BBK 11 Grand Finale:ದೋಸ್ತನಿಗೆ ಗೇಟ್ ಪಾಸ್ ಕೊಟ್ಟು ಮೋಕ್ಷಿತಾ ಆಯ್ಕೆ ಮಾಡಿದ್ದೇಕೆ? ಹನುಮಂತ ಕೊಟ್ಟ ಕಾರಣವೇನು?
ಬಿಗ್ ಬಾಸ್ ಕನ್ನಡ 11ರ ಗ್ರ್ಯಾಂಡ್ ಫಿನಾಲೆಯಲ್ಲಿ ಕಿಚ್ಚ ಸುದೀಪ್ ನಿರೂಪಣೆಗೆ ಕಿರುತೆರೆ ವೀಕ್ಷಕರು ಮನಸೋತಿದ್ದಾರೆ. ಸುದೀಪ್ ನಿರೂಪಣೆ ಮಾಡುತ್ತಿರುವ ಕೊನೆಯ ಫಿನಾಲೆ ಆಗಿದ್ದರಿಂದ ಸುದೀಪ್ ಮಾತುಗಳನ್ನು ಕೇಳಿ ಖುಷಿ ಪಟ್ಟಿದ್ದಾರೆ. ಫಿನಾಲೆಯಲ್ಲಿ ಉಳಿದುಕೊಂಡಿರುವ ಐದು ಮಂದಿ ಸ್ಪರ್ಧಿಗಳ ಬಿಗ್ ಬಾಸ್ ಮನೆಯಲ್ಲಿ ಕಳೆದ ಒಂದೊಂದು ಕ್ಷಣವನ್ನು ಕೆದಕಿದ್ದಾರೆ.
ಕಿಚ್ಚ ಸುದೀಪ್ ಒಂದು ಕಡೆ ಸ್ಪರ್ಧಿಗಳ ಕಾಲೆಳೆದರೆ, ಇನ್ನೊಂದು ಕಡೆ ಅವರು ತೆಗೆದುಕೊಂಡಿರುವ ಕೆಲವು ಪ್ರಮುಖ ನಿರ್ಧಾರಗಳಿಗೆ ಕಾರಣವನ್ನು ಕೇಳಿದ್ದಾರೆ. ಇದರಲ್ಲಿ ಒಂದು ಹನುಮಂತನ ನಿರ್ಧಾರವೂ ಕೂಡ ಒಂದು. ಹನುಮಂತ ಮನಸ್ಸು ಮಾಡಿದ್ದರೆ, ದೋಸ್ತ ಧನರಾಜ್ ಅನ್ನು ಫಿನಾಲೆಗೆ ಕರೆದುಕೊಂಡು ಬರಬಹುದಿತ್ತು. ಆದರೆ, ಮೋಕ್ಷಿತಾ ಅವರನ್ನು ಆಯ್ಕೆ ಮಾಡಿದ್ದರು.

ಈ ನಿರ್ಧಾರ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆಯನ್ನು ಹುಟ್ಟಾಕಿತ್ತು. ಕೆಲವರು ಹನುಮಂತ ಸ್ವಾರ್ಥಿ, ಮಹಾನ್ ಬುದ್ದಿವಂತ ಅಂತೆಲ್ಲ ಟೀಕೆಗಳನ್ನು ಮಾಡಿದ್ದರು. ಮತ್ತೆ ಕೆಲವರು ಹನುಮಂತ ನಿಜವಾದ ಆಟ ಆಡಿದ್ದಾನೆ ಅಂತಲೂ ಹೇಳಿದ್ದರು. ಆ ವೇಳೆ ಎರಡೂ ತರಹದ ಟೀಕೆ ಟಿಪ್ಪಣಿಗಳು ಬಂದಿದ್ದವು. ಆ ಬಗ್ಗೆ ಹನುಮಂತನ ಬಳಿ ಕಿಚ್ಚ ಸುದೀಪ್ ನೇರವಾಗಿ ಪ್ರಶ್ನೆ ಮಾಡಿದ್ದರು. ಅದಕ್ಕೆ ಹನುಮಂತ ಕ್ಲಾರಿಟಿ ಕೊಟ್ಟಿದ್ದಾರೆ.
ಕಿಚ್ಚ ಸುದೀಪ್ ಗ್ರ್ಯಾಂಡ್ ಫಿನಾಲೆಯಲ್ಲಿರುವ ಟಾಪ್ 5 ಸ್ಪರ್ಧಿಗಳನ್ನು ಒಬ್ಬೊಬ್ಬರಾಗಿಯೇ ಅವರು ತೆಗೆದುಕೊಂಡಿದ್ದ ಗಟ್ಟಿ ನಿರ್ಧಾರಗಳನ್ನು ಕೆದಕಿದ್ದರು. ಹಾಗೇ ಹನುಮಂತನಿಗೆ ಗೆಳೆಯ ಧನರಾಜ್ ಅನ್ನು ಯಾಕೆ ಆಯ್ಕೆ ಮಾಡಲಿಲ್ಲ? ಎಂದು ಪ್ರಶ್ನೆ ಹಾಕಿದ್ದಾಗ ಹನುಮಂತ ಕೊಟ್ಟ ಉತ್ತರ ಎಲ್ಲರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮೋಕ್ಷಿತಾ ಆಯ್ಕೆ ಮಾಡಿದ್ದೇಕೆ? ಅನ್ನೋ ಕಾರಣವನ್ನೂ ನೀಡಿದ್ದಾರೆ.

ಆ ವಾರದಲ್ಲಿ ನೀಡಿದ ಟಾಸ್ಕ್‌ಗಳಲ್ಲಿ ಮೋಕ್ಷಿತಾ ಚೆನ್ನಾಗಿ ಆಟ ಆಡಿದ್ದರು. ಅದೇ ಆ ವಾರದಲ್ಲಿ ಧನರಾಜ್ ಟಾಸ್ಕ್‌ಗಳಲ್ಲಿ ಮುಗ್ಗರಿಸಿದ್ದರು. ಹೀಗಾಗಿ ಪ್ರಾಮಾಣಿಕವಾಗಿ ಮೋಕ್ಷಿತಾ ಅವರನ್ನು ಆಯ್ಕೆ ಮಾಡಿದ್ದಾಗಿ ಹೇಳಿದ್ದಾರೆ. ಹಾಗೇ ಗೇಮ್ ಅಂತ ಬಂದಾಗ ಗೆಳೆತನಕ್ಕಾಗಿ ಆಯ್ಕೆ ಮಾಡಬಾರದು. ಯಾರು ಚೆನ್ನಾಗಿ ಆಡಿದ್ದಾರೋ ಅವರನ್ನು ಆಯ್ಕೆ ಮಾಡಬೇಕು ಎಂದು ಹೇಳಿದ್ದಾರೆ. ಇದು ಕಿಚ್ಚ ಸುದೀಪ್ ಮೆಚ್ಚುಗೆಗೂ ಕಾರಣವಾಯ್ತು.


Click it and Unblock the Notifications











