BBK 11; ಧರ್ಮ ಕೀರ್ತಿರಾಜ್ ತಾಯಿ ಬಲಗೈ ಕಳೆದುಕೊಂಡಿದ್ದೇಗೆ? ಅಮ್ಮನ ನೆನೆದು ಚಾಕೊಲೇಟ್ ಬಾಯ್ ಭಾವುಕ
ಬಿಗ್‌ಬಾಸ್ ಕನ್ನಡ ಸೀಸನ್ 11 ಆರಂಭ ಆಗಿ ಐದನೇ ವಾರಕ್ಕೆ ಕಾಲಿಟ್ಟಿದೆ. ಇಲ್ಲಿವರೆಗೂ ಸೈಲೆಂಟ್ ಆಗಿದ್ದ 'ನವಗ್ರಹ' ನಟ ಧರ್ಮ ಕೀರ್ತಿರಾಜ್ ಆಕ್ಟಿವ್ ಆಗಿದ್ದಾರೆ. ಟಾಸ್ಕ್‌ನಲ್ಲಿ ಚುರುಕಾಗುತ್ತಿದ್ದಾರೆ. ಆಗಾಗ ಅಗ್ರೇಸಿವ್ ಆಗುತ್ತಿದ್ದಾರೆ. ಮನೆ ಮಂದಿಯ ಮಧ್ಯೆ ತಾನೂ ಇದ್ದೇನೆ ಎಂದು ತೋರಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ ಕೂಡ ಅದೆಷ್ಟೋ ಬಾರಿ ಧರ್ಮ ಕೀರ್ತಿರಾಜ್ ಅವರನ್ನು ರೊಚ್ಚಿಗೆಬ್ಬಿಸುವ ಪ್ರಯತ್ನ ನಡೆದಿತ್ತು. ಆದರೆ, ಸಾಧ್ಯವಾಗಿರಲಿಲ್ಲ.
ಈಗ ಬಿಗ್ ಬಾಸ್ ಮನೆಯಲ್ಲಿ ಕಳೆದ ಒಂದು ವಾರದಿಂದ ಧರ್ಮ ಕೀರ್ತಿರಾಜ್ ಕಾಣಿಸಿಕೊಳ್ಳುವುದಕ್ಕೆ ಶುರು ಮಾಡಿದ್ದಾರೆ. ವೀಕ್ಷಕರನ್ನು ನಿಧಾನವಾಗಿ ತನ್ನ ಬಳಿಕ ಸೆಳೆಯುವುದಕ್ಕೆ ಶುರು ಮಾಡಿದ್ದಾರೆ. ಸಿನಿಮಾದಲ್ಲಿ ಕಂಡಂತೆ ಧರ್ಮ ಬಿಗ್ ಬಾಸ್ ಮನೆಯೊಳಗೂ ಲವರ್ ಬಾಯ್ ಆಗಿಯೇ ಉಳಿದು ಬಿಡುತ್ತಾರೋ ಏನೋ ಅನ್ನುವ ಅನುಮಾನಗಳಿಗೆ ತೆರೆ ಎಳೆಯುತ್ತಿದ್ದಾರೆ.

ಇಲ್ಲಿವರೆಗೂ ಧರ್ಮ ಕೀರ್ತಿರಾಜ್ ಹೆಸರು ನಟಿ ಐಶ್ವರ್ಯಾ ಸಿಂಧೋಗಿ ಹಾಗೂ ಅನುಷಾ ಅವರ ಜೊತೆನೇ ತಳುಕು ಹಾಕಿಕೊಳ್ಳುತ್ತಿತ್ತು. ಆದ್ರೀಗ ಧರ್ಮ ಸದ್ದು ಮಾಡುವುದಕ್ಕೆ ಶುರುವಿಟ್ಟುಕೊಂಡಿದ್ದಾರೆ. ಈ ಮಧ್ಯೆ ಅಮ್ಮನನ್ನು ನೆನೆದು ಭಾವುಕರಾಗಿದ್ದಾರೆ. ಅಮ್ಮನ ಬಲಗೈ ಇಲ್ಲ ಅನ್ನುವ ಸತ್ಯವನ್ನು ಇದೇ ಮೊದಲ ಬಾರಿಗೆ ಹೇಳಿಕೊಂಡಿದ್ದಾರೆ. ಇದು ವೀಕ್ಷಕರು ಕೂಡ ಭಾವುಕರಾಗುವಂತೆ ಮಾಡಿದೆ.
ಬಿಗ್ ಬಾಸ್ ಮನೆಯೊಳಗೆ ಪ್ರವೇಶ ಮಾಡಿದ ದಿನದಿಂದ ಧರ್ಮ ಕೀರ್ತಿರಾಜ್ ತನ್ನ ವೈಯಕ್ತಿಕ ವಿಚಾರವನ್ನು ಹೇಳಿಕೊಂಡಿರಲಿಲ್ಲ. ಜೊತೆಗೆ ತನ್ನ ಕುಟುಂಬದ ಬಗ್ಗೆನೂ ತುಟಿ ಬಿಚ್ಚಿರಲಿಲ್ಲ. ಆದರೆ, ಇದೇ ಮೊದಲ ಬಾರಿ ಧರ್ಮ ಕೀರ್ತಿರಾಜ್ ತನ್ನ ಅಮ್ಮನ ಬಗ್ಗೆ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ. ತನ್ನ ತಾಯಿಗೆ ಬಲಗೈ ಇಲ್ಲ ಅನ್ನೋದನ್ನು ಬಿಗ್ ಬಾಸ್ ಶೋನಲ್ಲಿ ರಿವೀಲ್ ಮಾಡಿದ್ದಾರೆ.

ಹೌದು, ಧರ್ಮ ಕೀರ್ತಿ ರಾಜ್ ಅವರ ಅಮ್ಮನಿಗೆ ಬಲಗೈ ಇಲ್ಲ. ಕಾರು ಅಪಘಾತದಲ್ಲಿ ಧರ್ಮ ಅವರ ತಾಯಿ ಬಲಗೈ ಕಳೆದುಕೊಂಡಿರುವ ಘಟನೆಯನ್ನು ಇದೇ ಮೊದಲ ಬಿಚ್ಚಿಟ್ಟಿದ್ದಾರೆ. ಧರ್ಮ ಕೀರ್ತಿರಾಜ್ ಅವರಿಗೆ ಆಗಿನ್ನೂ ಐದಾರು ವರ್ಷ. ಆ ವೇಳೆ ತಂದೆ ಕೀರ್ತಿರಾಜ್ ವಿವಾಹ ವಾರ್ಷಿಕೋತ್ಸವಕ್ಕಾಗಿ ತಿರುಪತಿಗೆ ಹೋಗಿದ್ದರು. ಅಲ್ಲಿಂದ ವಾಪಾಸ್ ಬರುವಾಗ ಅವರ ತಾಯಿಯ ಕೈ ಕಾರಿನಿಂದ ಹೊರಗೆ ಇತ್ತು. ಈ ವೇಳೆ ಬಸ್ ಬಂದು ಗುದ್ದಿದ್ದರಿಂದ ಕೈ ಕಟ್ ಆಗಿತ್ತು ಎಂದು ಹೇಳಿಕೊಂಡಿದ್ದಾರೆ.
ಈ ಘಟನೆ ವೇಳೆ ತಂದೆ ಕೀರ್ತಿರಾಜ್ ಧರಿಸಿದ್ದ ಉಡುಪು ರಕ್ತಮಯವಾಗಿತ್ತು. ಹಿರಿಯ ನಟ ಕೀರ್ತಿರಾಜ್ ತನ್ನ ಪತ್ನಿಯ ಜೊತೆ ಸದಾ ನಿಂತಿದ್ದಾರೆ. ಪುತ್ರ ಧರ್ಮ ಕೀರ್ತಿರಾಜ್ ಈ ವಿಷಯವನ್ನು ಹೇಳಿಕೊಂಡಿದ್ದಾರೆ. ಕೀರ್ತಿರಾಜ್ ಪುತ್ರ ಅಂದ ಕೂಡಲೇ ಅವರಿಗೆ ಏನೂ ಕಷ್ಟವೇ ಇಲ್ಲವೇನೋ ಅಂತಾರೆ. ಆದರೆ, ತಾನು ಪಟ್ಟಿರುವ ಕಷ್ಟ ಯಾರ ಕಣ್ಣಿಗೂ ಕಾಣುವುದಿಲ್ಲ ಎಂದು ಹೇಳಿದ್ದಾರೆ.
ಧರ್ಮ ಕೀರ್ತಿ ರಾಜ್ ತಮ್ಮ ಜರ್ನಿಯ ಬಗ್ಗೆನೂ ಹೇಳಿಕೊಂಡಿದ್ದಾರೆ. ಇದೂವರೆಗೂ ಸುಮಾರು 20 ಸಿನಿಮಾಗಳಲ್ಲಿ ನಟಿಸಿದ್ದು, ಇನ್ನೂ ಸಕ್ಸಸ್‌ಗಾಗಿ ಕಾಯುತ್ತಿರುವುದಾಗಿ ಹೇಳಿದ್ದಾರೆ. ಧರ್ಮನ ಸಿನಿಮಾ ಹಾಕಿಕೊಂಡರೆ ಅದು ಓಡುವುದಿಲ್ಲ ಎಂದು ಹೇಳಿದ್ದರು. ನೀವು ಸಿನಿಮಾ ಮಾಡದೇ ಇದ್ದರೂ ಪರವಾಗಿಲ್ಲ. ಸಿನಿಮಾ ಮಾಡುತ್ತೇನೆ ಅಂತ ಬರುವವರನ್ನು ತಡೆಯಬೇಡಿ. 15 ವರ್ಷಗಳಿಂದ ಚಿತ್ರರಂಗದಲ್ಲಿ ಇದ್ದೇನೆ. ಎಲ್ಲೂ ಹೆಸರನ್ನು ಕೆಡಿಸಿಕೊಂಡಿಲ್ಲ ಎಂದು ಧರ್ಮ ಕೀರ್ತಿ ರಾಜ್ ಹೇಳಿದ್ದಾರೆ.


Click it and Unblock the Notifications











