"ಲಾಯರ್ ಜಗದೀಶ್ ಮೇಲೆ ಚಪ್ಪಲಿ ಎಸೆದಿದ್ದಕ್ಕೆ ಕ್ಷಮೆ ಕೇಳುತ್ತೇನೆ": ಬಿಗ್‌ಬಾಸ್ ಖ್ಯಾತಿಯ ಉಗ್ರಂ ಮಂಜು
ಬಿಗ್ ಬಾಸ್ ಕನ್ನಡ ಸೀಸನ್ 11 ಯಶಸ್ವಿಯಾಗಿ ಅಂತ್ಯ ಕಂಡಿದೆ. ಈ ಸೀಸನ್‌ನಲ್ಲಿ ಭಾಗವಹಿಸಿದ ಸ್ಪರ್ಧಿಗಳೆಲ್ಲ ಸಂದರ್ಶನಗಳನ್ನು ನೀಡುವುದರಲ್ಲಿ ನಿರತರಾಗಿದ್ದಾರೆ. ಗೌತಮಿ ಜಾಧವ್, ಭವ್ಯಾ ಗೌಡ, ತ್ರಿಕ್ರಮ್, ಉಗ್ರಂ ಮಂಜು ಸೇರಿದಂತೆ ಎಲ್ಲೂ ಬಿಗ್ ಬಾಸ್ ಜೊತೆಗಿನ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಬಿಗ್ ಬಾಸ್ ಮನೆಯೊಳಗೆ ತಮ್ಮ ನಡೆಯ ಬಗ್ಗೆ ಸ್ಪಷ್ಟನೆಯನ್ನು ನೀಡುತ್ತಿದ್ದಾರೆ.
ಉಗ್ರಂ ಮಂಜು ಫಿಲ್ಮೀ ಬೀಟ್ ಕನ್ನಡಕ್ಕೆ ನೀಡಿದ ಸಂದರ್ಶನದಲ್ಲಿ ಲಾಯರ್ ಜಗದೀಶ್‌ಗೆ ಕ್ಷಮೆಯಾಚಿಸಿದ್ದಾರೆ. ಬಿಗ್ ಬಾಸ್ ಮನೆಯೊಳಗೆ ಇದ್ದಾಗ ಇಬ್ಬರೂ ಇನ್ನಿಲ್ಲದಂತೆ ಕಿತ್ತಾಡಿಕೊಂಡಿದ್ದರು. ಲಾಯರ್ ಜಗದೀಶ್ ಕಂಡರೆ ಉಗ್ರಂ ಮಂಜುಗೆ ಆಗುತ್ತಿರಲಿಲ್ಲ. ಉಗ್ರಂ ಮಂಜು ಕಂಡರೆ ಲಾಯರ್ ಜಗದೀಶ್‌ಗೆ ಆಗುತ್ತಿರಲಿಲ್ಲ. ಇಬ್ಬರೂ ಆ ಮಟ್ಟಿಗೆ ಕಿತ್ತಾಡುತ್ತಿದ್ದರು.

ಟಾಸ್ಕ್ ಒಂದರಲ್ಲಿ ಲಾಯರ್ ಜಗದೀಶ್ ಹಾಗೂ ಉಗ್ರಂ ಮಂಜು ಜಗಳ ಅತಿರೇಕಕ್ಕೆ ಹೋಗಿತ್ತು. ಲಾಯರ್ ಜಗದೀಶ್ ಟೀಕೆಗಳಿಂದ ತಾಳ್ಮೆ ಕಳೆದುಕೊಂಡಿದ್ದ ಉಗ್ರಂ ಮಂಜು ಚಪ್ಪಲಿಯನ್ನು ಎಸೆದಿದ್ದರು. ಅದು ಸಿಕ್ಕಾಪಟ್ಟೆ ಟೀಕೆಗೆ ಗುರಿಯಾಗಿತ್ತು. ಈ ಘಟನೆ ಬಗ್ಗೆ ಕಿಚ್ಚ ಸುದೀಪ್ ಕೂಡ ಕ್ಲಾಸ್ ತೆಗೆದುಕೊಂಡಿದ್ದರು. ಆ ವೇಳೆ ಉಗ್ರಂ ಮಂಜು ಕ್ಷಮೆ ಯಾಚಿಸಿದ್ದರು. ಈಗ ಫಿಲ್ಮಿಬೀಟ್ ಕನ್ನಡಕ್ಕೆ ನೀಡಿದ ಸಂದರ್ಶನದಲ್ಲೂ ಕ್ಷಮೆ ಕೇಳಿದ್ದಾರೆ.
ಈ ಸಂದರ್ಶನದಲ್ಲಿ ಲಾಯರ್ ಜಗದೀಶ್ ಅವರ ಮಾತುಗಳು ನನಗೆ ಟ್ರಿಗರ್ ಮಾಡುತ್ತಿತ್ತು ಎಂದಿದ್ದಾರೆ. ನನಗೆ ಟಾಂಗ್ ಕೊಡುವುದಕ್ಕೆ ಬಂದರೆ, ನಾನು ತಿರುಗಿಸಿ ಟಾಂಗ್ ಕೊಡುತ್ತೇನೆ ಎಂದಿದ್ದಾರೆ. "ನನಗೆ ಸಿಕ್ಕಾಪಟ್ಟೆ ಟ್ರಿಗರ್ ಆಗುತ್ತಿತ್ತು. ನನ್ನ ವ್ಯಕ್ತಿತ್ವ ಹೇಗೆ ಅಂದರೆ ನಾನಾಗೇ ಟ್ರಿಗರ್ ಮಾಡಿಕೊಂಡು ಹೋಗುವ ವ್ಯಕ್ತಿತ್ವ ನನ್ನದಲ್ಲ. ಯಾರಾದರೂ ಟ್ರಿಗರ್ ಮಾಡಿದರೆ, ಬಿಡುವಂತಹ ವ್ಯಕ್ತಿತ್ವನೂ ಅಲ್ಲ. ನನಗೆ ಒಳ್ಳೆಯವರು ಅಂತ ಅನಿಸುವವರ ಮುಂದೆ ನಾನು ಕೈ ಕಟ್ಟಿಕೊಂಡು ನಿಲ್ಲುತ್ತೇನೆ. ಕೆಲವು ವಿಚಾರಗಳಿಗೆ ನನಗೆ ಟಾಂಗ್ ಕೊಡುವುದಕ್ಕೆ ಬಂದರೆ ನಾನು ಟಾಂಗ್ ಕೊಟ್ಟೇ ಕೊಡುತ್ತೇನೆ. ನನಗೆ ಎಮೋಷನಲ್ ಅಂತ ಅನಿಸಿದರೆ, ನಾನು ಎಮೋಷನಲ್ ಆಗಿಯೇ ಇರುತ್ತೇನೆ. ಕೆಲವೊಮ್ಮೆ ಜಗದೀಶ್ ಅವರೇ ಹೇಗಿತ್ತು ಕಂಟೆಂಟ್ ಅಂದುಬಿಡೋರು. ಜಗಳ ಎಲ್ಲಾ ಆಡಿದ ಮೇಲೆ ಹೇಗಿತ್ತು ಮಂಜಣ್ಣ ಕಂಟೆಂಟ್ ಅನ್ನೋರು. ನನಗೆ ಈ ಮನುಷ್ಯ ಇರೋದೇ ಹೀಗೆನಾ? ಅಂತ ಅನಿಸುತ್ತಿತ್ತು." ಎಂದಿದ್ದಾರೆ.

ಲಾಯರ್ ಜಗದೀಶ್ ಮಾತುಗಳು ಉಗ್ರಂ ಮಂಜುವನ್ನು ಗೊಂದಲಕ್ಕೆ ಎಡೆ ಮಾಡಿಕೊಡುತ್ತಿತ್ತು ಎಂದು ಉಗ್ರಂ ಮಂಜು ಹೇಳಿದ್ದಾರೆ. "ಒಮ್ಮೆ ಬಿಗ್ ಬಾಸ್ ಅನ್ನೇ ಕೊಂಡುಕೊಳ್ಳುತ್ತೇನೆ ಅನ್ನೋರು. ಇನ್ನೊಮ್ಮೆ ಬಿಗ್ ಬಾಸ್‌ಗೆ ಅವಾಜ್ ಹಾಕೋರು. ಅದನ್ನೆಲ್ಲ ನೋಡುತ್ತಾ ಹೋದಾಗ ಈ ಮನುಷ್ಯ ಏನು ಅನ್ನೋದೇ ಪ್ರಶ್ನೆಯಾಗಿತ್ತು. ಆದರೆ, ಸಖತ್ ಎಂಟರ್‌ಟೈನರ್ ಅವರು. ಒಂದಷ್ಟು ವಿಚಾರಗಳು ಅವರು ಹೇಳಿದ್ದನ್ನು ಮಾಡಿದ್ದಾರೆ ಅನ್ನೋದು ಗೊತ್ತಾಗುತ್ತಿತ್ತು. ಕೆಲವೊಮ್ಮೆ ಸಿಕ್ಕಾಪಟ್ಟೆ ಇರಿಟೇಟ್ ಆಗುತ್ತಿತ್ತು." ಎಂದಿದ್ದಾರೆ.
ಲಾಯರ್ ಜಗದೀಶ್ ಮೇಲೆ ಯಾಕೆ ಚಪ್ಪಲಿ ಎಸೆದೆ ಅನ್ನೋದನ್ನು ಉಗ್ರಂ ಮಂಜು ರಿವೀಲ್ ಮಾಡಿದ್ದು, ಮತ್ತೊಮ್ಮೆ ಕ್ಷಮೆಯನ್ನು ಕೇಳಿದ್ದಾರೆ. "ಮಾತುಗಳು ತುಂಬಾನೇ ಅತಿರೇಕಕ್ಕೆ ಹೋಗಿತ್ತು. ಆ ವೇಳೆ ನಾನು ಮಾಡಿದ್ದು ತಪ್ಪೇ. ವೀಕೆಂಡ್‌ನಲ್ಲಿ ಸುದೀಪ್ ಅಣ್ಣ ಪ್ರಶ್ನೆ ಮಾಡುತ್ತಾರೆ. ನಾನು ಅಲ್ಲೇ ಸಾರಿ ಕೇಳಿದ್ದೆ. ಈಗಲೂ ಜಗದೀಶ್ ಸರ್‌ಗೆ ನಾನು ಕ್ಷಮೆ ಕೇಳುತ್ತೇನೆ. ಬರ್ತ್‌ಡೇ ದಿನ ಅವರು ಹಿರಿಯರು ಅಂತ ಕೇಕ್ ತಿನ್ನಿಸಿ, ಆಶೀರ್ವಾದ ಪಡೆದುಕೊಂಡಿದ್ದೂ ಉಂಟು. ಅವರ ಕಾಲಿಗೆ ಬಿದ್ದಿದ್ದೂ ಉಂಟು. ಆ ಮೂಮ್ಮೆಂಟ್‌ನಲ್ಲಿ ಆಯ್ತು. ಬೇಕು ಅಂತ ಮಾಡಿದ್ದಲ್ಲ. ಅದಕ್ಕೆ ನಿಮ್ಮ ಫಿಲ್ಮಿಬೀಟ್ ಕಡೆಯಿಂದಲೂ ಕ್ಷಮೆ ಕೇಳುತ್ತೇನೆ." ಎಂದು ಉಗ್ರಂ ಮಂಜು ಹೇಳಿದ್ದಾರೆ.
ಆ ಘಟನೆ ಬಳಿಕ ಇಬ್ಬರೂ ಚೆನ್ನಾಗಿದ್ದೇವೆ ಎಂದು ಹೇಳಿಕೊಂಡಿದ್ದಾರೆ. "ಬಿಗ್ ಬಾಸ್ ಕೊನೆಯ ವಾರ ಬಂದಿದ್ದರು. ಆಗಲೂ ನಾವು ಚೆನ್ನಾಗಿ ಮಾತಾಡಿಕೊಂಡೆವು. ಅವರ ಸಂದರ್ಶನವನ್ನೂ ನೋಡಿದೆ. ಮಂಜಣ್ಣ ಇಲ್ಲದೆ ಹೋಗಿದ್ದರೆ ನಾನು ಹೀರೋ ಆಗುತ್ತಿರಲಿಲ್ಲ ಅಂತ ಹೇಳಿದ್ದಾರೆ. ಆದರೆ, ನಾನು ಆ ಸಮಯದಲ್ಲಿ ಮಾಡಿದ್ದು ಖಂಡಿತಾ ತಪ್ಪು" ಎಂದು ಉಗ್ರಂ ಮಂಜು ಒಪ್ಪಿಕೊಂಡಿದ್ದಾರೆ.


Click it and Unblock the Notifications











