"ಸೂರಿ.. ಇದು ಗನ್ ಕಣಪ್ಪ.. ಬನ್ ಅಲ್ಲ ಅಂತಿದ್ದಾರೆ":'ಬ್ಯಾಡ್ ಮ್ಯಾನರ್ಸ್' ಟ್ರೈಲರ್‌ಗೆ ದರ್ಶನ್ ಫುಲ್ ಮಾರ್ಕ್ಸ್
ಯಂಗ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ ನಟನೆಯ ಎರಡನೇ ಸಿನಿಮಾ 'ಬ್ಯಾಡ್ ಮ್ಯಾನರ್ಸ್' ರಿಲೀಸ್‌ಗೆ ರೆಡಿಯಾಗಿದೆ. ಇದೇ ನವೆಂಬರ್ 24ಕ್ಕೆ ಈ ಸಿನಿಮಾ ರಾಜ್ಯಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ. ಈ ಬೆನ್ನಲ್ಲೇ ಸಿನಿಮಾ ಟ್ರೈಲರ್ ರಿಲೀಸ್ ಮಾಡಲಾಗಿದೆ.
ದುನಿಯಾ ಸೂರಿ ಆಕ್ಷನ್ ಕಟ್ ಹೇಳಿರುವ 'ಬ್ಯಾಡ್ ಮ್ಯಾನರ್ಸ್' ಸಿನಿಮಾ ಮೇಲೆ ಕುತೂಹಲ ದುಪ್ಪಟ್ಟಾಗಿದೆ. ಸೂರಿ ಬತ್ತಳಿಕೆಯಿಂದ ಮತ್ತೊಂದು 'ಟಗರು' ಶೈಲಿಯ ಸಿನಿಮಾ ಬರಬಹುದು ಅನ್ನೋ ನಿರೀಕ್ಷೆಯಲ್ಲಿದ್ದಾರೆ. ಇನ್ನೊಂದು ಕಡೆ ಅಭಿಷೇಕ್ ಅಂಬರೀಶ್ ಎರಡನೇ ಸಿನಿಮಾ.

ಮೊದಲ ಸಿನಿಮಾದಲ್ಲಿ ಲವ್ ಸ್ಟೋರಿಯಲ್ಲಿ ಆಯ್ಕೆ ಮಾಡಿಕೊಂಡಿದ್ದರೆ, ಎರಡನೇ ಸಿನಿಮಾದಲ್ಲಿ ಆಕ್ಷನ್ ಹೀರೊ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಮತ್ತೊಬ್ಬ ಮಾಸ್ ಹೀರೊ ನೋಡುವುದಕ್ಕೆ ಪ್ರೇಕ್ಷಕರು ಕಾದು ಕೂತಿದ್ದಾರೆ. ಇಷ್ಟು ದಿನ ಟ್ರೈಲರ್ ನೋಡುವುದಕ್ಕೆ ಕಾತುರರಾಗಿದ್ದ ಅಭಿಷೇಕ್ ಫ್ಯಾನ್ಸ್ ಬಳಿಗೆ 'ಬ್ಯಾಡ್ ಮ್ಯಾನರ್ಸ್' ಟ್ರೈಲರ್ ತಲುಪಿದೆ. ಈ ವೇಳೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಟ್ರೈಲರ್ ಅಲ್ಲ. ಇಡೀ ಸಿನಿಮಾವನ್ನೇ ನೋಡಿದ್ದಾಗಿ ಹೇಳಿದ್ದಾರೆ.
'ಬ್ಯಾಡ್ ಮ್ಯಾನರ್ಸ್' ಹೊಗಳಿದ ದಾಸ
ರೆಬೆಲ್ ಸ್ಟಾರ್ ಕುಟುಂಬದೊಂದಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಂಬಂಧ ಹೇಗಿದೆ ಅನ್ನೋದನ್ನು ಗೊತ್ತಿರೋದೆ. ಅದಕ್ಕೆ ಅಭಿಷೇಕ್ ಅಂಬರೀಶ್‌ಗೆ ಬೆಂಬಲವಾಗಿ ನಿಂತಿದ್ದಾರೆ. ಮೊದಲನೇ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ರೆ, ಎರಡನೇ ಸಿನಿಮಾದ ಹಿಂದೆ ನಿಂತು ಪರೋಕ್ಷವಾಗಿ ಬೆಂಬಲ ಕೊಟ್ಟಿದ್ದಾರೆ. ಇದೀಗ ಟ್ರೈಲರ್ ಲಾಂಚ್ ಸಮಾರಂಭಕ್ಕೂ ಬಂದು 'ಬ್ಯಾಡ್ ಮ್ಯಾನರ್ಸ್' ಬಗ್ಗೆ ನಾಲ್ಕು ಒಳ್ಳೆ ಮಾತಾಡಿದ್ದಾರೆ. ಅದೇನು ಅಂತ ತಿಳಿಯಲು ಮುಂದೆ ಓದಿ.
"ನಾನು ಇಡೀ ಸಿನಿಮಾ ನೋಡಿದ್ದೀನಿ"
"ನೀವು ಬರೀ ಟ್ರೈಲರ್ ನೋಡಿದ್ದೀರಲ್ಲ.. ನಾವು ಸಿನಿಮಾವನ್ನೇ ನೋಡಿದ್ದೇವೆ. ಸೂರಿಯವರಿಗೆ ಧನ್ಯವಾದಗಳನ್ನು ಹೇಳುತ್ತೇನೆ. ಯಾಕಂದ್ರೆ, ಅವರ ಸಿನಿಮಾದ ಪ್ಯಾಟ್ರನ್ ಬೇರೆನೇ ಇರುತ್ತೆ. ಇವತ್ತಿನ ಪೀಳಿಗೆ ಏನೇನಾಗ್ತಿದೆಯೋ ಆ ತರಹದ ಒಂದು ಸಿನಿಮಾ. ಈ ಸಿನಿಮಾದಲ್ಲಿ ನೀವು ಹೆಚ್ಚು ಗನ್‌ಗಳನ್ನೇ ನೋಡುತ್ತೀರ. ಅಂದ್ರೆ ಸೂರಿಯರು ಹೇಳೋಕೆ ಹೊರಟಿರೋದು ಏನಂದ್ರೆ, ಇದು ಗನ್ ಕಣಪ್ಪ.. ಬನ್ ಅಲ್ಲ ಅಂತ." ಎಂದು ದರ್ಶನ್ ಸಿನಿಮಾದ ಚಿಕ್ಕದೊಂದು ಸುಳಿವನ್ನು ಬಿಟ್ಟು ಕೊಟ್ಟಿದ್ದಾರೆ.

"ಸೂರಿ ಕೆಲ್ಸ ತೆಗೆಸಿದ್ದಾರೆ"
"ಇಲ್ಲಿವರೆಗೂ ನೀವು ಯಂಗ್ ರೆಬೆಲ್ ಸ್ಟಾರ್ ಅಂತಿದ್ರಿ. ಇಲ್ಲ ನೀವು ರಿಯಲ್ ರೆಬೆಲ್ ಸ್ಟಾರ್ ಅನ್ನೇ ನೋಡ್ತೀರಾ ಸಿನಿಮಾದಲ್ಲಿ. ಯಾಕಂದ್ರೆ, ಮೊದಲನೇ ಸಿನಿಮಾಗೂ ಈ ಸಿನಿಮಾಗೂ ಅಭಿಷೇಕ್ ಅವರು ತುಂಬಾನೇ ಬದಲಾಗಿದ್ದಾರೆ. ಅವರ ಆಕ್ಟಿಂಗ್ ಸ್ಕಿಲ್ ಬದಲಾಗಿದೆ. ಅವರ ಸ್ಟೈಲ್ ಬದಲಾಗಿದೆ. ಅದೆಲ್ಲದ್ದಕ್ಕೂ ಕಾರಣ ಸೂರಿಯವರು. ಯಾಕಂದ್ರೆ ಅಷ್ಟು ಚೆನ್ನಾಗಿ ನಮ್ಮ ಹುಡುಗನ ಹತ್ತಿರ ಕೆಲಸ ತೆಗೊಂಡಿದ್ದಾರೆ." ಎಂದು ನಿರ್ದೇಶಕ ಸೂರಿ ಸಿನಿಮಾ ಶೈಲಿಯನ್ನು ಹೊಗಳಿದ್ದಾರೆ.
ಹೈಟ್ ಇರೋ ಯುವ ನಟರಿಗೆ ಸಲಾಂ
"ನಮ್ಮನ್ನು ನೋಡಿದಾಗ ಎಲ್ಲರೂ ಹೈಟ್ ಹೈಟ್ ಅನ್ನೋರು. ಈಗ ಯಾರು ಹೈಟಿದ್ದಾರೆ ನೋಡಿ ಸ್ವಾಮಿ. ಇವರ ಮುಂದೆ ನಾವೇ ಕುಳ್ಳಗೆ ಇಲ್ವಾ? ನನಗಿಂತ ಎರಡು ಇಂಚು ಉದ್ದ ಜಾಸ್ತಿ ಇದ್ದಾನೆ. ವಿಕ್ಕಿನೂ ನಮಗಿಂತಲೂ ಉದ್ದ ಇದ್ದಾನೆ. ಧನ್ವೀರ್, ವಿನೋದ್ ಪ್ರಭಾಕರ್, ಎಲ್ಲರೂ ಹೈಟ್ ಇದ್ದಾರೆ. ಮುಂದೆ ಬರ್ತಿರೋ ಎಲ್ಲಾ ಯಂಗ್‌ಸ್ಟರ್‌ಗಳಿಗೂ ಒಳ್ಳೆಯದಾಗಲಿ. ಬ್ಯಾಡ್ ಮ್ಯಾನರ್ಸ್ ಬರೀ ಹೆಸರಷ್ಟೇ.. ಒಳ್ಳೆ ಮ್ಯಾನರ್ಸ್ ಇಟ್ಟುಕೊಂಡು ಮಾಡಿದಂತಹ ಸಿನಿಮಾವಿದು." ಎಂದು ದರ್ಶನ್ ಬ್ಯಾಡ್ ಮ್ಯಾನರ್ಸ್ ಸಮಾರಂಭದಲ್ಲಿ ಪ್ರೇಕ್ಷಕರಲ್ಲಿ ಮಾನವಿ ಮಾಡಿಕೊಂಡಿದ್ದಾರೆ.


Click it and Unblock the Notifications











