DKD:ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವೇದಿಕೆಯಲ್ಲಿ ಹೆಜ್ಜೆ ಹಾಕಲಿರೋ ಸೆಲೆಬ್ರಿಟಿಗಳ ಲಿಸ್ಟ್; ಆ 13 ಮಂದಿ ಯಾರು?
ಜೀ ಕನ್ನಡದ ಜನಪ್ರಿಯ ರಿಯಾಲಿಟಿ ಶೋ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಮತ್ತೊಂದು ಸೀಸನ್ ಇಂದಿನಿಂದ (ಜುಲೈ 20) ಆರಂಭ ಆಗುತ್ತಿದೆ. ಕಿರಿತೆರೆಯ ಈ ವೇದಿಕೆ ಮೇಲೆ ಅದೆಷ್ಟೋ ಮಂದಿ ಸ್ಪರ್ಧಿಗಳು ಹೆಜ್ಜೆ ಹಾಕಿ ಫೇಮಸ್ ಆಗಿದ್ದಾರೆ. ಪ್ರತಿ ಸೀಸನ್‌ನಲ್ಲೂ ಹೊಸ ಹೊಸ ಕಲ್ಪನೆಗಳೊಂದಿಗೆ ಬಂದಿರೋ ಈ ಶೋ ಈಗ ಮತ್ತೊಂದು ವಿಭಿನ್ನ ಕಲ್ಪನೆಯೊಂದಿಗೆ ಬಂದಿದೆ.
ಈ ಬಾರಿ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' (DKD) ತನ್ನ ವೀಕ್ಷಕರಿಗೆ ಮತ್ತಷ್ಟು ಹೆಚ್ಚು ಮನರಂಜನೆಯನ್ನು ನೀಡುವುದಕ್ಕೆ ಮುಂದಾಗಿದೆ. ಹೊಸ ಕಾನ್ಸೆಪ್ಟ್ ಅನ್ನು ಇಟ್ಟು ಈ ಶೋ ಅನ್ನು ಆರಂಭ ಮಾಡಲಾಗುತ್ತಿದೆ. ಈ ಸೀಸನ್‌ನ ವಿಶೇಷತೆ ಏನು ಅಂದರೆ, ಈ ಡ್ಯಾನ್ಸಿಂಗ್ ಶೋ ವೇದಿಕೆ ಮೇಲೆ ಸೆಲೆಬ್ರಿಟಿಗಳು ಕೂಡ ಭಾಗವಹಿಸುತ್ತಿದ್ದಾರೆ. ಅದು ಇನ್ನಷ್ಟು ಮನರಂಜನೆಯನ್ನು ವೀಕ್ಷಕರಿಗೆ ನೀಡಲಿದೆ.

ವಿಶೇಷ ಅಂದರೆ, 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ರಿಯಾಲಿಟಿ ಶೋನಲ್ಲಿ ಭಾಗವಹಿಸಲಿರುವ ಸೆಲೆಬ್ರಿಟಿಗಳಿಗೆ ಡ್ಯಾನ್ಸ್ ಮಾಡುವುದಕ್ಕೆ ಬರುವುದಿಲ್ಲ. ಅವರು ವೇದಿಕೆ ಮೇಲೆ ಹೇಗೆ ಹೆಜ್ಜೆ ಹಾಕುತ್ತಾರೆ? ಅನ್ನೋದನ್ನು ವೀಕೆಂಡ್‌ಗಳಲ್ಲಿ ನೋಡಬಹುದು. ಹಾಗಂತ ಹೊಸ ಪ್ರತಿಭೆಗಳಿಗೆ ಅವಕಾಶ ಇಲ್ಲ ಅಂತಲ್ಲ. ಸೆಲೆಬ್ರಿಟಿಗಳ ಜೊತೆಗೆ ಅವರೂ ಕೂಡ ಹೆಜ್ಜೆ ಹೆಜ್ಜೆ ಹಾಕುತ್ತಾರೆ. ಅದೇ ಈ ಬಾರಿಯ ಡಿಕೆಡಿಯ ವಿಶೇಷತೆ.
ಜೀ ಕನ್ನಡ ಈಗಾಗಲೇ ರಾಜ್ಯದ ಸುಮಾರು 32 ಜಿಲ್ಲೆಗಳಲ್ಲಿ ಆಡಿಷನ್ ಮಾಡಿತ್ತು. ಅಲ್ಲಿರುವ ಅತ್ಯುತ್ತಮ ಪ್ರತಿಭೆಗಳನ್ನು ಆಯ್ಕೆ ಮಾಡಲಾಗಿದೆ. ಇಂತಹ ಅದ್ಭುತ ಪ್ರತಿಭೆಗಳ ಜೊತೆ ಡ್ಯಾನ್ಸ್ ಮಾಡಲು ಬಾರದ ಸೆಲೆಬ್ರಿಟಿಗಳು ಹೇಗೆ ಹೆಜ್ಜೆ ಹಾಕುತ್ತಾರೆ? ಅನ್ನೋದೇ ಈ ಬಾರಿಯ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ರಿಯಾಲಿಟಿ ಶೋನ ವಿಶೇಷ. ಇದು ಇಂದಿನಿಂದ (ಜುಲೈ 20) ಆರಂಭ ಆಗುತ್ತಿದೆ.

ಹಾಗಿದ್ದರೆ, ಡಿಕೆಡಿ ರಿಯಾಲಿಟಿ ಶೋನಲ್ಲಿ ಭಾಗವಹಿಸಲಿರುವ ಆ ಸೆಲೆಬ್ರಿಟಿಗಳು ಯಾರು? ಅನ್ನೋ ಸಂಪೂರ್ಣ ಪಟ್ಟಿ ಇಲ್ಲಿದೆ. ಮೊದಲನೆಯದಾಗಿ ಆರ್ಯವರ್ಧನ್ ಗುರೂಜಿ, ನಟ-ನಿರ್ದೇಶಕ ಪ್ರಥಮ್, ನಟ ಕಾವ್ಯ ಶೈವ, ಸೀತಾ ರಾಮ ಧಾರಾವಾಹಿಯ ಪ್ರಿಯಾ ಖ್ಯಾತಿಯ ಮೇಘನಾ, ಅಮೃತಧಾರೆ ಧಾರಾವಾಹಿಯಲ್ಲಿ ಜೀವನ್ ಪಾತ್ರದಲ್ಲಿ ನಟಿಸುತ್ತಿರುವ ಶಶಿ ಹೆಗ್ಡೆ, ಸೀತಾ ರಾಮ ಸೀರಿಯಲ್‌ನ ಸಿಹಿ ಪಾತ್ರಧಾರಿ ರಿತು ಸಿಂಗ್ ವೇದಿಕೆ ಹೆಜ್ಜೆ ಹಾಕಲಿದ್ದಾರೆ.
ಇಷ್ಟೇ ಅಲ್ಲ ಪಟ್ಟಿ ದೊಡ್ಡದಿದೆ. 'ಲಕ್ಷ್ಮಿ ನಿವಾಸ' ಸೀರಿಯಲ್‌ನ ವಿಶ್ವ ಖ್ಯಾತಿಯ ಭವಿಶ್, ಮಿಮಿಕ್ರಿ ಗೋಪಿ, ಯಶಸ್ವಿನಿ, ಗಾಯಕಿ ರೆಮೋ, ಪುಟ್ಟಕ್ಕನ ಮಕ್ಕಳು ಕಂಠಿ ಖ್ಯಾತಿಯ ಧನುಷ್, ಮಹಾನಟಿಯ ಗಗನಾ ಹಾಗೂ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಸಹನಾ ಪಾತ್ರದಲ್ಲಿ ನಟಿಸುತ್ತಿರುವ ಅಕ್ಷರ ಈ ಬಾರಿಉ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋನ ಸೆಲೆಬ್ರಿಟಿ ಸ್ಪರ್ಧಿಗಳು. ಒಟ್ಟು 13 ಸ್ಪರ್ಧಿಗಳು ಈ ಬಾರಿಯ ರಿಯಾಲಿಟಿ ಶೋನಲ್ಲಿ ಭಾಗವಹಿಸಲಿದ್ದಾರೆ.
ಇನ್ನು ಈ ಬಾರಿಯ ಡಿಕೆಡಿಯ ಪ್ರಮುಖ ಆಕರ್ಷಣೆ ಅಂದರೆ, ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್ ಮಹಾಗುರು ಆಗಿದ್ದಾರೆ. ಹಾಗೇ ಜಡ್ಜ್‌ಗಳಾಗಿ ವಿಜಯ ರಾಘವೇಂದ್ರ, ನಟಿ ರಕ್ಷಿತಾ ಪ್ರೇಮ್, ಹಿರಿಯ ನೃತ್ಯ ನಿರ್ದೇಶಕ ಚಿನ್ನಿ ಪ್ರಕಾಶ್ ಇರಲಿದ್ದಾರೆ. ಹಾಗೇ ಈ ಬಾರಿ ಕೂಡ ಈ ಶೋವನ್ನು ಅನುಶ್ರೀ ನಿರೂಪಣೆ ಮಾಡಲಿದ್ದಾರೆ.


Click it and Unblock the Notifications











