BBK 11:"ನನಗೆ ಲಾಸ್ ಆಗಿಲ್ಲ.. 4 ಹೊಸ ಪ್ರಾಜೆಕ್ಟ್‌ಗಳಿವೆ"; ಬಿಗ್‌ಬಾಸ್ ವೇದಿಕೆ ಏರುವುದಕ್ಕೂ ಮುನ್ನ ಗೋಲ್ಡ್ ಸುರೇಶ್ ಸ್ಪಷ್ಟನೆ
ಬಿಗ್‌ಬಾಸ್ ಕನ್ನಡ ಸೀಸನ್ 11 ರಿಯಾಲಿಟಿ ಶೋ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಮಧ್ಯದಲ್ಲಿ ಸ್ವಲ್ಪ ಡಲ್ ಅಂತ ಅನಿಸಿದ್ದರೂ, ಬಳಿಕ ಮತ್ತೆ ವೀಕ್ಷಕರ ಗಮನವನ್ನು ಸೆಳೆಯುತ್ತಿದೆ. ಈ ಬಾರಿ ಬಿಗ್‌ಬಾಸ್ ಮನೆಯೊಳಗೆ ಹೋದ ಸ್ಪರ್ಧಿಗಳ ಪೈಕಿ ಗಮನ ಸೆಳೆದವರಲ್ಲಿ ಗೋಲ್ಡ್ ಸುರೇಶ್ ಕೂಡ ಒಬ್ಬರು.
ಈ ಬಾರಿ ಬಿಗ್‌ಬಾಸ್ ವೇದಿಕೆ ಮೇಲೆ ಬಂದಾಗಲೇ ಗೋಲ್ಡ್ ಸುರೇಶ್ ಯಾರು ಅನ್ನೋದು ಜನತೆಗೆ ಗೊತ್ತಾಗಿತ್ತು. ಬಿಗ್‌ಬಾಸ್ ಮನೆಯೊಳಗೆ ಎಂಟ್ರಿ ಕೊಟ್ಮೇಲೆ ಅವರ ಜನಪ್ರಿಯತೆ ಮತ್ತಷ್ಟು ಹೆಚ್ಚಾಯ್ತು. ಉತ್ತಮವಾಗಿ ಆಟವಾಡುತ್ತಿದ್ದ ಗೋಲ್ಡ್ ಸುರೇಶ್ ದಿಢೀರನೇ ಬಿಗ್‌ಬಾಸ್ ಮನೆಯಿಂದ ಹೊರ ಹೋಗಿದ್ದರು. ಆ ವೇಳೆ ಗೋಲ್ಡ್ ಸುರೇಶ್ ಬ್ಯುಸಿನೆಸ್‌ನಲ್ಲಿ ಲಾಸ್ ಆಗಿದೆ ಅದಕ್ಕೆ ಮನೆಯಿಂದ ಹೊರ ಹೋಗಿದ್ದಾರೆ ಅಂತ ಸುದ್ದಿ ಹಬ್ಬಿತ್ತು. ಅದಕ್ಕೆ ಫಿಲ್ಮಿಬೀಟ್ ಕನ್ನಡದ ಸಂದರ್ಶನ ವೇಳೆ ಕ್ಲಾರಿಟಿ ಕೊಟ್ಟಿದ್ದಾರೆ.

ಬಿಗ್‌ಬಾಸ್‌ಗೆ ಕರೆ ಬಂದಾಗ ಅವರ ಬ್ಯುಸಿನೆಸ್ ಅನ್ನು ಯಾರಿಗೆ ಒಪ್ಪಿಸಿ ಹೋಗಬೇಕು ಅನ್ನೋ ಗೊಂದಲದಲ್ಲಿ ಇದ್ದರು. ಪತ್ನಿಗೆ ಅವರ ಬ್ಯುಸಿನೆಸ್‌ನಲ್ಲಿ ಹೆಚ್ಚಿನ ಅನುಭವವಿಲ್ಲ. ಹೀಗಾಗಿ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಹಿಂದೇಟು ಹಾಕಿದ್ದರು. ಹೀಗಾಗಿ ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗಲೇಬೇಕಿತ್ತು.
"ಬಿಗ್‌ಬಾಸ್ ಮನೆಗೆ ಹೋಗುವ ಮುನ್ನವೇ ನನಗೆ ನನ್ನ ಬ್ಯುಸಿನೆಸ್ ಅನ್ನು ಯಾರಿಗೆ ಹ್ಯಾಂಡ್ ಓವರ್ ಮಾಡಬೇಕು. ಯಾರು ನೋಡಿಕೊಳ್ಳುತ್ತಾರೆ ಅನ್ನೋ ಆತಂಕದಲ್ಲೇ ಹೋಗಿದ್ದೆ. ಸುಮಾರು ದಿನಗಳ ವರೆಗೂ ಮನೆಯೊಳಗೆ ಹೇಗಿದೆ? ಹೇಗೆ ನಡೆಯುತ್ತಿದೆ? ಅನ್ನೋ ಕೊರಗು ಇದ್ದೇ ಇತ್ತು. ಒಂದು ಬಿಗ್‌ಬಾಸ್‌ನಿಂದ ಒಂದು ಕರೆ ಬರುತ್ತೆ. ಆಗ ಅವರು ಒಂದು ತುರ್ತು ಪರಿಸ್ಥಿತಿ ಬಂದಿದೆ. ಈ ಕ್ಷಣಕ್ಕೆ ನಿಮ್ಮ ಅವಶ್ಯಕತೆ ಮನೆಗೆ ಇದೆ ಎಂದು ಹೇಳುತ್ತಾರೆ. ನನ್ನ ಧರ್ಮ ಪತ್ನಿಗೆ ಯಾವುದೇ ರೀತಿಯ ಬ್ಯುಸಿನೆಸ್ ನಾಲೆಡ್ಜ್ ಇರೋದಿಲ್ಲ. ಎಷ್ಟೇ ವಿದ್ಯಾಭ್ಯಾಸ ಇದ್ದರೂ ಅವರಿಗೆ ಅನುಭವವಿರಬೇಕು. ಹೀಗಾಗಿ ಈ ಬ್ಯುಸಿನೆಸ್ ಅನ್ನು ಹೇಗೆ ಹ್ಯಾಂಡಲ್ ಮಾಡಬೇಕು ಅನ್ನೋ ಆತಂಕದಲ್ಲಿ ಇದ್ದರು." ಎಂದು ಫಿಲ್ಮಿಬೀಟ್‌ಗೆ ನೀಡಿದ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ.
ಬಿಗ್‌ಬಾಸ್‌ನಿಂದ ಹೊರ ಬರುತ್ತಿದ್ದಂತೆ ಎರಡು ಮೂರು ದಿನ ಸಮಯ ತೆಗೆದುಕೊಂಡು ಸಮಸ್ಯೆ ಅನ್ನೋದನ್ನು ಪರಿಹರಿಸಿದ್ದಾರೆ. ಅವರೇ ನಿಂತು ನಿರ್ಧಾರ ತೆಗೆದುಕೊಳ್ಳುವಂತಹ ಸಾಕಷ್ಟು ವಿಷಯಗಳಿತ್ತು. ಅದೆಲ್ಲವನ್ನೂ ಮುಗಿಸಿದ ಬಳಿಕ ಕನ್ನಡದ ಜನತೆಗೆ ಏಕೆ ಬಿಗ್‌ಬಾಸ್ ಮನೆಯಿಂದ ಹೊರಗೆ ಬಂದೆ ಅನ್ನುವ ಕ್ಲಾರಿಟಿಯನ್ನು ಕೊಡುತ್ತಿದ್ದಾರೆ.

"ಕಾಮೆಂಟ್ ಮಾಡುವವರು, ಸುಳ್ಳು ಸುದ್ದಿ ಹಬ್ಬಿಸುವವರು ಎಲ್ಲರೂ ನನ್ನ ಸ್ನೇಹಿತರು. ಅವರೆಲ್ಲರಿಗೂ ಒಳ್ಳೆಯದಾಗಲಿ. ಯಾರಿಗೂ ಕೆಟ್ಟದ್ದನ್ನು ಬಯಸುವ ಸ್ವಭಾವ ನನ್ನದಲ್ಲ. ನನಗೇನೋ ತುಂಬಾ ಆಟಿಟ್ಯೂಡ್ ಇದೆ. ತುಂಬಾ ಸಿಟ್ಟು ಅಂತೆಲ್ಲ ಬಂತು. ನನ್ನ ಜೀವನದಲ್ಲಿ ಅಂತಹದ್ದು ಯಾವುದೂ ಇಲ್ಲ. ಅದನ್ನೆಲ್ಲ ಇಟ್ಟುಕೊಂಡು ಏನು ಮಾಡೋದಿದೆ. ಸತ್ತಾಗಲೂ ನನ್ನನ್ನು ಮಣ್ಣಲ್ಲೇ ಹೂಳುತ್ತಾರೆ. ನನ್ನೇನು ಬಂಗಾರದ ಪೆಟ್ಟಿಯಲ್ಲಿ ಹೂತಾಕಲ್ಲ." ಎಂದು ಗೋಲ್ಡ್ ಸುರೇಶ್ ಬೇಸರ ಹೊರ ಹಾಕಿದ್ದಾರೆ.
ಇದೇ ಸಂದರ್ಭದಲ್ಲಿ ತಾವೇನು ಬ್ಯುಸಿನೆಸ್ ಮಾಡುತ್ತಿದ್ದೇನೆ ಅನ್ನೋದನ್ನು ಹೇಳಿಕೊಂಡಿದ್ದಾರೆ. "ನಾನು ಸಿವಿಲ್ ಕಾಂಟ್ರ್ಯಾಕ್ಟರ್ ಮತ್ತು ಇಂಟಿರಿಯರ್ ಡಿಸೈನ್ ಮಾಡುತ್ತೇನೆ. ಕಮರ್ಷಿಯಲ್ ಇಂಟೀರಿಯರ್ ಮಾಡುತ್ತೇನೆ. ರೆಸಿಡೆನ್ಷಿಯಲ್ ಮನೆಗಳು, ದೊಡ್ಡ ದೊಡ್ಡ ಬಿಲ್ಡಿಂಗ್‌ಗಳನ್ನು ಕಟ್ಟುವಂತದಹದ್ದು, ಫ್ಯಾಕ್ಟರಿಗಳನ್ನು ನಿರ್ಮಾಣ ಮಾಡುವಂತಹ ಕೆಲಸ ಮಾಡುತ್ತೇನೆ. ನನ್ನ ಕಂಪನಿಯಲ್ಲಿ ಸುಮಾರು 150 ಮಂದಿ ಜನರು ಕೆಲಸ ಮಾಡುತ್ತಾರೆ. ನನ್ನ ಬ್ಯುಸಿನೆಸ್, ನನ್ನ ಮನೆನೂ ತುಂಬಾ ಮುಖ್ಯ ಆಗಿತ್ತು. ಆ ಉದ್ದೇಶದಿಂದ ಮನೆಯಿಂದ ಹೊರ ಬಂದಿದ್ದೇನೆ ಅಷ್ಟೇ." ಎನ್ನುತ್ತಾರೆ.
ಗೋಲ್ಡ್ ಸುರೇಶ್‌ಗೆ ಬ್ಯುಸಿನೆಸ್‌ನಲ್ಲಿ ಲಾಸ್ ಆಗಿಲ್ಲ. ಇನ್ನೂ ನಾಲ್ಕು ದೊಡ್ಡ ಪ್ರಾಜೆಕ್ಟ್‌ಗಳನ್ನು ಮಾಡುತ್ತಿದ್ದೇನೆ. ಹೊಸ ಹೊಸ ಪ್ರಯತ್ನಗಳನ್ನು ಮಾಡುತ್ತಿದ್ದೇನೆ. ಯಾವುದೇ ಊಹಾ ಪೋಹಕ್ಕೆ ತಲೆ ಕೊಡುವುದು ಬೇಡ ಎಂದು ಗೋಲ್ಡ್ ಸುರೇಶ್ ಫಿಲ್ಮಿಬೀಟ್ ಕನ್ನಡಕ್ಕೆ ಹೇಳಿದ್ದಾರೆ.


Click it and Unblock the Notifications