ವೀಕೆಂಡ್‌ನಲ್ಲಿ 'ಭರ್ಜರಿ ಬ್ಯಾಚುಲರ್ಸ್ 2' ಆರಂಭ; ಈ ಬಾರಿ ಭಾಗವಹಿಸುವ ಸ್ಪರ್ಧಿಗಳ ಕಂಪ್ಲೀಟ್ ಲಿಸ್ಟ್
ವೀಕೆಂಡ್‌ನಲ್ಲಿ ಮಸ್ತ್ ಮನರಂಜನೆ ಕೊಡುವ ಶೋಗಳು ಇರಬೇಕು. ಎರಡು ದಿನ ಬಿಡದಂತೆ ನಕ್ಕು ನಗಿಸಬೇಕು. ಇಂತಹ ಶೋಗಳಿಗಾಗಿ ವೀಕ್ಷಕರು ಕಾದು ಕೂತಿರುತ್ತಾರೆ. ಇತ್ತ ಎಂಟರ್‌ಟೈನ್ಮೆಂಟ್ ಚಾನೆಲ್‌ಗಳು ಕೂಡ ವೀಕೆಂಡ್‌ನಲ್ಲಿ ಒಳ್ಳೊಳ್ಳೆ ರಿಯಾಲಿಟಿ ಶೋಗಳನ್ನು ಪ್ರಸಾರ ಮಾಡುತ್ತೆ. ಅದರಲ್ಲೂ ಜೀ ಕನ್ನಡದಲ್ಲಿ ಬ್ಯಾಕ್ ಟು ಬ್ಯಾಕ್ ರಿಯಾಲಿಟಿ ಶೋಗಳನ್ನು ವೀಕ್ಷಕರನ್ನು ರಂಜಿಸುತ್ತಿದೆ. ಆ ಸಾಲಿಗೆ ಈ ವೀಕೆಂಡ್‌ನಿಂದ ಮತ್ತೊಂದು ರಿಯಾಲಿಟಿ ಶೋ ಸೇರಿಕೊಂಡಿದೆ.
'ಭರ್ಜರಿ ಬ್ಯಾಚುಲರ್ಸ್' ಕಳೆದ ಸೀಸನ್ ಯಶಸ್ವಿಯಾಗಿತ್ತು. ಅದೇ ಬೆನ್ನಲ್ಲೇ ಮತ್ತೊಂದು ಸೀಸನ್ ಆರಂಭ ಆಗುತ್ತಿದೆ. ಈ ವೀಕೆಂಡ್‌ನಲ್ಲಿ ವಾರ ಪೂರ್ತಿ ದುಡಿದು ಸುಸ್ತಾದ ಮನಸ್ಸುಗಳಿಗೆ ಮಸ್ತ್ ಮನರಂಜನೆ ನೀಡುವುದಕ್ಕೆ 'ಭರ್ಜರಿ ಬ್ಯಾಚುಲರ್ಸ್ ಸೀಸನ್ 2' ಬರುತ್ತಿದೆ. ಈ ರಿಯಾಲಿಟಿ ಶೋ ನೋಡುವುದಕ್ಕೆ ವೀಕ್ಷಕರು ಕೂಡ ತುದಿಗಾಲಲ್ಲಿ ನಿಂತಿದ್ದಾರೆ.

ಜೀ ಕನ್ನಡದಲ್ಲಿ ಕಳೆದ ಕೆಲವು ವರ್ಷಗಳಿಂದ ರಿಯಾಲಿಟಿ ಶೋಗಳು, ಗೇಮ್ ಶೋಗಳಿಂದ ವೀಕ್ಷಕರ ಮನಗೆಲ್ಲುತ್ತಿದೆ. ಡ್ರಾಮಾ ಜೂನಿಯರ್ಸ್, ಸರಿಗಮಪ, ವೀಕೆಂಡ್ ವಿತ್ ರಮೇಶ್, ಕಾಮಿಡಿ ಕಿಲಾಡಿಗಳು, ಡಾನ್ಸ್ ಕರ್ನಾಟಕ ಡಾನ್ಸ್, ಜೋಡಿ ನಂಬರ್ 1 ಮತ್ತು ಸೂಪರ್ ಕ್ವೀನ್ ನಂತಹ ಸೂಪರ್ ಹಿಟ್ ಶೋಗಳನ್ನು ನೀಡಿದೆ. ಇದೇ ಜೋಷ್‌ನಲ್ಲಿ 'ಭರ್ಜರಿ ಬ್ಯಾಚುಲರ್ ಸೀಸನ್ 2' ಅನ್ನು ಆರಂಭ ಮಾಡುತ್ತಿದೆ.
ಭರ್ಜರಿ ಬ್ಯಾಚುಲರ್ಸ್ ಸೀಸನ್ 1 ಸಕ್ಸಸ್ ಕಂಡ ಬಳಿಕ ಸೀಸನ್ 2 ಆರಂಭ ಆಗುತ್ತಿದೆ. ಆದರೆ, ಈ ಬಾರಿ ವಿಭಿನ್ನ ಕಾನ್ಸೆಪ್ಟ್‌ಗಳೊಂದಿಗೆ ಎಂಟರ್ಟೈನಿಂಗ್ ಆಗಿ ವೀಕ್ಷಕರ ಮುಂದೆ ಬರುತ್ತಿದೆ. 'ಭರ್ಜರಿ ಬ್ಯಾಚುಲರ್ಸ್ ಸೀಸನ್ 2' ಪ್ರೇಕ್ಷಕರ ಮನರಂಜಿಸಲು ಸಕಲ ಸನ್ನದ್ಧವಾಗಿ ನಿಂತಿದೆ. ಇನ್ನು ಈ ಬಾರಿ ಭರ್ಜರಿ ಬ್ಯಾಚುಲರ್ಸ್ ಶೋಗೆ ಬರುವ ಸ್ಪರ್ಧಿಗಳು ಬ್ಯಾಚುಲರ್ಸ್ ಆಗಿಯೇ ಉಳಿಯುತ್ತಾರಾ? ಇಲ್ಲ ಬ್ಯಾಚುಲರ್‌ಗಿರಿಗೆ ಗುಡ್ ಬೈ ಹೇಳ್ತಾರಾ? ಅನ್ನೋದು ಈ ಶೋನಲ್ಲಿ ಗೊತ್ತಾಗಲಿದೆ.
'ಭರ್ಜರಿ ಬ್ಯಾಚುಲರ್ಸ್ 2'ನಲ್ಲಿ ನಗುವಿಗೇನು ಕೊರತೆ ಇರೋದಿಲ್ಲ. ವೀಕ್ಷಕರನ್ನು ನಗಿಸುವುದಕ್ಕೆ ಪ್ರತಿಭಾವಂತ ಸ್ಪರ್ಧಿಗಳೇ ಬರುತ್ತಿದ್ದಾರೆ. ಇವೆಲ್ಲರೂ ವೀಕ್ಷಕರಿಗೆ ಮಸ್ತ್ ಮನರಂಜನೆ ಕೊಡಲಿದ್ದಾರೆ. ಈ ಬಾರಿ ಶೋನಲ್ಲಿ ಭಾಗವಹಿಸುತ್ತಿರುವ ಸ್ಪರ್ಧಿಗಳು ಯಾರು ಅಂದರೆ, ಗಿಲ್ಲಿ ನಟ, ಡ್ರೋನ್ ಪ್ರತಾಪ್, ಹುಲಿ ಕಾರ್ತಿಕ್, ಪ್ರವೀಣ್ ಜೈನ್, ಭುವನೇಶ್, ಸುನಿಲ್, ದರ್ಶನ್ ನಾರಾಯಣ್, ಪ್ರೇಮ್ ತಾಪ, ಸೂರ್ಯ, ಉಲ್ಲಾಸ್, ರಕ್ಷಕ್ ಬುಲೆಟ್ ಭರ್ಜರಿ ಬ್ಯಾಚುಲರ್‌ಗಳಾಗಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಇವರ ಮನಸ್ಸು ಕದಿಯುವ ಏಂಜಲ್‌ಗಳಾಗಿ ಯಾರು ಬರುತ್ತಾರೆ ಅನ್ನೋದು ಸದ್ಯಕ್ಕೆ ಸಸ್ಪೆನ್ಸ್.

ಇನ್ನು ಭರ್ಜರಿ ಬ್ಯಾಚುಲರ್ಸ್‌ಗೆ ಪ್ರೀತಿ ಪಾಠ ಮಾಡಲು ಪ್ರೇಮಲೋಕದ ಕನಸುಗಾರ, ಕ್ರೇಜಿ ಸ್ಟಾರ್ ಡಾ. ವಿ. ರವಿಚಂದ್ರನ್ ಇರುತ್ತಾರೆ. ಇವರೊಂದಿಗೆ ಸ್ಯಾಂಡಲ್‌ವುಡ್‌ನ ಡಿಂಪಲ್ ಕ್ವೀನ್ ರಚಿತಾರಾಮ್ ಕೂಡ ಇರುತ್ತಾರೆ. ಇನ್ನೂ ಶೋನಲ್ಲಿ ತರ್ಲೆ ಮಾತುಗಳಿಗೇನು ಕಮ್ಮಿಯಿರೋದಿಲ್ಲ. ತಮಾಷೆ ಮಾಡುತ್ತಲೇ ಕನ್ನಡಿಗರ ಮನಗೆದ್ದ ನಿರಂಜನ್ ದೇಶಪಾಂಡೆ ಈ ಕಾರ್ಯಕ್ರಮದ ನಿರೂಪಣೆ ಮಾಡುತ್ತಿದ್ದಾರೆ.
ಅಂದ್ಹಾಗೆ 'ಭರ್ಜರಿ ಬ್ಯಾಚುಲರ್ಸ್ 2' ಕಾನ್ಸೆಪ್ಟ್‌ನಲ್ಲಿ ಬದಲಾವಣೆಯಾಗಿದೆ. ಇಲ್ಲಿ ಇನ್ ಡೋರ್ ಹಾಗೂ ಔಟ್ ಡೋರ್ ಸುತ್ತುಗಳಿರುತ್ತವೆ. ತಮಾಷೆ ಇರುತ್ತೆ. ಭಾವನಾತ್ಮಕ ಸನ್ನಿವೇಶಗಳು, ರೊಮ್ಯಾನ್ಸ್ ಟಾಸ್ಕ್‌ಗಳು ಇರುತ್ತವೆ. ಈ ಬಾರಿ 'ಭರ್ಜರಿ ಬ್ಯಾಚುಲರ್ಸ್' ಶೋಗೆ ಬರುವ ಸ್ಫರ್ಧಿಗಳು ವೀಕ್ಷಕರನ್ನು ಯಾವ ಮಟ್ಟಿಗೆ ರಂಜಿಸುತ್ತಾರೆ ಅನ್ನೋದು ಕುತೂಹಲ. ಇನ್ನು 'ಭರ್ಜರಿ ಬ್ಯಾಚುಲರ್ಸ್ 2' ಇದೇ ಫೆಬ್ರವರಿ 22ರಿಂದ ರಾತ್ರಿ 9 ಗಂಟೆಗೆ ಜೀ ಕನ್ನಡದಲ್ಲಿ ಪ್ರಸಾರ ಆಗಲಿದೆ.


Click it and Unblock the Notifications











