BBK 12:ಕಿತ್ತಾಟದಲ್ಲಿ ಕಾವ್ಯಾ ಅಮ್ಮನನ್ನು ಎಳೆದು ತಂದಿದ್ದ ಅಶ್ವಿನಿ ಗೌಡಗೆ ಕ್ಲಾಸ್ ಕೊಟ್ಟ ಕಿಚ್ಚ:ತಪ್ಪೊಪ್ಪಿಕೊಂಡ ನಟಿ
ಬಿಗ್‌ಬಾಸ್ ಕನ್ನಡ ಸೀಸನ್ 12 ಎಲ್ಲಾ ಸೀಸನ್‌ಗಿಂತ ವಿಭಿನ್ನವಾಗಿದೆ. ಕೆಲವರಿಗೆ ಇನ್ನೂ ಬಿಗ್ ಬಾಸ್ ಕೊಡುತ್ತಿರುವ ಟಾಸ್ಕ್ ಅರ್ಥ ಆಗುತ್ತಿಲ್ಲ. ಇನ್ನು ಕೆಲವರಿಗೆ ಬಿಗ್ ಬಾಸ್ ಮನೆಯಲ್ಲಿ ಹೇಗಿರಬೇಕು ಅನ್ನೋದೇ ಅರ್ಥ ಆಗುತ್ತಿಲ್ಲ. ಮನೆಯೊಳಗೆ ಏನೆಲ್ಲ ತಂತ್ರಗಳನ್ನು ಬಳಸಬೇಕು? ಯಾರನ್ನು ಹೇಗೆ ಕಟ್ಟಿ ಹಾಕಬೇಕು ಅನ್ನೋ ಬಗ್ಗೆ ಯಾರೂ ಯೋಚನೆ ಮಾಡುತ್ತಿಲ್ಲ. ಕಿತ್ತಾಡುವುದೇ ಆಟ ಎಂದುಕೊಂಡಂತೆ. ಹೀಗಾಗಿ ಪ್ರತಿ ವಾರವೂ ಕಿಚ್ಚ ಒಬ್ಬರೊಬ್ಬರಿಗೆ ಕ್ಲಾಸ್ ತೆಗೆದುಕೊಳ್ಳುತ್ತಲೇ ಇರುತ್ತಾರೆ.
ಕಿಚ್ಚ ಸುದೀಪ್ ಈ ವಾರ ಅಶ್ವಿನಿ ಗೌಡಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಬಿಗ್ ಬಾಸ್ ಆರಂಭ ಆದ ದಿನದಿಂದಲೂ ಅತೀ ಹೆಚ್ಚು ಬಾರಿ ಕಿಚ್ಚನಿಂದ ಕ್ಲಾಸ್ ತೆಗೆದುಕೊಂಡಿರೋದು ಅಶ್ವಿನಿ ಗೌಡ. ಇಷ್ಟರೊಳಗೆ ಅವರು ಅರ್ಥ ಮಾಡಿಕೊಳ್ಳಬೇಕಿತ್ತು. ಮನೆಯಲ್ಲಿ ತನ್ನ ಮಾತುಗಳು ಹೊರಗಡೆ ನೆಗೆಟಿವ್ ಪರಿಣಾಮ ಬೀರುತ್ತಿದೆ ಅಂತ ಅನಿಸಬೇಕಿತ್ತು. ಆದರೆ, ಅದು ಇನ್ನೂ ಅವರ ಅರಿವಿಗೆ ಬಂದಂತೆ ಕಾಣುತ್ತಿಲ್ಲ.

ಕಾವ್ಯಾ ಜೊತೆ ಕಿತ್ತಾಡುವಾಗ ಅಶ್ವಿನಿ ಗೌಡ ಅವರ ಅಮ್ಮನನ್ನು ಎಳೆದು ತಂದಿದ್ದರು. ಇವತ್ತಿನ ಎಪಿಸೋಡ್‌ನಲ್ಲಿ ಕಿಚ್ಚ ಈ ಅಂಶವನ್ನು ಹೈಲೈಟ್ ಮಾಡಿದರು. ಅಶ್ವಿನಿ ಗೌಡ ವಿರುದ್ಧ ಅಸಮಧಾನ ಹೊರ ಹಾಕಿದರು. ಅವರು ಬಳಿಸಿದ ಪದಗಳ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಹಾಗಿದ್ದರೆ, ಅಶ್ವಿನಿ ಗೌಡ ಏನು ಹೇಳಿದ್ರು? ಕಿಚ್ಚ ಗರಂ ಆಗಿದ್ಯಾಕೆ? ಆ ಸನ್ನಿವೇಶವೇನು? ಅಂತ ತಿಳಿಯುವುದಕ್ಕೆ ಮುಂದೆ ಓದಿ.
ಅಶ್ವಿನಿ ಇತ್ತೀಚೆಗೆ ಒಬ್ಬಂಟಿಯಾಗಿದ್ದಾರೆ. ಅವರ ಜೊತೆಗೆ ಗಟ್ಟಿಯಾಗಿ ನಿಲ್ಲುವವರು ಯಾರೂ ಇಲ್ಲ. ಆದರೂ ಅಶ್ವಿನಿ ಗೌಡ ಏಕಾಂಗಿಯಾಗಿಯೇ ಎಲ್ಲರನ್ನೂ ಎದುರಿಸುತ್ತಿದ್ದಾರೆ. ಆಗಾಗ ರಾಶಿಕಾ ಇವರ ಪರ ನಿಲ್ಲುತ್ತಾರೆ. ಅದು ಬಿಟ್ಟರೆ ಮನೆಯಲ್ಲಿ ಅಶ್ವಿನಿ ಜೊತೆ ನಿಲ್ಲುತ್ತಿದ್ದರು ಧ್ರುವಂತ್. ಸೀಕ್ರೆಟ್ ರೂಮ್‌ನಲ್ಲಿದ್ದ ಧ್ರುವಂತ್ ಹಾಗೂ ರಕ್ಷಿತಾ ಶೆಟ್ಟಿ ಈಗ ವಾಪಾಸ್ ಮರಳಿದ್ದಾರೆ. ಧ್ರುವಂತ್ ಬಂದಿರೋದ್ರಿಂದ ಅಶ್ವಿನಿಗೆ ಮತ್ತೆ ಬಲ ಬಂದಂತೆ ಆಗಿದೆ.
ಆದರೆ, ಮೊದಲಿನಿಂದಲೂ ಅಶ್ವಿನಿ ಹಾಗೂ ಕಾವ್ಯಾ ಮಧ್ಯೆ ಕಿತ್ತಾಟ ನಡೆಯುತ್ತಲೇ ಇದೆ. ಇಬ್ಬರ ನಡುವೆ ಅಸಮಾಧಾನ ಇದ್ದೇ ಇದೆ. ಇದು ಮೊದಲ ವಾರದಿಂದಲೇ ನಡೆದುಕೊಂಡು ಬರುತ್ತಲೇ ಇದೆ. ಕಳೆದ ವಾರ ಬಿಗ್ ಬಾಸ್ ಒಂದು ಟಾಸ್ಕ್ ಅನ್ನು ನೀಡಿದ್ದರು. ಅದು ಟಬ್ ಟಾಸ್ಕ್. ಈ ಟಾಸ್ಕ್‌ನಲ್ಲಿ ಅಶ್ವಿನಿ ಒಂದು ತಂಡ. ಕಾವ್ಯಾ ಒಂದು ತಂಡ. ಇಬ್ಬರೂ ಪ್ರತಿಷ್ಠೆಗೆ ಬಿದ್ದು ಗೆಲ್ಲುವುದಕ್ಕೆ ಸೆಣೆಸಾಡಿದ್ದರು. ಇದರಲ್ಲಿ ಅಶ್ವಿನಿ ಗೆದ್ದು, ಕಾವ್ಯಾ ಸೋಲುಂಡಿದ್ದರು. ಕಾವ್ಯಾ ತನ್ನ ಸೋಲನ್ನು ತಡೆಯದೆ ಕೋಪದಲ್ಲಿ "ಆಯ್ತು ಹೋಗಮ್ಮ" ಎಂದು ಹೇಳಿದ್ದರು.

ಮೊದಲೇ ಪ್ರತಿಷ್ಠೆ, ಮರ್ಯಾದೆ, ಗೌರವದ ವಿಚಾರಕ್ಕೆ ಕಿತ್ತಾಡುವ ಅಶ್ವಿನಿ ಗೌಡ ತಿರುಗೇಟು ಕೊಡುವ ಭರದಲ್ಲಿ "ಅದನ್ನೆಲ್ಲ ನಿನ್ನ ಅಮ್ಮನ ಬಳಿ ಹೇಳ್ಕೋ ಹೋಗು" ಎಂದರು. ಇದು ಕಾವ್ಯಾಗೆ ಕಣ್ಣು ಕೆಂಪಗಾಗುವಂತೆ ಮಾಡಿತ್ತು. ಇದೇ ವಿಷಯವನ್ನು ಕಿಚ್ಚ ಸುದೀಪ್ ಚರ್ಚೆ ಮಾಡಿದ್ದಾರೆ. ಅಮ್ಮನ ವಿಷಯವನ್ನು ಎಳೆದು ತಂದಿದ್ದಕ್ಕೆ ಗರಂ ಆಗಿದ್ದಾರೆ. ಕಾವ್ಯಾ ಅವರ ಅಮ್ಮನ ವಿಷಯ ನಿಮಗೆ ಯಾಕೆ? ಎಂದು ಪ್ರಶ್ನೆ ಮಾಡಿದ್ದಾರೆ.
ಕಿಚ್ಚ ಸುದೀಪ್ ಈ ಬಾರಿ ಸ್ವಲ್ಪ ಜಾಸ್ತಿಯೇ ಗರಂ ಆಗಿದ್ದರು. ಈ ಬಗ್ಗೆ ಅಶ್ವಿನಿ ಗೌಡ ಅದೆಷ್ಟೇ ಸಮಜಾಯಿಷಿ ಕೊಡುವ ಪ್ರಯತ್ನಕ್ಕೆ ಮುಂದಾಗಿದ್ದರೂ, ಅದನ್ನು ಅವರು ಒಪ್ಪಲಿಲ್ಲ. ಅಶ್ವಿನಿಗೆ ನಿಮ್ಮ ಕಾವ್ಯಾ ಜೊತೆ ಎಷ್ಟು ಬೇಕಿದ್ದರೂ ಕಿತ್ತಾಡಿ. ಆದರೆ, ಅವರ ಮನೆಯವರ ವಿಷಯ ನಿಮಗ್ಯಾಕೆ ಎಂದು ಪ್ರಶ್ನೆ ಮಾಡಿದ್ದರು. ಕೊನೆಗೂ ಅಶ್ವಿನಿ ಗೌಡ ತಮ್ಮ ತಪ್ಪನ್ನು ಒಪ್ಪಿಕೊಂಡು ಕಾವ್ಯಾ ಬಳಿ ಕ್ಷಮೆಯನ್ನು ಕೇಳಿದರು.


Click it and Unblock the Notifications











