Bigg Boss Kannada 11: 11ನೇ ಸೀಸನ್‌ನಲ್ಲಿ ಕಿಚ್ಚನ ನಿರೂಪಣೆ ಇರುತ್ತೋ ಇಲ್ವೋ? ಇಲ್ಲಿದೆ ಅಸಲಿ ಕಥೆ
ಬಿಗ್‌ಬಾಸ್ ಕನ್ನಡ ಸೀಸನ್ 11ಗೆ ತೆರೆ ಮರೆಯಲ್ಲಿ ಕಲರ್ಸ್ ಕನ್ನಡ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಈ ಬಾರಿ ವಿಶಿಷ್ಠ ಪರಿಕಲ್ಪನೆಯೊಂದಿಗೆ ಕಿರುತೆರೆ ವೀಕ್ಷಕರಿಗೆ ಮನರಂಜನೆ ನೀಡುವುದಕ್ಕೆ ಮುಂದಾಗಿದೆ. ಈ ಮಧ್ಯೆ ಈ ಬಾರಿ ಕಿಚ್ಚ ಸುದೀಪ್ 11ನೇ ಸೀಸನ್ ನಡೆಸಿಕೊಡುವುದಿಲ್ಲ ಅನ್ನೋ ಮಾತು ಹೇಳಿ ಬರುತ್ತಿದೆ. ಅಷ್ಟಕ್ಕೂ ಈ ಗೊಂದಲ ಯಾಕೆ ಅನ್ನೋ ಪ್ರಶ್ನೆ ಉತ್ತರನೂ ಇದೆ.
ಕನ್ನಡದ ಅತ್ಯಂತ ದುಬಾರಿ ರಿಯಾಲಿಟಿ ಶೋನ ಕಳೆದ 10 ಸೀಸನ್ ಅನ್ನೂ ಕಿಚ್ಚ ಸುದೀಪ್ ಅವರೇ ನಿರೂಪಣೆ ಮಾಡಿದ್ದಾರೆ. ಕಿಚ್ಚ ಸುದೀಪ್ ಬಿಟ್ಟರೆ, ಈ ಸೀಸನ್ ಅನ್ನು ಬೇರೆ ಯಾರೂ ನಿರೂಪಣೆ ಮಾಡುತ್ತಾರೆ ಎನ್ನುವುದನ್ನು ಕಲ್ಪಿಸಿಕೊಳ್ಳುವುದಕ್ಕೂ ಸಾಧ್ಯವೇ ಇಲ್ಲ ಅನ್ನುವಂತಾಗಿದೆ. ಇಷ್ಟರ ಹೊರತಾಗಿಯೂ 11ನೇ ಸೀಸನ್‌ನಲ್ಲಿ ಕಿಚ್ಚ ಸುದೀಪ್ ನಿರೂಪಣೆ ಮಾಡುವುದಿಲ್ಲ ಅನ್ನೋ ವದಂತಿಗಳು ಹರಿದಾಡುತ್ತಿದೆ.

ಇತ್ತೀಚೆಗೆ ಕಿಚ್ಚ ಸುದೀಪ್ ಕೂಡ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತಾಡಿದ್ದರು. ಕಲರ್ಸ್‌ಕನ್ನಡ ಕೂಡ ಇನ್ನೂ ಅಧಿಕೃತವಾಗಿ ಬಿಗ್‌ಬಾಸ್ ಕನ್ನಡ ಸೀಸನ್ 11ರ ಬಗ್ಗೆ ಮಾಹಿತಿಯನ್ನು ಬಿಟ್ಟು ಕೊಡುತ್ತಿಲ್ಲ. ಈ ಕಾರಣಕ್ಕೆ 11ನೇ ಸೀಸನ್‌ಗೆ ಕಿಚ್ಚ ಸುದೀಪ್ ನಿರೂಪಣೆ ಮಾಡುತ್ತಾರೋ ಇಲ್ಲವೋ ಅನ್ನೋದು ಗೊಂದಲದ ಗೂಡಾಗಿಬಿಟ್ಟಿದೆ. ಆದರೆ, ಈ ಎಲ್ಲಾ ವದಂತಿಗಳ ಹಿಂದಿನ ಕಥೆಯೇ ಬೇರೆಯಿದೆ.
ಇತ್ತೀಚೆಗೆ ಸುದ್ದಿಯೊಂದು ಹರಿದಾಡುತ್ತಿದೆ. ಕಲರ್ ಕನ್ನಡ ತನ್ನ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಬಿಗ್‌ಬಾಸ್ ಪ್ರೋವೊವನ್ನು ಹಂಚಿಕೊಂಡಿತ್ತು. ಕೇವಲ ಬಿಗ್‌ಬಾಸ್ ಲೋಗೋವನ್ನಷ್ಟೇ ಅನಾವರಣ ಮಾಡಿದ್ದ ಕಲರ್‌ಕನ್ನಡ ಕಿಚ್ಚ ಸುದೀಪ್ ಅವರನ್ನೂ ಟ್ಯಾಗ್ ಮಾಡಿತ್ತು. ಇದನ್ನು ಸೂಕ್ಷ್ಮವಾಗಿ ಗಮನಿಸಿದವರು ಕಿಚ್ಚ ಸುದೀಪ್ ಕನ್ಫರ್ಮ್ ಅಂತಲೇ ಅಂದುಕೊಂಡಿದ್ದರು. ಆದ್ರೀಗ ಕಿಚ್ಚ ಸುದೀಪ್ ಹ್ಯಾಶ್ ಟ್ಯಾಗ್ ಅನ್ನು ತೆಗೆದು ಹಾಕಲಾಗಿದೆ. ಇದು ಮತ್ತೆ ಗೊಂದಲಕ್ಕೀಡು ಮಾಡಿದೆ.

ಅಸಲಿಗೆ ಕಿಚ್ಚ ಸುದೀಪ್ ಬಿಗ್‌ಬಾಸ್ ಕನ್ನಡ ಸೀಸನ್ 11 ಅನ್ನು ನಡೆಸಿಕೊಡುತ್ತಾರೋ ಇಲ್ಲವೋ? ಒಳಗಿನ ಮಾಹಿತಿ ಏನಿದೆ? ಬಲ್ಲ ಮೂಲಗಳ ಮಾಹಿತಿ ಪ್ರಕಾರ ಬಿಗ್ ಬಾಸ್ ಕನ್ನಡ ಸೀಸನ್ 11ರ ನಿರೂಪಕ ಕಿಚ್ಚ ಸುದೀಪ್. ಇವರನ್ನು ಬಿಟ್ಟರೆ ಬೇರೆಯವರನ್ನು ಈ ಶೋಗೆ ಕರೆಸುವ ಯಾವುದೇ ಪ್ರಯತ್ನ ನಡೆದಿಲ್ಲ. 11ನೇ ಸೀಸನ್ ಅನ್ನು ಕೂಡ ಕಿಚ್ಚ ಸುದೀಪ್ ಅವರೇ ನಡೆಸಿಕೊಡುತ್ತಾರೆ ಎಂದು ಖಚಿತ ಮಾಹಿತಿ ಕೊಟ್ಟಿವೆ.
ಏನಕ್ಕೂ ಕಲರ್ ಕನ್ನಡ ಈ ಬಗ್ಗೆ ಅಧಿಕೃತ ಮಾಹಿತಿ ನೀಡಬೇಕಿದೆ. ಕಿಚ್ಚ ಸುದೀಪ್ ಇರುವ ಬಿಗ್ ಬಾಸ್ ಪ್ರೋಮೊ ಬಿಟ್ಟಿ ಅಧಿಕೃತವಾಗಿ ಘೋಷಣೆ ಮಾಡುವ ಸಾಧ್ಯತೆಯಿದೆ. ಆದರೆ, ಬಲ್ಲ ಮೂಲಗಳ ಪ್ರಕಾರ, ಕಿಚ್ಚ ಸುದೀಪ್ ಸೀಸನ್ 11ರ ನಿರೂಪಕರಾಗಿ ಕಾಣಿಸಿಕೊಳ್ಳುತ್ತಾರೆ. ಅಷ್ಟಕ್ಕೂ ಇಷ್ಟೊಂದು ಗೊಂದಲದ ಹಿಂದೆನೂ ಹಲವು ಕಾರಣಗಳು ಇವೆ. ಅದರಲ್ಲೊಂದು ಸುದೀಪ್ ಸಿನಿಮಾ 'ಮ್ಯಾಕ್ಸ್'.
'ವಿಕ್ರಾಂತ್ ರೋಣ' ಬಳಿಕ ಕಿಚ್ಚ ಸುದೀಪ್ ಯಾವುದೇ ಸಿನಿಮಾ ರಿಲೀಸ್ ಆಗಿಲ್ಲ. ಸದ್ಯಕ್ಕೆ ಅವರ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ 'ಮ್ಯಾಕ್ಸ್' ಶೂಟಿಂಗ್ ಮುಗಿದಿದೆ. ಈ ಸಿನಿಮಾ ಕಿಚ್ಚ ಸುದೀಪ್ ಕೂಡ ಒಬ್ಬ ನಿರ್ಮಾಪಕರಾಗಿರುವುದರಿಂದ ಸಿನಿಮಾ ಬಿಡುಗಡೆಯ ಕಡೆಗೆ ಹೆಚ್ಚು ಗಮನ ಹರಿಸಿದ್ದಾರೆ. ಒಂದ್ಕಡೆ 'ಮ್ಯಾಕ್ಸ್' ಸಿನಿಮಾ ಬಿಡುಗಡೆಗೆ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಅದೇ ಇನ್ನೊಂದು ಕಡೆ 'ಬಿಲ್ಲ ರಂಗ ಬಾಷಾ' ಸಿನಿಮಾಗೆ ರೆಡಿಯಾಗಬೇಕು. ಹೀಗಾಗಿ ಕಿಚ್ಚ ಸುದೀಪ್ ಅವರೇ ಹಿಂದೇಟು ಹಾಕಿರಬಹುದೆಂದು ಊಹಿಸಲಾಗಿತ್ತು. ಆದ್ರೀಗ ಕಿಚ್ಚ ಸುದೀಪ್ ಅವರೇ ಬಿಗ್ ಬಾಸ್ ನಡೆಸಿಕೊಡುತ್ತಾರೆ. ಯಾವುದೇ ಬದಲಾವಣೆ ಇಲ್ಲ ಅಂತಿವೆ ಮೂಲಗಳು.


Click it and Unblock the Notifications











