ಡಾರ್ಲಿಂಗ್ ಕೃಷ್ಣ ನಟಿಸಿದ ಮೊದಲ ಸೀರಿಯಲ್ ನಟಿ 13 ವರ್ಷಗಳ ಬಳಿಕ ಕನ್ನಡ ಕಿರುತೆರೆ ಎಂಟ್ರಿ; ಯಾರಿವರು?
ಡಾರ್ಲಿಂಗ್ ಕೃಷ್ಣ ಇಂದು ಕನ್ನಡ ಚಿತ್ರರಂಗದ ಸ್ಟಾರ್ ನಟರಲ್ಲಿ ಇಬ್ಬರು. 'ಲವ್ ಮಾಕ್ಟೇಲ್' ಬಳಿಕವಂತೂ ಡಾರ್ಲಿಂಗ್ ಕೃಷ್ಣ ನಸೀಬು ಬದಲಾಗಿದೆ. ಒಂದರ ಹಿಂದೊಂದು ಸಿನಿಮಾಗಳಲ್ಲಿ ಕೃಷ್ಣ ನಟಿಸುತ್ತಿದ್ದಾರೆ. ಅದೇ 13 ವರ್ಷಗಳ ಹಿಂದೆ ಕೃಷ್ಣ ಸ್ಟ್ರಗಲಿಂಗ್ ಆಕ್ಟರ್. ಸಿನಿಮಾಗಳಲ್ಲಿ ಚಿಕ್ಕ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಇದೇ ವೇಳೆ ಒಂದು ಧಾರಾವಾಹಿಯಲ್ಲಿಯೂ ನಟಿಸಿದ್ದರು. ಅದುವೇ 'ಕೃಷ್ಣ ರುಕ್ಮಿಣಿ'.
2011ರಲ್ಲಿ ಸ್ಟಾರ್ ಸುವರ್ಣದಲ್ಲಿ ಪ್ರಸಾರ ಆಗಿದ್ದ 'ಕೃಷ್ಣ ರುಕ್ಮಿಣಿ' ಧಾರಾವಾಹಿಯಲ್ಲಿ ಡಾರ್ಲಿಂಗ್ ಕೃಷ್ಣ ಹೀರೊ ಆಗಿ ಕಾಣಿಸಿಕೊಂಡಿದ್ದರು. ಅದೇ ಧಾರಾವಾಹಿಯಲ್ಲಿ ರುಕ್ಮಿಣಿ ಪಾತ್ರದಲ್ಲಿ ನಟಿಸಿದ್ದರು ಅಂಜನಾ ಶ್ರೀನಿವಾಸ್. ಕೆಲವು ವರ್ಷಗಳಿಂದ ಈ ನಟಿ ಕನ್ನಡ ಕಿರುತೆರೆಯಲ್ಲಿ ಕಾಣಿಸಿಕೊಂಡಿರಲಿಲ್ಲ.

ಈಗ 'ಕೃಷ್ಣ ರುಕ್ಮಿಣಿ' ಧಾರಾವಾಹಿ ಪ್ರಸಾರ ಆಗಿದ್ದ ಸ್ಟಾರ್ ಸುವರ್ಣದ ಹೊಚ್ಚ ಹೊಸ ಧಾರಾವಾಹಿ ಮೂಲಕ ಅಂಜನಾ ಶ್ರೀನಿವಾಸ್ ಕಮ್‌ಬ್ಯಾಕ್ ಮಾಡಿದ್ದಾರೆ. ಅಷ್ಟಕ್ಕೂ ಇಷ್ಟು ದಿನ ಅಂಜನಾ ಶ್ರೀನಿವಾಸ್ ಏನು ಮಾಡುತ್ತಿದ್ದರು? ಮಧ್ಯೆದಲ್ಲಿ ಹೆಸರು ಬದಲಿಸಿಕೊಂಡಿದ್ದೇಕೆ? ಮತ್ತೆ ಕಮ್‌ಬ್ಯಾಕ್ ಮಾಡಿರುವ ಧಾರಾವಾಹಿ ಯಾವುದು? ಅನ್ನೋದನ್ನು ತಿಳಿಯಲು ಮುಂದೆ ಓದಿ..
'ಕೃಷ್ಣ ರುಕ್ಮಿಣಿ' ಸೀರಿಯಲ್ ಅಂಜನಾ ಶ್ರೀನಿವಾಸ್‌ಗೆ ಒಳ್ಳೆಯ ಹೆಸರು ಸಿಕ್ಕಿತ್ತು. ಧಾರಾವಾಹಿಗಳ ಕ್ರೇಜ್ ಆಗತಾನೆ ಹೆಚ್ಚಾಗುತ್ತಿದ್ದ ಕಾಲದಲ್ಲಿ ಅಂಜನಾ ಶ್ರೀನಿವಾಸ್‌ಗೆ 'ಕೃಷ್ಣ ರುಕ್ಮಿಣಿ' ಸೀರಿಯಲ್ ಸಿಕ್ಕಿತ್ತು. ಇಲ್ಲಿಂದ ಕನ್ನಡ ಕಿರುತೆರೆಯ ಜನಪ್ರಿಯ ಫೇಸ್ ಆಗಿತ್ತು. ಆದರೆ, ಕಳೆದ ಕೆಲವು ವರ್ಷಗಳಿಂದ ಕನ್ನಡ ಕಿರುತೆರೆಯಿಂದ ದೂರವೇ ಉಳಿದಿದ್ದರು. ಕನ್ನಡ ಧಾರಾವಾಹಿಯಲ್ಲಿ ಮಿಂಚುತ್ತಿದ್ದಂತೆ ಪರಭಾಷೆಯ ಕಿರುತೆರೆಯಿಂದ ಒಳ್ಳೊಳ್ಳೆ ಆಫರ್ ಸಿಕ್ಕಿದ್ದವು.
ಅಂಜನಾ ಶ್ರೀನಿವಾಸ್ ಪರಭಾಷೆಯ ಕಿರುತೆರೆಗೆ ಎಂಟ್ರಿ ಕೊಟ್ಟಾಗ ತಮ್ಮ ಹೆಸರನ್ನು ನಕ್ಷತ್ರಾವೆಂದು ಬದಲಾಯಿಸಿಕೊಂಡರು. ಕನ್ನಡ ಕಿರುತೆರೆಗೆ ಅಂಜನಾ ಎಂದು ಪರಿಚಿತರಾಗಿದ್ದವರು. ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ ನಕ್ಷತ್ರಾ ಶ್ರೀನಿವಾಸ್ ಆಗಿ ಪರಿಚಿತರಾಗಿದ್ದರು. ತೆಲುಗು, ತಮಿಳಿನಲ್ಲೂ ಇವರಿಗೆ ಜನಪ್ರಿಯತೆ ಸಿಕ್ಕಿತ್ತು. ಈ ಎರಡೂ ಭಾಷೆಗಳಿಂದ ಸುಮಾರು 7 ಧಾರಾವಾಹಿಗಳಲ್ಲಿ ಅಂಜನಾ ಶ್ರೀನಿವಾಸ್ ನಟಿಸಿದ್ದಾರೆ.

17 ವರ್ಷವಿರುವಾಗಲೇ ಅಂಜನಾ ಶ್ರೀನಿವಾಸ್ 'ಕೃಷ್ಣ ರುಕ್ಮಿಣಿ' ಧಾರಾವಾಹಿಯಲ್ಲಿ ನಟಿಸಿದ್ದರು. ಅಲ್ಲಿಂದ ತೆಲುಗು, ತಮಿಳು ಧಾರಾವಾಹಿಯಲ್ಲಿ ಬ್ಯುಸಿಯಾಗಿದ್ದ ನಟಿ ಮತ್ತೆ ಕನ್ನಡದ ಕಡೆ ಮುಖ ಮಾಡಿರಲಿಲ್ಲ. ಈಗ ಸುಮಾರು 13 ವರ್ಷಗಳ ಬಳಿಕ ಅಂಜನಾ ಶ್ರೀನಿವಾಸ್ ಮತ್ತೆ ಸ್ಟಾರ್ ಸುವರ್ಣದ 'ಜಾನಕಿ ಸಂಸಾರ' ಧಾರಾವಾಹಿ ಮೂಲಕ ಕಮ್‌ಬ್ಯಾಕ್ ಮಾಡಿದ್ದಾರೆ.
ಸ್ಟಾರ್ ಸುವರ್ಣದ ಹೊಚ್ಚ ಹೊಸ ಧಾರಾವಾಹಿ 'ಜಾನಕಿ ಸಂಸಾರ' ಇದರಲ್ಲಿ ಪ್ರಮುಖ ಪಾತ್ರದಲ್ಲಿ ಅಂಜನಾ ನಟಿಸುತ್ತಿದ್ದಾರೆ. ಜಾನಕಿಯಾಗಿ ಕಾಣಿಸಿಕೊಳ್ಳುತ್ತಿರುವ ಅಂಜನಾಗೆ ಪವರ್‌ಫುಲ್ ಪಾತ್ರವೇ ಸಿಕ್ಕಿದೆ. ಈ ಸೀರಿಯಲ್‌ನಲ್ಲಿ ಈಗಾಗಲೇ ಜಾನಕಿಗೆ ಮದುವೆ ಆಗಿದೆ. ಮಗು ಕೂಡಿದೆ. ತುಂಬು ಕುಟುಂಬದ ಬಾಂಧವ್ಯದ ಕಥೆ ಹೇಳುವ ಈ ಧಾರಾವಾಹಿಯಲ್ಲಿ ಜಾನಕಿಯಾಗಿ ಅಂಜನಾ ಮತ್ತೆ ಕಿರುತೆರೆಗೆ ಎಂಟ್ರಿ ಕೊಡುತ್ತಿದ್ದಾರೆ.


Click it and Unblock the Notifications











