'ಬಿಗ್ ಬಾಸ್' ಮನೆಯಲ್ಲಿ ಅಗ್ನಿ ಅನಾಹುತ ಸಂಭವಿಸಿದ್ದು ಹೇಗೆ.? ಕಾರಣ ಏನು.?
ಕನ್ನಡ ಕಿರುತೆರೆಯ ಇತಿಹಾಸದಲ್ಲೇ ದೊಡ್ಡ ದುರಂತ ಇಂದು ಸಂಭವಿಸಿದೆ. ಅದೃಷ್ಟವಶಾತ್ ಪ್ರಾಣ ಹಾನಿ ಆಗಿಲ್ಲ. ಆದ್ರೆ, ಕೋಟ್ಯಾಂತರ ರೂಪಾಯಿ ಮೌಲ್ಯದ 'ಬಿಗ್ ಬಾಸ್' ಮನೆ ಹಾಗೂ ಅದರ ಪಕ್ಕದಲ್ಲಿ ಇದ್ದ ಮೇಣದ ಮ್ಯೂಸಿಯಂ ಇವತ್ತು ಬೆಂಕಿಗೆ ಆಹುತಿ ಆಗಿದೆ.
'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮವನ್ನು ನೀವು ತಪ್ಪದೇ ನೋಡಿದ್ದರೆ, ಅಜಾಗರೂಕತೆಯಿಂದ ಸ್ಪರ್ಧಿಗಳು ಗ್ಯಾಸ್ ಆಫ್ ಮಾಡದೇ ಇದ್ದಾಗ ಅನೇಕ ಬಾರಿ ಅಡುಗೆ ಅನಿಲ ಪೂರೈಕೆಯನ್ನ 'ಬಿಗ್ ಬಾಸ್' ಸ್ಥಗಿತಗೊಳಿಸಿದ್ದರು. ಅಡುಗೆ ಅನಿಲದ ಬಗ್ಗೆ ಎಚ್ಚರಿಕೆ ವಹಿಸಲು ಸ್ಪರ್ಧಿಗಳಿಗೆ 'ಬಿಗ್ ಬಾಸ್' ಪದೇ ಪದೇ ಸೂಚಿಸಿದ್ದರು. ಅಂದು ಗ್ಯಾಸ್ ಬಗ್ಗೆ ಕೇರ್ ಮಾಡದ ಸ್ಪರ್ಧಿಗಳೇ ಇಂದು ನಡೆದಿರುವ ಅಗ್ನಿ ಆಕಸ್ಮಿಕದತ್ತ ಒಮ್ಮೆ ಕಣ್ಣಾಡಿಸಿ...
ಇಂದು 'ಬಿಗ್ ಬಾಸ್' ಮನೆ ಸುಟ್ಟು ಕರಕಲಾಗಿರುವುದಕ್ಕೆ ಅಡುಗೆ ಅನಿಲ/ಗ್ಯಾಸ್ ಕಾರಣ ಅಲ್ಲ. ಬದಲಾಗಿ ನಡುರಾತ್ರಿ ಉಂಟಾದ ಶಾರ್ಟ್ ಸರ್ಕ್ಯೂಟ್ ಕಾರಣ ಎನ್ನಲಾಗಿದೆ.
ಅಷ್ಟಕ್ಕೂ, 'ಬಿಗ್ ಬಾಸ್' ಮನೆಯಲ್ಲಿ ಅಗ್ನಿ ದುರಂತ ಸಂಭವಿಸಿದ್ದು ಹೇಗೆ.? ಅದಕ್ಕೆ ಕಾರಣವಾದ ಅಂಶಗಳು ಯಾವುವು.? ಸಂಪೂರ್ಣ ವರದಿ ಇಲ್ಲಿದೆ, ಓದಿರಿ...

'ಬಿಗ್ ಬಾಸ್' ಎಂಬ 'ಮರ'ದ ಮನೆ
ಇಡೀ 'ಬಿಗ್ ಬಾಸ್' ಮನೆ ನಿರ್ಮಾಣ ಆಗಿರುವುದು ಇಟ್ಟಿಗೆ, ಸಿಮೆಂಟ್ ನಿಂದಲ್ಲ. ಬದಲಾಗಿ ಮರದಿಂದ.!

ಅದು ಮನೆ ಅನ್ನೋದಕ್ಕಿಂತ ಹೆಚ್ಚಾಗಿ 'ಸೆಟ್'!
'ಬಿಗ್ ಬಾಸ್ ಮನೆ' ಅಂತ ಕರೆಯುವುದಕ್ಕಿಂತ ಹೆಚ್ಚಾಗಿ ಅದೊಂದು ಸೆಟ್. 'ಬಿಗ್ ಬಾಸ್' ಒಂದು ರಿಯಾಲಿಟಿ ಶೋ. ಪ್ರತಿ ಸೀಸನ್ ಕೂಡ ಹೊಸದಾಗಿ ಕಾಣಬೇಕಾಗಿರುವುದಿಂದ, 'ಬಿಗ್ ಬಾಸ್' ಮನೆಯನ್ನ ಪ್ರತಿ ಬಾರಿ ನವೀಕರಣ ಮಾಡಲಾಗುತ್ತೆ. ಹೀಗಾಗಿ, ಅದನ್ನ ಮಾಮೂಲಿ ಮನೆಗಳಂತೆ ನಿರ್ಮಾಣ ಮಾಡುವ ಬದಲು ಮರದಿಂದ ನಿರ್ಮಿಸುತ್ತಾರೆ.

ಲೈಟ್ಸ್, ವೈರ್ ಲೆಕ್ಕವಿಲ್ಲ!
ಹೇಳಿ ಕೇಳಿ 'ಬಿಗ್ ಬಾಸ್' ರಿಯಾಲಿಟಿ ಶೋ. ಅಂದ್ಮೇಲೆ ಕ್ಯಾಮರಾ, ಲೈಟಿಂಗ್ಸ್ ಎಲ್ಲವೂ ಅವಶ್ಯಕ. ಹೀಗಾಗಿ, 'ಬಿಗ್ ಬಾಸ್ ಮನೆ' ಎಂಬ ಸೆಟ್ ನಲ್ಲಿ ಲೆಕ್ಕವಿಲ್ಲದಷ್ಟು ವೈರ್ ಕನೆಕ್ಷನ್, ಕೇಬಲ್ ಲಿಂಕ್ ಇರುತ್ತವೆ.

ಶಾರ್ಟ್ ಸರ್ಕ್ಯೂಟ್ ಆಗುವುದು ಹೇಗೆ.?
ಹಾಗ್ನೋಡಿದ್ರೆ, ಮಾಮೂಲಿ ಮನೆಗಳಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗುವ ಸಾಧ್ಯತೆ ಕಮ್ಮಿ. ಆದ್ರೆ, ಟಿವಿ ಶೋಗಳಿಗಾಗಿ ನಿರ್ಮಿಸುವ ಸೆಟ್ ಗಳಲ್ಲಿ ಅಗ್ನಿ ಅವಘಡಗಳು ಸಂಭವಿಸುವ ಸಾಧ್ಯತೆ ಹೆಚ್ಚು. ಯಾಕಂದ್ರೆ, ಶೋಗಳಲ್ಲಿ ಬಳಸುವ ಲೈಟ್ಸ್ ಹಾಗೂ ಇನ್ನಿತರ ಸಾಧನಗಳೇ ಅಂಥವು. ಇನ್ನೂ, ಸೆಟ್ ನಲ್ಲಿ ಇಟ್ಟಿಗೆಯ ಗೋಡೆಗಳ ಬದಲು ಪ್ಲೈವುಡ್ ಶೀಟ್ ಗಳೇ ಹೆಚ್ಚಾಗಿ ಬಳಸುವ ಕಾರಣ ಬೆಂಕಿ ಬೇಗ ವ್ಯಾಪಿಸಿಕೊಳ್ಳುತ್ತದೆ. ಸದ್ಯ ಸಂಪೂರ್ಣ ಮರದಿಂದಲೇ ನಿರ್ಮಾಣ ಆಗಿರುವ 'ಬಿಗ್ ಬಾಸ್' ಮನೆಯಲ್ಲಿ ಆಗಿರುವುದು ಇದೇ.!

'ಬಿಗ್ ಬಾಸ್' ಮನೆ ಸಂಪೂರ್ಣ ಭಸ್ಮ
ಬಿಡದಿ ಬಳಿ ಇರುವ ಮೇಣದ ಮ್ಯೂಸಿಯಂನಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿದೆ. ಮೇಣದಿಂದ ಬೆಂಕಿ ಹೊತ್ತಿಕೊಂಡು 'ಬಿಗ್ ಬಾಸ್' ಮನೆಗೂ ವ್ಯಾಪಿಸಿದೆ. ಎಲ್ಲವೂ ಮರದಿಂದಲೇ ಕೂಡಿದ್ದರಿಂದ ಸಂಪೂರ್ಣವಾಗಿ ಭಸ್ಮ ಆಗಿದೆ. 'ಬಿಗ್ ಬಾಸ್' ಸೆಟ್ ನಲ್ಲಿ ಬೆಂಕಿ ನಂದಿಸುವ ಸಾಧನಗಳಿದ್ದರೂ, ಘಟನೆ ಮಧ್ಯರಾತ್ರಿ ಸಂಭವಿಸಿರುವುದರಿಂದ ಹಾನಿ ಹೆಚ್ಚಾಗಿದೆ.


Click it and Unblock the Notifications











