BBK 12: ಊಟ ಬಿಟ್ಟ ಅಶ್ವಿನಿ ಗೌಡ; ಬಿಗ್ ಬಾಸ್ ಹೊರಗೆ ಕಳಿಸ್ತಾರಾ? ರಘು ಕ್ಷಮೆ ಕೇಳ್ತಾರಾ?
ಬಿಗ್ ಬಾಸ್ ಕನ್ನಡ ಸೀಸನ್ 12 ದಿನೇ ದಿನೇ ಇಂಟ್ರೆಸ್ಟಿಂಗ್ ಆಗ್ತಾ ಇದೆ. ಅದರಲ್ಲೂ ಅಶ್ವಿನಿ ಗೌಡ ಹಾಗೂ ಗಿಲ್ಲಿ ನಟ ವೈಮನಸ್ಸು ಮುಂದುವರೆದಿದೆ. ಈಗ ಗಿಲ್ಲಿ ನಟನ ಜೊತೆ ರಘು ಕೂಡ ಅಶ್ವಿನಿ ವಿರುದ್ಧ ತಿರುಗಿಬಿದ್ದಿದ್ದಾರೆ. ಹೀಗಾಗಿ ಮನೆಯಲ್ಲಿ ನಿರ್ಮಾಣವಾಗುತ್ತಿರುವ ಸನ್ನಿವೇಶಗಳು ಅಶ್ವಿನಿಗೆ ಕಣ್ಣೀರು ತರಿಸುತ್ತಿದೆ. ಆರಂಭದ ದಿನಗಳಲ್ಲಿ ಹೀರೋ ಆಗಿದ್ದ ಗಿಲ್ಲಿ ಈಗ ಮನೆಯಲ್ಲಿ ಅಶ್ವಿನಿ ಗೌಡ ವಿರುದ್ಧ ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ ಅಂತ ಅನಿಸೋಕೆ ಶುರುವಾಗಿದೆ.
ಹಾಗಂತ ಅಶ್ವಿನಿ ಗೌಡರದ್ದು ತಪ್ಪೇ ಇಲ್ಲ ಅಂತಲ್ಲ. ಎಲ್ಲದಕ್ಕೂ ಖಾರವಾಗಿ ಪ್ರತಿಕ್ರಿಯೆ ನೀಡುವುದಕ್ಕೆ ಹೋಗಿ ಮನೆಯವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಮನೆಯವರ ಮನಸ್ಸಿಗೂ ಹರ್ಟ್ ಮಾಡಿದ್ದೂ ಇದೆ. ಇದೇ ಅವರನ್ನು ಸಂಕಷ್ಟಕ್ಕೆ ಸಿಲುಕಿಸಿದ್ದೂ ಕೂಡ ಇದೆ. ಇಷ್ಟು ದಿನ ಅಶ್ವಿನಿ ಗೌಡ ಜೊತೆ ಗಿಲ್ಲಿ, ಕಾವ್ಯಾ ಕಿತ್ತಾಡುತ್ತಿದ್ದರು. ಈಗ ರಘು ಕೂಡ ಸೇರಿಕೊಂಡಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ರಘು ಎರಡನೇ ಬಾರಿಗೆ ಕ್ಯಾಪ್ಟನ್ ಆಗಿದ್ದಾರೆ. ಕ್ಯಾಪ್ಟನ್ ಆದವರಿಗೆ ಇಡೀ ಮನೆಯನ್ನು ಸಂಭಾಳಿಸುವ ಜವಾಬ್ದಾರಿ ಇರುತ್ತದೆ. ಮನೆ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡಿಸಬೇಕಾಗುತ್ತದೆ. ಅದೇ ರೀತಿ ಅಶ್ವಿನಿ ಅವರಿಗೆ ಕೆಲವು ಕೆಲಸಗಳನ್ನು ವಹಿಸಿದ್ದರು ರಘು. ಆದರೆ ಅಶ್ವಿನಿ ಮಾಡಿಲ್ಲ. ಇದು ರಘು ಕೆಣಕುವಂತೆ ಮಾಡಿತ್ತು. ಸಾಲದ್ದಕ್ಕೆ ಗಿಲ್ಲಿ ಮಾತುಗಳು ರಘು ಕೆಣಕಿತ್ತು. ಇದು ಅಶ್ವಿನಿ ಗೌಡ ಉಪವಾಸ ಬೀಳುವವರೆಗೂ ತಂದು ನಿಲ್ಲಿಸಿದೆ.
ಬೀನ್ ಬ್ಯಾಗ್ ಮೇಲೆ ಮಲಗಿದ್ದ ಅಶ್ವಿನಿಗೆ ರಘು ಕೆಲಸ ಮಾಡಲು ಹೇಳಿದರು. ಆದರೆ ಅಶ್ವಿನಿ ಅವರು ನಂಗೆ ಬ್ಯಾಕ್ ಪೇನ್ ಇದೆ. ಹತ್ತು ನಿಮಿಷ ಸುಧಾರಿಸಿಕೊಂಡು ಮಾಡುತ್ತೇನೆ ಎಂದು ಹೇಳುತ್ತಾರೆ. ಆಗ ಹತ್ತು ನಿಮಿಷದಲ್ಲಿ ಬ್ಯಾಕ್ ಪೈನ್ ಹೊರಟು ಹೋಗುತ್ತಾ? ಎಂದು ಹೇಳುತ್ತಾರೆ. ರಘು ಹೇಳಿದ ಮಾತುಗಳಿಗೆ ತಾಳ್ಮೆ ಕಳೆದುಕೊಂಡು ಏನಾದ್ರು ಮಾಡ್ಕೊ ಹೋಗು ಅಂದಿದ್ದೆ ತಡ, "ಏಕವಚನದಲ್ಲಿ ಮಾತನಾಡಬೇಡ. ನೀನ್ಯಾರು ಅದು ಇದು ಅಂತ ಹೇಳುವುದಕ್ಕೆ" ಎಂದು ರಘು ಮತ್ತು ಅಶ್ವಿನಿ ಇಬ್ಬರು ಜಗಳಕ್ಕೆ ನಿಂತಿದ್ದಾರೆ.
ಈ ವಾಗ್ಯುದ್ಧದಲ್ಲಿ ಅಶ್ವಿನಿ ಗೌಡಗೆ "ಎಂಟು ವಾರದಲ್ಲಿ ಅದೇನು ಕಿತ್ತು ದಬಾಕಿದ್ದೀಯ" ಎಂದು ರಘು ಹೇಳುತ್ತಾರೆ. ಇದು ಅಶ್ವಿನಿಗೆ ಇನ್ನಷ್ಟು ನೋವುಂಟು ಮಾಡುತ್ತೆ. ಅಶ್ವಿನಿ ಕಣ್ಣೀರು ಹಾಕುತ್ತಾ, ಬಿಗ್ ಬಾಸ್ ನಾನು ಮನೆಯಿಂದ ಹೊರಗೆ ಹೋಗ್ತೀನಿ. ಡೋರ್ ಓಪನ್ ಮಾಡಿ ಅಂತ ಕೂತಿದ್ದರು. ಆದರೆ, ಬಿಗ್ ಬಾಸ್ ಡೋರ್ ಓಪನ್ ಆಗಲಿಲ್ಲ. ಮನೆಯವರು ಅಶ್ವಿನಿ ಅವರನ್ನು ಸಮಾಧಾನ ಮಾಡುವ ಪ್ರಯತ್ನ ಮಾಡಿದರು. ಆದರೆ, ಆಗಲಿಲ್ಲ.

ಸಾಲದ್ದಕ್ಕೆ ಅಶ್ವಿನಿ ಗೌಡ ಊಟ ಮಾಡುವುದನ್ನು ನಿಲ್ಲಿಸಿದ್ದಾರೆ. ಮನೆಯ ಮಂದಿ ಎಷ್ಟು ಪ್ರಯತ್ನ ಪಟ್ಟರೂ ಮನವೊಲಿಸುವುದಕ್ಕೆ ಆಗಲಿಲ್ಲ. ಈ ಮಧ್ಯೆ ಟಾಸ್ಕ್ ಬಂದು, ಅದನ್ನು ಅಶ್ವಿನಿ ಗೌಡ ಸೋತಿದ್ದಾರೆ. ರಘುಗೆ ಅಶ್ವಿನಿ ಬಳಿ ಹೋಗಿ ಊಟ ಮಾಡುವಂತೆ ಒಂದು ಹೇಳುವಂತೆ ಮಾಳು, ರಕ್ಷಿತಾ, ಜಾಹ್ನವಿ ಹೇಳುತ್ತಾರೆ. ಊಟಕ್ಕೆ ಕರೆಯುವುದಕ್ಕೆ ರಘು ಮನಸ್ಸು ಮಾಡಿದರೂ, ಗಿಲ್ಲಿ ತಡೆ ಹಿಡಿದಿದ್ದಾರೆ. ಅಶ್ವಿನಿ ಗೌಡ ಉಪವಾಸ ಮುಂದುವರೆಸುತ್ತಾರಾ? ರಘು ಮನವೊಲಿಸುತ್ತಾರಾ? ಅನ್ನೋದು ಮುಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.
ಕಳೆದ ವಾರವಷ್ಟೇ ಹೆಚ್ಚು ಜಗಳ ಮಾಡದೆ ಸೈಲೆಂಟ್ ಆಗಿದ್ದ ಅಶ್ವಿನಿ ಈಗ ಮತ್ತೆ ವೈಲೆಂಟ್ ಆಗಿದ್ದಾರೆ. ಕಳೆದ ವಾರ ಮನೆಯವರೆಲ್ಲ ಸೇರಿ ಉತ್ತಮ ಎಂಬ ಪದಕವನ್ನು ನೀಡಿದ್ದರು. ಬಿಗ್ ಬಾಸ್ ಮನೆಯೊಳಗೆ ಅಶ್ವಿನಿ ಅವರನ್ನ ಗಿಲ್ಲಿ ಮಾತ್ರ ಕಾಲು ಎಳೆಯುತ್ತಿದ್ದರು. ಕೆಲವೊಮ್ಮೆ ಗಿಲ್ಲಿ ಮಾಡುವ ತಮಾಷೆಯೇ ಅಶ್ವಿನಿ ಅವರನ್ನ ಟ್ರಿಗರ್ ಮಾಡ್ತಾ ಇತ್ತು. ನಿನ್ನೆಯಷ್ಟೇ ಮರ್ಯಾದೆ ವಿಚಾರಕ್ಕೆ ಗಿಲ್ಲಿ ಜೊತೆಗೂ ಜಗಳವಾಡಿದ್ರು. ಹೋಗು ಬಾ ಎನ್ನಬೇಡ ಎಂದಿದ್ದರು. ಈಗ ರಘು ಜೊತೆಗೂ ಅದೇ ವಿಚಾರಕ್ಕೆ ಜಗಳವಾಡಿದ್ದಾರೆ.
ಅಶ್ವಿನಿ ಕೆಲಸ ಮಾಡುವ ವಿಚಾರದಲ್ಲಿ ಮೈಗಳ್ಳತನ ಮಾಡ್ತಾರೆ ಅನ್ನೋದು ಎಲ್ಲರೂ ನೋಡಿದ್ದಾರೆ. ಹಾಗೇ ಮನೆಯಲ್ಲೂ ಎಲ್ಲರಿಗೂ ಗೊತ್ತು. ಹೀಗಾಗಿಯೇ ರಘು ಬೇಸತ್ತಿದ್ದಾರೆ. ಅವರದ್ದೇ ಉಸ್ತುವಾರಿ ಇರುವ ಕಾರಣಕ್ಕೆ ಮನೆಯ ಕೆಲಸಗಳನ್ನು ಮಾಡಿಸಲೇಬೇಕಾಗಿದೆ. ಮನವಿ ಮಾಡುವಷ್ಟು ಮಾಡಿದ್ದರು. ಅಶ್ವಿನಿ ಕೇಳದೆ ಹೋದಾಗ ಏನಾದ್ರೂ ಮಾಡ್ಕೊ ಹೋಗು ಅಂತ ಕೋಪದಲ್ಲಿ ಹೇಳಿದರು ಎನಿಸುತ್ತದೆ. ಈಗ ಅದೇ ಪದ ಜೋರು ಜಗಳಕ್ಕೆ ಕಾರಣವಾಗಿದೆ. ಮೊದಲೆಲ್ಲಾ ಅಶ್ವಿನಿ ಜಗಳಕ್ಕೆ ನಿಂತರೆ ಜಗಳವನ್ನಷ್ಟೇ ಆಡ್ತಾ ಇದ್ದರು. ಆದರೆ ಕಳೆದ ಕೆಲ ದಿನಗಳಿಂದ ಎಮೋಷನಲ್ ಆಗ್ತಾ ಇದ್ದಾರೆ. ಮನೆಯಲ್ಲಿ ಎಲ್ಲರೂ ಅಶ್ವಿನಿ ವಿರುದ್ಧ ತಿರುಗಿ ಬಿದ್ದ ಕಾರಣಕ್ಕೆ ಏನೋ ಕುಗ್ಗಿ ಬಿಟ್ಟರೇ? ಎನ್ನುವ ಪ್ರಶ್ನೆಗೂ ಹುಟ್ಟಿಕೊಂಡಿದೆ.


Click it and Unblock the Notifications











