BBK 12: ಜಾಹ್ನವಿಗಾಗಿ ತನ್ನ ಮಗನ ಪತ್ರ ಬಿಟ್ಟು ಕೊಟ್ಟ ಅಶ್ವಿನಿ ಗೌಡ; ಮುಂದೇನು?
ಬಿಗ್ ಬಾಸ್ ಕನ್ನಡ 12 ಇಂದಿನ (ನವೆಂಬರ್ 6) ಎಪಿಸೋಡ್ ವೀಕ್ಷಕರಿಗೆ ಕಿಕ್ ಕೊಟ್ಟಿದೆ. ಒಂದ್ಕಡೆ ಇಲ್ಲಿವರೆಗೂ ಸೈಲೆಂಟ್ ಆಗಿದ್ದ ಮಾಳು ನಿಪನಾಳ ರೊಚ್ಚಿಗೆದ್ದಿದ್ದಾರೆ. ಇಲ್ಲಿವರೆಗೂ ಇಂತಹ ಜೋಷ ನೋಡಿರಲಿಲ್ಲ. ಇನ್ನೊಂದು ಕಡೆ ಅಶ್ವಿನಿ ಗೌಡ ಹಾಗೂ ಜಾನ್ವಿ ಮಧ್ಯೆ ಸ್ನೇಹ ಸಂಬಂಧ ಬೆಸೆಯುವ ಹಾಗೇ ಕಾಣಿಸುತ್ತಿದೆ.
ಆರಂಭದಲ್ಲಿ ಅಶ್ವಿನಿ ಗೌಡ ಹಾಗೂ ಜಾಹ್ನವಿ ಇಬ್ಬರೂ ಒಳ್ಳೆಯ ಸ್ನೇಹಿತೆಯರಾಗಿದ್ದರು. ಇಬ್ಬರನ್ನು ಬಿಟ್ಟು ಒಬ್ಬರು ಇರುತ್ತಿರಲಿಲ್ಲ. ಆದರೆ, ಒಂದು ಎಪಿಸೋಡ್ ಎಲ್ಲವನ್ನೂ ತಲೆ ಕೆಳಗೆ ಮಾಡಿತ್ತು. ಇಬ್ಬರನ್ನು ನಾನೊಂದು ತೀರ, ನೀನೊಂದು ತೀರ ಎನ್ನುವಂತೆ ಮಾಡಿತ್ತು. ಸೆಪ್ಟೆಂಬರ್ 6ರ ಎಪಿಸೋಡ್‌ನಲ್ಲಿ ಇಬ್ಬರೂ ಒಬ್ಬರಿಗಾಗಿ ಇನ್ನೊಬ್ಬರು ಕಣ್ಣೀರನ್ನೇ ಸುರಿಸಿದ್ದಾರೆ.

ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಏನಾಗುತ್ತೆ? ಯಾರು ಯಾವಾಗ ಸ್ನೇಹಿತರಾಗುತ್ತಾರೆ? ಯಾವಾಗ ದೂರ ಆಗುತ್ತಾರೆ? ಯಾವಾಗ ಕಿತ್ತಾಡಿಕೊಳ್ಳುತ್ತಾರೆ? ಮತ್ತೆ ಯಾವಾಗ ಒಂದಾಗುತ್ತಾರೆ? ಅನ್ನೋದೇ ಗೊಂದಲ. ಬಿಗ್ ಬಾಸ್ ಕನ್ನಡ 12ರ ಸೀಸನ್‌ನಲ್ಲಿ ಅಶ್ವಿನಿ ಗೌಡ ಹಾಗೂ ಜಾಹ್ನವಿ ಕಥೆ ಅದೇ ಆಗಿದೆ. ವೀಕ್ಷಕರು ಇವರಿಬ್ಬರ ಸ್ನೇಹ ನೋಡಿದ್ದರು. ಬೇರೆಯಾಗಿದ್ದನ್ನು ನೋಡಿದ್ದರು. ಆದ್ರೀಗ ದೂರ ಆದ್ಮೇಲೂ ಒಬ್ಬರಿಗೊಬ್ಬರು ಕಣ್ಣೀರು ಹಾಕಿದ್ದನ್ನು ನೋಡಿ ದಂಗಾಗಿ ಹೋಗಿದ್ದಾರೆ.
ಇಷ್ಟೆಲ್ಲ ಆಗಿದ್ದು 'ಬಿಬಿ ಕಾಲೇಜ್' ಟಾಸ್ಕ್. ಅಲ್ಲಿವರೆಗೂ ಅಕ್ಕ-ತಂಗಿಯರಂತೆ ಇದ್ದ ಈ ಜೋಡಿ ನಡುವೆ ಮೈಮಸ್ಸು ಮೂಡಿತ್ತು. ಪರಸ್ಪರ ಒಬ್ಬರಿಗೊಬ್ಬರು ಆರೋಪ-ಪ್ರತ್ಯಾರೋಪ ಮಾಡಿಕೊಂಡಿದ್ದರು. ಅಲ್ಲಿಂದ ಇಬ್ಬರ ನಡುವೆ ಒಡಕು ಮೂಡಿತ್ತು. ಆಗಲೂ ಜಾಹ್ನವಿ ಭಾವುಕರಾಗಿ ಕಣ್ಣೀರು ಸುರಿಸಿದ್ದರು. ಅಲ್ಲಿಂದ ಇಬ್ಬರೂ ಅಷ್ಟಕ್ಕಷ್ಟೇ ಎನ್ನುವಂತೆ ಇದ್ದರು. ಇದೀಗ ಮತ್ತೆ ಬಿಗ್ ಬಾಸ್ ಇಬ್ಬರನ್ನೂ ಅಗ್ನಿ ಪರೀಕ್ಷೆಗೆ ಒಡ್ಡಿದ್ದರು.
ಬಿಗ್ ಬಾಸ್ ಕ್ಯಾಪ್ಟನ್ಸಿ ಟಾಸ್ಕ್ ಕೆಲವು ದಿನಗಳಿಂದ ನಡೆಯುತ್ತಿದೆ. ಈ ವಾರ ಮನೆಯ ಕ್ಯಾಪ್ಟನ್ ಆಗುವುದು ಯಾರು ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗುತ್ತೆ. ಆದರೆ, ಮನೆಯವರಿಂದ ಬಂದ ಪತ್ರ ಯಾರ ಕೈ ಸೇರುತ್ತೋ ಅವರು ನಾಮಿನೇಷನ್ ಪ್ರಕ್ರಿಯೆಯಿಂದ ಸೇಫ್ ಆಗುತ್ತಾರೆ. ಅದೇ ಪತ್ರವನ್ನು ತ್ಯಾಗ ಮಾಡುತ್ತಾರೊ ಅವರು ನಾಮಿನೇಟ್ ಆಗಿತ್ತಾರೆ. ಈ ಪ್ರಕ್ರಿಯೆಯಲ್ಲಿ ಅಶ್ವಿನಿ ಗೌಡ ಹಾಗೂ ಜಾಹ್ನವಿ ಇದ್ದರು. ಮಗ ಬರೆದ ಪತ್ರ ಯಾರಿಗೆ ಸೇರಬೇಕು? ಅನ್ನೋದನ್ನು ಇವರಿಬ್ಬರ ಮುಂದೆ ಬಿಗ್ ಬಾಸ್ ಇಟ್ಟಿದ್ದರು.

ಇಬ್ಬರಿಗೂ ಇದೊಂತರ ಅಗ್ನಿ ಪರೀಕ್ಷೆಯಾಗಿತ್ತು. ಅಶ್ವಿನಿ ಗೌಡ ತಮ್ಮ ಮಗನ ಪತ್ರವನ್ನು ಜಾಹ್ನವಿಗಾಗಿ ತ್ಯಾಗ ಮಾಡುವುದಕ್ಕೆ ನಿರ್ಧರಿಸಿದ್ದರು. ಜಾಹ್ನವಿ ಬೇಡ ಎಂದು ಹೇಳಿದರೂ, ಅಶ್ವಿನಿ ಗೌಡ ಪತ್ರವನ್ನು ಜಾಹ್ನವಿ ಅವರಿಗೆ ಬಿಟ್ಟುಕೊಡುವುದಕ್ಕೆ ನಿರ್ಧರಿಸಿದ್ದರು. ಈ ಮೂಲಕ ಅಶ್ವಿನಿ ಗೌಡ ಇಮ್ಯೂನಿಟಿ ಕಳೆದುಕೊಂಡು ನಾಮಿನೇಟ್ ಆಗಿದ್ದಾರೆ. ಜಾಹ್ನವಿ ನಾಮಿನೇಟ್ ಆಗದೇ ಉಳಿದುಕೊಂಡಿದ್ದಾರೆ.
"ಒಬ್ಬ ಮಗನಿಗೆ ತಾಯಿ ಎಷ್ಟು ಮುಖ್ಯವೋ ಅಷ್ಟೇ ತಂದೆಯೂ ಕೂಡ ಮುಖ್ಯ. ಜಾಹ್ನವಿಯವರ ಜರ್ನಿ ನನಗೆ ಗೊತ್ತಿದೆ. ಇಬ್ಬರೂ ಒಂದೇ ದೋಣಿಯಲ್ಲಿ ಸಾಗುತ್ತಿದ್ದೇವೆ. ನನ್ನ ಮಗನಿಗೆ ತಂದೆಯ ಪ್ರೀತಿ ಕೂಡ ಸಿಕ್ಕಿದೆ. ಆದರೆ, ಅವರ ಮಗನಿಗೆ ತಂದೆ-ತಾಯಿಯಾಗಿ ಜಾಹ್ನವಿಯವರೇ ನಿಂತಿದ್ದಾರೆ. ಆ ಕಾರಣಕ್ಕೆ ಜಾಹ್ನವಿಯವರಿಗೇ ಈ ಪತ್ರ ಕೊಡುವುದಕ್ಕೆ ಇಷ್ಟ ಪಟ್ಟಿದ್ದೇನೆ" ಎಂದು ಅಶ್ವಿನಿ ಹೇಳಿದ್ದಾರೆ. ಈ ಟಾಸ್ಕ್ ಬಳಿಕ ಮತ್ತೆ ಇಬ್ಬರಲ್ಲೂ ಸ್ನೇಹ ಮೂಡುತ್ತಾ? ಇಲ್ಲ ಅದೇ ಮುನಿಸು ಮುಂದುವರೆಯುತ್ತಾ? ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.


Click it and Unblock the Notifications











