Bigg Boss Kannada 12: ಬಿಗ್‌ಬಾಸ್ ಮನೆಗೆ ಹೋಗ್ತಾರಾ ಕೆ.ಮಂಜು ಪುತ್ರ? 3 ದಿನ ಕಾಯೀರಿ ಎಂದಿದ್ದೇಕೆ?
ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋ 'ಬಿಗ್ ಬಾಸ್ ಕನ್ನಡ ಸೀಸನ್ 12'. ಇನ್ನೇನು ಕೆಲವೇ ದಿನಗಳಲ್ಲಿ ಈ ಶೋ ಅದ್ಧೂರಿಯಾಗಿ ಆರಂಭ ಆಗಲಿದೆ. ಈಗಾಗಲೇ ಬಿಗ್ ಬಾಸ್ ಮನೆಯೊಳಗೆ ಹೋಗುವ ಸ್ಪರ್ಧಿಗಳದ್ದು ಕ್ಷಣಕ್ಕೊಂದು ಪಟ್ಟಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಲೇ ಇದೆ. ಕ್ಷಣ ಕ್ಷಣಕ್ಕೂ ಹೊಸ ಹೊಸ ಹೆಸರು ಮುನ್ನೆಲೆಗೆ ಬರುತ್ತಿದೆ. ಆದರೆ, ಸ್ಪರ್ಧಿಗಳ ಬಗ್ಗೆ ಚಿಕ್ಕದೊಂದು ಗುಟ್ಟನ್ನು ಕಲರ್ಸ್ ಕನ್ನಡ ಬಿಟ್ಟು ಕೊಟ್ಟಿಲ್ಲ.
'ಬಿಗ್ ಬಾಸ್ ಕನ್ನಡ 12'ದಂತಹ ರಿಯಾಲಿಟಿ ಶೋಗೆ ಹೋಗಬೇಕು ಅನ್ನೋದು ಹಲವರ ಕನಸು. ಕೆಲವರಿಗೆ ಅವಕಾಶ ಸಿಗುತ್ತೆ. ಮತ್ತೆ ಕೆಲವರು ಅವಕಾಶ ವಂಚಿತರಾಗುತ್ತಾರೆ. ಇನ್ನು ಕೆಲವರು ಅವಕಾಶ ಅವರನ್ನೇ ಹುಡುಕಿಕೊಂಡು ಬಂದರೂ ನಿರಾಕರಿಸುತ್ತಾರೆ. ಬಿಗ್ ಬಾಸ್ ಆರಂಭಕ್ಕೆ ಕೊನೆಯ ಕ್ಷಣದವರೆಗೂ ಸ್ಪರ್ಧಿಗಳು ಬದಲಾಗುತ್ತಲೇ ಇರುತ್ತಾರೆ. ಒಂದಲ್ಲ ಒಂದು ಹೆಸರು ಮುನ್ನೆಲೆ ಬರುತ್ತಲೇ ಇರುತ್ತೆ.

ಕನ್ನಡದ ಬಿಗ್ ಬಾಸ್‌ನ 12ನೇ ಸೀಸನ್ ಆರಂಭಕ್ಕೂ ಮುನ್ನ ಹೊಸ ಹೆಸರು ಓಡಾಡುತ್ತಿದೆ. ಅವರು ಮತ್ಯಾರೂ ಅಲ್ಲ ಕನ್ನಡ ಹಿರಿಯ ನಿರ್ಮಾಪಕ ಗಂಡುಗಲಿ ಕೆ.ಮಂಜು ಪುತ್ರ ಶ್ರೇಯಸ್ ಮಂಜು ಬಿಗ್ ಬಾಸ್ ಹೋಗುತ್ತಾರೆ ಅನ್ನೋದು ಸುದ್ದಿ. ಈ ಬಗ್ಗೆ 'ಫಸ್ಟ್ ಡೇ ಫಸ್ಟ್ ಶೋ' ಯೂಟ್ಯೂಬ್ ಚಾನೆಲ್‌ಗೆ ಪ್ರತಿಕ್ರಿಯೆ ನೀಡಿದ್ದು, ಮೂರು ದಿನ ಕಾಯಿರಿ ಎಂದು ಹೇಳಿದ್ದಾರೆ. ಅಷ್ಟಕ್ಕೂ ಬಿಗ್ ಬಾಸ್‌ಗೆ ಹೋಗ್ತಾರಾ? ಇಲ್ವಾ? ಸಂದರ್ಶನದಲ್ಲಿ ಏನು ಹೇಳಿದ್ದಾರೆ? ತಿಳಿಯುವುದಕ್ಕೆ ಮುಂದೆ ಓದಿ.
ಶ್ರೇಯಸ್ ಮಂಜುಗೆ ನೇರವಾಗಿ ಬಿಗ್ ಬಾಸ್‌ಗೆ ಹೋಗುತ್ತೀರಾ ಎಂದು ಪ್ರಶ್ನೆ ಹಾಕಿದಾಗ ಅಡ್ಡ ಗೋಡೆ ಮೇಲೆ ದೀಪವಿಟ್ಟಂತೆ ಮಾತಾಡಿದ್ದಾರೆ. ಆಹಾರ ಪ್ರಿಯರಾಗಿರುವ ಶ್ರೇಯಸ್ ಮಂಜು ಬಿಗ್ ಬಾಸ್ ಮನೆಯೊಳಗೆ ಹೋಗಬಹುದೇ? ಅಲ್ಲಿ ಒತ್ತಡವನ್ನು ತಡೆದುಕೊಳ್ಳಬಹುದೇ? ಈ ಪ್ರಶ್ನೆಗೆ ಅವರ ಉತ್ತರ ಹೀಗಿದೆ. "ನಾನು ಈ ಶೋನ ಕೆಲವು ಕ್ಲಿಪ್ಸ್ ಅನ್ನು ನೋಡಿದಾಗ ಪ್ರತಿಯೊಬ್ಬ ವ್ಯಕ್ತಿಗೂ ಒತ್ತಡದಲ್ಲಿ ಹೇಗೆ ವರ್ತಿಸಬೇಕು ಎನ್ನುವ ಒಂದು ಕ್ಯಾರೆಕ್ಟರ್ ಇರುತ್ತೆ. ಅದನ್ನು ನಾವು ತಪ್ಪು ಅಂತಾನೂ ಹೇಳುವುದಕ್ಕೆ ಆಗುವುದಿಲ್ಲ. ಸರಿ ಅಂತಾನೂ ಹೇಳುವುದಕ್ಕೆ ಆಗುವುದಿಲ್ಲ. ಮನುಷ್ಯನಿಗೆ ಮೊದಲು ಬೇಕಿರೋದು ನೀರು, ಗಾಳಿ ಊಟ. ಇದನ್ನು ಕೊಟ್ಟಿಲ್ಲ ಅಂದರೆ ಆ ವ್ಯಕ್ತಿ ಪ್ರಾಣಿಯಾಗಿ ಬಿಡುತ್ತಾನೆ. ಅಂತಹ ಸಂದರ್ಭದಲ್ಲಿ ರಿಯಾಕ್ಟ್ ಆಗದೆ ಇರೋದು ಕಷ್ಟ. ಆದರೆ, ನಮಗೆ ಪಬ್ಲಿಕ್ ಇಮೇಜ್ ಇದೆಯಲ್ಲ, ಅದಕ್ಕಾಗಿ ಅಲ್ಲಿ ಸರಿಯಾಗಿ ವರ್ತಿಸಬೇಕಾಗುತ್ತೆ. ಹೀಗಾಗಿ ಊಟ ಕೊಡಲಿಲ್ಲ ಅಂತ ಹೊಡೆದಾಡುವುದಕ್ಕೆಲ್ಲ ಹೋಗಿ ರಿಸ್ಕ್ ತೆಗೆದುಕೊಳ್ಳುವುದಿಲ್ಲ." ಎಂದು ಹೇಳಿದ್ದಾರೆ.

ಕೆ.ಮಂಜು ಪುತ್ರ ಶ್ರೇಯಸ್ ಮಂಜು ನಟಿಸಿರುವ 'ಮಾರುತ' ಸಿನಿಮಾ ಮುಂದಿನ ತಿಂಗಳು ರಿಲೀಸ್ ಆಗುತ್ತಿದೆ. ಇಂತಹ ಸಂದರ್ಭದಲ್ಲಿ ಬಿಗ್ ಬಾಸ್‌ಗೆ ಹೋಗುತ್ತಾರಾ? ಅನ್ನೋ ಪ್ರಶ್ನೆ ಮೂಡುತ್ತೆ. ಆದರೆ, ಒಂದೆರಡು ವಾರ ಬಿಗ್‌ಬಾಸ್ ಮನೆಯೊಳಗೆ ಇದ್ದು ಬಂದರೆ, ಸಿನಿಮಾಗೆ ಪ್ರಚಾರ ಆಗಬಹುದು. ಹಾಗೂ ಯೋಚನೆ ಮಾಡಿರಬಹುದು. ಅದಕ್ಕೆ ಸಿನಿಮಾ ರಿಲೀಸ್ ವೇಳೆ ಎಲ್ಲಿರುತ್ತೀರಾ? ಎಂದು ಪ್ರಶ್ನೆ ಮಾಡಿದರೆ "ಹಂಡ್ರೆಡ್ ಪರ್ಸೆಂಟ್ ಥಿಯೇಟರ್‌ನಲ್ಲಿ ಸಿಗುತ್ತೇನೆ." ಎಂದು ಉತ್ತರ ಕೊಟ್ಟಿದ್ದಾರೆ.
ಇನ್ನು ಬಿಗ್ ಬಾಸ್ ಮನೆಯೊಳಗೆ ಹೋದವರಿಗೆ ಸಾಮಾನ್ಯವಾಗಿ ಲವ್ ಆಗುತ್ತೆ. ಹೊರಗೆ ಬಂದು ಅವರು ಪ್ರೀತಿ ಇನ್ನೂ ಗಾಢವಾಗಿದ್ದೂ ಕೂಡ ಇದೆ. ಒಂದು ವೇಳೆ ಬಿಗ್ ಬಾಸ್ ಮನೆಗೆ ಹೋದಾಗ ಶ್ರೇಯಸ್ ಮಂಜುಗೆ ಲವ್ ಆದರೆ, "ಹುಡುಗಿಯರ ವಿಷಯದಲ್ಲಿ ನಾವು ಹುಡುಗರು ಸ್ವಲ್ಪ ದಡ್ಡರು. ನಾನು ನಮ್ಮ ತಂದೆ-ತಾಯಿ ನೋಡಿದ ಹುಡುಗಿಯನ್ನೇ ಮದುವೆ ಆಗುತ್ತೇನೆ. ಶೋನಲ್ಲಿ ಹುಡುಗಿಯರು ಇದ್ದರೂ, ನಾನು ಹೋಗೋದು ಆಡುವುದಕ್ಕೆ. ಹುಡುಗಿಯರ ಜೊತೆ ಆಟ ಆಡುವುದಕ್ಕೆ ಅಲ್ಲ. ನನಗೆ ಆ ಬಗ್ಗೆ ಕ್ಲಾರಿಟಿ ಇದೆ." ಎಂದು ಶ್ರೇಯಸ್ ಹೇಳಿದ್ದಾರೆ.
ಟೈಟಲ್ ಹೊಡೆದುಕೊಂಡೇ ಬರ್ತೇನೆ
ಹಾಗೇ ಬಿಗ್ ಬಾಸ್ ಮನೆಗೆ ಹೋದರೆ, ಟೈಟಲ್ ಹೊಡೆದುಕೊಂಡೇ ಬರುತ್ತೇನೆ ಎಂದೂ ಹೇಳಿದ್ದಾರೆ. "ನಾನು ಆಡುವುದಕ್ಕೆ ನಿಂತರ ಬಿಗ್ ಬಾಸ್ ಟೈಟಲ್ ಅನ್ನು ಹೊಡೆದುಕೊಂಡೇ ಬರುತ್ತೇನೆ. ನಾನು ಒಂದು ವೇಳೆ ಬಿಗ್ ಬಾಸ್ ಮನೆಗೆ ಹೋಗಿ, ಅದರಿಂದ ನನಗೆ 50 ಲಕ್ಷ ಬಂದರೆ, ದೇವರು ನನಗೆ ಚೆನ್ನಾಗಿ ಇಟ್ಟಿದ್ದಾನೆ. ಹಾಗಾಗಿ ಅದರಲ್ಲಿ 15-20 ಲಕ್ಷ ಇಟ್ಟುಕೊಂಡು 30 ಲಕ್ಷ ಯಾರಿಗಾದರೂ ಕೊಟ್ಟು ಬಿಡುತ್ತೇನೆ. ನಾನು ವರ್ಸನಲ್ ರೂಲ್ ಏನು ಅಂದರೆ, ನಾನು 50 ಸಾವಿರ ರೂಪಾಯಿ ದುಡಿದರೂ ಅದನ್ನು ಬಡವರಿಗೆ ಕೊಡುತ್ತೇನೆ." ಎಂದಿದ್ದಾರೆ. ಇನ್ನು ಬಿಗ್ ಬಾಸ್ ಸ್ಪರ್ಧಿಗಳನ್ನು ಕಲರ್ಸ್ ಕನ್ನಡ ಗೌಪ್ಯವಾಗಿ ಇಡುತ್ತೆ. ಇಲ್ಲಿ ಶ್ರೇಯಸ್ ಓಪನ್ ಆಗಿ ಮಾತಾಡಿದ್ದರಿಂದ ತಮಾಷೆಗೆ ಬಿಗ್ ಬಾಸ್ ಬಗ್ಗೆ ಮಾತಾಡಿರಬಹುದು ಎಂದು ಅನಿಸುತ್ತಿದೆ. ಏನಕ್ಕೂ ಸೆಪ್ಟೆಂಬರ್ 28ರವರೆಗೂ ಕಾಯೀರಿ.


Click it and Unblock the Notifications











