ಅಯೋಧ್ಯೆ ರಾಮ ಮಂದಿರ ಉದ್ಘಾಟನೆ: ಬೆಳಗ್ಗೆ 9 ರಿಂದ 7.30ರವರೆಗೆ ಟಿವಿಯಲ್ಲಿ ನಿರಂತರ ರಾಮಾಯಣ
ಅಯೋಧ್ಯೆಯಲ್ಲಿ ರಾಮ ಮಂದಿರ ಅನಾವರಣಕ್ಕೆ ದಿನಗಣನೆ ಶುರುವಾಗಿದೆ. ಹಲವು ದಿನಗಳಿಂದ ಈ ಘಳಿಗೆಯನ್ನು ಕಣ್ತುಂಬಿಕೊಳ್ಳುವುದಕ್ಕೆ ಶ್ರೀರಾಮನ ಭಕ್ತರು ಕಾಯುತ್ತಿದ್ದಾರೆ. ಜನವರಿ 22ರಂದು ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ. ಅದಕ್ಕೆ ಸಕಲ ಸಿದ್ಧತೆಗಳು ಆರಂಭಗೊಂಡಿವೆ.
ಅಯೋಧ್ಯೆ ಶ್ರೀರಾಮ ಜನ್ಮ ಸ್ಥಳವಾಗಿದ್ದರಿಂದ ಅಲ್ಲಿಯೇ ಶ್ರೀರಾಮ ಮಂದಿರವನ್ನು ಸುಮಾರು 1800 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಹೀಗಾಗಿ ಜನವರಿ 22 ಶ್ರೀರಾಮ ಭಕ್ತರು ಹಾಗೂ ಹಿಂದೂಗಳಿಗೆ ಅವಿಸ್ಮರಣೀಯ ಕ್ಷಣ. ಈ ಕ್ಷಣವನ್ನು ಭಕ್ತಿಯಿಂದ ಭಾವದಿಂದ ಕಣ್ತುಂಬಿಕೊಳ್ಳಲು ಭಕ್ತರು ಸಿದ್ಧರಾಗಿದ್ದಾರೆ.

ಇದೇ ವೇಳೆ ಕಿರುತೆರೆಯಲ್ಲಿ ವಿನೂತನ ಪ್ರಯತ್ನ ಮಾಡಲಾಗಿದೆ. ಅಯೋಧ್ಯೆಯಲ್ಲಿ ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ಕಾರ್ಯಗಳು ಆರಂಭ ಆಗುತ್ತಿದ್ದಂತೆ ಕಿರುತೆರೆಯಲ್ಲೂ ರಾಮಾಯಣವನ್ನು ಪ್ರಸಾರ ಮಾಡುವುದಕ್ಕೆ ಜನಪ್ರಿಯ ಮನರಂಜನಾ ವಾಹಿನಿ ನಿರ್ಧರಿಸಿದೆ. ಕಿರುತೆರೆ ವೀಕ್ಷಕರನ್ನು ಭಕ್ತಿಭಾವದಲ್ಲಿ ಮುಳುಗಿಸಲು ನಿರ್ಧರಿಸಿದೆ. ಹಾಗಿದ್ರೆ, ವಾಹಿನಿಯಲ್ಲಿ ರಾಮಾಯಾಣ ಪ್ರಸಾರ ಆಗಲಿದೆ? ಎಲ್ಲಿಂದ ಎಲ್ಲಿವರೆಗೆ ಅನ್ನೋದನ್ನು ತಿಳಿಯಲು ಮುಂದೆ ಓದಿ.
ಹಿಂದಿ ಮನರಂಜನಾ ವಾಹಿನಿ ಸೋನಿ ಎಂಟರ್‌ಟೈನ್ಮೆಂಟ್ ಟೆಲಿವಿಷನ್‌ನಲ್ಲಿ ಜನವರಿ 22ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 7.30ರವರೆಗೆ ನಿರಂತರವಾಗಿ ಶ್ರೀರಾಮನ ಚರಿತ್ರೆಯನ್ನು ಪ್ರಸಾರ ಮಾಡಲು ನಿರ್ಧರಿಸಿದೆ. ಇಂತಹ ಪ್ರಯತ್ನಕ್ಕೆ ಸೋನಿ ಸಂಸ್ಥೆ ಕೈ ಹಾಕಿದೆ.

2024ರಂದು ಹೊಸ ವರ್ಷದ ಪ್ರಯುಕ್ತ ಜನವರಿ 1 ರಿಂದ 'ಶ್ರೀಮದ್ ರಾಮಾಯಣ' ಮಹಾ ಧಾರಾವಾಹಿಯನ್ನು ಸೋನಿ ಪ್ರಸಾರ ಮಾಡುತ್ತಿದೆ. ಕಳೆದ ಹದಿನೈದು ದಿನಗಳಲ್ಲಿ 'ಶ್ರೀಮದ್ ರಾಮಾಯಣ'ಕ್ಕೆ ಆರಂಭದಿಂದಲೇ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿದೆ. ಹಿಂದಿ ಕಿರುತೆರೆ ವೀಕ್ಷಕರು ಮೆಚ್ಚು ಸೂಚಿಸಿದ್ದಾರೆ. ಹೀಗಾಗಿ ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ದಿನದಂದು (ಜನವರಿ 22) 'ಶ್ರೀಮದ್ ರಾಮಾಯಣ'ದ ಎಲ್ಲಾ ಎಪಿಸೋಡ್‌ಗಳನ್ನು ಬೆಳಗ್ಗೆ 9 ಗಂಟೆಯಿಂದ ಸಂಜೆ 7.30ರವರೆಗೆ ಸೋನಿ ಪ್ರಸಾರ ಮಾಡಲಿದೆ.
ಈ ಸೀರಿಸ್‌ನಲ್ಲಿ ಶ್ರೀರಾಮನ ದೈವಿಕ ಜನನದಿಂದ 'ಶ್ರೀಮದ್ ರಾಮಾಯಣ' ಆರಂಭ ಆಗಲಿದೆ. ಗುರುಕುಲದಲ್ಲಿ ವಿದ್ಯಾಭ್ಯಾಸ, ರಾಜ ದಶರಥನ ಅರಮನೆಗೆ ಶ್ರೀರಾಮನ ಪ್ರವೇಶ, ಸೀತಾ ಶ್ರೀರಾಮನ ಸ್ವಯಂವರ, ಸೇರಿದಂತೆ ಸುಮಾರು 15 ಎಪಿಸೋಡ್‌ಗಳನ್ನು ಒಂದರ ಹಿಂದೊಂದು ಪ್ರಸಾರ ಮಾಡಲಿದೆ. ಈ ಕುರಿತು ಸೋನಿ ಎಂಟರ್‌ಟೈನ್ಮೆಂಟ್ ಟೆಲಿವಿಷನ್ ಪ್ರೋಮೊವನ್ನು ಪ್ರಸಾರ ಮಾಡಿದೆ.
'ಶ್ರೀಮದ್ ರಾಮಾಯಣ' ಹಿಂದಿ ಬೆಲ್ಟ್‌ನಲ್ಲಿ ಜನಪ್ರಿಯತೆಯನ್ನು ಪಡೆದುಕೊಂಡಿದೆ. ರಾಮಾಯಣವನ್ನು ನಿರೂಪಣೆ ಮಾಡಿದ ರೀತಿ, ಅದ್ಧೂರಿ ಮೇಕಿಂಗ್‌ಗೆ ವೀಕ್ಷಕರು ಮನಸೋತಿದ್ದಾರೆ. ಇದರಲ್ಲಿ ಶ್ರೀರಾಮನ ಅವತಾರದಲ್ಲಿ ಕಿರುತೆರೆ ನಟ ಸುಜತ್ ರೇಯು, ಸೀತೆಯ ಪಾತ್ರದಲ್ಲಿ ಪ್ರಾಚಿ ಬನ್ಸಾಲ್ ಹಾಗೂ ಲಕ್ಷ್ಮಣನಾಗಿ ಬಸಂತ್ ಭಟ್ ನಟಿಸುತ್ತಿದ್ದಾರೆ. ಕನ್ನಡ ಕಿರುತೆರೆಯಲ್ಲಿ ಇಂತಹ ಪ್ರಯತ್ನಗಳೇನಾದರೂ ಆಗುತ್ತಾ ಅಂತ ಕನ್ನಡಿಗರು ಎದುರು ನೋಡುತ್ತಿದ್ದಾರೆ.


Click it and Unblock the Notifications











