Tukali Santhosh Journey: ಮಾತಿನ ಮಲ್ಲ.. ಚಾಣಾಕ್ಷ.. ಟಾಸ್ಕ್‌ಗಾಗಿ ತಲೆ ಬೋಳಿಸಿಕೊಂಡ ತುಕಾಲಿ ಜರ್ನಿ ಅದ್ಭುತ!
ಬಿಗ್‌ಬಾಸ್ ಕನ್ನಡ ಸೀಸನ್ 10 ಗ್ರ್ಯಾಂಡ್ ಫಿನಾಲೆ ನಡೆಯುತ್ತಿದೆ. ಎರಡು ದಿನಗಳು ನಡೆಯುವ ಫಿನಾಲೆಯಲ್ಲಿ ನಿನ್ನೆ (ಜನವರಿ 27) ತುಕಾಲಿ ಸಂತೋಷ್ ಬಿಗ್ ಬಾಸ್ ಮನೆಯಿಂದ ಹೊರಬಿದ್ದಿದ್ದರು. ಅಂತಿಮ ಹಂತಕ್ಕೆ ಇನ್ನೊಂದೇ ಹೆಜ್ಜೆ ಬಾಕಿ ಇರುವಾಗ ತುಕಾಲಿ ಸಂತೋಷ್ ಫಿನಾಲೆಯಲ್ಲಿ ಎಲಿಮಿನೇಟ್ ಆಗಿದ್ದಾರೆ.
ತುಕಾಲಿ ಸಂತೋಷ್ ಬಿಗ್‌ಬಾಸ್ ಮನೆಯೊಳಗೆ ಇದ್ದಷ್ಟು ದಿನ ನಗಿಸಿದ್ದೇ ಹೆಚ್ಚು. ಟಾಸ್ಕ್‌ಗಳು ಅಂತ ಬಂದಾಗ ಆಗಾಗ ಕೋಪಗೊಂಡು ಆಕ್ರೋಶ ಹೊರಹಾಕಿದ್ದೂ ಇದೆ. ತರ್ಲೆ, ತಮಾಷೆ ಮಾಡುತ್ತಲೇ ಬಿಗ್ ಬಾಸ್‌ಗೆ ಫಿನಾಲೆವರೆಗೂ ಉಳಿದುಕೊಂಡಿದ್ದ ತುಕಾಲಿ ಸಂತೋಷ್ ನಗು ನಗುತ್ತಲೇ ಮನೆಯಿಂದ ಹೊರಬಿದ್ದಿದ್ದಾರೆ. ಆರಂಭದಿಂದ ಫಿನಾಲೆವರೆಗೂ ಬಿಗ್ ಬಾಸ್ ಮನೆಯೊಳಗೆ ತುಕಾಲಿ ಸಂತೋಷ್ ಜರ್ನಿಯ ತುಣುಕುಗಳನ್ನ ಜಿಯೋ ಸಿನಿಮಾ ರಿಲೀಸ್ ಮಾಡಿದೆ.

ಮಾತಲ್ಲೇ ಮನೆ ಕಟ್ಟಿದ ತುಕಾಲಿ
ತುಕಾಲಿ ಸಂತೋಷ್ ಹಾಸ್ಯ ಚಟಾಕಿಗಳಿಂದ ಬಿಗ್‌ಬಾಸ್ ಮನೆಯಲ್ಲಿ ಮನರಂಜನೆ ಸಿಗುತ್ತಿತ್ತು. ಟಾಸ್ಕ್‌ಗಳಲ್ಲಿ ರೋಷ ವೇಷಾ ತೋರಿಸುವುದಕ್ಕೆ ಮೈಕಟ್ಟಿನಲ್ಲಂತೂ 'ಮಲ್ಲ'ನಲ್ಲ. ಆದರೆ, ಮಾತಿಗೆ ನಿಂತರೆ ಮಲ್ಲರ ಮಲ್ಲ. ತಮ್ಮ ಮಾತಿನಿಂದಲೇ ಮನೆಯ ಸದಸ್ಯರನ್ನು ಸೆಳೆದಿದ್ದು ಸುಳ್ಳಲ್ಲ. ಆದರೆ, ಮನೆಯ ಸದಸ್ಯರನ್ನು ನಗಿಸಲು ತುಕಾಲಿ ಅನುಸರಿದ ದಾರಿ ಹಲವರ ಟೀಕೆಗೆ ಗುರಿಯಾಗಿತ್ತು. ಪ್ರತಾಪ್ ಬಗ್ಗೆ ಆಡಿದ ಮಾತುಗಳು, ಉಳಿದ ಸದಸ್ಯರ ಬಗ್ಗೆ ಹೇಳಿದ ಮಾತುಗಳ ಬಗ್ಗೆ ಅಸಮಾಧಾನ ಎದ್ದಿತ್ತು. ಈ ಬಗ್ಗೆ ಕಿಚ್ಚ ಸುದೀಪ್ ವಾರಾಂತ್ಯದ ಎಪಿಸೋಡ್‌ನಲ್ಲಿ ತರಾಟೆಗೆ ತೆಗೆದುಕೊಂಡಿದ್ದೂ ಇದೆ. ಭಾಗ್ಯಶ್ರೀ ಮತ್ತು ಸಿರಿ ಅವರನ್ನು ಮಿಮಿಕ್ ಮಾಡಿದ್ದಕ್ಕಾಗಿ ಸುದೀಪ್ ವಾರವಿಡೀ ತುಕಾಲಿ ಅವರ ಸೊಂಟಕ್ಕೆ ಹಗ್ಗ ಕಟ್ಟಿ ಅದರ ಎರಡುಬದಿಗಳಲ್ಲಿ ಸಿರಿ ಮತ್ತು ಭಾಗ್ಯಶ್ರೀ ಇರುವ ಶಿಕ್ಷೆ ಕೊಟ್ಟಿದ್ದರು. ಇಂಥ ಶಿಕ್ಷೆಯನ್ನು ತುಕಾಲಿ ಕಾಮಿಡಿ ಸೃಷ್ಟಿಗೇ ಬಳಸಿಕೊಂಡರು. "ಅನ್ಯರನ್ನು ನೋಯಿಸಿ ಮತ್ಯಾರನ್ನೋ ನಗಿಸುವುದು ಹಾಸ್ಯನಟನ ಘನತೆಗೆ ತಕ್ಕುದಲ್ಲ" ಎಂಬ ಕಿಚ್ಚನ ಮಾತುಗಳನ್ನು ತುಕಾಲಿ ಗಂಭೀರವಾಗಿಯೇ ತೆಗೆದುಕೊಂಡರು. ಹೀಗಾಗಿ ಕೆಲವು ದಿನಗಳು ಮಾತಾಡುವುದಕ್ಕೂ ಹಿಂಜರಿಯುವಂತಾಗಿತ್ತು.

ಕ್ಯಾಪ್ಟನ್ ಕನಸು ಈಡೇರಲಿಲ್ಲ
ತುಕಾಲಿ ಸಂತೋಷ್‌ಗೆ ಈ ಮನೆಯ ಕ್ಯಾಪ್ಟನ್ ಆಗಬೇಕು ಅನ್ನೋ ಕನಸು ಇತ್ತು. ಮೊದಲ ವಾರದಿಂದಲೇ ಈ ಪ್ರಯತ್ನಕ್ಕೆ ಮುಂದಾಗಿದ್ದರು. ಆದರೆ, ಪ್ರತಿ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿಯೂ ತುಕಾಲಿ ಸಂತೋಷ್ ಸೋಲುತ್ತಿದ್ದರು. ಹಲವು ಸಲ ಅವರು ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಭಾಗವಹಿಸಿ ಚೆನ್ನಾಗಿ ಆಡಿ ಗೆಲುವಿನ ಹೊಸ್ತಿಲವರೆಗೂ ಹೋಗಿ ಬಂದಿದ್ದಾರೆ. ಆದರೆ, ಆ ಟಾಸ್ಕ್ ಗೆದ್ದು ಕ್ಯಾಪ್ಟನ್ ಆಗುವ ಕನಸು ಮಾತ್ರ ಈಡೇರಲೇ ಇಲ್ಲ. ನಾಲ್ಕನೇ ವಾರದಲ್ಲಿ ಹಳ್ಳಿ ಮನೆಯ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಅಂತಿಮ ಹಂತದವರೆಗೂ ತುಕಾಲಿ ಸಂತೋಷ್ ಬಂದಿದ್ದರು. ಆಗ ಸಿರಿ ಮತ್ತು ವಿನಯ್ ಇಬ್ಬರಲ್ಲಿ ಒಬ್ಬರನ್ನು ಆರಿಸಿಕೊಳ್ಳಬೇಕಾಗಿತ್ತು. ಆಗ ವಿನಯ್ ಆಯ್ಕೆ ಮಾಡಿಕೊಂಡಿದ್ದು ತಪ್ಪಾಗಿತ್ತು. ಈ ಬಾರಿ ಅವಕಾಶಗಳನ್ನು ತಾವಾಗಿಯೇ ಕೈ ಬಿಟ್ಟಿದ್ದರು. ಹೀಗಾಗಿ ಕ್ಯಾಪ್ಟನ್ಸಿ ಅನ್ನೋದು ಕನಸಾಗಿಯೇ ಉಳಿದುಬಿಡ್ತು. ಆದರೆ ಕಳೆದ ವಾರ ನಡುರಾತ್ರಿ ಬಿಗ್‌ಬಾಸ್ ಮನೆಯ ಕ್ಯಾಪ್ಟನ್ ರೂಮ್ ಹೊಕ್ಕು ಎರಡು ನಿಮಿಷ ಬೆಡ್ ಮೇಲೆ ಮಲಗಿ ಆಸೆ ಈಡೇರಿಸಿಕೊಂಡಿದ್ದರು.
ನಗು-ಆಕ್ರೋಶ ಎರಡೂ ಇತ್ತು
ತುಕಾಲಿ ಸಂತೋಷ್ ಬಿಗ್‌ಬಾಸ್ ಜರ್ನಿಯಲ್ಲಿ ಎಂಟರ್‌ಟೈನಿಂಗ್ ಆಗಿತ್ತು. ಆದರೆ, ಎಷ್ಟು ನಗಿಸುತ್ತಿದ್ದರೋ ಅಷ್ಟೇ ಆಕ್ರೋಶಕ್ಕೆ ಒಳಗಾಗಿದ್ದೂ ಇತ್ತು. ಇಶಾನಿ, ಸಂಗೀತಾ, ವಿನಯ್ ಜೊತೆ ಮಾತಿಗೆ ಮಾತು ಬೆಳೆಸಿ ಜಗಳ ಆಡಿದ್ದೂ ಇದೆ. ಆದರೆ, ಕಿತ್ತಾಡಿದ ಬಳಿಕ ಅದನ್ನು ಮುಂದುವರೆಸಿಲ್ಲ ಅನ್ನೋದು ಅವರ ಸ್ವಭಾವವನ್ನು ಹೇಳುತ್ತದೆ.

ಸಂತು-ಪಂತು ಫ್ರೆಂಡ್‌ಷಿಪ್
ಈ ಬಾರಿ ಬಿಗ್‌ಬಾಸ್‌ನಲ್ಲಿ ಬೆಸ್ಟ್ ಫ್ರೆಂಡ್‌ಶಿಪ್‌ಗೆ ಏನಾದರೂ ಪ್ರಶಸ್ತಿ ಕೊಡುವುದಿದ್ದರೆ, ಅದು ತುಕಾಲಿ ಸಂತೋಷ್ ಹಾಗೂ ವರ್ತೂರು ಸಂತೋಷ್‌ಗೆ ಹೋಗಲೇ ಬೇಕು. ಸೀಸನ್ ಉದ್ದಕ್ಕೂ ಸಂತು-ಪಂತು ಅಂತಲೇ ಜನಪ್ರಿಯತೆ ಗಳಿಸಿದ್ದ ಈ ಜೋಡಿ ಅದೆಂತಹದ್ದೇ ಸಂದರ್ಭಗಳಲ್ಲಿ ಒಬ್ಬರನ್ನೊಬ್ಬರು ಬಿಟ್ಟುಕೊಟ್ಟಿಲ್ಲ. ಫಿನಾಲೆ ವೇಳೆ ಮನೆಯಿಂದ ಹೊರ ಬರಬೇಕಾದ ಸಂದರ್ಭದಲ್ಲಿಯೂ ಒಬ್ಬರಿಗೊಬ್ಬರು ಬೆಂಬಲ ನೀಡಿದ್ದರು. ಇವರ ಬೀನ್‌ಬ್ಯಾಗ್ ಸ್ಟೋರಿಗಳೇ ಮನರಂಜನೆಯ ಸರಕಾಗಿದ್ದೂ ಇದೆ.
ಸ್ಕೂಲ್ ಟಾಸ್ಕ್ ಅದ್ಭುತ
ತುಕಾಲಿ ಸಂತೋಷ್ ಸಖತ್ ಮನರಂಜನೆ ನೀಡಿದ್ದು ಸ್ಕೂಲ್ ಟಾಸ್ಕ್‌ನಲ್ಲಿ. ಉಳಿದವರು ತಮ್ಮ ಎದುರಾಳಿಗಳನ್ನು ತಿವಿಯಲು ಈ ಅವಕಾಶವನ್ನು ಬಳಸಿಕೊಂಡರೆ, ತುಕಾಲಿ ಸಂತೋಷ್ ಮಾತ್ರ ತಮ್ಮ ಬಾಲ್ಯವನ್ನು ಪ್ರತಿನಿಧಿಸಿದ್ದರು. ತುಕಾಲಿ ಮೇಷ್ಟ್ರಾಗಿ ಮಾಡಿದ ಇಂಗ್ಲಿಷ್ ಪಾಠ ಸಖತ್ ಎಂಟರ್‌ಟೈನಿಂಗ್ ಆಗಿತ್ತು.

ತಲೆ ಬೋಳಿಸಿಕೊಂಡ ತುಕಾಲಿ
ಎಂಟನೇ ವಾರದಲ್ಲಿ ಸಂಗೀತಾ, ವಿನಯ್ ತಂಡವನ್ನು ಸೇರಿಕೊಂಡಾಗ ತುಕಾಲಿ ಸಂತೋಷ್ ಎದುರಾಳಿ ತಂಡದಲ್ಲಿದ್ದರು. "ನಿಮ್ಮ ತಂಡದಿಂದ ಕಾರ್ತಿಕ್ ಮತ್ತು ತುಕಾಲಿ ತಲೆ ಬೋಳಿಸಿಕೊಳ್ಳಬೇಕು" ಎಂದು ಸಂಗೀತಾ ಸವಾಲು ಹಾಕಿದಾಗ, ಕೊಂಚವೂ ಯೋಚಿಸದೆ ತಲೆಯನ್ನು ಬೋಳಿಸಿಕೊಂಡು ಪ್ರಬುದ್ಧ ಆಟ ಆಗಿದ್ದರು.


Click it and Unblock the Notifications











