BBK 12: ಕ್ವಾಟ್ಲೆ ಕಿಚನ್‌ನಲ್ಲಿ ಮೂರು ಸ್ಪರ್ಧಿಗಳು ರಿವೀಲ್; ಕಾಕ್ರೋಚ್, ಮಲ್ಲಮ್ಮ, ಮಂಜುಭಾಷಿಣಿ ಎಂಟ್ರಿ
ಬಿಗ್ ಬಾಸ್ ಕನ್ನಡ ಸೀಸನ್ 12 ಆರಂಭ ಆಗುವುದಕ್ಕೆ ಇನ್ನು ಕೆಲವೇ ಕ್ಷಣಗಳು ಬಾಕಿ ಉಳಿದಿವೆ. ಇಲ್ಲಿವರೆಗೂ ಬಿಗ್ ಬಾಸ್ ಶೋಗೆ ಎಂಟ್ರಿ ಕೊಡುವ ಸ್ಪರ್ಧಿಗಳನ್ನು ರಿವೀಲ್ ಮಾಡದೆ ಗೌಪ್ಯವಾಗಿ ಇಡಲಾಗುತ್ತಿತ್ತು. ಆದರೆ, ಇದೇ ಮೊದಲ ಬಾರಿಗೆ ಕನ್ನಡದಲ್ಲಿ ಶೋ ಆರಂಭ ಆಗುವುದಕ್ಕೂ ಮುನ್ನ ಮೂವರು ಅಭ್ಯರ್ಥಿಗಳ ಹೆಸರನ್ನು ಅನಾವರಣ ಮಾಡಲಾಗಿದೆ. ಅದೂ ಇನ್ನೊಂದು ರಿಯಾಲಿಟಿ ಶೋನಲ್ಲಿ ಅನ್ನೋದು ವಿಶೇಷ.
ಇಂದು (ಸೆಪ್ಟೆಂಬರ್ 27) ಕಲರ್ಸ್ ಕನ್ನಡದ ಮತ್ತೊಂದು ಕಾಮಿಡಿ ಕುಕಿಂಗ್ ರಿಯಾಲಿಟಿ ಶೋ 'ಕ್ವಾಟ್ಲೆ ಕಿಚನ್' ಫಿನಾಲೆ ನಡೆದಿತ್ತು. ಈ ಶೋನಲ್ಲಿ ಬಿಗ್ ಬಾಸ್ ಸ್ಪರ್ಧಿಗಳ ಹೆಸರನ್ನು ಅನಾವರಣ ಮಾಡುತ್ತಾರೆಂದು ಹೇಳಲಾಗಿತ್ತು. ನಿರೀಕ್ಷೆ ಮಾಡಿದಂತೆ, 'ಕ್ವಾಟ್ಲೆ ಕಿಚನ್'ನಲ್ಲಿ ಮೂವರು ಸ್ಪರ್ಧಿಗಳ ಹೆಸರನ್ನು ರಿವೀಲ್ ಮಾಡಲಾಗಿದೆ. ಈ ಮೂಲಕ ಬಿಗ್ ಬಾಸ್ ಕನ್ನಡ ಸೀಸನ್ 12ರ ಬಗ್ಗೆ ಕುತೂಹಲವನ್ನು ದುಪ್ಪಟ್ಟು ಮಾಡಿದ್ದಾರೆ.

ಬಿಗ್ ಬಾಸ್ ಕನ್ನಡದ ಈ ವಿನೂತನ ಪ್ರಯತ್ನ ವೀಕ್ಷಕರಿಗೆ ಅಚ್ಚರಿ ಮೂಡಿಸಿದೆ. ಮೂವರು ಸ್ಪರ್ಧಿಗಳು ಯಾರು ಅನ್ನೋದನ್ನು ರಿಯಾಲಿಟಿ ಶೋ ಆರಂಭ ಆಗುವುದಕ್ಕೂ ಮುನ್ನವೇ ರಿವೀಲ್ ಮಾಡಿದ ಅಸಲಿ ಕಾರಣ ನಾಳೆ (ಸೆಪ್ಟೆಂಬರ್ 28) ಬಿಗ್ ಬಾಸ್ ವೇದಿಕೆ ಮೇಲೆ ಕಿಚ್ಚ ಸುದೀಪ್ ರಿವೀಲ್ ಮಾಡುವ ಸಾಧ್ಯತೆಯಿದೆ. ಹಾಗಿದ್ದರೆ ಮೊದಲ ಮೂರು ಸ್ಪರ್ಧಿಗಳು ಯಾರು? ಅವರ ಎಂಟ್ರಿ ಹೇಗಿರುತ್ತೆ? ಅನ್ನೋದನ್ನು ನೋಡುವುದಕ್ಕೆ ಮುಂದೆ ಓದಿ.
ಮೊದಲ ಸ್ಪರ್ಧಿ ಕಾಕ್ರೋಚ್ ಸುಧಿ
ನಿರೀಕ್ಷೆ ಮಾಡಿದಂತೆ ಬಿಗ್ ಬಾಸ್ ಮನೆಗೆ ಕಾಕ್ರೋಚ್ ಸುಧಿ ಮೊದಲ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಒಂದು ಮುನ್ನವಷ್ಟೇ ಮಾಸ್ಕ್ ಧರಿಸಿ ಜನರು ಮುಂದೆ ಅಭಿಪ್ರಾಯ ಕೇಳಿ ವಿಡಿಯೋ ಮಾಡಿದ್ದರು. ಆ ವೇಳೆ ಕೆಲವರು ಕಾಕ್ರೋಚ್ ಸುಧಿ ಎಂದು ಗುರುತಿಸಿದ್ದರು. ಈಗ ಕ್ವಾಟ್ಲೆ ಕಿಚನ್ ಫಿನಾಲೆಯಲ್ಲಿ ಕಾಕ್ರೋಚ್ ಸುಧಿಯ ಹೆಸರನ್ನು ರಿವೀಲ್ ಮಾಡಲಾಗಿದೆ. 'ಟಗರು' ಸಿನಿಮಾದಲ್ಲಿ ಕಾಕ್ರೊಚ್ ಪಾತ್ರದಲ್ಲಿ ನಟಿಸಿದ್ದರು. ಹೀಗಾಗಿ ಇವರು ಕಾಕ್ರೋಚ್ ಸುಧಿ ಎಂದೇ ಜನಪ್ರಿಯರಾಗಿದ್ದಾರೆ. ಇಲ್ಲಿಂದ ವಿಲನ್ ಪಾತ್ರಗಳಲ್ಲಿ ಹೆಚ್ಚಾಗಿ ನಟಿಸುತ್ತಿರುವ ಸುಧಿ ಬಿಗ್ ಬಾಸ್ ಮನೆ ಪ್ರವೇಶ ಮಾಡಿದ್ದು, ಅಲ್ಲಿ ಅವರ ಅಸಲಿ ವ್ಯಕ್ತಿತ್ವ ರಿವೀಲ್ ಆಗಲಿದೆ.
2ನೇ ಸ್ಪರ್ಧಿ ಮಂಜು ಭಾಷಿಣಿ
ಬಾಗ್ ಬಾಸ್ ಮನೆಯ ಎರಡನೇ ಸ್ಪರ್ಧಿಯಾಗಿ ಮಂಜು ಭಾಷಿಣಿ ಎಂಟ್ರಿ ಕೊಟ್ಟಿದ್ದಾರೆ. ಇವರು ನಟಿಸಿದ 'ಸಿಲ್ಲಿ ಲಲ್ಲಿ' ಧಾರಾವಾಹಿ ಕನ್ನಡಿಗರ ಪ್ರತಿಯೊಂದು ಮನೆಯಲ್ಲೂ ಸಿಕ್ಕಾಪಟ್ಟೆ ಜನಪ್ರಿಯವಾಗಿತ್ತು. ಅಲ್ಲಿಂದ ಇವರ ಮಂಜು ಭಾಷಿಣಿ ಕಿರುತೆರೆಯಲ್ಲಿ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳುತ್ತಾ ಮುಂದೆ ಸಾಗಿದ್ದರು. ಸದ್ಯಕ್ಕೆ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಬಡ್ಡಿ ಬಂಗಾರಮ್ಮನ ಪಾತ್ರದಲ್ಲಿ ನಟಿಸಿ ಮತ್ತೆ ಕಿರುತೆರೆ ವೀಕ್ಷಕರಿಗೆ ಮನರಂಜನೆ ನೀಡಿದ್ದರು. ಇವರು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟು ಅಚ್ಚರಿ ಮೂಡಿಸಿದ್ದಾರೆ.
3ನೇ ಸ್ಪರ್ಧಿ ಮಲ್ಲಮ್ಮ
ಸೋಶಿಯಲ್ ಮೀಡಿಯಾದಲ್ಲಿ ಜನಪ್ರಿಯರಾಗಿರುವ ಮಲ್ಲಮ್ಮ ಮೂರನೇ ಅಭ್ಯರ್ಥಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಮಲ್ಲಮ್ಮನ ಎಂಟ್ರಿ ಬಿಗ್ ಬಾಸ್ ಪ್ರಿಯರಿಗೆ ಶಾಕ್ ಕೊಟ್ಟಿದೆ. ಆದರೆ, ಕಳೆದ ಬಾರಿ ಹನುಮಂತನನ್ನು ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಡಿಸಿದ್ದ ಬಿಗ್ ಬಾಸ್ ಈ ಬಾರಿ ಆ ಸ್ಥಾನಕ್ಕೆ ಮಲ್ಲಮ್ಮನನ್ನು ಕರೆದುಕೊಂಡು ಬಂದಿದೆ. ತಮ್ಮ ಮಾತುಗಳ ಮೂಲಕವೇ ಸೋಶಿಯಲ್ ಮೀಡಿಯಾದಲ್ಲಿ ಜನಪ್ರಿಯರಾಗಿರುವ ಮಲ್ಲಮ್ಮ ದೊಡ್ಮನೆಯಲ್ಲಿ ಎಷ್ಟು ದಿನ ಇರುತ್ತಾರೆ? ಇಲ್ಲ ಮೊದಲನೇ ವಾರಕ್ಕೆ ಸೀಮಿತವಾಗುತ್ತಾರಾ? ಅನ್ನೋ ಕುತೂಹಲ ಮೂಡಿದೆ.


Click it and Unblock the Notifications











