BBK 11: ಬಿಗ್‌ಬಾಸ್ ಮನೆಯಲ್ಲಿ ನಾಡಗೀತೆ ಹಾಡಿಲ್ಲವೇ ಗೌತಮಿ: ಯಮುನಾ ಆರೋಪಕ್ಕೆ ಗೌತಮಿ ತಿರುಗೇಟು!
ಬಿಗ್‌ಬಾಸ್ ಕನ್ನಡ 11 ಫಿನಾಲೆ ಆರಂಭ ಆಗುವುದಕ್ಕೆ ಇನ್ನೇನು ಕೆಲವೇ ದಿನಗಳು ಉಳಿದಿವೆ. ಇನ್ನು ಎರಡು ದಿನಗಳಾದರೆ, ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆ ಆರಂಭ ಆಗುತ್ತೆ. ಈ ಮಧ್ಯೆ ಬಿಗ್ ಬಾಸ್ ಕನ್ನಡ ಮುಗಿಯುವುದಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿಯುವಾಗಲೇ ಹೊಸ ವಿವಾದವೊಂದು ಸೃಷ್ಟಿಯಾಗಿದೆ. ಬಿಗ್ ಬಾಸ್ ಮನೆಯಿಂದ ಮೊದಲು ಹೊರಬಿದ್ದಿರುವ ಯಮುನಾ ನಟಿ ಗೌತಮಿ ಜಾದವ್ ವಿರುದ್ಧ ಅಸಮಧಾನ ಹೊರಹಾಕಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ನವೆಂಬರ್ ಒಂದನೇ ತಾರೀಕು ಕನ್ನಡ ರಾಜ್ಯೋತ್ಸವದ ಅಂಗವಾಗಿ ನಾಡ ಗೀತೆಯನ್ನು ಹಾಕಲಾಗಿತ್ತು. ಮನೆಯೊಳಗೆ ಇದ್ದ ಸ್ಪರ್ಧಿಗಳು ನಾಡಗೀತೆಯನ್ನು ಹಾಡಿದ್ದರು. ಆದರೆ, ಗೌತಮಿ ಜಾದವ್ ಮಾತ್ರ ಕನ್ನಡದ ನಾಡಗೀತೆಯನ್ನು ಹಾಡಲಿಲ್ಲ ಅಂತ ಯಮುನಾ ಗಂಭೀರ ಆರೋಪ ಮಾಡಿದ್ದಾರೆ. ಇದಕ್ಕೆ ಗೌತಮಿ ಜಾದವ್ ಕೂಡ ತಿರುಗೇಟು ಕೊಟ್ಟಿದ್ದಾರೆ.

ಯಮುನಾ ಮಾಡಿದ ಆರೋಪಕ್ಕೆ ಗೌತಮಿ ಜಾದವ್ ಮನೆಯಿಂದ ಹೊರ ಬರುತ್ತಿದ್ದಂತೆ ಸ್ಪಷ್ಟನೆ ಕೊಟ್ಟಿದ್ದಾರೆ. ಬಾಸ್ ಟಿವಿ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಯಮುನಾ ಮಾಡಿದ ಗಂಭೀರ ಆರೋಪಗಳಿಗೆ ಗೌತಮಿ ಜಾದವ್ ತಿರುಗೇಟು ಕೊಟ್ಟಿದ್ದಾರೆ. ಬಿಗ್ ಬಾಸ್ ಮನೆಯೊಳಗೆ ಕನ್ನಡದ ನಾಡಗೀತೆಯನ್ನು ಹಾಡಿದ್ದೇನೆ. ಆ ವಿಡಿಯೋ ಕೂಡ ಪ್ರಸಾರ ಆಗಿತ್ತು ಎಂದು ಹೇಳಿದ್ದಾರೆ.
ಮೊದಲಿಗೆ ಬಿಗ್ ಬಾಸ್ ಮನೆಯಲ್ಲಿ ಎಲ್ಲರೂ ಕನ್ನಡ ನಾಡಗೀತೆಯನ್ನು ಹಾಡುತ್ತಿದ್ದರೆ, ಇತ್ತ ಗೌತಮಿ ಜಾದವ್ ಸುಮ್ಮನೆ ನಿಂತಿದ್ದರು ಎಂದು ಆರೋಪ ಮಾಡಿದ್ದಾರೆ. "ಬಿಗ್ ಬಾಸ್ ಮನೆಯೊಳಗೆ ಎಲ್ಲರೂ ನಾಡಗೀತೆಯನ್ನು ಹಾಡಬೇಕಾದರೆ, ಕೆಲವರು ಗಟ್ಟಿ ವಾಯ್ಸ್‌ನಲ್ಲಿ ಚೆನ್ನಾಗಿ ಹಾಡುತ್ತಾರೆ. ಇನ್ನು ಕೆಲವರು ಬರುವಷ್ಟನ್ನು ಮಾತ್ರ ಹಾಡುತ್ತಾರೆ. ಇನ್ನು ಕೆಲವರು ಲಿಪ್ ಸಿಂಕ್ ಮಾಡುತ್ತಾರೆ. ಆದರೆ, ಅಲ್ಲಿರುವಂತಹ ಗೌತಮಿ ಬಾಯಿ ಮುಚ್ಚಿಕೊಂಡು ನಿಂತಿರುತ್ತಾರೆ. ಅಷ್ಟೂ ಹಾಡನ್ನು ಹಾಗೇ ನಿಂತಿದ್ದಾರೆ. ಬೇರೆ ದೇಶಕ್ಕೆ ಹೋದರೆ ಅಲ್ಲಿನ ರಾಷ್ಟ್ರ ಗೀತೆಯನ್ನು ಹಾಡದೇ ಸುಮ್ಮನೆ ನಿಂತಿರುತ್ತೇವೆ. ಹಾಗೇ ನಿಂತಿದ್ದಾರೆ." ಎಂದಿದ್ದಾರೆ.

ಹಾಗೇ ಇದೇ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಗೌತಮಿ ಜಾದವ್ ಮರಾಠಿಯಾಗಿದ್ದರೂ 12 ವರ್ಷಗಳಿಂದ ಕರ್ನಾಟಕದಲ್ಲಿ ಇದ್ದಾರೆ. ಆದರೆ, ನಾಡ ಗೀತೆ ಗೊತ್ತಿಲ್ಲ ಎಂದು ಯಮುನಾ ಕಾಮೆಂಟ್ ಮಾಡಿದ್ದರು. "ಅವರು ಮರಾಠಿ ಅಂತೆ. ಅದು ಆಗಿರಬಹುದು. ಆದರೆ, 12 ವರ್ಷಗಳಿಂದ ಕರ್ನಾಟಕದಲ್ಲಿ ಇದ್ದಾರೆ. ಕನ್ನಡ ಧಾರಾವಾಹಿಗಳಲ್ಲಿ ನಟಿಸುತ್ತಿದ್ದಾರೆ. ಇಲ್ಲಿನ ನೆಲ ಬೇಕು. ಇಲ್ಲಿ ಜನ ಬೇಕು. ಇಲ್ಲಿನ ಅವಕಾಶಗಳು ಬೇಕು. ಇಲ್ಲಿನ ಎಲ್ಲವೂ ಬೇಕು. ಇಲ್ಲಿನ ನಾಡ ಗೀತೆ ಗೊತ್ತಿಲ್ವಾ ನಿಮಗೆ. ಬಾರದೆ ಇದ್ದರೂ ಪರ್ವಾಗಿಲ್ಲ. ಕಲಿಯುವುದಕ್ಕೆ ಎಷ್ಟು ದಿನ ಬೇಕು ನಿಮಗೆ?" ಎಂದಿದ್ದರು.
ಬಾಸ್ ಟಿವಿ ಯೂಟ್ಯೂಬ್ ಚಾನೆಲ್‌ಗೆ ಗೌತಮಿ ಜಾದವ್ ಕೂಡ ಸಂದರ್ಶನ ನೀಡಿದ್ದರು. ಆ ವೇಳೆ ಯಮುನಾ ಅವರು ಮಾಡಿದ ಟೀಕೆಗಳಿಗೆ ಉತ್ತರ ಕೊಟ್ಟಿದ್ದಾರೆ. "ನಾನು ನಾಡ ಗೀತೆ ಹಾಡಿದ್ದೀನಿ. ನನಗೆ ಎಲ್ಲೆಲ್ಲಿ ಗೊತ್ತಿತ್ತೋ ಅಲ್ಲೆಲ್ಲಾ ಹಾಡಿದ್ದೀನಿ. ಆ ವಿಡಿಯೋಗಳನ್ನು ಕೂಡ ತೋರಿಸಿದ್ದಾರೆ. ಯಾವುದೇ ಒಂದು ವಿಷಯವನ್ನು ಗೊತ್ತಿದ್ದರೆ ಮಾಡಬೇಕು. ಗೊತ್ತಿಲ್ಲದೆ ಇದ್ದರೆ, ತಪ್ಪು ಅಪೆಂಟ್ ಮಾಡಬಾರದು ಅಂತ. ನಾಡ ಗೀತೆ ಆಗಿರುವುದರಿಂದ ತಪ್ಪು ಹಾಡಬಾರದು ಅಂತ. ಎಲ್ಲೆಲ್ಲಿ ಗೊತ್ತೋ ಅಲ್ಲೆಲ್ಲ ಹಾಡಿದ್ದೀನಿ. ಅಭಿ ಹೇಳಿರುವ ಪ್ರಕಾರ, ನಾನು ಹಾಡಿರುವ ಫುಟೇಜ್ ಕೂಡ ಬಂದಿದೆಯಂತೆ." ಎಂದು ಗೌತಮಿ ಜಾದವ್ ಸಂದರ್ಶನದ ವೇಳೆ ಹೇಳಿಕೊಂಡಿದ್ದಾರೆ. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.


Click it and Unblock the Notifications











