BBK 10: ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಟ್ರಾನ್ಸ್‌ಜೆಂಡರ್ ನೀತು ವನಜಾಕ್ಷಿ
ಕನ್ನಡ ಕಿರುತೆರೆಯ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 10 ಒಂದೊಂದೇ ಸರ್ಪ್ರೈಸ್ ಕೊಡುತ್ತಿದೆ. 10ನೇ ಸೀಸನ್ ಆಗಿದ್ದರಿಂದ ಈ ಬಾರಿ ಬಿಗ್ ಬಾಸ್ ಶೋವನ್ನು ವಿಶೇಷವಾಗಿ ವಿನ್ಯಾಸಗೊಳಿಸಿದೆ. ಸ್ಪರ್ಧಿಗಳಿಂದ ಹಿಡಿದು ಪ್ರತಿಯೊಂದು ಕ್ಷೇತ್ರದಲ್ಲೂ ವಿಭಿನ್ನತೆಯನ್ನು ತರುತ್ತಿದ್ದಾರೆ.
ಈ ಬಾರಿ ಬಿಗ್ ಬಾಸ್ ಮನೆಯೊಳಗೆ ಟ್ರಾನ್ಸ್‌ಜೆಂಡರ್ ಪ್ರವೇಶ ಪಡೆದಿದ್ದಾರೆ. ಕನ್ನಡ ಬಿಗ್ ಬಾಸ್‌ನಲ್ಲಿ ಈ ಹಿಂದೆ ಒಮ್ಮೆ ಟ್ರಾನ್ಸ್‌ಜೆಂಡರ್ ಆಡಂ ಪಾಷಾ ಪ್ರವೇಶ ಮಾಡಿದ್ದರು. ಹೀಗಾಗಿ ಇವರ ಎಂಟ್ರಿ ಕಿರುತೆರೆ ವೀಕ್ಷಕರಿಗೆ ವಿಶೇಷ ಅನುಭವವನ್ನು ನೀಡಲಿದೆ. ಹೌದು ಇದೀಗ ಬಿಗ್ ಬಾಸ್ ಮನೆಯೊಳಗೆ 6ನೇ ಸ್ಪರ್ಧಿಯಾಗಿ ಟ್ರಾನ್ಸ್‌ಜೆಂಡರ್ ನೀತು ವನಜಾಕ್ಷಿ ಎಂಟ್ರಿ ಕೊಟ್ಟಿದ್ದಾರೆ.

ನೀತು ವನಜಾಕ್ಷಿ ಸಾಧನೆಯೇನು ಕಮ್ಮಿಯಿಲ್ಲ. ಮಿಸ್ ಇಂಟರ್‌ನ್ಯಾಷನಲ್ ಟ್ರಾನ್ಸ್‌ಜೆಂಡರ್ ಕ್ವೀನ್ ಪಟ್ಟ ಗಿಟ್ಟಿಸಿಕೊಂಡಿದ್ದಾರೆ. ಇಷ್ಟೇ ಅಲ್ಲದೆ ಮಾಡಲಿಂಗ್‌ನಲ್ಲೂ ಮಿಂಚಿದ್ದಾರೆ. ಪಾರ್ಲರ್ ಬ್ಯುಸಿನೆಸ್ ಹಾಗೂ ಹೋಟೆಲ್ ಬ್ಯುಸಿನೆಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಉದ್ಯಮಗಳಲ್ಲಿ ಸಕ್ಸಸ್ ಕಂಡಿದ್ದಾರೆ.
ನೀತು ಗಂಡಾಗಿ ಹುಟ್ಟಿದ್ದರು. ಇವರಿಗೆ ಮಂಜುನಾಥ್ ಅಂತಲೂ ಹೆಸರಿತ್ತು. ಏಳನೇ ತರಗತಿವರೆಗೂ ನಾರ್ಮಲ್ ಆಗಿದ್ದ ಮಂಜುನಾಥ್ ದೇಹದಲ್ಲಿ ಬದಲಾವಣೆಗಳು ಕಾಣುವುದಕ್ಕೆ ಶುರುವಾಗಿತ್ತು. ಆದರೆ, ಭಯದಿಂದ ಎಲ್ಲೂ ಹೇಳಿಕೊಂಡಿರಲಿಲ್ಲ. ಮಧ್ಯಮ ಕುಟುಂಬದಿಂದ ಬಂದಿದ್ದರಿಂದ ಭಯ ಪಟ್ಟಿದ್ದರು. ಅಕ್ಕನ ಬೆಂಬಲದಿಂದ ನೀತು ವನಜಾಕ್ಷಿಯಾಗಿ ಬದಲಾಗಿ ಯಶಸ್ಸು ಕಂಡಿದ್ದಾರೆ.
ಬಿಗ್ ಬಾಸ್ ವೇದಿಕೆ ಮೇಲೆ "ಯಾರಮ್ಮಾ ಇವಳು ಚೆಲುವೆ..." ಎಂಬ ಹಾಡಿನೊಂದಿಗೆ ಬಿಗ್‌ಬಾಸ್ ವೇದಿಕೆಯ ಮೇಲೆ ಕಾಣಿಸಿಕೊಂಡರು. ಟ್ರಾನ್ಸ್‌ಜೆಂಡರ್ ಬಗ್ಗೆ ಸಮಾಜದಲ್ಲಿ ಇರುವ ಪೂರ್ವಗ್ರಹಗಳನ್ನು ಹೋಗಲಾಡಿಸಲು ಬಿಗ್ ಬಾಸ್ ವೇದಿಕೆ ಮೇಲೆ ಬಂದಿರುವುದಾಗಿ ನೀತು ವನಜಾಕ್ಷಿ ಹೇಳಿದ್ದಾರೆ.
ನೀತು ವನಜಾಕ್ಷಿಗೆ ಚಿತ್ರಕಲೆಯಲ್ಲಿ ಆಸಕ್ತಿಯಿದೆ. ಮಾಡೆಲಿಂಗ್ ಜೊತೆ ಜೊತೆಗೆ ನಟನೆಯ ಕ್ಷೇತ್ರಕ್ಕೂ ಕಾಲಿಟ್ಟಿರೋ ವನಜಾಕ್ಷಿ ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಹೂಕಟ್ಟುವ ಕುಟುಂಬದ ಹಿನ್ನೆಲೆಯಿರುವ ನೀತುಗೆ ಮನೆಯೇ ಮೊದಲ ಪಾಠಶಾಲೆ.
"ಜನರ ಮಧ್ಯ ಇದ್ದು ಗೆದ್ದು ಬಂದಿರುವ ನನಗೆ ಬಿಗ್‌ಬಾಸ್ ಮನೆಯಲ್ಲಿ ಗೆಲ್ಲುವುದು ಕಷ್ಟವಲ್ಲ.." ಎಂಬ ವಿಶ್ವಾಸದಲ್ಲೇ ನೀತು ಬಿಗ್ ಬಾಸ್ ಮನೆಯೊಳಗೆ ಎಂಟ್ರಿ ಕೊಟ್ಟಿದ್ದಾರೆ. ನೀತು ವನಜಾಕ್ಷಿಗೆ ಪ್ರೇಕ್ಷಕರು 86% ವೋಟ್ ನೀಡಿ ಮನೆಯೊಳಗೆ ಕಳಿಸಿದ್ದಾರೆ.


Click it and Unblock the Notifications











