BBK 11: ಮೊನ್ನೆ ಮೊನ್ನೆ ಮೋಕ್ಷಿತಾಗೆ 'ಮಕ್ಕಳ ಕಳ್ಳಿ' ಅಂದ್ರು.. ಈಗ "ಅಕ್ಕ ನೀನು ದೇವತೆ" ಅಂತಿದ್ದಾರೆ
ಕಳೆದೆರಡು ದಿನಗಳಿಂದ ಬಿಗ್ ಬಾಸ್ ಕನ್ನಡ ಸೀಸನ್ 11 ಎಮೋಷನಲ್ ಆಗಿ ಬಿಟ್ಟಿದೆ. ಇನ್ನೇನು ಫಿನಾಲೆ ಹತ್ತಿರ ಬರುತ್ತಿದ್ದಂತೆ ಮನೆಯೊಳಗೆ ಉಳಿದುಕೊಂಡಿರುವ ಸ್ಪರ್ಧಿಗಳು ವೀಕ್ಷಕರಿಗೆ ಇಷ್ಟ ಆಗುವುದಕ್ಕೆ ಶುರುವಾಗಿದ್ದಾರೆ. ಆರಂಭದಲ್ಲಿ ವೀಕ್ಷಕರಿಗೆ ಇಷ್ಟ ಆದ ಸ್ಪರ್ಧಿಗಳು ಈಗ ಇಷ್ಟ ಆಗುತ್ತಿಲ್ಲ. ಇಷ್ಟ ಆಗದವರು ಈಗ ಇಷ್ಟ ಆಗುತ್ತಿದ್ದಾರೆ. ಅಂತಹವರಲ್ಲಿ ಮೋಕ್ಷಿತಾ ಪೈ ಕೂಡ ಒಬ್ಬರು.
ಕೆಲವು ದಿನಗಳಿಂದ ಬಿಗ್‌ಬಾಸ್ ಮನೆಯಲ್ಲಿ ಮೋಕ್ಷಿತಾ ಪೈ ವಿರುದ್ಧ ನೆಗೆಟಿವ್ ಕಾಮೆಂಟ್‌ಗಳೇ ಹೆಚ್ಚು ಬರುತ್ತಿದ್ದವು. ಆದ್ರೀಗ ಒಂದೇ ಎಪಿಸೋಡ್‌ನಲ್ಲಿ ಅದೆಲ್ಲವೂ ಬದಲಾಗಿಬಿಟ್ಟಿದೆ. ಬಿಗ್‌ಬಾಸ್ ವೀಕ್ಷಕರು ಮನಸ್ಸು ಬದಲಾಯಿಸಿದ್ದಾರೆ. ಮೋಕ್ಷಿತಾ ತನ್ನ ಜೀವನದಲ್ಲಿ ಮಾಡಿದ ತ್ಯಾಗವನ್ನು ಹಾಡಿ ಹೊಗಳುತ್ತಿದ್ದಾರೆ. ಎಪಿಸೋಡ್ ಅನ್ನು ನೋಡಿ ಕಣ್ಣೀರು ಹಾಕುತ್ತಿದ್ದಾರೆ.

ಬಿಗ್ ಬಾಸ್ ಕಳೆದ ಎರಡು ದಿನಗಳಿಂದ ಮನೆಯೊಳಗೆ ಇರುವ ಸ್ಪರ್ಧಿಗಳ ಕುಟುಂಬದವರನ್ನು ಮನೆಯೊಳಗೆ ಕಳುಹಿಸುತ್ತಿದ್ದಾರೆ. ಈಗ ಮೋಕ್ಷಿತಾ ಪೈ ಅವರ ತಮ್ಮ ಹಾಗೂ ತಾಯಿಯನ್ನು ಮನೆಯೊಳಗೆ ಕಳುಹಿಸಿದ್ದಾರೆ. ತನ್ನ ವಿಶೇಷ ಚೇತನ ತಮ್ಮನನ್ನು ನೋಡಿ ಮೋಕ್ಷಿತಾ ಪೈ ಕಣ್ಣೀರು ಹಾಕಿದ್ದಾರೆ. ಆ ವಿಡಿಯೋ ನೋಡಿ ವೀಕ್ಷಕರು ಕೂಡ ಭಾವುಕರಾಗಿದ್ದಾರೆ. ಆದರೆ, ಕೆಲವು ದಿನಗಳ ಹಿಂದೆ ಇದೇ ನಟಿಯ ಬಗ್ಗೆ ಅಭಿಪ್ರಾಯ ಬೇರೇನೆ ಇತ್ತು.
ಕೆಲವು ದಿನಗಳ ಹಿಂದೆ ಇದೇ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ಹರಿದಾಡಿತ್ತು. ಹತ್ತು ಹನ್ನೆರಡು ವರ್ಷಗಳ ಹಿಂದಿನ ವಿಡಿಯೋ ಒಂದನ್ನು ವೈರಲ್ ಮಾಡಿ, ಮಕ್ಕಳ ಕಳ್ಳಿ ಅಂತ ಬಿರುದನ್ನು ಕೊಟ್ಟಿದ್ದರು. ಆ ವೇಳೆ ಎಲ್ಲಿ ನೋಡಿದರೂ ಮೋಕ್ಷಿತಾ ಪೈ ಬಗ್ಗೆ ನೆಗೆಟಿವ್ ಮಾತುಗಳೇ ಹೇಳಿ ಬಂದಿದ್ದವು. ತಮ್ಮ ಮನಸ್ಸಿಗೆ ಬಂದಂತೆ ಕಾಮೆಂಟ್‌ಗಳನ್ನು ಮಾಡಿದ್ದರು. ಬಿಗ್‌ಬಾಸ್ ಮನೆಯಲ್ಲಿ ಮೋಕ್ಷಿತಾ ಪೈ ಇರಲೇ ಬಾರದು ಅಂತ ಆಕ್ರೋಶ ಹೊರ ಹಾಕಿದವರೇನು ಕಮ್ಮಿಯಿರಲಿಲ್ಲ.

ಆದ್ರೀಗ ಬಿಗ್‌ಬಾಸ್‌ನ ಒಂದೇ ಒಂದು ಎಪಿಸೋಡ್ ಆ ನೆಗೆಟಿವ್ ಭಾವನೆಗಳನ್ನು ಅಳಿಸಿ ಹಾಕಿದೆ. ಬಿಗ್‌ಬಾಸ್ ಮನೆಯೊಳಗೆ ಮೋಕ್ಷಿತಾ ಪೈ ಹಾಗೂ ತಮ್ಮನ ನಡುವಿನ ಭಾವನಾತ್ಮಕ ಸಂಬಂಧ ವೀಕ್ಷಕರ ಕಣ್ಣುಗಳನ್ನು ಒದ್ದೆಯಾಗಿಸಿದೆ. ವಿಶೇಷ ಚೇತನ ತಮ್ಮನಿಗಾಗಿ ಅಕ್ಕನ ತ್ಯಾಗಗಳನ್ನು ನೋಡಿ ಭಾವುಕರಾಗಿದ್ದಾರೆ. ಕಲರ್ಸ್ ಕನ್ನಡ ಅದ್ಯಾವ ಪ್ರೋಮೊ ರಿಲೀಸ್ ಮಾಡಿತೋ ಅಲ್ಲಿಂದ ಮೋಕ್ಷಿತಾ ಪರ ಕಾಮೆಂಟ್‌ಗಳು ಬರುವುದಕ್ಕೆ ಶುರುವಾಗಿದೆ.
ನೆಟ್ಟಿಗರೊಬ್ಬರು "ತಮ್ಮನನ್ನು ಮುಟ್ಟುವುದಕ್ಕೂ ಮುನ್ನ ತೊಟ್ಟಿದ್ದ ಚಪ್ಪಲಿಯನ್ನು ಬಿಟ್ಟು ಮುಟ್ಟಿದ್ದಾರೆ" ಎಂದು ಕಾಮೆಂಟ್ ಮಾಡಿದ್ದರೆ. ಇನ್ನೊಬ್ಬರು ಅಕ್ಕ ನೀನು ದೇವತೆ ಎಂದಿದ್ದಾರೆ. "ನಿನ್ನಂತ ಅಕ್ಕನನ್ನು ಪಡೆಯುವುದಕ್ಕೆ ಪುಣ್ಯ ಮಾಡಿದ್ದಾನೆ ಅವನು. ನೀನು ದೇವತೆ ಅಕ್ಕ" ಎಂದಿದ್ದಾರೆ. ಮತ್ತೊಬ್ಬರು "ಕಣ್ಣಂಚಲಿ ನೀರು ತಂದ ಭಾವನಾತ್ಮಕ ಗಳಿಗೆ ಇದು" ಎಂದು ಕಾಮೆಂಟ್ ಮಾಡಿದ್ದಾರೆ. "ಪಾಝ್ ಮಾಡಿದ್ದರೂ, ಮೋಕ್ಷಿತಾ ಹೊರಗೆ ಬಂದಿದ್ದು ಸರಿನೇ. ತಮ್ಮ ಮೇಲಿನ ಪ್ರೀತಿಗೆ ಹೆಚ್ಚು ಬೆಲೆ ಕೊಟ್ಟಿದ್ದಾರೆ", "ಅಲ್ಲ ಲವ್ ಅನ್ನೋ ಈ ಕಾಲದಲ್ಲಿ ಅಪ್ಪ, ಅಮ್ಮ, ತಮ್ಮ ಅಂತಾಳೇ ಮೋಕ್ಷಿ. ನಿನ್ ತರ ಬಿಗ್ ಬಾಸ್ ಮನೆಗೆ ಯಾವ ಹುಡುಗಿನೂ ಬರಲ್ಲ" ಅಂತೆಲ್ಲ ಕಾಮೆಂಟ್ ಮಾಡುತ್ತಿದ್ದಾರೆ.
ಇನ್ನು ಕೆಲವರು ಮೋಕ್ಷಿತಾ ಅವರೇ ಬಿಗ್ ಬಾಸ್ ಗೆಲ್ಲಬೇಕು ಅಂತ ಕಾಮೆಂಟ್ ಕೂಡ ಮಾಡುತ್ತಿದ್ದಾರೆ. ಮೋಕ್ಷಿತಾ ಪೈ ಬಿಗ್‌ಬಾಸ್‌ಗೆ ಬರುವುದಕ್ಕೂ ಮುನ್ನವೇ ಯೂಟ್ಯೂಬ್ ಚಾನೆಲ್ ಅನ್ನು ತೆರೆದಿದ್ದರು. ಅದರಲ್ಲಿ ತಮ್ಮ ತಮ್ಮನ ಬಗ್ಗೆನೂ ವಿಡಿಯೋಗಳನ್ನು ಮಾಡಿ ಹಾಕಿದ್ದರು. ಮನೆಯಲ್ಲಿ ಇದ್ದಾಗ ತಮ್ಮನೊಂದಿಗೆ ತಮ್ಮ ದಿನಚರಿ ಹೇಗಿರುತ್ತೆ ಎಂದು ತೋರಿಸಿದ್ದರು. ಆದ್ರೀಗ ಬಿಗ್‌ಬಾಸ್ ವೇದಿಕೆಯಲ್ಲಿ ಬಹಳ ದಿನಗಳ ಬಳಿಕ ಅಕ್ಕ ಮತ್ತೆ ತಮ್ಮನನ್ನು ನೋಡಿ ಭಾವುಕರಾಗಿದ್ದಾರೆ. ಇದು ವೀಕ್ಷಕರ ಕಣ್ಣನ್ನು ಒದ್ದೆಯಾಗಿಸಿವೆ.


Click it and Unblock the Notifications











