BBK 12: "ರಿಶಾ-ನನ್ನ ನಡುವೆ ಏನಿಲ್ಲ; ನಾಲ್ಕೈದು ದಿನಗಳಿಂದ ಬಿಗ್ ಬಾಸ್ ಮನೆ ನನಗಲ್ಲ ಅಂತ ಅನಿಸುತ್ತಿತ್ತು"-ಚಂದ್ರಪ್ರಭ
ಈ ವಾರ ಬಿಗ್ ಬಾಸ್ ಕನ್ನಡ ಸೀಸನ್ 12 ನಾಟಕೀಯವಾಗಿತ್ತು. ಹಾಸ್ಯ ನಟ ಚಂದ್ರಪ್ರಭ ಎಲಿಮಿನೇಟ್ ಆಗುತ್ತಾರೆ ಅನ್ನೋದು ಬಹುಶ: ವೀಕ್ಷಕರಿಗೆ ಗೊತ್ತಿರಲಿಕ್ಕಿಲ್ಲ. ಬಿಗ್ ಬಾಸ್ ಮನೆಯಲ್ಲಿ ಇನ್ನೊಂದಿಷ್ಟು ದಿನ ಚಂದ್ರಪ್ರಭ ಇರಬಹುದು. ಜನರನ್ನು ನಗಿಸಬಹುದೆಂಬ ನಿರೀಕ್ಷೆಯಿತ್ತು. ಆದರೆ, ಅದೆಲ್ಲವೂ ಹುಸಿಯಾಗಿದೆ.
ಚಂದ್ರಪ್ರಭ ಬಿಗ್ ಬಾಸ್ ಮನೆಯಲ್ಲಿ ತುಂಬಾನೇ ಬೇಜಾರಿನಲ್ಲಿದ್ದರು. ಎಲಿಮಿನೇಟ್ ಆಗುವುದಕ್ಕೂ ನಾಲ್ಕೈದು ದಿನ ಮುನ್ನ ಮನೆಯಿಂದ ಹೊರ ಹೋಗಬೇಕು ಅಂತ ನಿರ್ಧರಿಸಿದ್ದೆ ಅಂತ ಫಿಲ್ಮಿಬೀಟ್ ಕನ್ನಡಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಇನ್ನೊಂದು ಅಚ್ಚರಿ ವಿಷಯ ಅಂದರೆ, ಬಿಗ್ ಬಾಸ್ ನಮ್ಮಂಥವರಿಗೆ ಅಲ್ಲ ಅಂತಾನೂ ಹೇಳಿದ್ದಾರೆ. ಅದ್ಯಾಕೆ ಅನ್ನೋದನ್ನು ಅವರೇ ಹೇಳ್ತಾರೆ ಕೇಳಿ.

ಚಂದ್ರಪ್ರಭ ಬಿಗ್ ಬಾಸ್ ಮನೆಯಲ್ಲಿ ವೀಕ್ ಆಗಿಟ್ಟರು ಅಂತ ಕಿರುತೆರೆ ವೀಕ್ಷಕರಿಗೆ ಅನಿಸೋಕೆ ಶುರುವಾಗಿತ್ತು. ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸಬಹುದೆಂದೇ ಭಾವಿಸಿದ್ದರು. ಆದರೆ, ಚಂದ್ರಪ್ರಭ ಜನರನ್ನು ನಗಿಸುವ ಬದಲು ಮಂಕಾದರು. "ಬಿಗ್ ಬಾಸ್ ಜರ್ನಿ ಇನ್ನೂ ಲಾಂಗ್ ಇರುವುದರಿಂದ ಇನ್ನೂ ಸ್ವಲ್ಪ ದಿನ ಇರುತ್ತೇನೆ ಅಂತಲೇ ಅಂದುಕೊಂಡಿದ್ದೆ. ಆದರೆ, ನಾನೇ ಸ್ವಯಂ ಘೋಷಿತನಾಗಿ ಬಂದು ಬಿಟ್ಟೆ. ನಾನು ಕಾನ್ಫಿಡೆನ್ಸ್‌ನಲ್ಲಿಯೇ ಅಲ್ಲಿಗೆ ಹೋಗಿದ್ದೆ. ವ್ಯಕ್ತಿತ್ವದ ಆಟ ಅಂತ ಬಂದಾಗ ಚಂದ್ರಪ್ರಭ ಹೊರಗಡೆ ಹೇಗೆ ಇದ್ದನೋ ಹಾಗೇ ಮನೆಯೊಳಗೂ ಇದ್ದೆ. ಮನೆಯೊಳಗೆ ನಾನು ವೀಕ್ ಆಗಿದ್ದೆ ಅಂತ ಅನಿಸಲೇ ಇಲ್ಲ" ಎನ್ನುತ್ತಾರೆ.
ಈ ಸಂದರ್ಶನದಲ್ಲಿ ಜಂಟಿಯಾಗಿ ಇದ್ದಷ್ಟು ದಿನ ತಮ್ಮ ಪಾಡು ಹೇಗಿತ್ತು ಅನ್ನೋದನ್ನು ಹೇಳಿಕೊಂಡಿದ್ದಾರೆ. "ಮೊದಲು ಜಂಟಿಯಾಗಿ ಹೋದಾಗ ಒಂಥರ ಖುಷಿ. ಯಾಕಂದ್ರೆ, ಮನೆಯಲ್ಲಿ ಏನೇ ಕೆಲಸ ಮಾಡಬೇಕಾದರೂ ಒಂಟಿಯಾಗಿಯೇ ಮಾಡುತ್ತೇವೆ. ಅದೇ ಜಂಟಿಯಾಗಿ ಇದ್ದಾಗ ಯಾವ ರೀತಿ ಮಾಡುವುದಕ್ಕೆ ಸಾಧ್ಯ? ಅನ್ನೋ ಕುತೂಹಲವಿತ್ತು. ಯಾಕಂದ್ರೆ ಒಬ್ಬರು ಗಾಢವಾಗಿ ಮಲಗಿದ್ದಾಗ, ನನಗೆ ವಾಶ್ ರೂಂಗೆ ಹೋಗಬೇಕು ಅಂತ ಅನಿಸುತ್ತೆ. ಮಲಗಿರೋರಿಗೆ ತೊಂದರೆ ಕೊಡಬಾರದು. ನಾವೇ ಹೋಗೋಣ ಅಂತನೂ ಅಂದುಕೊಳ್ಳುವುದಕ್ಕೆ ಆಗುವುದಿಲ್ಲ. ಹೋಗ್ತಾ ಹೋಗ್ತಾ ಹೇಗಾಗಿತ್ತು ಅಂದರೆ, ಮೊದಲು ಈ ಬೇಡಿಯನ್ನು ತೆಗೆದು ಬಿಟ್ಟರೆ ಸಾಕು ಅಂತ ಅನಿಸಿತ್ತು." ಎಂದು ಚಂದ್ರಪ್ರಭ ಹೇಳಿದ್ದಾರೆ.
ವೀಕೆಂಡ್‌ನಲ್ಲಿ ಕಿಚ್ಚ ಸುದೀಪ್ ಬಿಗ್ ಬಾಸ್ ಮನೆಯಲ್ಲಿ ಊಸರವಳ್ಳಿ ಯಾರು? ಎಂಬ ಪ್ರಶ್ನೆ ಮಾಡುತ್ತಾರೆ. ಆಗ ಧನುಷ್ ಆ ಬೋರ್ಡ್ ಅನ್ನು ಚಂದ್ರಪ್ರಭ ಅವರ ಕತ್ತಿಗೆ ತಗಲಾಕುತ್ತಾರೆ. ಇದು ಅವರ ಮನಸ್ಸಿಗೆ ಬಹಳ ನೋವಾಗುತ್ತೆ. ಇದೇ ವೇಳೆ ಇನ್ನೊಂದು ವಿಡಿಯೋ ಪ್ಲೇ ಮಾಡುತ್ತಾರೆ. ರಿಶಾ ಹಾಗೂ ಚಂದ್ರಪ್ರಭ ಡ್ಯಾನ್ಸ್ ಮಾಡುವ ವಿಡಿಯೋ ಆಗಿರುತ್ತೆ. ಅದನ್ನು ನೋಡುತ್ತಿದ್ದಂತೆ ಬ್ರೇಕ್‌ನಲ್ಲಿ ಚಂದ್ರಪ್ರಭ ಬಿಗ್ ಬಾಸ್ ಮನೆಯಿಂದ ಈಗಲೇ ಹೊರಗೆ ಹೋಗುತ್ತೇನೆಂದು ಹೊರಡಲು ಮುಂದಾಗುತ್ತಾರೆ. ತಮ್ಮ ಹಾಗೂ ರಿಶಾ ನಡುವಿನ ಬಾಂಧವ್ಯದ ಬಗ್ಗೆ ಚಂದ್ರಪ್ರಭ ಹೀಗಂದಿದ್ದಾರೆ.
"ಬಿಗ್ ಬಾಸ್ ಮನೆಯೊಳಗೆ ಎಲ್ಲರೂ ಚಂದ್ರಣ್ಣ ಚಂದ್ರಣ್ಣ ಅಂತ ಕರೆಯೋರು. ರಿಶಾ ಗೌಡ ಅವರೊಬ್ಬರು ಮಾತ್ರ ಚಂದ್ರು ಡಾರ್ಲಿಂಗ್ ಅಂತ ಕರೆಯೋರು. ನನಗೂ ಮದುವೆ ಆಗಿದೆ ಅನ್ನೋದು ಗೊತ್ತು. ಅವರೂ ಒಳ್ಳೊಳ್ಳೆ ಸಿನಿಮಾಗಳಲ್ಲಿ ಆಕ್ಟ್ ಮಾಡಿದ್ದಾರೆ. ಇಬ್ಬರೂ ಫ್ರೆಂಡ್ಲಿ ಆಗಿ ಇದ್ವಿ. ಇಬ್ಬರೂ ಚೆನ್ನಾಗಿದ್ದಿದ್ದು ನೋಡಿ ಜನರು ಏನು ಅಂದುಕೊಳ್ಳುತ್ತಾರೋ? ಅನ್ನೋ ಭಯವಿತ್ತು. ಇನ್ನು ಇಷ್ಟು ದಿನ ಚೆನ್ನಾಗಿ ಇದ್ದವರು. ಈಗ್ಯಾಕೆ ಹೀಗೆ ಅಂತಾರೆ ಅಂದ್ಕೊಂಡು ಹಿಂದೆ ಹೇಗಿದ್ವೋ? ಹಾಗೆ ಇರೋಣ ಅಂದ್ಕೊಂಡ್ವಿ." ಎಂದಿದ್ದಾರೆ.
ಫಿಲ್ಮ್ ಬೀಟ್ ಕನ್ನಡದ ಜೊತೆ ಬಿಗ್ ಬಾಸ್ ಬಗ್ಗೆ ಇನ್ನೂ ಕೆಲವು ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಬಿಗ್ ಬಾಸ್ ನನ್ನಂಥವನಿಗೆ ಅಲ್ಲ ಅಂತನೂ ಹೇಳಿಕೊಂಡಿದ್ದಾರೆ. "ನಾಲ್ಕೈದು ದಿನಗಳಿಂದಲೂ ನನ್ನಂಥವನಿಗೆ ಬಿಗ್ ಬಾಸ್ ಅಲ್ಲ. ಬೇಡ ಬಿಗ್ ಬಾಸ್ ಅಂತ ಅನಿಸುತ್ತಿತ್ತು. ನನಗೆ ಉತ್ತಮ ಬಂದಾಗಲೇ ನಾನು ಹೋಗಿಬಿಡೋಣ ಅಂದುಕೊಂಡೆ. ಈ ವಾರ ತಡೆಯೋಕೆ ಆಗಲಿಲ್ಲ. ಹೊರಗೆ ಹೋಗಬೇಕು ಅಂತ ಬಾಗಿಲು ಬಡಿದೆ. ಆದರೆ, ಅವರು ತೆಗೆಯಲಿಲ್ಲ. ಆಮೇಲೆ ಸುದೀಪ್ ನೀವು ಹೊರ ಹೋಗಬೇಕು ಅಂದಾಗಲೂ ಜನರ ಆಶೀರ್ವಾದ ಬೇಕು. ಇರೋದಕ್ಕೂ ಜನರ ಆಶೀರ್ವಾದ ಬೇಕು ಎಂದರು. ಆದರೂ ಹಠ ಮಾಡಿ ಹೊರಬಂದೆ" ಎಂದು ಚಂದ್ರಪ್ರಭ ಹೇಳಿದ್ದಾರೆ.
ಬಿಗ್ ಬಾಸ್ ಮನೆಯಿಂದ ಹೊರಬರುವಾಗಲೂ ಚಂದ್ರಪ್ರಭ ಯಾರಿಗೂ ಏನೂ ಹೇಳಲಿಲ್ಲ. ರಕ್ಷಿತಾ ಶೆಟ್ಟಿ ಬಿಗಿದಪ್ಪಿ ಕಣ್ಣೀರು ಹಾಕಿದರೂ, ಏನೂ ಹೇಳದೆ ಬಂದುಬಿಟ್ಟರು. "ನನಗೆ ಆ ಟೈಮ್‌ನಲ್ಲಿ ನನಗೆ ಬಿಗ್ ಬಾಸ್ ಬೇಡ ಅಂತ ಬೇಸತ್ತು ಹೋಗಿದ್ದೆ. ಸುದೀಪ್ ಸರ್ ಮುಂದೆನೂ ನಾನು ಕಾರಣ ಹೇಳಿಲ್ಲ. ಮನೆಯಿಂದ ಹೊರ ಬರುವಾಗಲೂ ಯಾರಾದರೂ ಚಂದ್ರಣ್ಣ ಹಿಡಿದುಕೊಳ್ತಾರೆ ಅಂತ ಹೇಳಲಿಲ್ಲ. ಅಷ್ಟರಲ್ಲಿ ರಕ್ಷಿತಾ ಬಂದು ಚಂದ್ರಣ್ಣ ಹಿಡಿದುಕೊಳ್ಳುತ್ತಾಳೆ. ನನ್ನದು ಹಾಗೂ ಅವಳದ್ದು ತಂದೆ-ಮಗಳ ಬಾಂಡಿಂಗ್. ಅಷ್ಟೊಂದು ವಿಶ್ವಾಸದಲ್ಲಿ ಇದ್ವಿ. ಹೀಗಿದ್ದರೂ ಅವರನ್ನೂ ನೋಡಲಿಲ್ಲ. ತಿರುಗಿ ನೋಡಬೇಕು ಅಂತಾನೂ ಅನಿಸಲಿಲ್ಲ" ಎಂದು ಫಿಲ್ಮಿಬೀಟ್ ಕನ್ನಡಕ್ಕೆ ನೀಡಿದ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ.


Click it and Unblock the Notifications











