BBK 12: ಜಾಹ್ನವಿ 'ಫ್ಲೂಕ್' ಕಮೆಂಟ್; ವಿಡಿಯೋ ಮಾಡಿ ತಿರುಗೇಟು ಕೊಟ್ಟರೇ ರಕ್ಷಿತಾ ಶೆಟ್ಟಿ?
ಬಿಗ್ ಬಾಸ್ ಕನ್ನಡ 12ರ ಆರಂಭದ ಮೊದಲ ಮೂರು ದಿನ ಸ್ಪರ್ಧಿಗಳು ಸೈಲೆಂಟ್ ಆಗಿದ್ದರು. ಬಿಗ್ ಬಾಸ್ ಒಂದು ಚಾಟಿ ಏಟು ಕೊಡುತ್ತಿದ್ದಂತೆ ಸ್ಪರ್ಧಿಗಳು ಅಲರ್ಟ್ ಆಗಿದ್ದರು. ಹೀಗಾಗಿ ಈಗ ದಿನದಿಂದ ದಿನಕ್ಕೆ ಬಿಗ್ ಬಾಸ್ ಮನೆ ರಣರಂಗವಾಗುತ್ತಿದೆ. ಗಿಲ್ಲಿ ನಟ ಹಾಗೂ ಅಶ್ವಿನಿ ಗೌಡ ನಡುವೆ ಮಾತಿನ ಯುದ್ಧ ಶುರುವಾಗಿದೆ. ಕಿಚಾಯಿಸೋದು, ಕಾಲೆಳೆಯೋದು, ರೇಗಾಡುವುದೆಲ್ಲ ಶುರುವಾಗಿದೆ.
ಇದೊಂದು ಕಡೆಯಾದರೆ, ಇನ್ನೊಂದು ಕಡೆ ಬಿಗ್ ಬಾಸ್ ಕನ್ನಡದ ಇತಿಹಾಸದಲ್ಲಿಯೇ ಮೊದಲ ದಿನವೇ ಎಲಿಮಿನೇಟ್ ಆದ ಸ್ಪರ್ಧಿಯ ಬಗ್ಗೆ ಹೊರಗಡೆ ಚರ್ಚೆಯಾಗುತ್ತಿದೆ. ಹಿಂದೆಂದೂ ಇಂತಹದ್ದು ಪ್ರಕ್ರಿಯೆ ನಡೆದಿರಲಿಲ್ಲ. ಆದರೆ, ಸೀಸನ್ 12ರಲ್ಲಿ ಮೊದಲ ದಿನವೇ ರಕ್ಷಿತಾ ಶೆಟ್ಟಿ ಮನೆಯಿಂದ ಹೊರಬಂದಿದ್ದಾರೆ. ಹೀಗೆ ಹೊರಗೆ ಕಳುಹಿಸಬಾರದಿತ್ತು ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ.

ರಕ್ಷಿತಾ ಶೆಟ್ಟಿ ಮನೆಯಿಂದ ಹೊರಬಂದ ಬಳಿಕ ಬಿಗ್ ಬಾಸ್ ಬಗ್ಗೆ ಪ್ರತಿಕ್ರಿಯೆ ನೀಡಿರಲಿಲ್ಲ. ಆದ್ರೀಗ ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ಸಿಕ್ಕಾಪಟ್ಟೆ ಸದ್ದು ಮಾಡೋಕೆ ಶುರುವಾಗಿದೆ. ರಕ್ಷಿತಾ ಶೆಟ್ಟಿಯನ್ನು ಎಲಿಮಿನೇಟ್ ಮಾಡುವುದಕ್ಕೆ ಜಾಹ್ನವಿ ಮಾಡಿದ ಒಂದು ಕಮೆಂಟ್‌ಗೂ ವಿರೋಧ ವ್ಯಕ್ತವಾಗುತ್ತಿದೆ. ಈ ಕಮೆಂಟ್ ಅನ್ನು ಇಟ್ಕೊಂಡು ರಕ್ಷಿತಾ ಶೆಟ್ಟಿ ವಿಡಿಯೋ ಮಾಡಿದ್ದು, ಜಾಹ್ನವಿಗೆ ತಿರುಗೇಟು ಕೊಟ್ಟಿದ್ದಾರೆಂಬ ವಿಡಿಯೋ ಓಡಾಡುತ್ತಿದೆ. ಅಸಲಿಗೆ ವಿಡಿಯೋದ ಕಥೆಯೇನು? ಅದರಲ್ಲಿ ರಕ್ಷಿತಾ ಶೆಟ್ಟಿ ಏನು ಹೇಳಿದ್ದಾರೆ? ತಿಳಿಯುವುದಕ್ಕೆ ಮುಂದೆ ಓದಿ.
ಜಾಹ್ನವಿ ಕಮೆಂಟ್ ಏನು?
ಬಿಗ್ ಬಾಸ್ ಮನೆಯೊಳಗೆ ಎಂಟ್ರಿ ಕೊಡುತ್ತಿದ್ದಂತೆ ಸ್ಪರ್ಧಿಗಳಿಗೆ ಶಾಕಿಂಗ್ ಟಾಸ್ಕ್ ನೀಡಿತ್ತು. ಕೊನೆಯದಾಗಿ ಮನೆಯೊಳಗೆ ಎಂಟ್ರಿ ಕೊಟ್ಟಿದ್ದ ಮೂವರಲ್ಲಿ ಒಬ್ಬರು ಎಲಿಮಿನೇಟ್ ಆಗಲಿದ್ದು, ಅವರನ್ನು ಯಾರು ಎಂದು ಸೂಕ್ತ ಕಾರಣಗಳನ್ನು ನೀಡುವಂತೆ ಒಂಟಿ ತಂಡದ ಸದಸ್ಯರ ಮುಂದೆ ಪ್ರಶ್ನೆಯನ್ನು ಇಟ್ಟಿತ್ತು. ಆಗ ಜಾಹ್ನವಿ "ಕೆಲವರು ಸೋಶಿಯಲ್ ಮೀಡಿಯಾದ ಫ್ಲ್ಯೂಕ್‌ನಿಂದ ಫೇಮಸ್ ಆಗುತ್ತಾರೆ" ಎಂದು ಕಮೆಂಟ್ ಮಾಡಿದ್ದರು. ಈ ಕಮೆಂಟ್ ವಿರುದ್ಧ ನೆಟ್ಟಿಗರು ಕಿಡಿಕಾರಿದ್ದರು.
ರಕ್ಷಿತಾ ಶೆಟ್ಟಿಗೆ ನೆಟ್ಟಿಗರ ಬೆಂಬಲ
ಎಲಿಮಿನೇಷನ್‌ಗೆ ರಕ್ಷಿತಾ ಶೆಟ್ಟಿಯ ಹೆಸರನ್ನು ತೆಗೆದುಕೊಳ್ಳುವ ತವಕದಲ್ಲಿ ಜಾಹ್ನವಿ ಮಾಡಿದ ಕಮೆಂಟ್ ನೆಟ್ಟಿಗರಿಗೆ ಹಿಡಿಸಲಿಲ್ಲ. ಅಲ್ಲದೆ ಕನ್ನಡ ಕಲಿಯುವುದಕ್ಕೆ ರಕ್ಷಿತಾ ಶೆಟ್ಟಿ ಮನೆಯೊಳಗೆ ಹೋಗುತ್ತಿದ್ದೇನೆ ಎಂದು ಹೇಳಿ ಕನ್ನಡಿಗರ ಮನಗೆದ್ದಿದ್ದರು. ಹೀಗಾಗಿ ಜಾಹ್ನವಿ ಕಮೆಂಟ್ ನೆಟ್ಟಿಗರ ನಿದ್ದೆ ಕೆಡಿಸುವಂತೆ ಮಾಡಿತ್ತು. ಈಗ ಜಾಹ್ನವಿ ಕಮೆಂಟ್‌ಗೆ ರಕ್ಷಿತಾ ಶೆಟ್ಟಿ ತಿರುಗೇಟು ಕೊಟ್ಟಿದ್ದಾರೆಂಬ ವಿಡಿಯೋವನ್ನು ವೈರಲ್ ಮಾಡುವುದಕ್ಕೆ ಶುರು ಮಾಡಿದ್ದಾರೆ.
ಮೆಡಲ್ ಹಿಡಿದು ತಿರುಗೇಟು?
ರಕ್ಷಿತಾ ಶೆಟ್ಟಿ ಕೈಯಲ್ಲಿ ಒಂದಿಷ್ಟು ಮೆಡೆಲ್‌ಗಳನ್ನು ಹಿಡಿದು ಮಾತಾಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ವಿಡಿಯೋದಲ್ಲಿ ರಕ್ಷಿತಾ ಶೆಟ್ಟಿ ತುಳುವಿನಲ್ಲಿ ಮಾತಾಡಿದ್ದು ಅದರ ಸಾರಾಂಶ ಹೀಗಿದೆ. "ನನಗೆ ಬೇಕಾಗಿದ್ದು ಸಿಗಲಿಲಲ್ಲ. ಅದಕ್ಕೆ ಕೆಲವೊಮ್ಮೆ ನಾನು ತ್ಯಾಗ ಮಾಡಬೇಕು. ನಾವೇನು ಅಂದುಕೊಳ್ಳುತ್ತೇವೋ ಅದು ಆಗೋದಿಲ್ಲ. ಹೀಗಾಗಿ ಜೀವನದಲ್ಲಿ ಮುಂದೆ ಸಾಗಲೇಬೇಕು. ನಾನು ಜೀವನದಲ್ಲಿ ಇನ್ನೂ ಏನಾದರೂ ಮಾಡಲೇಬೇಕು. ಇನ್ನೂ ಹೆಚ್ಚೆಚ್ಚು ಜನರನ್ನು ತಲುಪಬೇಕು" ಎಂದು ಹೇಳಿದ್ದರು.
ಈ ವಿಡಿಯೋದ ಅಸಲಿಯತ್ತೇನು?
ಅಂದ್ಹಾಗೆ, ಇದು ಜಾಹ್ನವಿಯವರ ಹೇಳಿಕೆಗೆ ತಿರುಗೇಟು ಕೊಡುವುದಕ್ಕೆ ರಕ್ಷಿತಾ ಶೆಟ್ಟಿ ಮಾಡಿದ ವಿಡಿಯೋ ಅಲ್ಲ. ಇದು ರಕ್ಷಿತಾ ಶೆಟ್ಟಿಯ ಹಳೆಯ ವಿಡಿಯೋವನ್ನು ನೆಟ್ಟಿಗರು ಜಾಹ್ನವಿ ವಿಡಿಯೋಗೆ ಸಿಂಕ್ ಮಾಡಿ ವೈರಲ್ ಮಾಡುತ್ತಿದ್ದಾರೆ. ಅದನ್ನು ರಕ್ಷಿತಾ ಶೆಟ್ಟಿಯವರ ಕೆಲ ಫ್ಯಾನ್ ಪೇಜ್‌ಗಳು ಶೇರ್ ಮಾಡಿಕೊಂಡಿದ್ದು, ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.


Click it and Unblock the Notifications











