Bigg Boss: ಸಂಗೀತಾ, ಕಾರ್ತಿಕ್, ವರ್ತೂರು ಈ ಮೂವರಲ್ಲಿ ಫೇಕ್ ಯಾರು? ಗೆಲ್ಲೋದ್ಯಾರು? ಏನಂತಾರೆ ತನಿಷಾ?
ಇನ್ನೊಂದು ವಾರ ಬಿಗ್ ಬಾಸ್ ಕನ್ನಡ ಸೀಸನ್ 10 ತೆರೆಬೀಳಲಿದೆ. ಕೊನೆ ಹಂತದಲ್ಲಿ ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದು ತನಿಷಾ ಕುಪ್ಪಂಡ. ಸದಾ ಚಟುವಟಿಕೆಯಿಂದ ಇದ್ದ ತನಿಷಾ ಬಿಗ್ ಬಾಸ್‌ನಿಂದ ಹೊರಬಂದಿದ್ದು ಅವರಿಗೇ ಅಚ್ಚರಿಯನ್ನುಂಟು ಮಾಡಿತ್ತು. 'ಬೆಂಕಿ' ಅಂತಲೇ ಜನಪ್ರಿಯತೆ ಗಳಿಸಿದ್ದ ತನಿಷಾ ಎಲಿಮಿನೇಟ್ ಆಗಿದ್ದಕ್ಕೆ ಅವರ ಫ್ಯಾನ್ಸ್ ಕೂಡ ಕಿಡಿಕಾರಿದ್ದರು.
ಬಿಗ್ ಬಾಸ್ ಕೊನೆಯ ವಾರದವರೆಗೂ ಉಳಿದುಕೊಳ್ಳುತ್ತೇನೆ ಅನ್ನೋ ಆತ್ಮ ವಿಶ್ವಾಸದಲ್ಲಿದ್ದ ತನಿಷಾಗೆ ಮಿಡ್‌ವೀಕ್ ಎಲಿಮಿನೇಷನ್ ಶಾಕ್ ಸಿಕ್ಕಿತ್ತು. ಹೀಗಾಗಿ ಮನೆಯಿಂದ ಹೊರಹೋಗುತ್ತಲೇ "ಬಿಗ್‌ಬಾಸ್ ಯಾಕಿಷ್ಟು ಕೆಟ್ಟದಾಗಿ ಕಳಿಸಿಕೊಡ್ತೀರಾ?" ಎಂದು ಕೇಳುತ್ತಲೇ ಹೊರಗೆ ಹೋದರು. ಬಿಗ್ ಬಾಸ್ ಮನೆಯಿಂದ ಹೊರಗೆ ಬಂದ್ಮೇಲೆ ಜಿಯೊ ಸಿನಿಮಾಗೆ ನೀಡಿದ ಸಂದರ್ಶನದಲ್ಲಿ ಮನೆಯೊಳಗಿರುವ ಸದಸ್ಯರ ಬಗ್ಗೆ, ಎಲಿಮಿನೇಷನ್ ಬಗ್ಗೆ ಮುಕ್ತವಾಗಿ ಮಾತಾಡಿದ್ದಾರೆ.

ಮಿಡ್ ವೀಕ್ ಎಲಿಮಿನೇಷನ್ ಬಗ್ಗೆ ಹೇಳಿದ್ದೇನು?
ಅಚ್ಚರಿ ಎಂಬಂತೆ ಮಿಡ್‌ವೀಕ್ ಎಲಿಮಿನೇಷನ್‌ನಲ್ಲಿ ತನಿಷಾ ಹೊರಬಂದಿದ್ದರು. ಇದು ಅವರಿಗೆ ತುಂಬಾನೇ ಬೇಜಾರಾಗಿದೆ ಅನ್ನೋದು ಆ ಸಂದರ್ಭದಲ್ಲೇ ಗೊತ್ತಾಗಿತ್ತು. "ಆ ಸಂದರ್ಭದಲ್ಲಿ ತುಂಬ ಬೇಜಾರಾಯ್ತು ನನಗೆ. ನಾನು ಇನ್ನಷ್ಟು ದಿನ ಉಳಿದುಕೊಳ್ಳಲು ಅರ್ಹಳು ಎಂಬ ಆತ್ಮವಿಶ್ವಾಸದಲ್ಲಿದ್ದೆ. ಆ ನಂಬಿಕೆ ಮುರಿದು ಹೋಯಿತು ಎಂಬ ಬೇಜಾರಿದೆ. ಆದರೆ, ಆಚೆ ಬಂದು ಸ್ವಲ್ಪ ರಿಲ್ಯಾಕ್ಸ್ ಆಗಿ ಯೋಚಿಸಿದಾಗ ನನ್ನ ಜರ್ನಿ ನನಗೆ ಖುಷಿ ಕೊಟ್ಟಿದೆ. ಬಿಗ್ ಬಾಸ್‌ನಿಂದ ಆಚೆ ಬಂದಾಗಲೂ ಹಾಗೆಯೇ ಇದ್ದೇನೆ. ಎಲ್ಲರ ಮನೆಯ ಮಗಳಾಗಿದ್ದೇನೆ. ತುಂಬ ಖುಷಿ ಕೊಟ್ಟ ಪಯಣ ಇದು." ಎಂದಿದ್ದಾರೆ.
ಎಲಿಮಿನೇಟ್ ಆಗೋಕೆ ಏನು ಕಾರಣ?
ಇದೇ ಸಂದರ್ಶನದಲ್ಲಿ ಎಲಿಮಿನೇಟ್ ಆಗಿದ್ದಕ್ಕೆ ಕಾರಣ ಏನಿರಬಹುದು ಅನ್ನೋದನ್ನು ಊಹಿಸಿದ್ದಾರೆ. "ತಪ್ಪು ಅಂತ ಏನೂ ಮಾಡಿಲ್ಲ ನಾನು. ಸಣ್ಣ ಪುಟ್ಟ ತಪ್ಪುಗಳನ್ನು ಮಾಡ್ತೀವಿ. ಅದು ಎಲ್ಲರಿಂದಲೂ ನಡೆಯುತ್ತದೆ. ಅದು ತಪ್ಪು ಎಂದು ಗೊತ್ತೂ ಆಗಿರಲ್ಲ. ಬಹುಶಃ ಜನರು ನಿರೀಕ್ಷೆ ಮಾಡುತ್ತಿರುವ ಯಾವುದನ್ನೋ ಹೊಸದಾಗಿ ಕೊಡಲಿಲ್ವೇನೋ ನಾನು ಅಂತ ಅನಿಸ್ತು. ನಾವು ಅಲ್ಲದೇ ಇರುವುದನ್ನು ಮಾಡಿದ್ರೆ ಖಂಡಿತವಾಗಿ ಫೇಕ್ ಆಗಿ ಕಾಣಿಸ್ತೀವಿ. ನಾನು ಫೇಕ್ ಆಗಿ ಏನನ್ನೂ ಮಾಡಲಿಲ್ಲ." ಎಂದಿದ್ದಾರೆ.
ನೀವು ಏನನ್ನು ಬದಲಿಸಿಕೊಳ್ಳಲು ಬಯಸುತ್ತೀರಾ?
ಒಂದು ವೇಳೆ ಮತ್ತೆ ತನಿಷಾಗೆ ಮನೆಯೊಳಗೆ ಹೋಗಲು ಅವಕಾಶ ಕೊಟ್ಟರೆ ಏನನ್ನು ಬದಲಾವಣೆ ಮಾಡಿಕೊಳ್ಳಲು ಬಯಸುತ್ತೀರಾ? ಎಂದು ಪ್ರಶ್ನೆ ಮಾಡಲಾಗಿತ್ತು. ಅದಕ್ಕೆ ತನಿಷಾ. "ನನ್ನಲ್ಲಿ ನಾನು ಏನೂ ಬದಲಾವಣೆ ಮಾಡಿಕೊಳ್ಳಲ್ಲ. ಬಹುಶಃ ಇನ್ನಷ್ಟು ಮೆಲೊಡ್ರಾಮಾ ಆಡ್ ಮಾಡ್ಕೊಳ್ತಿದ್ದೆ ಅನಿಸುತ್ತೆ. ಯಾಕಂದ್ರೆ ಎಷ್ಟೋ ಜನರನ್ನು ಮನೆಯೊಳಗಿದ್ದಾಗ ಅಯ್ಯೋ ಪಾಪ ಎಂದು ನೋಡುತ್ತಿದ್ದೆ. ಆದರೆ ಹೊರಗೆ ಬಂದು ನೋಡಿದಾಗ, ಅವರು ಕೊಡುವ ರಿಯಾಕ್ಷನ್‌ಗಳನ್ನು ನೋಡಿ, ಇವರನ್ನು ಅಯ್ಯೋ ಪಾಪ ಎಂದು ಕ್ಷಮಿಸಿದ್ದು ತಪ್ಪು ಅಂತ ಅನಿಸಿತು." ಎಂದಿದ್ದಾರೆ.

ತನಿಷಾ ಧ್ವನಿ ಬಗ್ಗೆ ಯಾಕಷ್ಟು ಚರ್ಚೆ?
ತನಿಷಾ ಧ್ವನಿ ಬಗ್ಗೆ ಬಿಗ್ ಬಾಸ್ ಮನೆಯೊಳಗೆ ಸಾಕಷ್ಟು ಚರ್ಚೆಯಾಗಿತ್ತು. ಅದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. "ಮೊದಲಿಂದಲೂ ನಾನು ನನ್ನ ಬೆಸ್ಟ್ ಅನ್ನು ಕೊಡುತ್ತ ಬಂದಿದೀನಿ. ಯಾರು ಏನೇ ಅಂದುಕೊಂಡರೂ, ಎಲ್ಲರೂ ಟಾರ್ಗೆಟ್ ಮಾಡಿದಾಗಲೂ ಮನಸ್ಸಿಗೆ ತೆಗೆದುಕೊಳ್ಳದೆ ಆಡಿದ್ದೇನೆ. ಯಾಕೆಂದರೆ ಅದು ಗೇಮ್. ಪ್ರತಿ ನಾಮಿನೇಷನ್‌ನಲ್ಲಿಯೂ ಈ ನನ್ನ ಏರು ಧ್ವನಿ ಬಗ್ಗೆನೇ ಕಾರಣ ಕೊಟ್ಟಿದ್ದಾರೆ. ಅವರೇನೋ ಕಡಿಮೆ ಧ್ವನಿಯಲ್ಲಿ ಮಾತಾಡುತ್ತಾರೆ ಎನ್ನುವ ರೀತಿಯಲ್ಲಿ. ನಾನು ಯಾವ ಜಾಗದಲ್ಲಿ ಮಾತಾಡಬೇಕೋ ಆ ಜಾಗದಲ್ಲಿ ಮಾತಾಡಿದ್ದೇನೆ." ಎಂದು ಹೇಳಿದ್ದಾರೆ.
ಯಾರು ಇಷ್ಟ? ಯಾರು ಫೇಕ್? ಗೆಲ್ಲೋದ್ಯಾರು?
"ನನಗೆ ವರ್ತೂರು ಅವರ ಮುಗ್ಧತೆ ಇಷ್ಟ. ಯಾರದೋ ಮಾತಿಗೆ ಕೇಳಿಸಿಕೊಂಡು, ಬಲಿಯಾಗಿ ಯಾರ ಬಗ್ಗೆಯೋ ಕ್ಯಾರೆಕ್ಟರ್ ಸರ್ಟಿಫಿಕೇಟ್ ಕೊಡುವುದಿಲ್ಲ. ಹಾಗಾಗಿ ಅವರ ಜೊತೆಗೆ ಮಾತಾಡುವುದು ನನಗೆ ಮೊದಲಿನಿಂದಲೂ ಇಷ್ಟ. ನನ್ನ ಪ್ರಕಾರ ಬಿಗ್‌ಬಾಸ್ ಮನೆಯಲ್ಲಿ ಫೇಕ್ ಅಂದ್ರೆ, ಸಂಗೀತಾ. ಜೆನ್ಯೂನ್ ಅನಿಸುವುದು ವರ್ತೂರು ಸಂತೋಷ್. ನನ್ನ ಪ್ರಕಾರ ಗೆಲ್ಲಬಹುದು ಅನಿಸುವುದು ಸಂಗೀತಾ. ಆದರೆ ನನಗೆ ವಿನ್ ಆಗಬೇಕು ಅನಿಸಿದ್ದು ಕಾರ್ತಿಕ್" ಎಂದಿದ್ದಾರೆ.
ಏನು ಮಿಸ್ ಮಾಡ್ಕೊಳ್ತೀರಾ?
"ಮೈಕ್.. ಮೈಕ್ ಅನ್ನೋದು ನನ್ನ ದೇಹದ ಒಂದು ಭಾಗವೇ ಆಗಿಬಿಟ್ಟಿದೆ. ಎರಡನೇದಾಗಿ ಬಿಗ್‌ಬಾಸ್ ಧ್ವನಿ. ನೀವು ತುಂಬ ತಿದ್ದಿದೀರಾ, ಪ್ರೀತಿ ಕೊಟ್ಟಿದೀರಾ.. ನಾವು ಮುಂದೆ ನಡೆಯುವುದಕ್ಕೆ ದಾರಿಯೇ ಇಲ್ಲ ಅಂದಾಗ ಹೆಜ್ಜೆ ಎಲ್ಲಿ ಇಡಬಹುದು ಎಂದು ತೋರಿಸಿಕೊಟ್ಟಿದೀರಾ? ನಾನು ಲೋ ಆಗಿದ್ದಾಗ ನನಗೆ ಸಾಂತ್ವನ ಹೇಳಿದ್ದೀರಾ... ನಿಮ್ಮ ಕಡೆಯಿಂದ ಸಮಾನವಾದ ಪ್ರೀತಿ ಕಾಣಿಸ್ತಾ ಇತ್ತು. ನಮ್ಮ ಮನೆಯವರೂ ಇಷ್ಟು ಕೇರ್ ಮಾಡಿರ್ಲಿಲ್ವೇನೋ... ಅಷ್ಟು ಪ್ರೀತಿ ಕೊಟ್ಟಿದೀರಾ... ನಾನು ಇದನ್ನು ಯಾವತ್ತಿಗೂ ಮರೆಯಲಾರೆ." ಎಂದು ಜಿಯೋ ಸಿನಿಮಾ ಸಂದರ್ಶನದಲ್ಲಿ ಮಾತಾಡಿದ್ದಾರೆ.


Click it and Unblock the Notifications











