BBK 11: ಬಿಗ್‌ಬಾಸ್ ಕನ್ನಡ 11ರ ಮೋಕ್ಷಿತಾ 'ಪಾರು'ಗೂ ಮೊದಲು ನಟಿಸಿದ ತಮಿಳು ಧಾರಾವಾಹಿ ಯಾವುದು ಗೊತ್ತೇ?
'ಪಾರು' ಧಾರಾವಾಹಿ ಮೂಲಕ ಕನ್ನಡ ಕಿರುತೆರೆ ಜನತೆಗೆ ಪರಿಚಯವಾದವರು ನಟಿ ಮೋಕ್ಷಿತಾ ಪೈ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಪಾರು' ಧಾರಾವಾಹಿ ಸರಿ ಸುಮಾರು ಐದು ವರ್ಷಗಳ ಕಾಲ ಕಿರುತೆರೆ ಪ್ರೇಕ್ಷಕರನ್ನು ರಂಜಿಸಿತ್ತು. ಈ ಧಾರಾವಾಹಿ ಮೂಲಕ ನಟನಾ ಕ್ಷೇತ್ರಕ್ಕೆ ಕಾಲಿಟ್ಟ ನಟಿ ಮೋಕ್ಷಿತಾ ಪೈ, ಇಂದು ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ ಬಾಸ್‌ನಲ್ಲಿ ಜನಮನ ಗೆಲ್ಲುತ್ತಿದ್ದಾರೆ.
ಅಂದ ಹಾಗೆ 'ಪಾರು' ಧಾರಾವಾಹಿಯಲ್ಲಿ ನಟಿ ಮೋಕ್ಷಿತಾ ಪೈ ಅವರದ್ದು ಬಹಳ ಸೈಲೆಂಟ್ ಪಾತ್ರವಾಗಿತ್ತು. ಪಾರ್ವತಿ ಎಂಬ ಮುಗ್ಧ ಮನಸ್ಸಿನ, ಮೃದು ಸ್ವಭಾವದ ಹೆಣ್ಣು ಮಗಳು ಹೇಗೆ ಅಖಿಲಾಂಡೇಶ್ವರಿಯ ಹಿರಿಯ ಸೊಸೆಯಾಗಿ ಆ ಮನೆಯನ್ನು ಬೆಳಗುತ್ತಾಳೆ ಎಂಬುದೇ ಈ ಧಾರಾವಾಹಿಯ ಮುಖ್ಯ ಕಥಾ ವಸ್ತುವಾಗಿತ್ತು.

ಇದಾದ ಮೇಲೆ ಕನ್ನಡ ಕಿರುತೆರೆಯಲ್ಲಿ ಬೇರೆ ಯಾವುದೇ ಧಾರಾವಾಹಿಯಲ್ಲೂ ನಟಿ ಮೋಕ್ಷಿತಾ ಪೈ ಕಾಣಿಸಿಕೊಂಡಿಲ್ಲ. ಇದೀಗ ನೇರವಾಗಿ ಬಿಗ್ ಬಾಸ್ ಮನೆಯ ಮೂಲಕ ಜನರನ್ನು ರಂಜಿಸುತ್ತಿದ್ದಾರೆ. ಬಿಗ್ ಬಾಸ್‌ನಲ್ಲಿ ಆರಂಭದಲ್ಲಿ ಸೈಲೆಂಟ್ ಆಗಿದ್ದ ಮೋಕ್ಷಿತಾ ಈಗ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದು, ಕಿರುತೆರೆ ವೀಕ್ಷಕರ ಗಮನವನ್ನು ಸೆಳೆಯುತ್ತಿದ್ದಾರೆ.
'ಪಾರು' ಧಾರಾವಾಹಿಯಿಂದ ನಟಿ ಮೋಕ್ಷಿತಾ ಪೈ ತಮಿಳು ಧಾರಾವಾಹಿ ಒಂದರಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಆ ಧಾರಾವಾಹಿ ಯಾವುದು ಅಂತ ನಿಮಗೆ ಗೊತ್ತಾ? ಹೌದು, ತಮಿಳು ಕಿರುತೆರೆ 'ಮೀನಾಕ್ಷಿ ಪೊಣ್ಣಂಗ' ಧಾರಾವಾಹಿಯಲ್ಲಿ ಮುಖ್ಯ ಪಾತ್ರಧಾರಿ ಶಕ್ತಿಯಾಗಿ ಕಾಣಿಸಿಕೊಂಡಿದ್ದರು ನಟಿ ಮೋಕ್ಷಿತಾ ಪೈ. ಕನ್ನಡದ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯ ಕಥೆಯ ರೀತಿಯೇ ತಮಿಳಿನಲ್ಲಿ 'ಮೀನಾಕ್ಷಿ ಪೊಣ್ಣಂಗ' ಎಂಬ ಧಾರಾವಾಹಿಯಲ್ಲಿ ನಟಿಸುತ್ತಿದ್ದ ನಟಿ ಮೋಕ್ಷಿತರೆ ತಮಿಳು ವೀಕ್ಷಕರ ಮನಸ್ಸನ್ನು ಗೆದ್ದಿದ್ದರು.

ಕನ್ನಡದಲ್ಲಿ 'ಪಾರು' ಹಾಗೂ ತಮಿಳಿನಲ್ಲಿ 'ಮೀನಾಕ್ಷಿ ಪೊಣ್ಣಂಗ' ಎಂಬ ಧಾರಾವಾಹಿಯಲ್ಲಿ ವಿಭಿನ್ನ ಪಾತ್ರಗಳನ್ನು ಒಟ್ಟಿಗೆ ನಿಭಾಯಿಸುತ್ತಿದ್ದ ಈ ನಟಿ ಎರಡು ಕಿರುತೆರೆ ಕ್ಷೇತ್ರದಲ್ಲಿ ಬಹಳ ಪಾಪ್ಯುಲಾರಿಟಿ ಪಡೆದಿದ್ದರು. ಆದರೆ, ವೈಯಕ್ತಿಕ ಕಾರಣವನ್ನು ಕೊಟ್ಟು ತಮಿಳಿನ 'ಮೀನಾಕ್ಷಿ ಪೊಣ್ಣುಂಗ' ಧಾರಾವಾಹಿಯಿಂದ ಅರ್ಧಕ್ಕೆ ಹೊರ ಬಂದಿದ್ದರು ನಟಿ ಮೋಕ್ಷಿತಾ ಪೈ.
ತಮಿಳು ಧಾರಾವಾಹಿಯಲ್ಲಿ ನಟಿಸಿದ ಇವರ ಪಾತ್ರಕ್ಕೆ ಡಬ್ಬಿಂಗ್ ಆರ್ಟಿಸ್ಟ್ ವಾಯ್ಸ್ ಓವರ್ ನೀಡಿದ್ದರೂ, ಕ್ರಮೇಣ ಚೆನ್ನಾಗಿ ತಮಿಳು ಕಲಿತ ನಟಿ ತಮಿಳಿನಲ್ಲೇ ಹಲವಾರು ಇಂಟರ್‌ರ್ವ್ಯೂಗಳನ್ನು ಕೊಟ್ಟಿದ್ದಾರೆ. ಕನ್ನಡದಲ್ಲಿ 'ಪಾರು' ಬಿಟ್ಟರೆ ಯಾವುದೇ ಬೇರೆ ಪ್ರಾಜೆಕ್ಟ್‌ಗಳಲ್ಲಿಯೂ ಕಾಣಿಸಿಕೊಳ್ಳದ ಇವರು, ಸದ್ಯದಲ್ಲೇ ಒಂದೊಳ್ಳೆಯ ಸಿನಿಮಾ ಕಥೆ ಮೂಲಕ ನಿಮ್ಮೆದುರು ಬರುವ ಇಚ್ಛೆಯಲ್ಲಿದ್ದೇನೆ ಎಂದು ಹೇಳಿಕೊಂಡಿದ್ದರು. ಇದೀಗ ಬಿಗ್ ಬಾಸ್ ಸೀಸನ್ 11 ರ ಮನೆಯಲ್ಲಿರುವ ಈ ನಟಿ ತಮ್ಮ ಅಭಿಮಾನಿಗಳಿಗಂತೂ ಫುಲ್ ಎಂಟರ್ಟೈನ್ಮೆಂಟ್ ನೀಡುತ್ತಿದ್ದಾರೆ.
ಇಷ್ಟಲ್ಲದೇ ಸ್ವಂತ ಯುಟ್ಯೂಬ್ ಚಾನೆಲ್ ಅನ್ನು ಹೊಂದಿರುವ ನಟಿ ಮೋಕ್ಷಿತಾ ಪೈ, ಅದರಲ್ಲಿ ತಮ್ಮ ದೈನಂದಿನ ಚಟುವಟಿಕೆಗಳು, ಬರ್ತ್ ಡೇ ಪಾರ್ಟಿಗಳು, ಸರ್ಪ್ರೈಸ್ ಪಾರ್ಟಿಗಳು ಹಾಗೂ ಟೂರಿಸ್ಟ್ ವ್ಲಾಗ್‌ಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ. ಆಗಾಗ ಬಹಳಷ್ಟು ಟ್ರಿಪ್‌ಗಳನ್ನು ಮಾಡುವ ನಟಿ ಮೋಕ್ಷಿತಾ ಪೈ ತಮ್ಮ ಕುಟುಂಬದವರೊಂದಿಗೆ ಹೆಚ್ಚಿನ ಸಮಯವನ್ನು ಕಳೆಯಲು ಬಯಸುತ್ತಾರೆ.
ಇನ್ನು ಸಾಮಾಜಿಕ ಇನ್‌ಸ್ಟಾಗ್ರಾಮ್‌ನಲ್ಲಿ ಬಹಳಷ್ಟು ಆಕ್ಟಿವ್ ಇರುವ ಈಕೆಗೆ 7 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಇದ್ದಾರೆ. ಬಿಗ್ ಬಾಸ್ ಮನೆಯಿಂದ ಒಂದೊಮ್ಮೆ ಎಲಿಮಿನೇಷನ್ ತುತ್ತ ತುದಿವರೆಗೂ ಹೋಗಿ ಮತ್ತೆ ಬಿಗ್ ಬಾಸ್ ಮನೆಗೆ ಮರಳಿರುವ ನಟಿ ಮೋಕ್ಷಿತಾ ಈಗಂತೂ ಬಹಳ ಚೆನ್ನಾಗಿ ಆಡುತ್ತಿದ್ದಾರೆ. ಇವರು ಹೀಗೆ ಆಡುತ್ತಾ ಹೋದರೆ ಇವರ ಪ್ರೇಕ್ಷಕರು ಹಾಗೂ ಅಭಿಮಾನಿಗಳು ಫಿನಾಲೆವರೆಗೂ ಮೋಕ್ಷಿತಾ ಪೈ ಅವರನ್ನು ಕರೆದುಕೊಂಡು ಹೋಗುತ್ತಾರೆ ಎಂಬುದನ್ನು ನೋಡಬೇಕಿದೆ.


Click it and Unblock the Notifications











