BBK 12: ಬಿಗ್ ಬಾಸ್ ತೆರೆ ಎಳೆಯೋ ಹೊತ್ತಿಲ್ಲಿ ಕುಕ್ಕಿದ ರಣಹದ್ದು; ಅರಣ್ಯ ಇಲಾಖೆಯಿಂದ ತಿಳುವಳಿಕೆ ನೋಟಿಸ್
ಬಿಗ್ ಬಾಸ್ ಕನ್ನಡ ಸೀಸನ್ 12 ಫಿನಾಲೆಗೆ ಇನ್ನೇನು ಕೆಲವೇ ಕ್ಷಣಗಳು ಉಳಿದಿವೆ. ವೀಕೆಂಡ್‌ನಲ್ಲಿ ಎರಡು ದಿನಗಳ ಕಾಲ ಬಿಗ್ ಬಾಸ್ ವೀಕ್ಷಕರಿಗೆ ಹಬ್ಬ ಅಂತಲೇ ಹೇಳಬಹುದು. ಶನಿವಾರ ಪ್ರೀ-ಫಿನಾಲೆ ನಡೆದರೆ, ಭಾನುವಾರ ಫಿನಾಲೆ ನಡೆಯಲಿದೆ. ಈ ಮೂಲಕ ಬಿಗ್ ಬಾಸ್ ಕನ್ನಡ ಸೀಸನ್ 12ಕ್ಕೆ ಅಧಿಕೃತವಾಗಿ ತೆರೆ ಬೀಳಲಿದೆ. ಆದರೆ, ಫಿನಾಲೆಗೆ ಎರಡು ದಿನಗಳು ಇರುವಾಗಲೇ ವಿವಾದವನ್ನು ಮೈಮೇಲೆ ಎಳೆದುಕೊಂಡಿದೆ.
ಬಿಗ್ ಬಾಸ್ ಕನ್ನಡ 12ರ ಆಯೋಜಕರಿಗೆ ಅರಣ್ಯ ಇಲಾಖೆ ತಿಳುವಳಿಕೆ ನೋಟಿಸ್ ಜಾಡಿ ಮಾಡಿದೆ. ರಣಹದ್ದು ಸಂರಕ್ಷಣಾ ಟ್ರಸ್ಟ್ ಬಿಗ್ ಬಾಸ್ ಕನ್ನಡದ ವಿರುದ್ಧ ಅರಣ್ಯ ಇಲಾಖೆಗೆ ದೂರು ನೀಡಿದ ಬೆನ್ನಲ್ಲೇ ನೋಟಿಸ್ ನೀಡಿದ್ದಾಗಿ ವರದಿಯಾಗಿದೆ. ಇನ್ನೇನು ಬಿಗ್ ಬಾಸ್ ಮುಗಿಯುವ ಹೊತ್ತಲ್ಲಿ ಅಂತಹದ್ದೇನಾಯ್ತು? ಮತ್ತೆ ಯಾಕೆ ಸಂಕಷ್ಟಕ್ಕೆ ಸಿಲುಕಿದೆ? ಮುಂದೇನು? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.

ಬಿಗ್ ಬಾಸ್ ಕನ್ನಡ ಸೀಸನ್ 12 ಫಿನಾಲೆ ಹೊತ್ತಲ್ಲಿ ಸಂಕಷ್ಟಕ್ಕೆ ಸಿಲುಕಿದೆ. ಅಷ್ಟಕ್ಕೂ ವಿಷಯ ಏನಂದ್ರೆ, ಬಿಗ್ ಬಾಸ್‌ನಲ್ಲಿ ರಣಹದ್ದು ಬಗ್ಗೆ ತಪ್ಪಾಗಿ ಮಾಹಿತಿಯನ್ನು ಪ್ರಸಾರ ಮಾಡಲಾಗಿದೆ ಎಂದು ಆರೋಪ ಮಾಡಲಾಗಿದೆ. ಈ ಸಂಬಂಧ ರಣಹದ್ದು ಸಂರಕ್ಷಣಾ ಟ್ರಸ್ಟ್ ಅರಣ್ಯ ಇಲಾಖೆಗೆ ದೂರನ್ನು ನೀಡಿತ್ತು. ಈ ಹಿನ್ನೆಲೆಯಲ್ಲಿ ಬಿಗ್ ಬಾಸ್‌ಗೆ ಅರಣ್ಯ ಇಲಾಖೆ ತಿಳುವಳಿಕೆ ನೋಟಿಸ್ ನೀಡಲಾಗಿದೆ.
ಅಷ್ಟಕ್ಕೂ ರಣಹದ್ದು ವಿಚಾರವನ್ನು ಅರಣ್ಯ ಇಲಾಖೆ ಯಾಕೆ ಇಷ್ಟೊಂದು ಗಂಭೀರವಾಗಿ ಪರಿಗಣಿಸುವುದಕ್ಕೆ ಕಾರಣವಿದೆ. ರಣಹದ್ದು ಸಂರಕ್ಷಣಾ ಟ್ರಸ್ಟ್ ಅರಣ್ಯ ಇಲಾಖೆಯಲ್ಲಿ ನೀಡಿದ ದೂರಿನಲ್ಲಿ ಈ ರೀತಿ ವಿವರಣೆಯನ್ನು ನೀಡಿದೆ. ರಣಹದ್ದುಗಳು ಜೀವಂತ ಪ್ರಾಣಿಗಳನ್ನು ಬೇಟೆ ಮಾಡುವುದಿಲ್ಲ. ರಣಹದ್ದು ಹಾಗೂ ಹದ್ದು ಎರಡೂ ಒಂದೇ ರೀತಿಯ ಪಕ್ಷಿಗಳಂತೆ ಕಂಡರೂ ಅವುಗಳ ಸ್ವಭಾವ ಹಾಗೂ ಆಹಾರ ಪದ್ಧತಿಯಲ್ಲಿ ವ್ಯತ್ಯಾಸವಿದೆ ಎಂದು ಮಾಹಿತಿ ನೀಡಿದ್ದಾರೆ.
ಆದರೆ, ಬಿಗ್ ಬಾಸ್ ಕನ್ನಡ ಸೀಸನ್ 12ರ 'ವಾರದ ಕಥೆ ಕಿಚ್ಚನ ಜೊತೆ' ಸಂಚಿಕೆಯಲ್ಲಿ ರಣಹದ್ದುಗಳನ್ನು ಹೊಂಚು ಹಾಕಿ ಹಿಡಿಯುವ ಪಕ್ಷಿ ಎಂಬಂತೆ ಚಿತ್ರಿಸಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದೆ. "ಹೊಂಚು ಹಾಕಿ ಸಂಚು ಮಾಡಿ ಲಬಕ್ ಅಂತ ಹಿಡಿಯುವ" ಪಕ್ಷಿ ಎಂಬಂತೆ ಬಿಂಬಿಸಿ, ಸಂಪೂರ್ಣ ತಪ್ಪು ಮಾಹಿತಿಯನ್ನು ನೀಡಲಾಗಿದೆ ಎಂದು ರಣಹದ್ದು ಸಂರಕ್ಷಣಾ ಟ್ರಸ್ಟ್ ನೀಡಿದ ದೂರಿನಲ್ಲಿ ವಿವರಿಸಲಾಗಿದೆ.

ರಣಹದ್ದುಗಳು ಅಳಿವಿನ ಅಂಚಿನಲ್ಲಿದ್ದು, ಇಂತಹ ಸಂದರ್ಭದಲ್ಲಿ ಜನರಲ್ಲಿ ಅವುಗಳ ಬಗ್ಗೆ ಬಿಗ್ ಬಾಸ್ ಅಂತಹ ದೊಡ್ಡ ರಿಯಾಲಿಟಿ ಶೋನಲ್ಲಿ ತಪ್ಪು ಮಾಹಿತಿಯನ್ನು ನೀಡಲಾಗಿದೆ. ಇದರಿಂದ ಜನರಲ್ಲಿ ತಪ್ಪು ಅಭಿಪ್ರಾಯ ಮೂಡಿಸಬಹುದು. ಇದರಿಂದ ರಣಹದ್ದುಗಳ ಸಂರಕ್ಷಣಾ ಪ್ರಯತ್ನಗಳಿಗೆ ತೀವ್ರ ಹಿನ್ನಡೆಯಾಗುವ ಸಾಧ್ಯತೆಯಿದೆ ಎಂದು ರಣಹದ್ದು ಸಂರಕ್ಷಣಾ ಟ್ರಸ್ಟ್ ತನ್ನ ದೂರಿನಲ್ಲಿ ಹೇಳಿಕೊಂಡಿದೆ.
ರಣಹದ್ದು ವಿಚಾರವಾಗಿ ರಾಮನಗರದ ಡಿಆರ್‌ಎಫ್ಓ ಸುಷ್ಮಾ ಬಿಗ್‌ಬಾಸ್ ಕಾರ್ಯಕ್ರಮದ ಆಯೋಜಕರಿಗೆ ನೋಟಿಸ್ ನೀಡಿದ್ದಾಗಿ ವರದಿಯಾಗಿದೆ. ಇಷ್ಟೇ ಅಲ್ಲದೆ ಕಾರ್ಯಕ್ರಮದಲ್ಲಿ ಹದ್ದು ಹಾಗೂ ರಣಹದ್ದು ನಡುವಿನ ವ್ಯತ್ಯಾಸದ ಬಗ್ಗೆ ಜನರಿಗೆ ಮಾಹಿತಿಯನ್ನು ನೀಡುವಂತೆ ಸೂಚಿಸಿದ್ದು, ಮುಂದೆ ವನ್ಯ ಜೀವಿಗಳ ಬಗ್ಗೆ ಮಾಹಿತಿ ನೀಡುವಾಗ ತಜ್ಞರ ಅಭಿಪ್ರಾಯ ಪಡೆಯಬೇಕೆಂಬ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಫಿನಾಲೆ ಸಮೀಪಿಸುತ್ತಿರುವ ಈ ಸಮಯದಲ್ಲಿ ಹೊಸ ವಿವಾದವನ್ನು ಬಿಗ್ ಬಾಸ್ ಎಳೆದುಕೊಂಡಂತಾಗಿದೆ.


Click it and Unblock the Notifications











