BBK 12: ಬಿಗ್ ಬಾಸ್ ಕನ್ನಡದ ಇತಿಹಾಸದಲ್ಲೇ ಮೊದಲು; ಮನೆಯಿಂದ ಹೊರಬಂದ ರಕ್ಷಿತಾ ಶೆಟ್ಟಿ.. ಏನಿದು ಲೆಕ್ಕಾಚಾರ?
ಬಿಗ್ ಬಾಸ್ ಕನ್ನಡದ 12ನೇ ಸೀಸನ್ ಅದ್ಧೂರಿಯಾಗಿ ಆರಂಭ ಆಗಿದೆ. ಕಿಚ್ಚ ಸುದೀಪ್ ನಿರೂಪಣೆಯಲ್ಲಿ ಮನೆಯೊಳಗೆ ಸೇರಿದ 19 ಮಂದಿ ಸ್ಪರ್ಧಿಗಳಿಗೆ ಗ್ರ್ಯಾಂಡ್ ಎಂಟ್ರಿ ಸಿಕ್ಕಿತ್ತು. ಪ್ರತಿಯೊಬ್ಬ ಸ್ಪರ್ಧಿಯೂ ಖುಷಿ ಖುಷಿಯಾಗಿಯೇ ಬಿಗ್ ಬಾಸ್ ಮನೆಯೊಳಗೆ ಎಂಟ್ರಿ ಕೊಟ್ಟಿದ್ದರು. ಆದರೆ, ಬಿಗ್ ಬಾಸ್ ಮನೆಯೊಳಗೆ ಎಂಟ್ರಿ ಕೊಡುವ ಖುಷಿಯಲ್ಲಿದ್ದ ಸ್ಪರ್ಧಿಗಳಿಗೆ ಒಳ ಹೋಗುವುದಕ್ಕಿಂತಲೂ ಮುನ್ನ ಶಾಕ್ ಕೊಟ್ಟಿತ್ತು.
ಈ ಬಾರಿ ಒಂಟಿ ಹಾಗೂ ಜಂಟಿ ಪರಿಕಲ್ಪನೆಯಲ್ಲಿ ಸ್ಪರ್ಧಿಗಳನ್ನು ಮನೆಯೊಳಗೆ ಹೋಗಬೇಕಿತ್ತು. ಹೀಗಾಗಿ ಕೆಲವು ಸ್ಪರ್ಧಿಗಳು ಒಂಟಿಯಾಗಿ ಗ್ರ್ಯಾಂಡ್ ಎಂಟ್ರಿ ಕೊಟ್ಟರೆ, ಇನ್ನು ಕೆಲವರು ಜಂಟಿಯಾಗಿ ಪ್ರವೇಶ ಮಾಡಿದ್ದರು. ಹೀಗಾಗಿ ಮನೆಯೊಳಗೆ ಪ್ರವೇಶ ಪಡೆದ 19 ಮಂದಿಗೆ ವಿಚಿತ್ರ ಸಂಕಷ್ಟ ಎದುರಾಗಿತ್ತು. ಯಾಕಂದ್ರೆ ಬಿಗ್ ಬಾಸ್ 19 ಮಂದಿಯಲ್ಲಿ ಒಬ್ಬರನ್ನು ಮೊದಲ ದಿನವೇ ಎಲಿಮಿನೇಟ್ ಮಾಡಲಾಗುವುದೆಂದು ಹೇಳಿತ್ತು.

ಬಿಗ್ ಬಾಸ್ ಮನೆಗೆ ಕೊನೆಯಲ್ಲಿ ಮೂರು ಮಂದಿ ಒಂಟಿಯಾಗಿಯೇ ಪ್ರವೇಶ ಪಡೆದಿದ್ದರು. ಮೂವರಲ್ಲಿ ಒಬ್ಬರು ಬಿಗ್ ಬಾಸ್ ಮನೆಯಿಂದ ಹೊರ ಹೋಗುವುದು ಖಚಿತ ಎಂದು ಹೇಳಿತ್ತು. ಅದರಂತೆ ಮೊದಲ ದಿನವೇ ರಕ್ಷಿತಾ ಶೆಟ್ಟಿಯನ್ನು ಎಲಿಮಿನೇಟ್ ಮಾಡಲಾಗಿದೆ. ಅಷ್ಟಕ್ಕೂ ರಕ್ಷಿತಾ ಶೆಟ್ಟಿ ಎಲಿಮಿನೇಟ್ ಆಗುತ್ತಾರೆಂಬ ಸುಳಿವನ್ನು ಪ್ರೋಮೊದಲ್ಲಿಯೇ ನೀಡಲಾಗಿತ್ತು. ಅದು ಸುಳ್ಳಾಗಿಲ್ಲ.
ಬಿಗ್ ಬಾಸ ಕನ್ನಡದ ಇತಿಹಾಸದಲ್ಲಿ ಈ ಪ್ರಕ್ರಿಯೆ ಇದೇ ಮೊದಲು. ಹಿಂದೆಂದೂ ಮೊದಲ ದಿನವೇ ಸ್ಪರ್ಧಿಗಳು ಎಲಿಮಿನೇಟ್ ಆಗಿರಲಿಲ್ಲ. ಕನಿಷ್ಟ ಒಂದು ವಾರವಾದರೂ ಬಿಗ್ ಬಾಸ್ ಮನೆಯಲ್ಲಿ ಇದ್ದರು. ಆದರೆ, ಈ ಬಾರಿ ಒಂದೇ ದಿನಕ್ಕೆ ಬಿಗ್ ಬಾಸ್ ಎಲಿಮಿನೇಟ್ ಮಾಡಿದೆ. ಅಷ್ಟಕ್ಕೂ ಯಾಕೀ ನಿರ್ಧಾರ? ಒಂದೇ ದಿನಕ್ಕೆ ಮನೆಯಿಂದ ಹೊರಗೆ ಕಳುಹಿಸಿದ ಲೆಕ್ಕಾಚಾರವೇನಿರಬಹುದು?
ಒಂಟಿ ಸದಸ್ಯರಿಂದ ರಕ್ಷಿತಾ ಔಟ್
ಕೇವಲ ಒಂದು ದಿನಕ್ಕೆ ಸ್ಪರ್ಧಿಯನ್ನು ಬಿಗ್ ಬಾಸ್ ಮನೆಯಿಂದ ಹೊರ ಕಳುಹಿಸಿದ ಉದಾಹರಣೆ ಇರಲಿಲ್ಲ. ಆದರೆ, ಬಿಗ್ ಬಾಸ್ ಮನೆಯೊಳಗೆ ಹೋಗಿ ಕನ್ನಡ ಕಲಿಯಬೇಕು ಎಂದು ಆಸೆಯಿಂದ ಬಂದಿದ್ದ ರಕ್ಷಿತಾ ಶೆಟ್ಟಿಗೆ ನಿರಾಸೆಯಾಗಿದೆ. ಮನೆಯೊಳಗೆ ಪ್ರವೇಶ ಮಾಡುತ್ತಿದ್ದಂತೆ ಎಲಿಮಿನೇಷನ್ ಪ್ರಕ್ರಿಯೆ ಇಟ್ಟಿದ್ದು, ಅದರಲ್ಲಿ ಒಂಟಿ ತಂಡದಲ್ಲಿರುವ ಸದಸ್ಯರಲ್ಲಿ ಬಹುತೇಕ ಮಂದಿ ರಕ್ಷಿತಾ ಶೆಟ್ಟಿಯವರನ್ನೇ ಆಯ್ಕೆ ಮಾಡಿದ್ದಾರೆ.
ಹೀಗಾಗಿ ಕೆಲವೇ ಕ್ಷಣಗಳು ಬಿಗ್ ಬಾಸ್ ಮನೆಯೊಳಗೆ ಇದ್ದು ಹಿಂತಿರುಗಬೇಕಾಗಿದೆ. ಇದು ಕನ್ನಡ ಬಿಗ್ ಬಾಸ್ ಇತಿಹಾಸದಲ್ಲೇ ಮೊದಲು. ರಕ್ಷಿತಾ ಶೆಟ್ಟಿ ಹೊರಬರುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಒಂದೇ ದಿನದಲ್ಲಿ ಎಲಿಮಿನೇಟ್ ಮಾಡಿದ್ದು ಸರಿಯಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
ಏನಿದು ಲೆಕ್ಕಾಚಾರ?
ಇನ್ನು ಬಿಗ್ ಬಾಸ್ ಲೆಕ್ಕಾಚಾರದ ಬಗ್ಗೆನೂ ಚರ್ಚೆಯಾಗುತ್ತಿದೆ. ರಕ್ಷಿತಾ ಶೆಟ್ಟಿ ಸರಿಯಾಗಿ ಕನ್ನಡ ಬರುವುದಿಲ್ಲ. ಜೊತೆ ಕನ್ನಡ ಅರ್ಥ ಮಾಡಿಕೊಳ್ಳುವುದಕ್ಕೂ ಕಷ್ಟಪಡುತ್ತಿದ್ದಾರೆ. ಹೀಗಾಗಿ ಬಿಗ್ ಬಾಸ್ ಆದೇಶಗಳನ್ನು ಅರ್ಥ ಮಾಡಿಕೊಳ್ಳುವುದು ಇನ್ನೂ ಕಷ್ಟ ಆಗಬಹುದು. ಹಾಗೇ ಸಮಸ್ಯರೊಂದಿಗೆ ಹೊಂದಿಕೊಳ್ಳುವುದು ಕೂಡ ಕಷ್ಟವೆನಿಸಬಹುದೆಂಬ ಸುಳಿವು ಸಿಕ್ಕು ಎಲಿಮಿನೇಟ್ ಮಾಡಲಾಗಿದೆ ಅನ್ನೋ ಮಾತುಗಳು ಕೇಳಿ ಬರುತ್ತಿವೆ.
ಇನ್ನೊಂದು ಕಡೆ ಬಿಗ್ ಬಾಸ್‌ನಲ್ಲಿರುವ ಸದಸ್ಯರ ಪೈಕಿ ರಕ್ಷಿತಾ ಶೆಟ್ಟಿ ವಯಸ್ಸಿನಲ್ಲಿ ತುಂಬಾನೇ ಚಿಕ್ಕವರು. ಹೀಗಾಗಿ ಬಿಗ್ ಬಾಸ್ ಮುನ್ನೆಚ್ಚರಿಕೆ ಕ್ರಮವಾಗಿ ಈ ನಿರ್ಧಾರ ತೆಗೆದುಕೊಂಡಿರಬಹುದೆಂದು ಅಂದಾಜಿಸಲಾಗುತ್ತಿದೆ.
ಮತ್ತೆ ಎಂಟ್ರಿ ಕೊಡಬಹುದೇ?
ಕನ್ನಡದಲ್ಲಿ ಇಂತಹ ಬೆಳವಣಿಗೆ ನಡೆದಿಲ್ಲ. ಆದರೆ, ಪರಭಾಷೆಯಲ್ಲಿ ಇಂತಹದ್ದೊಂದು ಘಟನೆ ನಡೆದಿದೆ. ಎಲಿಮಿನೇಷನ್ ಮಾಡಿ, ಕೆಲವು ದಿನಗಳಾದ್ಮೇಲೆ ಮತ್ತೆ ಅವರಿಗೆ ವಿಶೇಷ ಎಂಟ್ರಿ ಕೊಟ್ಟಿದ್ದು ಇದೆ. ಹಾಗೇ ರಕ್ಷಿತಾ ಶೆಟ್ಟಿ ಅವರಿಗೂ ವಿಶೇಷ ಎಂಟ್ರಿ ಕೊಟ್ಟು ಸಂಚಲನ ಸೃಷ್ಟಿಸುವ ಸಾಧ್ಯತೆ ಕೂಡ ಇವೆ.


Click it and Unblock the Notifications











