"ನನ್ನ ಬೆಡ್‌ಶೀಟ್ ನನ್ನ ಹತ್ತಿರ ಜೋಪಾನವಾಗಿ ಇದೆ, ನಿಮ್ದು ಜೋಪಾನ"; ಪ್ರತಾಪ್‌ಗೆ ತಿರುಗೇಟು ಕೊಟ್ಟ ರಕ್ಷಕ್
ಬಿಗ್ ಬಾಸ್ ಕನ್ನಡ ಸೀಸನ್ 10 ಕೊನೆಯ ಹಂತಕ್ಕೆ ಬಂದು ತಲುಪಿದೆ. ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಇಂತಹ ಸಂದರ್ಭದಲ್ಲಿ ಸ್ಪರ್ಧಿಗಳ ನಡುವೆ ತ್ರೀವ ಪೈಪೋಟಿ ಶುರುವಾಗಿದೆ. ತಮ್ಮ ಪ್ರತಿ ಸ್ಪರ್ಧಿಗಳ ವಿರುದ್ಧ ರಣತಂತ್ರವನ್ನು ಹೂಡುತ್ತಲೇ ಇದ್ದಾರೆ.
ಬಿಗ್ ಬಾಸ್ ಮನೆಯಿಂದ ಈ ವಾರ ಮತ್ತೊಬ್ಬ ಸದಸ್ಯರು ಹೊರಬಿದ್ದಿದ್ದಾರೆ. ಕನ್ನಡದಲ್ಲಿ ಮಾತಾಡಿ ಕನ್ನಡಿಗರ ಮನಗೆದ್ದಿದ್ದ ಮೈಕಲ್ ಅಜಯ್ ಎಲಿಮಿನೇಟ್ ಆಗಿದ್ದಾರೆ. ಇನ್ನು ಮನೆಯೊಳಗೆ ಉಳಿದಿರೋದು ನಮ್ರತಾ, ವಿನಯ್, ಸಂಗೀತಾ, ಕಾರ್ತಿಕ್, ತನಿಷಾ, ಡ್ರೋನ್ ಪ್ರತಾಪ್, ವರ್ತೂರ್ ಸಂತೋಷ್, ತುಕಾಲಿ ಸಂತೋಷ್. ಇವರ ಮಧ್ಯೆನೇ ಪೈಪೋಟಿ ನಡೆಯುತ್ತಿದೆ.

ಈ ಮಧ್ಯೆ ಮನೆಯೊಳಗೆ ಇರುವ ಡ್ರೋನ್ ಪ್ರತಾಪ್ ವಿರುದ್ಧ ಬಿಗ್ ಬಾಸ್ ಸ್ಪರ್ಧಿ ರಕ್ಷಕ್ ಬುಲೆಟ್ ತಿರುಗಿಬಿದ್ದಿದ್ದಾರೆ ಅಂತ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುತ್ತಿದೆ. ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ಪ್ರತಾಪ್ ಕೊಟ್ಟ ಹೇಳಿಕೆಗೆ ರಕ್ಷಕ್ ಬುಲೆಟ್ ಟ್ರಿಗರ್ ಆಗಿದ್ದಾರೆ ಅನ್ನೋದು ಸದ್ಯಕ್ಕೆ ಹರಿದಾಡುತ್ತಿರೋ ಸುದ್ದಿ. ಅಷ್ಟಕ್ಕೂ ಡ್ರೋನ್ ಹೇಳಿದ್ದೇನು? ಅದಕ್ಕೆ ರಕ್ಷಕ್ ತಿರುಗೇಟು ನೀಡಿದ್ದೇನು? ಎಲ್ಲವನ್ನೂ ತಿಳಿಯಲು ಮುಂದೆ ಓದಿ.
ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ಎಲ್ಲಾ ಸ್ಪರ್ಧಿಗಳು ಅವರ ಬಳಿ ಬಂದ ಶೀರ್ಷಿಕೆಯ ಪುಸ್ತಕವನ್ನು ಅವರಿಗೆ ಸರಿ ಅನಿಸಿದವರಿಗೆ ನೀಡಬೇಕು. ಈ ವೇಳೆ ಡ್ರೋನ್ ಪ್ರತಾಪ್ ಬೇರೆಯವರನ್ನು ತುಳಿದು ಬೆಳೆಯುವುದು ಹೇಗೆ? ಪುಸ್ತಕವನ್ನು ವಿನಯ್‌ಗೆ ನೀಡಿದ್ದರು. ಈ ವೇಳೆ ಪ್ರತಾಪ್ ಕೊಟ್ಟ ಕಾರಣ ಬಿಗ್ ಬಾಸ್ ಮನೆಯಿಂದ ಹೊರಗಿರುವ ರಕ್ಷಕ್‌ಗೆ ಟ್ರಿಗರ್ ಆಗಿದೆ.
ಅಷ್ಟಕ್ಕೂ ಡ್ರೋನ್ ಪ್ರತಾಪ್ ಹೇಳಿದ್ದಿಷ್ಟು. "ಬೇರೆಯವರನ್ನು ತುಳಿದು ಬೆಳೆಯುವುದು ಹೇಗೆ? ಈ ಪುಸ್ತಕವನ್ನು ವಿನಯ್ ಅವರಿಗೆ ಕೊಡುವುದಕ್ಕೆ ಇಷ್ಟ ಪಡುತ್ತೇನೆ. ಇದು ಬಹಳ ಸೂಟಬಲ್ ಅಂತ ಅನಿಸಿತು. ಸರಿ ಅಂದ್ಕೊಂಡೇ ಜೊತೆಯಲ್ಲಿ ಇದ್ದವರೆಲ್ಲ ಮನೆಗೆ ಹೋದರು. ಆ ಮನೆಗೆ ಹೋದವರ ಬೆಡ್‌ಶೀಟ್ ಎಲ್ಲ ಇವರ ಬೆಡ್‌ಗೆ ಸೇರಿಕೊಳ್ತಾ ಹೋಯ್ತು." ಎಂದಿದ್ದರು.

ಡ್ರೋನ್ ಪ್ರತಾಪ್ ಹೀಗೆ ಹೇಳುತ್ತಿದ್ದಂತೆ ರಕ್ಷಕ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಎಚ್ಚರಿಕೆಯ ಸಂದೇಶವನ್ನು ಇಟ್ಟು ಸ್ಟೇಟಸ್ ಹಾಕಿದ್ದಾರಂತ ಟ್ರೋಲ್ ಆಗುತ್ತಿದೆ. ಡ್ರೋನ್ ಪ್ರತಾಪ್ ವಿರುದ್ಧ ರಕ್ಷಕ್ ಇದೇ ಕಾರಣಕ್ಕೆ ಗರಂ ಆಗಿದ್ದಾರೆ ಅನ್ನೋದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಸುದ್ದಿ.
ಅಷ್ಟಕ್ಕೂ ರಕ್ಷಕ್ ಬುಲೆಟ್ ಸ್ಟೇಟಸ್ ಏನು ಹೇಳುತ್ತಿದೆ. "ಎಲ್ಲರಿಗೂ ನಮಸ್ಕಾರ, ಯಾವುದೇ ಗುಂಪುಗಾರಿಕೆ ಮಾಡೋಕೆ ಅಥವಾ ತಂಡ ಕಟ್ಟೋಕೆ ಬಿಗ್ ಬಾಸ್ ಮನೆಯೊಳಗೆ ಹೋದವನಲ್ಲ. ಜನರ ಪ್ರೀತಿ ಮತ್ತೆ ಜನರ ವಿಶ್ವಾಸ ಗಳಿಸೋಕೆ ಅಂತ ಹೋಗಿದ್ದು. ನನ್ನ ಬೆಡ್‌ಶೀಟ್ ನನ್ನ ಹತ್ತಿರ ಜೋಪಾನವಾಗಿ ಇದೆ. ನಿಮ್ಮ ಬೆಡ್‌ಶೀಟ್ ಜೋಪಾನ ಮಾಡಿಕೊಳ್ಳಿ. ಎಚ್ಚರ" ಎಂದು ರಕ್ಷಕ್ ಪ್ರತಿಕ್ರಿಯೆ ನೀಡಿದ್ದಾಗಿ ಟ್ರೋಲ್ ಪೇಜ್‌ಗಳು ಟ್ರೋಲ್ ಮಾಡುತ್ತಿವೆ.
ಹೀಗೆ ರಕ್ಷಕ್ ಬುಲೆಟ್ ಸ್ಟೇಟಸ್ ಹಾಕಿದ ಕೆಲವೇ ಸಮಯದ ಬಳಿಕ ಡ್ರೋನ್ ಪ್ರತಾಪ್ ಪೇಜ್ ನೋಡಿಕೊಳ್ಳುತ್ತಿರುವವರು ಮತ್ತೆ ತಿರುಗೇಟು ಕೊಟ್ಟಿದ್ದಾರೆ. "ಕುಂಬಳಕಾಯಿ ಕಳ್ಳ ಅಂದ್ರೆ, ಹೆಗಲು ಮುಟ್ಟಿಕೊಂಡು ನೋಡಿಕೊಂಡ್ರಂತೆ. ಹಾಗೇ ಒಂದು ಗಾದೆ ನೆನಪಾಯ್ತು" ಎಂದು ಡ್ರೋನ್ ಪ್ರತಾಪ್ ಪೇಜ್ ಪ್ರತಿಕ್ರಿಯಿಸಿದ್ದಾಗಿ ಟ್ರೋಲ್ ಮಾಡಲಾಗಿತ್ತಿದೆ. ಅಸಲಿಗೆ ಈ ಕಿತ್ತಾಟ ಇನ್ನೆಲ್ಲಿಗೆ ಹೋಗಿ ಮುಟ್ಟುತ್ತೋ?


Click it and Unblock the Notifications











