Raani Serial: 'ರಾಣಿ' ಧಾರಾವಾಹಿಯಲ್ಲಿ ಹೊಸ ಮೈಲಿಗಲ್ಲು; ಅಕ್ಷರ ಲೋಕಕ್ಕೆ ಹೆಜ್ಜೆ ಇಟ್ಟ ಬಾಲೆ
ಕಲರ್ಸ್ ಕನ್ನಡ ತನ್ನ ಕಿರುತೆರೆ ವೀಕ್ಷಕರಿಗಾಗಿ ಹತ್ತು ಹಲವು ಧಾರಾವಾಹಿಗಳನ್ನು ಪ್ರಸಾರ ಮಾಡುತ್ತಿದೆ. ಅದರಲ್ಲಿ ಅತ್ಯಂತ ಜನಪ್ರಿಯ ಧಾರಾವಾಹಿ ರಾಣಿ' ಕೂಡ ಒಂದು. ಈ ಸೀರಿಯಲ್ ಇದೀಗ ಅತ್ಯಂತ ಆಕರ್ಷಕ ಹಾಗೂ ಸ್ಫೂರ್ತಿದಾಯಕ ಘಟ್ಟಕ್ಕೆ ತಲುಪಿದೆ.
'ರಾಣಿ' ಧಾರಾವಾಹಿಯಲ್ಲಿ ಇಲ್ಲಿವರೆಗೂ ಕೇವಲ ಕೌಟುಂಬಿಕ ಸಮಸ್ಯೆಗಳು ಹಾಗೂ ಸಂಬಂಧಗಳ ನಡುವೆ ಹೋರಾಟ ನಡೆಯುತ್ತಿತ್ತು. ಆದ್ರೀಗ ತನ್ನ ವೈಯಕ್ತಿಕ ಬೆಳವಣಿಗೆಯತ್ತ ಗಮನ ಹರಿಸಿದ್ದಾಳೆ. ತನ್ನ ಬಾಲ್ಯದಲ್ಲಿ ವಿದ್ಯಾಭ್ಯಾಸ ಅರ್ಧಕ್ಕೆ ನಿಂತು ಹೋಗಿತ್ತು. ಹೀಗಾಗಿ ಆ ಕನಸನ್ನು ನನಸು ಮಾಡಿಕೊಳ್ಳಲು ಅವಳು ಒಂದು ನಿರ್ಧಾರವನ್ನ ಕೈಗೊಂಡಿದ್ದಾಳೆ. ಅದು ಈಗ ಇಡೀ ಕಥೆಯ ದಿಕ್ಕನ್ನೇ ಬದಲಿಸಿದೆ.

'ರಾಣಿ'ಗೆ ಜೈಲಲ್ಲಿ ಓದುವುದಕ್ಕೆ ಅವಕಾಶ ಸಿಕ್ಕಿರಲಿಲ್ಲ. ಈ ಕಾರಣಕ್ಕೆ ಓದುವುದನ್ನು ಅಲ್ಲಿಗೆ ನಿಲ್ಲಿಸಿದ್ದಳು. ರಾಣಿ ಇದೀಗ ಮತ್ತೆ ಶಾಲೆಯ ಮೆಟ್ಟಿಲು ಹತ್ತುವುದಕ್ಕೆ ರೆಡಿಯಾಗಿದ್ದಾಳೆ. ತನ್ನ ವಯಸ್ಸಿನ ಮಕ್ಕಳ ಜೊತೆಯೇ ಕೂತು ಶಿಕ್ಷಣ ಪಡೆಯುತ್ತಿದ್ದಾಳೆ. ಸಮಾಜದ ಟೀಕೆಗಳು ಮತ್ತು ಒಳಗಿನ ಸಂಕೋಚವನ್ನು ಮೆಟ್ಟಿ ನಿಂತು, ಶಾಲಾ ಸಮವಸ್ತ್ರ ಧರಿಸಿ 'ರಾಣಿ' ಸಿದ್ಧವಾಗಿ ನಿಂತಿದ್ದಾಳೆ. ರಾಣಿಯ ಈ ಕಿರುತೆರೆ ವೀಕ್ಷಕರಲ್ಲಿ ಅಚ್ಚರಿ ಮೂಡಿಸಿದೆ. ರಾಣಿಯ ನಿರ್ಧಾರ ಅಭಿಮಾನ ಮೂಡಿಸಿದೆ.
ರಾಣಿಯ ಈ ಹಠಕ್ಕೆ ಮನೆಯಲ್ಲಿ ಎಲ್ಲರ ಸಹಮತವಿಲ್ಲ. ಸಮಾಜ ಏನೆನ್ನುತ್ತದೋ ಎಂಬ ಭಯ ಒಂದು ಕಡೆಯಾದರೆ, ಇನ್ನೊಂದು ಕಡೆ ಅಪಹಾಸ್ಯ ಮಾಡುವ ಸರಳಾ ರೀತಿಯ ಕೆಲವು ಮನಸ್ಸುಗಳು ರಾಣಿಯ ಹಾದಿಗೆ ಅಡ್ಡ ಬಂದಿವೆ. ಆದರೆ, ಅದೆಲ್ಲವನ್ನು ಮೆಟ್ಟಿ ನಿಂತು "ಕಲಿಯಲು ಯಾರಾದರೇನು? ಸಾಕ್ಷರತೆ ಪ್ರತಿಯೊಬ್ಬರ ಹಕ್ಕು" ಎಂಬ ಸತ್ಯವನ್ನು ರಾಣಿ ತನ್ನ ಕೃತಿಯ ಮೂಲಕ ತೋರಿಸುವುದಕ್ಕೆ ಹೊರಟಿದ್ದಾಳೆ. ಶಾಲೆಯ ಮೊದಲ ದಿನದ ಸಡಗರ ಮತ್ತು ಅಲ್ಲಿ ಎದುರಾಗುವ ಸವಾಲುಗಳು ಈ ವಾರ ಪ್ರಸಾರ ಆಗುವ ಸಂಚಿಕೆಗಳ ಹೈಲೈಟ್.
ರಾಣಿ ಶಾಲೆಯ ಆವರಣ ಪ್ರವೇಶ ಮಾಡಿದಾಗ ಅಲ್ಲಿನ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಹೇಗೆ ನೋಡುತ್ತಾರೆ. ಆಕೆಯನ್ನು ಹೇಗೆ ಬರಮಾಡಿಕೊಳ್ಳುತ್ತಾರೆ ಎಂಬುದು ಧಾರಾವಾಹಿಯಲ್ಲೀಗ ಕುತೂಹಲ. ತನ್ನ ವಯಸ್ಸಿನ ಮಕ್ಕಳ ಜೊತೆ ಬೆಂಚಿನ ಮೇಲೆ ಕುಳಿತು ಪಾಠ ಕೇಳುವಾಗ ರಾಣಿ ಅನುಭವಿಸುವ ಭಾವನೆಗಳು ನೋಡುಗರ ಕಣ್ಣಾಲಿಗಳನ್ನು ತೇವಗೊಳಿಸುವುದರಲ್ಲಿ ಎರಡು ಮಾತಿಲ್ಲ. ಈ ಪಯಣ ಕೇವಲ ಅಕ್ಷರ ಕಲಿಯುವುದಲ್ಲ. ಬದಲಾಗಿ ಅವಳ ಆತ್ಮವಿಶ್ವಾಸವನ್ನು ಮರಳಿ ಪಡೆಯುವುದಾಗಿದೆ.
ಧಾರಾವಾಹಿಯ ಈ ಹೊಸ ತಿರುವು ವೀಕ್ಷಕರಿಗೆ ಕೇವಲ ಮನರಂಜನೆ ನೀಡುವುದಲ್ಲದೆ, ಶಿಕ್ಷಣದ ಮಹತ್ವದ ಬಗ್ಗೆ ಸಮಾಜಕ್ಕೆ ದೊಡ್ಡ ಸಂದೇಶ ನೀಡುತ್ತಿದೆ. ಮನೆಯ ಜವಾಬ್ದಾರಿಗಳ ನಡುವೆ ತಮ್ಮ ಆಸೆಗಳನ್ನು ಹತ್ತಿಕ್ಕಿಕೊಂಡಿರುವ ಎಷ್ಟೋ ಹೆಣ್ಣು ಮಕ್ಕಳಿಗೆ ರಾಣಿಯ ಈ ಪಾತ್ರ ದೊಡ್ಡ ಪ್ರೇರಣೆಯಾಗಿದೆ. ಇದೇ ಥೀಮ್ ಈಗ ಧಾರಾವಾಹಿಯಲ್ಲಿ ಅಚ್ಚರಿಯನ್ನು ಮೂಡಿಸುತ್ತಿದೆ.
ರಾಣಿಯ ಶಿಕ್ಷಣದ ಪಯಣ ಯಶಸ್ವಿಯಾಗಿ ಮುಂದುವರೆಯುತ್ತದೆಯೇ? ರಾಣಿಯ ಶಿಕ್ಷಣಕ್ಕೆ ಅಡ್ಡಿಪಡಿಸುವವರಿಗೆ ತಕ್ಕ ಶಾಸ್ತಿಯಾಗುತ್ತಾ? ಶಾಲೆಯಲ್ಲಿ ಎದುರಾಗುವ ಅಪಮಾನ, ಹೀಯಾಳಿಸುವ ಸನ್ನಿವೇಶಗಳನ್ನು ರಾಣಿ ಹೇಗೆ ನಿಭಾಯಿಸುತ್ತಾಳೆ? ಎಂಬುದನ್ನು ಈ ವಾರ ನೋಡಬಹುದಾಗಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ 'ರಾಣಿ' ಧಾರಾವಾಹಿಯು ಪ್ರತಿ ಸಂಜೆ 6 ಗಂಟೆಗೆ ಪ್ರಸಾರವಾಗುತ್ತಿದೆ.


Click it and Unblock the Notifications
