Bigg Boss Kannada 13: ಅಂದ್ಕೊಂಡಿದ್ದಕ್ಕಿಂತ ಬೇಗನೇ ಶುರು ಬಿಗ್ ಬಾಸ್; ಈ ಬಾರಿಯ ಥೀಮ್ ಏನು?
ಕನ್ನಡ ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಮುಗಿದು ಇನ್ನೂ ಆರೂ ತಿಂಗಳೂ ಆಗಿಲ್ಲ. ಅಷ್ಟರಲ್ಲೇ ಮತ್ತೊಂದು ಸೀಸನ್‌ಗೆ ಕಲರ್ಸ್ ಕನ್ನಡ ರೆಡಿಯಾಗುತ್ತಿದೆ. ವಿವಾದ ಹಾಗೂ ಮನರಂಜನೆಗಳ ಗೂಡಾಗಿರುವ ಬಿಗ್ ಬಾಸ್ ರಿಯಾಲಿಟಿ ಶೋಗೆ ಅದರದ್ದೇ ಆದ ಫ್ಯಾನ್ ಫಾಲೋವಿಂಗ್ ಇದೆ. ಸಾಮಾನ್ಯವಾಗಿ ಸೆಪ್ಟೆಂಬರ್, ಅಕ್ಟೋವರ್ ತಿಂಗಳಲ್ಲಿ ಆರಂಭ ಆಗುತ್ತಿದ್ದ ಶೋ ನಿರೀಕ್ಷೆಗೂ ಮೊದಲ ಶುರುವಾಗುತ್ತಿದೆ.
ಕಲರ್ಸ್ ಕನ್ನಡ ಯಾವುದೇ ಸುಳಿವನ್ನು ನೀಡದೇ ಕಿರುತೆರೆ ವೀಕ್ಷಕರಿಗೆ ಬಿಗ್ ಸರ್ಪ್ರೈಸ್ ನೀಡಿದೆ. 'ಬಿಗ್ ಬಾಸ್ ಕನ್ನಡ ಸೀಸನ್ 13' (BBK13) ರ ಮೊದಲ ಪ್ರೋಮೋ ಬಿಡುಗಡೆ ಮಾಡುವ ಮೂಲಕ ಕನ್ನಡಿಗರಲ್ಲಿ ಕುತೂಹಲದ ಕಿಚ್ಚು ಹೊತ್ತಿಸಿದೆ. ಕಲರ್ಸ್ ಕನ್ನಡ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪ್ರೋಮೊವನ್ನು ರಿಲೀಸ್ ಮಾಡಿದ್ದು, ಈ ವರ್ಷ ಬೇಗನೇ ಶುರುವಾಗುತ್ತಿದೆ ಎಂಬ ಸುಳಿವನ್ನು ನೀಡಿದೆ.

ಕಲರ್ಸ್ ಕನ್ನಡ ರಿಲೀಸ್ ಮಾಡಿರುವ ಪ್ರೋಮೊದಲ್ಲಿ "ಈ ವರ್ಷ ಬೇಗ ಶುರುವಾಗ್ತಿದೆ ಕನ್ನಡಿಗರ ಹಬ್ಬ" ಎಂಬ ಅಡಿಬರಹವನ್ನು ನೀಡಲಾಗಿದೆ. ಇದು ಬಿಗ್ ಬಾಸ್ ಅಭಿಮಾನಿಗಳಲ್ಲಿ ಕಣ್ಣುಗಳನ್ನು ಅರಳುವಂತೆ ಮಾಡಿದೆ. ಅಲ್ಲದೇ ಪ್ರೋಮೋ ಕೂಡ ವಿಶಿಷ್ಟವಾಗಿ ಮೂಡಿ ಬಂದಿದೆ. ಹಾಗಿದ್ದರೆ, ಈ ಬಾರಿಯ ಬಿಗ್ ಬಾಸ್ ಕನ್ನಡದ ಥೀಮ್ ಏನು? ತಿಳಿಯುವುದಕ್ಕೆ ಮುಂದೆ ಓದಿ.
'ಗೋಲ್ಡನ್' ಥೀಮ್‌ನಲ್ಲಿ ಬಿಗ್ ಬಾಸ್ ಪ್ರೋಮೋ
ಕೆಲವು ದಿನಗಳ ಹಿಂದಷ್ಟೇ ಬಿಗ್ ಬಾಸ್ ತಮಿಳಿನ ಬಗ್ಗೆ ಸುದ್ದಿಯಾಗಿತ್ತು. ಈ ಬಾರಿ ಬೇಗನೇ ಶುರುವಾಗುತ್ತಿದೆಯಲ್ಲ ಎನ್ನುವಾಗಲೇ ಬಿಗ್ ಬಾಸ್ ಎಲ್ಲಾ ಕಡೆ ಸದ್ದು ಮಾಡುವುದಕ್ಕೆ ಶುರು ಮಾಡಿದೆ. ಅದರಲ್ಲೂ ಕನ್ನಡದಲ್ಲಿ 13ನೇ ಸೀಸನ್ ಇಷ್ಟು ಬೇಗನೇ ಆರಂಭ ಆಗುತ್ತೆ ಅನ್ನೋ ಚಿಕ್ಕ ಸುಳಿವು ಕೂಡ ಇರಲಿಲ್ಲ. ಅಲ್ಲದೇ ಕಲರ್ಸ್ ಕನ್ನಡ ತನ್ನ ಅಧಿಕೃತ ಸೋಶಿಯಲ್ ಮೀಡಿಯಾ ಪೇಜ್‌ಗಳಲ್ಲಿ ಹಂಚಿಕೊಂಡಿರೋ ಈ ಪ್ರೋಮೋ ವಿಶಿಷ್ಟ ಶೈಲಿಯಲ್ಲಿ ಮೂಡಿಬಂದಿದೆ. ಈ ಪ್ರೋಮೊದಲ್ಲಿ ಕಿಚ್ಚ ಕಾಣಿಸದೇ ಹೋದರೂ ಚಿನ್ನದ ಥೀಮ್‌ನಲ್ಲಿದೆ. ಹೀಗಾಗಿ ಬಿಗ್ ಬಾಸ್ 13ಕ್ಕೂ ಚಿನ್ನದ ಬಣ್ಣಕ್ಕೂ ಏನೋ ಲಿಂಕ್ ಇದೆ ಅಂತ ವೀಕ್ಷಕರು ಗೆಸ್ ಮಾಡುತ್ತಿದ್ದಾರೆ. ಇನ್ನು ಲೋಗೋ ಕೂಡ ಚಿನ್ನದ ಪ್ರತಿಮೆಗಳಿಂದ ತುಂಬಿಕೊಂಡಿದೆ.
ಕಾಮನ್ ಮ್ಯಾನ್ Vs ಸೆಲೆಬ್ರಿಟೀಸ್
ಬಿಗ್ ಬಾಸ್ ಸೀಸನ್ 13ರ ಪ್ರೋಮೊ ರಿಲೀಸ್ ಆಗುತ್ತಿದ್ದಂತೆ ಥೀಮ್ ಏನಿರಬಹುದು ಎಂದು ಕಿರುತೆರೆ ವೀಕ್ಷಕರು ತಲೆ ಕೆಡಿಸಿಕೊಂಡಿದ್ದಾರೆ. ಇನ್ನು ಸೋಶಿಯಲ್ ಮೀಡಿಯಾದಲ್ಲಿ ಕೆಲವು ಪೇಜ್‌ಗಳು ಈ ಬಾರಿಯ ಬಿಗ್ ಬಾಸ್ ಥೀಮ್ ಅನ್ನು ಚರ್ಚೆ ಮಾಡುತ್ತಿವೆ. ಅದರಲ್ಲಿ ಒಂದು ಸೆಲೆಬ್ರಿಟೀಸ್ ಜೊತೆ ಕಾಮನ್ ಮ್ಯಾನ್ ಸೆಣಸಾಟ ಇರುತ್ತೆ ಅನ್ನೋದು ರಿವೀಲ್ ಮಾಡಲಾಗಿದೆ. ಇದು ವೀಕ್ಷಕರಿಗೆ ಕಿಕ್ ಕೊಟ್ಟಿದೆ. ಒಂದು ವೇಳೆ ಇದೇ ಥೀಮ್ ಆಗಿದ್ದರೆ, ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಮನರಂಜನೆ ಹಾಗೂ ಸೆಣೆಸಾಟ ಜೋರಾಗಿಯೇ ಇರುತ್ತೆ.
13ನೇ ಸೀಸನ್‌ಗೂ ಸುದೀಪ್ ಸಾರಥಿ
ಬಿಗ್ ಬಾಸ್ ಕನ್ನಡ ಎಂದರೆ ಕಿಚ್ಚ ಸುದೀಪ್.. ಕಿಚ್ಚ ಸುದೀಪ್ ಅಂದರೆ, ಬಿಗ್ ಬಾಸ್ ಅನ್ನೋ ಹಾಗೆ ಆಗಿದೆ. ಅಭಿನಯ ಚಕ್ರವರ್ತಿ ಬಿಟ್ಟು ಬಿಗ್ ಬಾಸ್ ಅನ್ನು ನೆನಪಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ. ಸೀಸನ್ 13 ಕೂಡ ಕಿಚ್ಚ ಸುದೀಪ್ ಅವರೇ ನಿರೂಪಕ. ಅದರಲ್ಲೂ 12ನೇ ಸೀಸನ್ ಅತ್ಯಂತ ಯಶಸ್ವಿ ಸೀಸನ್ ಆಗಿ ಹೊರ ಹೊಮ್ಮಿದೆ. ಹೀಗಾಗಿ ಹೊಸ ಸೀಸನ್ ಮೇಲೆ ಕಿಚ್ಚನ ಅಭಿಮಾನಿಗಳು ಕಣ್ಣಿಟ್ಟು ಕೂತಿದ್ದಾರೆ.
ಬಿಗ್ ಬಾಸ್ 13 ಆರಂಭ ಯಾವಾಗ?
'ಬಿಗ್ ಬಾಸ್ ಕನ್ನಡ' ಸಾಮಾನ್ಯವಾಗಿ ಸೆಪ್ಟೆಂಬರ್ ಕೊನೆಯಲ್ಲಿ ಆರಂಭ ಆಗುತ್ತೆ. ಸೀಸನ್ 12 ಕೂಡ 2025ರ ಸೆಪ್ಟೆಂಬರ್ 28ರಂದು ಆರಂಭಗೊಂಡಿತ್ತು. ಆದರೆ, ಈ ಬಾರಿ ಅದಕ್ಕೂ ಮುನ್ನ ಬರೋದು ಕನ್ಫರ್ಮ್ ಆಗಿದೆ. ಈಗಾಗಲೇ ಪ್ರೋಮೊನೂ ರಿಲೀಸ್ ಆಗಿದೆ. ಅಂದ್ಮೇಲೆ, ಆಗಸ್ಟ್ ತಿಂಗಳಲ್ಲಿ ಬಿಗ್ ಬಾಸ್ ಕನ್ನಡದ 13ನೇ ಸೀಸನ್ ಬರಬಹುದೆಂಬ ನಿರೀಕ್ಷೆಯಿದೆ. ಇಲ್ಲವೇ ಅದಕ್ಕೂ ಮುನ್ನ ಬರಬಹುದು. ಆದರೆ, ಕಲರ್ಸ್ ಕನ್ನಡ ಈ ರಿಯಾಲಿಟಿ ಶೋ ಆರಂಭದ ದಿನವನ್ನು ಇನ್ನೂ ಗೌಪ್ಯವಾಗಿ ಇಟ್ಟಿದೆ.


Click it and Unblock the Notifications