ಮಂಜು ಪಾವಗಡ weds ನಂದಿನಿ; ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಿಗ್ ಬಾಸ್ ವಿನ್ನರ್
ರಿಯಾಲಿಟಿ ಶೋ ಮೂಲಕ ಸದ್ದು ಮಾಡಿದ್ದ ಮಂಜು ಪಾವಗಡ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ' ಮಜಾಭಾರತ', 'ಗಿಚ್ಚಿ ಗಿಲಿಗಿಲಿ', ಬಿಗ್ ಬಾಸ್ ಅಂತಹ ರಿಯಾಲಿಟಿ ಶೋ ಮೂಲಕ ಮಂಜು ಪಾವಗಡ ಜನಪ್ರಿಯರಾಗಿದ್ದಾರೆ. ರಿಯಾಲಿಟಿ ಶೋಗಳ ಬಳಿಕ ಮಂಜು ಧಾರಾವಾಹಿಗಳಲ್ಲೂ ನಟಿಸಿದ್ದಾರೆ. ಕಿರುತೆರೆ ವೀಕ್ಷಕರನ್ನು ಹೊಟ್ಟೆ ಹುಣ್ಣಾಗುವಷ್ಟು ನಗಿಸುವ ಈ ಪ್ರತಿಭೆ ಈಗ ವೈವಾಹಿಕ ಜೀವನಕ್ಕೆ ಕಾಲಿಟ್ಟಿದೆ.
ಮಂಜು ಪಾವಗಡ ಕುಟುಂಬಸ್ಥರು ಹಾಗೂ ಆತ್ಮೀಯರ ಸಮ್ಮುಖದಲ್ಲಿ ವಿವಾಹವಾಗಿದ್ದಾರೆ. ನಂದಿನಿ ಎಂಬುವವರ ಜೊತೆ ಸಪ್ತಪದಿ ತುಳಿದಿದ್ದು, ನವ ದಂಪತಿಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ನವ ಜೋಡಿಯ ಹೊಸ ಬದುಕಿಗೆ ಸಿನಿಮಾ ತಾರೆಯರು ಆಗಮಿಸಿ ಶುಭ ಕೋರಿದ್ದಾರೆ. ಇವರ ಮದುವೆ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಕನ್ನಡದ ಚಿತ್ರರಂಗದಿಂದ ನಟಿ ಶುಭ ಪೂಂಜಾ, ರಿಯಾಲಿಟಿ ಶೋನ ಗೆಳೆಯರು, ಆತ್ಮೀಯರು ಕುಟುಂಬಸ್ಥರು ಮಂಜು ಪಾವಗಡ ಹಾಗೂ ನಂದಿನಿ ಹೊಸ ಬಾಳಿಗೆ ಶುಭ ಹಾರೈಸಿದ್ದಾರೆ. ಶುಭ ಪೂಂಜಾ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ನವ ಜೋಡಿಗೆ ಶುಭ ಹಾರೈಸಿದ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ಈ ವೇಳೆ ಮಂಜು ಕೆನ್ನೆಯನ್ನು ಹಿಂಡಿ ಚೇಡಿಸಿದ್ದಾರೆ.
ಅಂದ್ಹಾಗೆ, ಮಂಜು ಪಾವಗಡ ಪತ್ನಿಯ ಹೆಸರು ನಂದಿನಿ. ಇವರು ಚಿತ್ರರಂಗಕ್ಕೆ ಸಂಬಂಧ ಪಟ್ಟವರು ಅಲ್ಲ. ಬೆಂಗಳೂರಿನಲ್ಲಿ ಕಂಪನಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದ್ದು, ತಮ್ಮ ಪತ್ನಿಯ ಬಗ್ಗೆ ಮುಂದಿನ ದಿನಗಳಲ್ಲಿ ಪರಿಚಯ ಮಾಡಿಕೊಡಬಹುದು. ಸದ್ಯ ಸದ್ದಿಲ್ಲದೆ ತಮ್ಮದೇ ಕುಟುಂಬ ಹಾಗೂ ಆಪ್ತರ ಸಮ್ಮುಖದಲ್ಲಿ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.
ಇನ್ನು ಇತ್ತೀಚೆಗೆ ಮಂಜು ಪಾವಗಡ ತಮ್ಮ ಕನಸನ್ನು ನನಸು ಮಾಡಿಕೊಂಡಿದ್ದರು. ಬೆಂಗಳೂರಿನಲ್ಲಿ ಸ್ವಂತ ಮನೆಯನ್ನು ಖರೀದಿ ಮಾಡಿದ್ದಾರೆ. ಅಷ್ಟೇ ಅಲ್ಲದೆ ಅದ್ಧೂರಿಯಾಗಿ ಆ ಮನೆಯ ಗೃಹಪ್ರವೇಶವನ್ನೂ ಮಾಡಿದ್ದರು. ಆ ವೇಳೆ ಕೂಡ ತಮ್ಮ ಕಿರುತೆರೆಯ ಗೆಳೆಯರನ್ನು ಕರೆದು ಸಂಭ್ರಮಿಸಿದ್ದರು. ಅಂದು ಮಂಜು ಪಾವಗಡ ಈ ಹಂತಕ್ಕೆ ಬೆಳೆದು ನಿಂತಿದ್ದಕ್ಕೆ ನೆಟ್ಟಿಗರು ಖುಷಿಪಟ್ಟಿದ್ದರು. ಆ ಬೆನ್ನಲೇ ತಮ್ಮ ಬದುಕಿನ ಮತ್ತೊಂದು ಹಂತಕ್ಕೆ ಏರಿದ್ದಾರೆ.

ಇನ್ನು ಮಂಜು ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ. ತಮ್ಮ ಹಾಸ್ಯ ಪ್ರಜ್ಞೆಯಿಂದ ಜನರ ಮನಸ್ಸನ್ನು ಗೆದ್ದಿರುವ ಮಂಜು ರಿಯಾಲಿಟಿ ಶೋಗಳ ಮೂಲಕವೇ ಜನರ ಮನಸ್ಸನ್ನು ಗೆದ್ದವರು. 'ಮಜಾ ಭಾರತ' ಎಂಬ ಹಾಸ್ಯ ಕಾರ್ಯಕ್ರಮದ ಮೂಲಕ ಕನ್ನಡ ಕಿರುತೆರೆಗೆ ಕಾಲಿಟ್ಟವರು, ಮತ್ತೆ ಹಿಂತಿರುಗಿ ನೋಡಲಿಲ್ಲ. ಇವರ ಪ್ರತಿಭೆಗೆ ತಕ್ಕಂತೆ ಹೊಸ ಹೊಸ ಕಾರ್ಯಕ್ರಮಗಳು ಸಿಗುತ್ತಲೇ ಇದ್ದವು.
'ಗಿಚ್ಚಿ ಗಿಲಿ ಗಿಲಿ' ಬಳಿಕ ಬಿಗ್ ಬಾಸ್ ಕನ್ನಡ ಸೀಸನ್ 8 ವಿನ್ನರ್ ಆಗಿ ಹೊರ ಹೊಮ್ಮಿದ್ದರು. ಅಲ್ಲಿಂದ ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ. 'ಯಲಾ ಕುನ್ನಿ', 'ವೇಷ', 'ರೈಡರ್', 'ಯದಾ ಯದಾ ಹಿ', 'ನಾನು ನನ್ ಜಾನು', 'ಕಥಾ ಲೇಖನ', 'ವಾಸಂತಿ ನಲಿದಾಗ', 'ಲವ್ ಯು ಟೂ', 'ಜಾರ್ಡನ್' ಅಂತಹ ಹಲವು ಸಿನಿಮಾಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದರ ಜೊತೆಗೆ ಮಂಜು ಪಾವಗಡ 'ಡವ್ ಮಂಜ' ಎಂಬ ವೆಬ್ ಸೀರೀಸ್‌ನಲ್ಲಿ ನಟಿಸಿ, ತಮ್ಮ ಮ್ಯಾನರಿಸಂನಿಂದ ಮೆಚ್ಚುಗೆ ಗಿಟ್ಟಿಸಿಕೊಂಡಿದ್ದರು.


Click it and Unblock the Notifications











