಯಲಿ'- ಅನಿರುದ್ಧ್
ಇನ್ನು ಅನಿರುದ್ಧ್ ಅವರ ವಿವಾದವಂತೂ ಗೊತ್ತೇ ಇದೆ. ಜೀ ಕನ್ನಡದ 'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಅನಿರುದ್ಧ್ ನಟಿಸುತ್ತಿದ್ದರು. ಈ ವೇಳೆ ಧಾರಾವಾಹಿ ತಂಡಕ್ಕೂ ಹಾಗೂ ಅನಿರುದ್ಧ್ ಮಧ್ಯೆ ಕಿತ್ತಾಟ ಶುರುವಾಗಿತ್ತು. ಈ ಘಟನೆ ಬ್ಯಾನ್ ಮಾಡುವವರೆಗೂ ಹೋಗಿತ್ತು. ಈ ಗಲಾಟೆ ಕಿರುತೆರೆಯ ನಿರ್ಮಾಪಕರ ಸಂಘದ ಮೆಟ್ಟಿಲೇರಿತ್ತು. ಅಲ್ಲಿ ಅನಿರುದ್ಧ್ ಅವರನ್ನು ಕಿರುತೆರೆಯಿಂದ ಬ್ಯಾನ್ ಮಾಡಬೇಕೆಂಬ ನಿರ್ಧಾರ ತೆಗೆದುಕೊಂಡಿದ್ದರು. ಆಗ ಫಿಲ್ಮ್ ಚೇಂಬರ್ ಎಂಟ್ರಿಕೊಟ್ಟಿತ್ತು. ಆಗ ಜೊತೆ ಜೊತೆಯಲಿ ಧಾರಾವಾಹಿ ನಿರ್ಮಾಪಕ, ಜೀ ಕನ್ನಡದ ಆ ಧಾರಾವಾಹಿಯ ಮೇಲ್ವಿಚಾರಕರು ಜಂಟಿ ಪ್ರೆಸ್‌ಮೀಟ್ ಮಾಡಿ ಸಾಲು ಸಾಲು ಆರೋಪ ಮಾಡಿದ್ದರು. ಕೊನೆಗೂ ಕಿರುತೆರೆಯ ನಿರ್ಮಾಪಕರ ಸಂಘ ಅನಿರುದ್ಧ್ ಬ್ಯಾನ್ ಅನ್ನೋದನ್ನು ಹಿಂತೆಗೆದುಕೊಂಡಿತ್ತು.
ಕನ್ನಡ ನಟಿ- ಪಲ್ಲವಿ ಗೌಡ
ಕನ್ನಡದ ಮತ್ತೊಬ್ಬ ನಟಿ ಪಲ್ಲವಿ ಗೌಡ. ಕನ್ನಡದಲ್ಲಿ ಚಂದ್ರ ಚಕೋರಿ, ಮನೆಯೊಂದು ಮೂರು ಬಾಗಿಲು, ಗಾಳಿಪಟ, ಸೇವಂತಿಗೆ, ಜೋಡಿಹಕ್ಕಿ, ಪರಿಣಯ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದರು. ಬಳಿಕ ತೆಲುಗು ಹಾಗೂ ಮಲಯಾಳಂ ಕಿರುತೆರೆಗೂ ಎಂಟ್ರಿ ಕೊಟ್ಟಿದ್ದರು. ತೆಲುಗಿನಲ್ಲಿ ಧಾರಾವಾಹಿಯೊಂದರಲ್ಲಿ ನಟಿಸುವ ಮುನ್ನ ಇನ್ನೊಂದರಲ್ಲಿ ನಟಿಸುವುದಿಲ್ಲ ಎಂದು ಅಗ್ರಿಮೆಂಟ್‌ಗೆ ಸಹಿ ಹಾಕಿದ್ದರು. ಆದರೆ, ಧಾರಾವಾಹಿಯಿಂದ ಸಂಭಾವನೆ ಸರಿಯಾಗಿ ಬಾರದ ಕಾರಣ ಮತ್ತೊಂದು ಸೀರಿಯಲ್‌ಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಹೀಗಾಗಿ ಆರು ತಿಂಗಳು ತೆಲುಗು ಕಿರುತೆರೆಯಿಂದ ಬ್ಯಾನ್ ಆಗಿದ್ದರು ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಇವರು ಬ್ಯಾನ್ ಆಗಿದ್ದರು ಎನ್ನುವ ಬಗ್ಗೆ ನಿಖರವಾದ ಕಾರಣವಿಲ್ಲ.


Click it and Unblock the Notifications











