Bigg Boss Kannada 12: ಬಿಗ್ ಬಾಸ್ ಸೆಟ್ಟೂ ರೆಡಿ.. ಸ್ಪರ್ಧಿಗಳೂ ರೆಡಿ.. ಕಿಚ್ಚ ರೆಡಿನಾ?
ಬಿಗ್ ಬಾಸ್ ಕನ್ನಡದ ಮತ್ತೊಂದು ಸೀಸನ್ ಆರಂಭಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಕಿಚ್ಚ ಸುದೀಪ್ ಹುಟ್ಟುಹಬ್ಬದಂದೇ ಬಿಗ್ ಬಾಸ್ ಕನ್ನಡ 12ರ ಅಪ್‌ಡೇಟ್ ಸಿಕ್ಕಿದೆ. ಕಿಚ್ಚನ 52ನೇ ಹುಟ್ಟುಹಬ್ಬಕ್ಕೆ 12ನೇ ಸೀಸನ್‌ನ ಗ್ರ್ಯಾಂಡ್ ಓಪನಿಂಗ್ ಡೇಟ್ ಅನೌನ್ಸ್ ಆಗಿದೆ. ಈಗಾಗಲೇ ಬಿಗ್ ಬಾಸ್ ತಂಡ ಕೂಡ ಎಲ್ಲಾ ರೀತಿಯಿಂದಲೂ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.
ಬಿಗ್ ಬಾಸ್ ರಿಯಾಲಿಟಿ ಶೋ ಜ್ವರ ಎಲ್ಲಾ ಭಾಷೆಯಲ್ಲೂ ಆರಂಭ ಆಗುತ್ತಿದೆ. ಈಗಾಗಲೇ ಹಿಂದಿಯ 19ನೇ ಸೀಸನ್ ಶುರುವಾಗಿದೆ. ಸಲ್ಮಾನ್ ಖಾನ್ ಅದೇ ಜೋಷ್‌ನಲ್ಲಿ ಮತ್ತೆ ನಿರೂಪಣೆಗೆ ಇಳಿದಿದ್ದಾರೆ. ಇತ್ತ ಮಲಯಾಳಂ 7ನೇ ಸೀಸನ್ ಕೂಡ ಶುರುವಾಗಿದೆ. ಮೋಹನ್‌ಲಾಲ್ ಕೂಡ ಜೋಷ್‌ನಲ್ಲಿ ಹೋಸ್ಟ್ ಮಾಡುತ್ತಿದ್ದಾರೆ. ಹೀಗಾಗಿ ಕನ್ನಡದಲ್ಲಿ ಯಾವಾಗ? ಅಂತ ಕಿಚ್ಚ ಅಭಿಮಾನಿಗಳು ಎದುರು ನೋಡುತ್ತಿದ್ದರು.

ಬಿಗ್ ಬಾಸ್ ಕನ್ನಡದ 12ನೇ ಸೀಸನ್ ಆರಂಭಕ್ಕೆ ಮುಹೂರ್ತವನ್ನು ಫಿಕ್ಸ್ ಮಾಡಲಾಗಿದೆ. ಅದರಲ್ಲೂ ಕಿಚ್ಚ ಸುದೀಪ್ ಹುಟ್ಟಹಬ್ಬದಲ್ಲೇ ಕಲರ್ಸ್ ಕನ್ನಡ ಅನೌನ್ಸ್ ಮಾಡಿರೋದು ವಿಶೇಷ. ಬೆಳಗ್ಗೆಯಿಂದ ಸಸ್ಪೆನ್ಸ್‌ನಲ್ಲಿಯೇ ಇಟ್ಟಿದ್ದ ತಂಡ ರಾತ್ರಿ ವೇಳೆಗೆ ರಿವೀಲ್ ಮಾಡಿದೆ. ಒಂದು ಪ್ರೋಮೋದಲ್ಲಿ ಬಿಗ್ ಬಾಸ್ ಕನ್ನಡ 12ನೇ ಸೀಸನ್‌ನ ಕೆಲವು ಗುಟ್ಟುಗಳು ರಿವೀಲ್ ಆಗಿವೆ.
ಬಿಗ್ ಬಾಸ್ ಕನ್ನಡದ 11ನೇ ಸೀಸನ್ ನಿನ್ನೆ ಮೊನ್ನೆ ಮುಗಿದಂತೆ ಇದೆ. ಅಷ್ಟರಲ್ಲೇ ಮತ್ತೊಂದು ಸೀಸನ್‌ಗೆ ಸಕಲ ಸಿದ್ಧತೆಗಳು ಆರಂಭ ಆಗಿವೆ. 12ನೇ ಸೀಸನ್‌ನ ಥೀಮ್ ಏನು? ಯಾವಾಗ ಶುರುವಾಗುತ್ತೆ? ಸ್ಪರ್ಧಿಗಳು ಈಗಾಗಲೇ ಆಯ್ಕೆ ಆಗಿದ್ದಾರಾ? ಸೆಟ್ ಹೇಗಿರುತ್ತೆ? ಕಿಚ್ಚನ ಲುಕ್ ಹೇಗಿದೆ? ಇದೆಲ್ಲವನ್ನೂ ಇಂದು (ಸೆಪ್ಟೆಂಬರ್ 2) ರಿಲೀಸ್ ಮಾಡಿದ ಪ್ರೋಮೊದಲ್ಲಿ ರಿವೀಲ್ ಮಾಡಲಾಗಿದೆ.
ಕಿಚ್ಚ ಸುದೀಪ್ ತಮ್ಮ 47ನೇ ಸಿನಿಮಾದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಆ ಸಿನಿಮಾಗಾಗಿ ಹೇರ್ ಸ್ಟೈಲ್ ಬದಲಾಯಿಸಿದ್ದಾರೆ. 'ಮಾರ್ಕ್' ಹಾಗೂ ಬಿಗ್ ಬಾಸ್ ಎರಡೂ ಶೋ ಅನ್ನೂ ಒಟ್ಟೊಟ್ಟಿಗೆ ನಿಭಾಯಿಸುವುದರಿಂದ ಕಿಚ್ಚ ಸುದೀಪ್ 'ಮಾರ್ಕ್' ಲುಕ್‌ನಲ್ಲಿಯೇ ಬಿಗ್ ಬಾಸ್ ವೇದಿಕೆ ಮೇಲೆ ಬರುವ ಎಲ್ಲಾ ಸಾಧ್ಯತೆಗಳಿವೆ. ಈಗಾಗಲೇ ಕಿಚ್ಚನ ಲುಕ್, ಹೇರ್‌ಸ್ಟೈಲ್ ಎಲ್ಲವೂ ಬದಲಾಗಿದೆ. ಅದೇ ಲುಕ್ ಅನ್ನೇ ಬಿಗ್ ಬಾಸ್ ಕನ್ನಡದ 12ನೇ ಸೀಸನ್ ವೇದಿಕೆ ಮೇಲೂ ನೋಡಬಹುದು.

ಅಂದ್ಹಾಗೆ ಬಿಗ್ ಬಾಸ್ ಕನ್ನಡದ 12ನೇ ಸೀಸನ್ ಸೆಪ್ಟೆಂಬರ್ 28ರಿಂದ ಗ್ರ್ಯಾಂಡ್ ಓಪನಿಂಗ್ ಪಡೆದುಕೊಳ್ಳುತ್ತಿದೆ. ಅಂದು ಭಾನುವಾರ ಆಗಿದ್ದರಿಂದ ಬಿಗ್ ಬಾಸ್ 12ನೇ ಸೀಸನ್ ಕಿರುತೆರೆಯಲ್ಲಿ ಕಿಚ್ಚು ಹಚ್ಚಲಿದೆ. ಇನ್ನು ಪ್ರೋಮೊದಲ್ಲಿಯೇ ರಿವೀಲ್ ಮಾಡಿದಂತೆ ಬಿಗ್ ಬಾಸ್ ಕನ್ನಡ 12ನೇ ಸೀಸನ್‌ನ ಸೆಟ್ ಕೂಡ ರೆಡಿಯಾಗಿದೆ. ಎಲ್ಲಕ್ಕಿಂತ ಮನೆಯೊಳಗೆ ಹೋಗುವ ಬಿಗ್ ಬಾಸ್ ಸ್ಪರ್ಧಿಗಳ ಲಿಸ್ಟ್ ಕೂಡ ರೆಡಿಯಾಗಿದೆ. ಇತ್ತ ಕಿಚ್ಚ ಸುದೀಪ್ ಕೂಡ ರೆಡಿಯಾಗಿದ್ದಾರೆ.
ಬಿಗ್ ಆರಂಭ ಆಗುವುದಕ್ಕೆ ಇನ್ನೇನು 26 ದಿನಗಳು ಉಳಿದುಕೊಂಡಿವೆ. ಬಿಗ್ ಬಾಸ್ ಟೀಮ್ ಕೂಡ ಕಿಚ್ಚನ ಲುಕ್ ಅನ್ನಷ್ಟೇ ರಿವೀಲ್ ಮಾಡಿದ್ದಾರೆ. ಇದರ ಜೊತೆಗೆ ಕಿರುತೆರೆ ಲೋಕದಲ್ಲಿ ಬಿಗ್ ಬಾಸ್ ಮನೆಯೊಳಗೆ ಯಾರೆಲ್ಲ ಹೋಗಬಹುದು ಅನ್ನೋ ಚರ್ಚೆ ಕೂಡ ಶುರುವಾಗಿದೆ. ಮುಂಚೂಣಿಯಲ್ಲಿ ಡಾ.ಬ್ರೋ, ಅರ್ಚನಾ ಜೋಯಿಸ್, ಜಾಹ್ನವಿ, ಶ್ರೀ ಮಹಾದೇವ್, ಗಗನ್ ಚಿನ್ನಪ್ಪ, ಆಂಕರ್ ಚಂದನ್ ಶರ್ಮಾ, ಪೂಜಾ ಲೋಕೇಶ್, ಧನುಷ್ ಗೌಡ ಹೆಸರುಗಳು ಹರಿದಾಡುತ್ತಿವೆ. ಆದರೆ, ಇದ್ಯಾವುದೂ ಅಧಿಕೃತವಲ್ಲ.


Click it and Unblock the Notifications











