ಮೊಟ್ಟ ಮೊದಲ ಬಾರಿಗೆ ಟಿವಿಯಲ್ಲಿ 'ಪೌಡರ್' ಸಿನಿಮಾ ಪ್ರಸಾರ; ಯಾವಾಗ? ಎಲ್ಲಿ?
ಸ್ಯಾಂಡಲ್‌ವುಡ್‌ನಲ್ಲಿ ಒಂದೇ ಶೈಲಿಯ ಸಿನಿಮಾಗಳು ರಿಲೀಸ್ ಆಗುತ್ತವೆ. ಅದೇ ಲವ್ ಸ್ಟೋರಿ, ಅದೇ ಆಕ್ಷನ್, ಅದೇ ಡೈಲಾಗ್ ಅಂತ ಕಾಮೆಂಟ್ ಮಾಡುತ್ತಿದ್ದವರ ಸಂಖ್ಯೆ ದೊಡ್ಡದಿತ್ತು. ಯುವಕರನ್ನು ಗಮನದಲ್ಲಿ ಇಟ್ಟುಕೊಂಡು ಸಿನಿಮಾ ಮಾಡುತ್ತಿಲ್ಲ ಅನ್ನೋ ಆರೋಪ ಕೂಡ ಸಿನಿಮಾ ಮಂದಿಯ ಮೇಲಿತ್ತು. ಆದರೆ, ಆಗಸ್ಟ್ 23 ಯುವಕರಿಗಾಗಿಯೇ ಕನ್ನಡ ಸಿನಿಮಾವೊಂದು ರಿಲೀಸ್ ಆಗಿತ್ತು. ಅದುವೇ 'ಪೌಡರ್'.
ಕೆಆರ್‌ಜಿ ಸ್ಟುಡಿಯೋ ಯುವಕರನ್ನು ಗಮನದಲ್ಲಿ ಇಟ್ಟುಕೊಂಡೇ 'ಪೌಡರ್' ಸಿನಿಮಾವನ್ನು ನಿರ್ಮಾಣ ಮಾಡಿತ್ತು. ಇದೊಂದು ಡಾರ್ಕ್ ಕಾಮಿಡಿ ಜಾನರ್ ಸಿನಿಮಾ. ದೂದ್ ಪೇಡಾ ದಿಗಂತ್, ಧನ್ಯಾ ರಾಮ್‌ಕುಮಾರ್, ಶರ್ಮಿಳಾ ಮಾಂಡ್ರೆ, ರಂಗಾಯಣ ರಘು, ರವಿಶಂಕರ್ ಗೌಡ, ಗೋಪಾಲಕೃಷ್ಣ ದೇಶಪಾಂಡೆ ಸೇರಿದಂತೆ ಹಲವು ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದರು.

'ಪೌಡರ್' ಸಿನಿಮಾ ಥಿಯೇಟರ್‌ನಲ್ಲಿ ರಿಲೀಸ್ ಆದ ಬಳಿಕ ಓಟಿಟಿಗೆ ಲಗ್ಗೆ ಇಟ್ಟಿತ್ತು. ಅಲ್ಲಿಂದ ಈಗ ಕಿರುತೆರೆಯಲ್ಲಿಯೂ ಪ್ರಸಾರ ಆಗುವುದಕ್ಕೆ ಸಜ್ಜಾಗಿ ನಿಂತಿದೆ. ಹೌದು ಇದೇ ಮೊದಲ ಬಾರಿಗೆ ಕಿರುತೆರೆ ವೀಕ್ಷಕರಿಗಾಗಿ 'ಪೌಡರ್' ಸಿನಿಮಾವನ್ನು ಪ್ರಸಾರ ಮಾಡುವುದಕ್ಕೆ ಜೀ ಕನ್ನಡ ಮುಂದಾಗಿದೆ. ಯಾವ ದಿನ? ಯಾವ ಸಮಯಕ್ಕೆ ಪ್ರಸಾರ ಆಗುತ್ತಿದೆ ಅನ್ನೋದನ್ನು ತಿಳಿಯಲು ಮುಂದೆ ಓದಿ.
ಕೆಜಿಆರ್ ಸ್ಟುಡಿಯೋ ಹಾಗೂ ಟಿವಿಎಫ್ ಜಂಟಿಯಾಗಿ ನಿರ್ಮಿಸಿದ 'ಪೌಡರ್' ಬಿಡುಗಡೆಯಾದ ಒಂದೂವರೆ ತಿಂಗಳ ಬಳಿಕ ಓಟಿಟಿಗೆ ಲಗ್ಗೆ ಇಟ್ಟಿತ್ತು. ಅಮೆಜಾನ್ ಪ್ರೈಂ ವಿಡಿಯೋದಲ್ಲಿ ಅಕ್ಟೋಬರ್ 4ರಿಂದ ಸ್ಟ್ರೀಮಿಂಗ್ ಆಗುತ್ತಿದೆ. ಇಲ್ಲಿ ರಿಲೀಸ್ ಆದ ಕೆಲವೇ ದಿನಗಳಲ್ಲಿ ಕಿರುತೆರೆಗೆ ಲಗ್ಗೆ ಇಡುತ್ತಿದೆ. ಅಕ್ಟೋಬರ್ 20ನೇ ತಾರೀಕು ಭಾನುವಾರ ಮಧ್ಯಾಹ್ನ 3ಕ್ಕೆ ಈ ಸಿನಿಮಾ ಜೀ ಕನ್ನಡದಲ್ಲಿ ಪ್ರಸಾರ ಆಗಲಿದೆ.
'ಗುಲ್ಟು' ಅಂತಹ ಸಿನಿಮಾವನ್ನು ನಿರ್ದೇಶಿಸಿದ್ದ ಜನಾರ್ಧನ್ ಚಿಕ್ಕಣ್ಣ 'ಪೌಡರ್'ಗೆ ಆಕ್ಷನ್ ಕಟ್ ಹೇಳಿದ್ದರು. ಚೀನಾದಿಂದ ಬರುವ ಕೋಟಿ ಲೆಕ್ಕದಲ್ಲಿ ಬೆಲೆ ಬಾಳುವ ಮಾದಕ ವಸ್ತು ಮೈಸೂರಿನಲ್ಲಿ ಮಿಸ್ ಆಗುತ್ತೆ. ಪೌಡರ್ (ಮಾದಕ ವಸ್ತು) ಮುಖಕ್ಕೆ ಹಚ್ಚುವ ಅಸಲಿ ಪೌಡರ್ ಜೊತೆ ಸೇರಿಕೊಳ್ಳುತ್ತೆ. ಇಲ್ಲಿಂದ ಕೋಟ್ಯಾಂತರ ಬೆಲೆ ಬಾಳುವ ಪೌಡರ್ ಅನ್ನು ಕಂಡು ಹಿಡಿಯಲು ಸಿನಿಮಾದ ಪ್ರಮುಖ ಪಾತ್ರಗಳು ಮುಂದಾಗುತ್ತವೆ. ಅದೇ ಪೌಡರ್ ಸಿನಿಮಾ ತಿರುಳು.
ಜನಾರ್ಧನ್ ಚಿಕ್ಕಣ್ಣ 'ಗುಲ್ಟು' ಅಂತಹ ಯೂತ್‌ಫುಲ್ ಸಬ್ಜೆಕ್ಟ್ ಅನ್ನು ತಂದಿದ್ದರು. ಅದೇ ನಿರ್ದೇಶಕ ಮತ್ತೊಂದು ಯುವಕರಿಗೆ ಸಂಬಂಧಿಸಿದ ಸಬ್ಜೆಕ್ಟ್ ಅನ್ನು ಹಾಸ್ಯದ ಮೂಲಕ ಹೇಳುವುದಕ್ಕೆ ಹೊರಟಿದ್ದರು. ಥಿಯೇಟರ್‌ನಲ್ಲಿ ಸಿನಿಮಾ ನೋಡಿದವರಿಗೆ ಮೇಕಿಂಗ್ ಇಷ್ಟ ಆಗಿತ್ತು. ಆದರೆ, ಲಾಜಿಕ್ ಅನ್ನು ಪಕ್ಕಕ್ಕೆ ಇಟ್ಟು ಈ ಕಾಮಿಡಿ ಸಬ್ಜೆಕ್ಟ್ ಅನ್ನು ಎಂಜಾಯ್ ಮಾಡಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಅದೇ ಓಟಿಟಿಯಲ್ಲಿ ಸಿನಿಮಾ ನೋಡಿದ ಪ್ರೇಕ್ಷಕರಿಗೂ ಹಾಗೇ ಅನಿಸಿತ್ತು.
ಈಗ 'ಪೌಡರ್' ಕಿರುತೆರೆ ವೀಕ್ಷಕರನ್ನು ಸೆಳೆಯುವುದಕ್ಕೆ ಸಜ್ಜಾಗುತ್ತಿದೆ. ವೀಕೆಂಡ್‌ನಲ್ಲಿ ಕಾಮಿಡಿ ಸಿನಿಮಾ ನೋಡಬೇಕು ಅಂತ ಸ್ಕೆಚ್ ಹಾಕಿರುವವರಿಗೆ 'ಪೌಡರ್' ನೋಡಬಹುದು. ಕ್ರೈಂ ಥ್ರಿಲ್ಲರ್ ಸಬ್ಜೆಕ್ಟ್ ಅನ್ನು ಕಾಮಿಡಿ ಟಚ್ ಕೊಟ್ಟು ಸಿನಿಮಾ ಮಾಡಲಾಗಿದ್ದು, ಎಷ್ಟು ಟಿಆರ್‌ಪಿ ಗಿಟ್ಟಿಸಿಕೊಳ್ಳುತ್ತೆ ಅನ್ನೋದು ಮುಂದಿನ ವಾರ ಗೊತ್ತಾಗಲಿದೆ. ಮಧ್ಯಾಹ್ನ ಊಟ ಮುಗಿಸಿ ರಿಲ್ಯಾಕ್ಸ್ ಮೂಡಿಗೆ ಜಾರಿದ ಬಳಿಕ 'ಪೌಡರ್' ಪವರ್ ಹೇಗಿರುತ್ತೆ? ಅನ್ನೋದನ್ನು ನೋಡಬಹುದು.


Click it and Unblock the Notifications










