BBK 10: "ಆನೆ ಬಂತೊಂದಾನೆ…" ಎನ್ನುತಲೇ ಕ್ಯಾಪ್ಟನ್ ಆದ ವಿನಯ್.. ಸಂಗೀತಾ ಗ್ಯಾಂಗ್‌ಗೆ ಹೆಚ್ಚಾಯ್ತಾ ಆತಂಕ?
ಬಿಗ್ ಬಾಸ್ ಕನ್ನಡ ಸೀಸನ್ 10 ಹಿಂದಿನ 9 ಸೀಸನ್‌ಗಿಂತಲೂ ಸ್ವಲ್ಪ ಬೋಲ್ಡ್ ಆಗಿದೆ. ಹ್ಯಾಪಿ ಬಿಗ್ ಬಾಸ್ ಅಂತ ಶುರುವಾಗಿದ್ದ ಈ ಬಾರಿಯ ಸೀಸನ್ ನಾಲ್ಕನೇ ವಾರಕ್ಕೆ ರಣರಂಗವಾಗುತ್ತಿದೆ. ಅದರಲ್ಲೂ ವಿನಯ್ ಹಾಗೂ ಸಂಗೀತಾ ಶೃಂಗೇರಿ ನಡುವೆ ಕಿತ್ತಾಟ ಜೋರಾಗಿಯೇ ನಡೆಯುತ್ತಿದೆ.
ಬಿಗ್ ಬಾಸ್ ಮನೆಗೆ ಬಂದ ಪ್ರತಿಯೊಬ್ಬ ಸ್ಪರ್ಧಿಗೂ ಕ್ಯಾಪ್ಟನ್ ಆಗೋದು ಹೆಮ್ಮೆಯ ವಿಷಯ. ಅದಕ್ಕಾಗಿಯೇ ಹರಸಾಹಸ ಮಾಡುತ್ತಲೇ ಇರುತ್ತಾರೆ. ಬಿಗ್ ಬಾಸ್‌ನ ಪ್ರಬಲ ಸ್ಪರ್ಧಿ ಎನಿಸಿಕೊಂಡಿರುವ ವಿನಯ್ ನಾಲ್ಕು ವಾರಗಳಿಂದ ಕ್ಯಾಪ್ಟನ್ ಆಗುವುದಕ್ಕೆ ಪ್ರಯತ್ನ ಪಡುತ್ತಲೇ ಇದ್ದರು. ಕೊನೆಗೂ ಅವರ ಆಸೆ ಈಡೇರಿದೆ.

ಪ್ರಬಲ ಹೋರಾಟದ ಬಳಿಕ ವಿನಯ್ ಬಿಗ್ ಬಾಸ್ ಮನೆಯ ಕ್ಯಾಪ್ಟನ್ ಆಗಿದ್ದಾರೆ. ಮನೆಗೆ ಕ್ಯಾಪ್ಟನ್ ಆಗಲೇಬೇಕು ಅಂತ ಪ್ರಯತ್ನ ಪಡುತ್ತಲೇ ಇದ್ದ ವಿನಯ್‌ಗೆ ಕೊನೆಗೂ ಆ ಅವಕಾಶ ಕೂಡಿ ಬಂದಿದೆ. ವಿನಯ್ ಬಿಗ್ ಬಾಸ್ ಮನೆಯ ಕ್ಯಾಪ್ಟನ್ ಅಂತ ಅನೌನ್ಸ್ ಮಾಡುತ್ತಿದ್ದಂತೆ ಮನೆಯ ಸದಸ್ಯರು ಮೌನಕ್ಕೆ ಜಾರಿದ್ದಾರೆ. ವಿನಯ್‌ಗೆ ಸಿಕ್ಕಿರೋ ಯಶಸ್ಸು ಇಡೀ ಮನೆಯ ಸದಸ್ಯರ ಲೆಕ್ಕಾಚಾರವನ್ನೇ ಬದಲಿಸುವ ಹಾಗಿದೆ.
ವಿನಯ್ ಕ್ಯಾಪ್ಟನ್ ಆಗಿರುವ ಪ್ರೋಮೊವನ್ನು ಜಿಯೋ ಸಿನಿಮಾ ರಿಲೀಸ್ ಮಾಡಿದೆ. ಈ ಪ್ರೋಮೊ ಬಿಗ್ ಬಾಸ್ ಅನ್ನು ರೆಗ್ಯೂಲರ್ ಆಗಿ ವೀಕ್ಷಿಸುತ್ತಿರುವವರಲ್ಲಿ ಕುತೂಹಲವನ್ನು ಕೆರಳಿಸಿದೆ. ವಿನಯ್ ಕ್ಯಾಪ್ಟನ್ ಆದ ಬಳಿಕ ಮನೆಯ ವಾತಾವರಣ ಹೇಗಿದೆ ಅನ್ನೋ ಝಲಕ್‌ಗಳಿವೆ.

ಪರಸ್ಪರ ವಿರೋಧಿಗಳಂತೆ ಗುರುತಿಸಿಕೊಂಡಿರುವ ವಿನಯ್ ಹಾಗೂ ಸಂಗೀತಾ ಹಳ್ಳಿ ಜೀವನದ ಟಾಸ್ಕ್‌ನಲ್ಲಿ ಮುಖಾ ಮುಖಿಯಾಗಿದ್ದರು. ಇದರಲ್ಲಿ ಸಂಗೀತಾ ಶೃಂಗೇರಿ ಟೀಮ್ ಸೋತು ಸುಣ್ಣವಾಗಿತ್ತು. ವಿನಯ್ ಈ ಟಾಸ್ಕ್‌ನಲ್ಲಿ ಗೆದ್ದು ಬೀಗಿದ್ದರು. ಅಂದ್ಹಾಗೆ ಈ ಟಾಸ್ಕ್‌ನ ಕೊನೆಯಲ್ಲಿ ಟ್ವಿಸ್ಟ್ ಕೊಟ್ಟಿದ್ದು ತುಕಾಲಿ ಸಂತೋಷ್.
ಹಳ್ಳಿ ಟಾಸ್ಕ್ ಕೊನೆಯಲ್ಲಿ ವಿನಯ್ ಹಾಗೂ ತುಕಾಲಿ ಸಂತೋಷ್ ಇಬ್ಬರೇ ಉಳಿದುಕೊಂಡಿದ್ದರು. ಇಲ್ಲಿ ತುಕಾಲಿ ಸಂತೋಷ್‌ಗೆ ಕ್ಯಾಪ್ಟನ್ಸಿ ರೇಸ್‌ನಿಂದ ವಿನಯ್‌ರನ್ನು ಹೊರಹಾಕುವ ಅವಕಾಶವಿತ್ತು. ಆದರೆ, ಅದನ್ನು ತುಕಾಲಿ ಸಂತೋಷ್ ಬಳಸಿಕೊಳ್ಳದೆ ಸಿರಿಯನ್ನು ಹೊರಗೆ ಹಾಕಿದ್ದರು. ಈ ಕಾರಣಕ್ಕೆ ತುಕಾಲಿ ಸಂತೋಷ್ ಕ್ಯಾಪ್ಟನ್ಸಿ ರೇಸ್‌ನಿಂದ ಹೊರಗೆ ಉಳಿಯಬೇಕಾದ ಅನಿವಾರ್ಯತೆ ಎದುರಾಗಿತ್ತು.
ಬಿಗ್ ಬಾಸ್ ಮೊದಲ ವಾರದಿಂದ ಸಂಗೀತಾ ಹಾಗೂ ವಿನಯ್ ನಡುವೆ ಕಿತ್ತಾಟ ನಡೆಯುತ್ತಲೇ ಇತ್ತು. ಆದರೆ, ಹಳ್ಳಿ ಜೀವನದ ಟಾಸ್ಕ್‌ನಲ್ಲಿ ಈ ಕಿತ್ತಾಟ ಅತಿರೇಕಕ್ಕೆ ಹೋಗಿತ್ತು. ಈ ಟಾಸ್ಕ್ ವೇಳೆ ಸಂಗೀತಾ ಟೀಮ್ ವಿನಯ್‌ರನ್ನು ಇನ್ನಿಲ್ಲದಂತೆ ಕೆರಳಿಸಿದ್ದರು. ಈ ವೇಳೆ ವಿನಯ್ ಕೂಡ ಕೆರಳಿದ್ದರು. ಈ ವಾರ ಅವರೇ ಕ್ಯಾಪ್ಟನ್ ಆಗಿದ್ದಾರೆ. ಹೀಗಾಗಿ ಮನೆ ಸದಸ್ಯರ ಲೆಕ್ಕಾಚಾರ ಬದಲಾಗುವ ಸಾಧ್ಯತೆ ಹೆಚ್ಚಿದೆ.
ಮನೆಯೊಳಗೆ ವಿನಯ್ ದರ್ಬಾರ್ ಜೋರು ಅಂತಲೇ ಎಲ್ಲಾ ಸದಸ್ಯರ ಅಭಿಪ್ರಾಯ ಆಗಿತ್ತು. ಮನೆಯೊಳಗೆ ಅವರನ್ನು ತಡೆಯುವುದೇ ಕಷ್ಟ ಎಂದು ಭಾವಿಸಿದ್ದರು. ಈಗ ವಿನಯ್‌ಗೆ ಅಧಿಕಾರ ಸಿಕ್ಕಿದೆ. ಅದ್ಮೇಲೆ ಇನ್ನು ದರ್ಬಾರ್ ಹೇಗಿರಬೇಡ. ಡ್ರೋನ್ ಪ್ರತಾಪ್ "ವಿನಯ್ ಅವರು ಈ ವಾರ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ" ಎಂದು ಘೋಷಿಸಿದ ಕೂಡಲೇ ಸಂಗೀತಾ ಗ್ಯಾಂಗ್ ಫುಲ್ ಸೈಲೆಂಟ್ ಆಗಿದೆ.
ವಿನಯ್ ಕ್ಯಾಪ್ಟನ್ ಆಗುತ್ತಿದ್ದಂತೆ "ಆನೆ ಬಂತೊಂದಾನೆ..." ಎಂದು ಸಂಭ್ರಮಿಸುತ್ತಿರುವ ದೃಶ್ಯ ಕಂಡು ಬಂದಿದೆ. ಈ ಮಧ್ಯೆ ಕಾರ್ತಿಕ್ ಮುಖದಲ್ಲಿ ಆತಂಕ ಎದ್ದು ಕಾಣಿಸುತ್ತಿದೆ. ಒಬ್ಬೊಬ್ಬರ ಸದಸ್ಯರ ಹಾವ ಭಾವೇ ಬದಲಾಗಿದೆ. ಇತ್ತ ಡ್ರೆಸಿಂಗ್ ರೂಮ್‌ನಲ್ಲಿ ಸಂಗೀತಾ "ನಾವು ಆನೆ ವಿರೋಧಿಗಳಲ್ಲ.. ನಾವು ಆನೆಗೆ ಹೆದರೋದೂ ಇಲ್ಲ" ಎಂದು ಗೊಣಗಿದ್ದಾರೆ.
ಬಿಗ್ ಬಾಸ್ ಮನೆ ಎರಡು ಗುಂಪುಗಳಾಗಿವೆ. ವಿನಯ್ ಕ್ಯಾಪ್ಟನ್ಸಿ ಬಗ್ಗೆ ಕೆಲವರಲ್ಲಿ ಆತಂಕ, ಮತ್ತೆ ಕೆಲವರಲ್ಲಿ ಅಸಮಧಾನವಿದೆ. ಈಗ ವಿನಯ್ ತಮ್ಮ ವಿರೋಧಿಗಳ ವಿರುದ್ಧ ಸೇಡು ತೀರಿಸಿಕೊಳ್ಳುತ್ತಾರಾ? ಇಲ್ಲಾ ಕ್ಯಾಪ್ಟನ್ಸಿ ಆಟ ಆಡುತ್ತಾರಾ? ಅನ್ನೋ ಕುತೂಹಲ ಕೆರಳಿಸಿದೆ.


Click it and Unblock the Notifications











