ಕಿರುತೆರೆಯಲ್ಲೂ ಸಿಂಧೂರ, ಎರಡು ಕುಟುಂಬಗಳ ಮುಖಾಮುಖಿ; 'ನಂದ ಗೋಕುಲ'ದಲ್ಲಿ ಮಾರಾಮಾರಿ
ಕಲರ್ಸ್ ಕನ್ನಡದ ಬಹು ನಿರೀಕ್ಷಿತ ಧಾರಾವಾಹಿ 'ನಂದ ಗೋಕುಲ'ದ ಪ್ರೋಮೋ ಸದ್ದು ಮಾಡುತ್ತಿದೆ. ಇತ್ತೀಚೆಗೆ ತನ್ನ ಸೋಶಿಯಲ್ ಮೀಡಿಯಾದ ಪುಟಗಳಲ್ಲಿ ಈ ಧಾರಾವಾಹಿಯ ಎರಡು ಪ್ರೋಮೋಗಳು ಬಂದಿದ್ದವು. ಆದರೆ, ಅವೆರಡರಿಗಿಂತ ಈ ಪ್ರೋಮೊ ಬಹಳ ಸದ್ದು ಮಾಡಿದೆ. ಅದೇ ಕಾರಣಕ್ಕೆ ವೈರಲ್ ಕೂಡಾ ಆಗಿದೆ.
'ಪ್ರೀತಿಸಿ ಮದುವೆಯಾಗಕೂಡದು' ಎಂದು ತಂದೆ ತನ್ನ ಮಕ್ಕಳ ಬಳಿ 'ಭಾಷೆ' ತೆಗೆದುಕೊಳ್ಳುವ ಸನ್ನಿವೇಶ ಇರೋ ಈ ಪ್ರೊಮೋದಲ್ಲಿ ಭಾವನಾತ್ಮಕ ಎಳೆ ಇದೆ. ಗಿರಿಜಾ ತನ್ನ ಗಂಡ ನಂದನ ಜೊತೆ ಮದುವೆಯಾಗಿ 25 ವರ್ಷ ಆಗಿದೆ. ಈ ಸಮಯದಲ್ಲಿ ಅವರ ಮಗ ವಲ್ಲಭ ಅಭಿನಂದಿಸುತ್ತಾನೆ. ನಂದ, ಗಿರಿಜಾ ತಮ್ಮ ಮಕ್ಕಳ ಜೊತೆ ಹೊರ ಬಂದಾಗ ಎದುರುಗಡೆ ಮನೆಯಲ್ಲಿರೋ ಗಿರಿಜಾಳ ಸಹೋದರರು ಮುಖಾಮುಖಿಯಾಗುತ್ತಾರೆ. ಮಾತಿಗೆ ಮಾತು ಬೆಳೆದು ಅಲ್ಲಿ ಜಗಳವಾಗುತ್ತದೆ. ಆಗ ನಂದನಿಗೆ ಅಪಮಾನವಾಗುವಂತೆ ಗಿರಿಜಾಳ ಸಹೋದರ ಮಾತಾಡುತ್ತಾನೆ. ಮನೆಯ ಕೆಲಸ ಮಾಡಿಕೊಂಡಿದ್ದ ನಂದ ಅವರ ಒಪ್ಪಿಗೆಯಿಲ್ಲದೆ ಗಿರಿಜಾಳನ್ನು ಪ್ರೀತಿಸಿ ಮದುವೆಯಾದ ವಿಷಯ ಪ್ರಸ್ತಾಪವಾಗುತ್ತದೆ. ಆಗ ನಂದ ತನ್ನ ಮಕ್ಕಳಿಂದ, 'ಯಾರೂ ಪ್ರೀತಿಸಿ ಮಾಡುವೆ ಆಗಕೂಡದು' ಎಂದು ಪ್ರಮಾಣ ಮಾಡುವಂತೆ ತನ್ನ ಕೈ ಒಡ್ಡುತ್ತಾನೆ.

'ನಂದ ಗೋಕುಲ' ತಾರಾ ಬಳಗದಲ್ಲಿ ಅರವಿಂದ್ ರಾವ್, ಅಮೃತ ನಾಯ್ಡು, ರವಿ ಚೇತನ್, ಅರ್ಚನಾ ಗಾಯಕ್ವಾಡ್, ವಿಜಯ್ ಚಂದ್ರ, ಯಶವಂತ್, ಅಭಿಷೇಕ್ ದಾಸ್, ಕೃಷ್ಣಪ್ರಿಯಾ ಭಟ್, ರಘು ಮಂಡ್ಯ, ನವ್ಯ ಮುರಳಿ ಗೌಡ, ಮೇಘ, ಉರ್ಜಿತ, ಶೈಲಜಾ ಮುಂತಾದವರಿದ್ದಾರೆ. ಚಲನಚಿತ್ರಗಳಲ್ಲಿ ಮಿಂಚುತ್ತಿದ್ದ ಅರವಿಂದ್ ರಾವ್, ರವಿ ಚೇತನ್ 'ನಂದ ಗೋಕುಲ' ಧಾರಾವಾಹಿಯ ಮೂಲಕ ಮೊದಲ ಬಾರಿಗೆ ಕಿರುತೆರೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಕಲರ್ಸ್ ಕನ್ನಡ ಕೌಟುಂಬಿಕ ಧಾರಾವಾಹಿಗಳನ್ನು ಕಿರುತೆರೆ ವೀಕ್ಷಕರಿಗಾಗಿ ತರುತ್ತಲೇ ಇರುತ್ತೆ. ಅದರಲ್ಲಿ 'ನಂದ ಗೋಕುಲ' ಹೊಸ ಧಾರಾವಾಹಿ. ಈ ಧಾರಾವಾಹಿ ಇನ್ನೇನು ಶೀಘ್ರದಲ್ಲಿಯೇ ಪ್ರಸಾರ ಆಗುತ್ತೆ. ಆದರೆ, ಎಂದಿನಿಂದ? ಯಾವ ಸಮಯಕ್ಕೆ ಪ್ರಸಾರ ಆಗುತ್ತೆ ಅನ್ನೋದನ್ನು ಕಲರ್ಸ್ ಕನ್ನಡ ಇನ್ನೂ ಹೇಳಿಲ್ಲ. ಈಗಾಗಲೇ ಪ್ರಸಾರ ಆಗುತ್ತಿರುವ ಕೆಲವು ಧಾರಾವಾಹಿಗಳು ಅಂತ್ಯ ಕಾಣುತ್ತಿದ್ದು, ಆ ಜಾಗಕ್ಕೆ ಬರಬಹುದೆಂಬ ನಿರೀಕ್ಷೆಯಿದೆ. ಸದ್ಯಕ್ಕೆ ಪ್ರೋಮೊಗಳನ್ನು ವೀಕ್ಷಕರಲ್ಲಿ ಕುತೂಹಲವನ್ನು ಕೆರಳಿಸುತ್ತಿವೆ.
ಈಗಾಗಲೇ ಕಲರ್ಸ್ ಕನ್ನಡದಲ್ಲಿ 'ಭಾಗ್ಯಲಕ್ಷ್ಮೀ', 'ಭಾರ್ಗವಿ ಎಲ್ ಎಲ್ ಬಿ', 'ರಾಮಾಚಾರಿ', 'ಕರಿಮಣಿ', 'ದೃಷ್ಟಿ ಬೊಟ್ಟು', 'ನಿನಗಾಗಿ', 'ಯಜಮಾನ', 'ವಧು', ದಂತಹ ಜನಪ್ರಿಯ ಧಾರಾವಾಹಿಗಳು ಪ್ರಸಾರ ಆಗುತ್ತಿವೆ. ಈ ಎಲ್ಲಾ ಧಾರಾವಾಹಿಗಳಿಗೂ ಪ್ರೇಕ್ಷಕರು ಮೆಚ್ಚುಗೆ ಸೂಚಿಸಿದ್ದಾರೆ. ಈ ಸೀರಿಯಲ್‌ಗಳ ಜೊತೆ 'ನಂದ ಗೋಕುಲ' ಇನ್ನು ಕೆಲವೇ ದಿನಗಳಲ್ಲಿ ಹೊಸದಾಗಿ ಸೇರ್ಪಡೆಯಾಗಲಿದೆ.

ಕಿರುತೆರೆಯಲ್ಲಿ ತುಂಬು ಕುಟುಂಬ ಕಥೆಯನ್ನು ನೋಡುವುದಕ್ಕೆ ಖುಷಿ. ಮನೆ ಮಂದಿಯೆಲ್ಲ ಕೂತು ಸಂಜೆ ವೇಳೆಗೆ ಕೌಟುಂಬಿಕ ಧಾರಾವಾಹಿಗಳನ್ನು ನೋಡುವುದಕ್ಕೆ ವೀಕ್ಷಕರಿಗೂ ಇಷ್ಟ. ಅದಕ್ಕೆ ಮನರಂಜನಾ ವಾಹಿನಿಗಳು ಇಂತಹ ಕಂಟೆಂಟ್ ಕಡೆಗೆ ಹೆಚ್ಚು ಗಮನ ಹರಿಸುತ್ತಿದೆ. ಈಗ 'ನಂದ ಗೋಕುಲ' ಕೂಡ ಎರಡು ಕುಟುಂಬಗಳ ನಡುವಿನ ಜಿದ್ದಾಜಿದ್ದಿಯನ್ನು ವೀಕ್ಷಕರ ಮುಂದೆ ಇಡುತ್ತಿದೆ. ನಂದನ ಹಾಗೂ ಅವರ ಮೂವರು ಮಕ್ಕಳ ಕಥೆಯ ಜೊತೆಗೆ ಎರಡು ಕುಟುಂಬಗಳ ದ್ವೇಷವನ್ನು ಈ ಧಾರಾವಾಹಿಯಲ್ಲಿ ಹೇಳಲಾಗುತ್ತಿದೆ.
ಇನ್ನೂ ಇದೇ ಹೆಸರಿನ ಧಾರಾವಾಹಿ ಈ ಹಿಂದೆ ಕೂಡ ಬಂದಿತ್ತು. ಅದರಲ್ಲಿ ರಾಕಿಂಗ್ ಸ್ಟಾರ್ ಯಶ್, ರಾಧಿಕಾ ಪಂಡಿತ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಆ ಸೀರಿಯಲ್ ಕೂಡ ಸಿಕ್ಕಾಪಟ್ಟೆ ಹಿಟ್ ಆಗಿತ್ತು. ಇಬ್ಬರನ್ನೂ ಸ್ಟಾರ್ ನಟರನ್ನಾಗಿ ಮಾಡಿತ್ತು. ಈಗ ಅದೇ ಹೆಸರನ್ನು ಇಟ್ಟುಕೊಂಡು 'ನಂದ ಗೋಕುಲ' ಕಿರುತೆರೆ ವೀಕ್ಷಕರ ಮುಂದೆ ಬರುತ್ತಿದೆ. ಇದೂ ಪ್ರೇಕ್ಷಕರ ಮನಸ್ಸನ್ನು ಗೆಲ್ಲುತ್ತಾ ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.


Click it and Unblock the Notifications











