ಕಿರುತೆರೆ ನಟಿ ಆತ್ಮಹತ್ಯೆಗೆ ಕಾರಣವೇನು?: ಮಗಳ ಶವ ನೋಡಿದ ತಂದೆಯ ಭಾವುಕ ಮಾತು
'ಕ್ರೈಮ್ ಪ್ಯಾಟ್ರೋಲ್' ಧಾರಾವಾಹಿ, 'ಪ್ಯಾಡ್ ಮ್ಯಾನ್' ಸಿನಿಮಾ ಸೇರಿದಂತೆ ಕಿರುತೆರೆ ಮತ್ತು ಬಾಲಿವುಡ್ ಚಿತ್ರಗಳಲ್ಲಿ ನಟಿಸಿದ್ದ ಪ್ರೇಕ್ಷಾ ಮೆಹ್ತಾ ಆತ್ಮಹತ್ಯೆ ಪ್ರಕರಣದ ಕುರಿತು ಅನೇಕರು ಆಘಾತ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಅವರ ಸಾವಿನ ಸುತ್ತ ಅನೇಕ ಊಹಾಪೋಹಗಳು ಹುಟ್ಟಿಕೊಂಡಿವೆ.
ತಮ್ಮ ವೃತ್ತಿ ಜೀವನಕ್ಕಾಗಿ ಮುಂಬೈನಲ್ಲಿ ನೆಲೆಸಿದ್ದ ಪ್ರೇಕ್ಷಾ, ಲಾಕ್ ಡೌನ್ ಆರಂಭಕ್ಕೂ ಮುನ್ನ ಇಂಧೋರ್‌ನ ಮನೆಗೆ ಮರಳಿದ್ದ ಪ್ರೇಕ್ಷಾ, ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದರು. ಅಲ್ಲಿ, ಸಿನಿಮಾ ಹಾಡುಗಳ ಭಾವುಕ ಸಾಲುಗಳನ್ನು ಹಂಚಿಕೊಳ್ಳುತ್ತಿದ್ದರು. ಆದರೆ ಮಂಗಳವಾರ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಮಗಳ ದೇಹ ಸೀಲಿಂಗ್ ಫ್ಯಾನ್‌ಗೆ ನೇತಾಡುತ್ತಿದ್ದ ಘೋರ ದೃಶ್ಯವನ್ನು ಮೊದಲು ನೋಡಿದ್ದೇ ಅವರ ತಂದೆ. ಮನೆಯಲ್ಲಿ ಮಗಳು ಹೇಗಿದ್ದಳು ಎಂಬುದನ್ನು ಆಕೆಯ ತಂದೆ ನೀಡಿರುವ ಹೇಳಿಕೆ ಇಲ್ಲಿದೆ ಮುಂದೆ ಓದಿ...

ಕೆಲಸವಿಲ್ಲದೆ ಉದ್ವಿಗ್ನಳಾಗಿದ್ದಳು
'ಲಾಕ್ ಡೌನ್ ಕಾರಣದಿಂದ ಎಲ್ಲ ಶೂಟಿಂಗ್‌ಗಳೂ ನಿಂತು ಹೋಗಿದ್ದರಿಂದ ಪ್ರೇಕ್ಷಾ ತಳಮಳಗೊಂಡಿದ್ದಳು. ದಿನವೂ ಹಾಗೆಯೇ ಇರುತ್ತಿದ್ದಳು. ಮುಂಬೈನಲ್ಲಿ ಲಾಕ್ ಡೌನ್ ಮತ್ತಷ್ಟು ವಿಸ್ತರಣೆಯಾಗಿದ್ದು ಆಕೆಗೆ ಬೇಸರ ಮೂಡಿಸಿತ್ತು. ಆಕೆ ಎಂದಿಗೂ ಕೆಲಸವಿಲ್ಲದೆ ಸುಮ್ಮನೆ ಕೂತವಳಲ್ಲ' ಎಂದಿದ್ದಾರೆ.

ಕನಸಲ್ಲೂ ಎಣಿಸಿರಲಿಲ್ಲ
'ಪತ್ರಿಕೆಗಳಲ್ಲಿ ಲಾಕ್ ಡೌನ್ ಕುರಿತು ಆಕೆ ಓದುವಾಗಲೆಲ್ಲಾ, ಅದು ಪ್ರತಿಯೊಬ್ಬರಿಗೂ ಅನ್ವಯ ಆಗುತ್ತದೆ. ನೀನು ಯಾಕೆ ಚಿಂತೆ ಮಾಡುತ್ತೀಯಾ ಎಂದು ನಾನು ಸಮಾಧಾನ ಹೇಳುತ್ತಿದ್ದೆ. ಆದರೆ ಆಕೆ ಇಂತಹ ದುಡಕಿನ ಕ್ರಮ ತೆಗೆದುಕೊಳ್ಳುತ್ತಾಳೆ ಎಂದು ನಾವು ಕನಸಿನಲ್ಲಿಯೂ ಯೋಚಿಸಿರಲಿಲ್ಲ' ಎಂದು ತಂದೆ ಕಣ್ಣೀರಿಟ್ಟರು.

ಮದುವೆಯಾಗಲು ಒತ್ತಡ?
ತಮ್ಮ ಸ್ನೇಹಿತರೊಬ್ಬರ ಜತೆಗೆ ಕೊನೆಯ ಬಾರಿ ಇನ್‌ಸ್ಟಾಗ್ರಾಂನಲ್ಲಿ ಲೈವ್ ಬಂದಿದ್ದ ಪ್ರೇಕ್ಷಾ, ಮದುವೆಯಾಗುವಂತೆ ಪೋಷಕರು ಪದೇ ಪದೇ ತಮ್ಮ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂಬುದನ್ನು ಪ್ರಸ್ತಾಪಿಸಿದ್ದರು ಎನ್ನಲಾಗಿದೆ. ಆದರೆ ಇದನ್ನು ಅವರ ತಂದೆ ನಿರಾಕರಿಸಿದ್ದಾರೆ.

ನಾವು ಒತ್ತಡ ಹಾಕಿರಲಿಲ್ಲ
ಸಿನಿಮಾ ಮತ್ತು ಕಿರುತೆರೆಯಲ್ಲಿ ಹೆಸರು ಗಳಿಸಿದ ಬಳಿಕವೇ 2-3 ವರ್ಷಗಳ ನಂತರ ಮದುವೆಯಾಗುವುದಾಗಿ ಪ್ರೇಕ್ಷಾ ನಮಗೆ ಮೊದಲೇ ತಿಳಿಸಿದ್ದಳು. ಆದರೆ ನಾವು ಆಕೆಗೆ ಎಂದೂ ಮದುವೆ ವಿಚಾರದಲ್ಲಿ ಒತ್ತಡ ಹಾಕಿರಲಿಲ್ಲ. ಆದರೆ ಮದುವೆಯಾಗುವಂತೆ ಆಗಾಗ ಸುಮ್ಮನೆ ಹೇಳುತ್ತಿದ್ದೆವಷ್ಟೇ ಎಂದು ಸ್ಪಷ್ಟೀಕರಣ ನೀಡಿದ್ದಾರೆ.

ಪ್ರೇಕ್ಷಾ ಆತ್ಮಹತ್ಯೆ ಪತ್ರ
ಪ್ರೇಕ್ಷಾ ಅವರ ಆತ್ಮಹತ್ಯೆ ಪತ್ರದ ಕುರಿತು ಮಾತನಾಡಿದ ಅವರು, ಆಕೆ ಇದನ್ನೆಲ್ಲಾ ಏಕೆ ಬರೆದಿದ್ದಳೋ ತಿಳಿಯುತ್ತಿಲ್ಲ ಎಂದಿದ್ದಾರೆ. 'ನನ್ನ ಛಿದ್ರವಾದ ಕನಸುಗಳು ನನ್ನ ಆತ್ಮವಿಶ್ವಾಸವನ್ನು ಒಡೆದುಹಾಕಿವೆ. ಸತ್ತ ಕನಸುಗಳೊಂದಿಗೆ ನಾನು ಬದುಕಲಾರೆ. ಈ ನಕಾರಾತ್ಮಕತೆಯಲ್ಲಿ ಬದುಕುವುದು ಬಹಳ ಕಷ್ಟ. ಕಳೆದ ಒಂದು ವರ್ಷದಿಂದ ನಾನು ಪ್ರಯತ್ನಿಸುತ್ತಿದ್ದೇನೆ. ಈಗ ಸಾಕಾಗಿ ಹೋಗಿದೆ' ಎಂದು ಪತ್ರದಲ್ಲಿ ಬರೆದಿದ್ದರು.


Click it and Unblock the Notifications











