ಲಂಡನ್‌ನಲ್ಲಿ ನೆಲೆಸಿರುವ 'ಹರಹರ ಮಹಾದೇವ' ಧಾರಾವಾಹಿ ನಟಿ ಪ್ರಿಯಾಂಕಾ ಮತ್ತೆ ನಟನೆ ಮರುಳುತ್ತಾರಾ?
ಪ್ರಿಯಾಂಕಾ ಚಿಂಚೋಳಿ.. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಪೌರಾಣಿಕ ಧಾರಾವಾಹಿಗಳ ಪೈಕಿ 'ಹರಹರ ಮಹಾದೇವ' ಧಾರಾವಾಹಿಯೂ ಒಂದು. 'ಹರಹರ ಮಹಾದೇವ' ಧಾರಾವಾಹಿಯಲ್ಲಿ ಪಾರ್ವತಿ ದೇವಿಯಾಗಿ ಅಭಿನಯಿಸುವ ಮೂಲಕ ಕಿರುತೆರೆಗೆ ಕಾಲಿಟ್ಟ ಪ್ರಿಯಾಂಕಾ ಚಿಂಚೋಳಿ ಮೊದಲ ಧಾರಾವಾಹಿಯಲ್ಲಿಯೇ ಕಿರುತೆರೆ ವೀಕ್ಷಕರ ಮನ ಸೆಳೆದ ಬೆಡಗಿ. ಪಾರ್ವತಿಯಾಗಿ ಕಿರುತೆರೆ ವೀಕ್ಷಕರ ಮನೆ, ಮನ ಸೆಳೆದಿರುವ ಪ್ರಿಯಾಂಕಾ ಚಿಂಚೋಳಿ ನಂತರ ಬದಲಾದುದು ಪ್ರಾರ್ಥನಾಳಾಗಿ.
ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಮನಸಾರೆ' ಧಾರಾವಾಹಿಯಲ್ಲಿ ನಾಯಕಿ ಪ್ರಾರ್ಥನಾ ಆಗಿ ನಟಿಸಿದ್ದ ಪ್ರಿಯಾಂಕಾ ಅಪ್ಪನ ಪ್ರೀತಿಯಿಂದ ವಂಚಿತಳಾಗಿರುವ ಮಗಳ ಪಾತ್ರಕ್ಕೆ ಅತ್ಯದ್ಭುತವಾಗಿ ಜೀವ ತುಂಬಿದ್ದರು. ತಮ್ಮ ಸಹಜ ನಟನೆಯ ಮೂಲಕ ಗುರುತಿಸಿಕೊಂಡಿದ್ದ ಪ್ರಿಯಾಂಕಾ ಮುಂದೆ ಕಾಣಿಸಿಕೊಂಡಿದ್ದು ರಾಗಾಳಾಗಿ.

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಮನಸ್ಸೆಲ್ಲಾ ನೀನೆ' ಧಾರಾವಾಹಿಯಲ್ಲಿ ಈಕೆ ರಾಗಾಳಾಗಿ ಮಿಂಚಿದ್ದರು. ಅಂದ ಹಾಗೇ 'ಮನಸ್ಸೆಲ್ಲಾ ನೀನೆ' ಧಾರಾವಾಹಿಯಲ್ಲಿ ರಾಗಾಳಾಗಿ ಅಭಿನಯಿಸುತ್ತಿದ್ದ ರಶ್ಮಿ ಪ್ರಭಾಕರ್ ಅವರು ಕಾರಣಾಂತರಗಳಿಂದ ಆ ಧಾರಾವಾಹಿಯಿಂದ, ರಾಗಾ ಪಾತ್ರದಿಂದ ಹೊರಬಂದರು. ಆ ಸಮಯದಲ್ಲಿ ಆ ಪಾತ್ರಕ್ಕೆ ಆಯ್ಕೆಯಾದ ಪ್ರಿಯಾಂಕಾ ಚಿಂಚೋಳಿ ಮುಂದೆ ಧಾರಾವಾಹಿ ಮುಕ್ತಾಯಗೊಳ್ಳುವ ತನಕ ಆ ಪಾತ್ರದ ಮೂಲಕ ಗಮನ ಸೆಳೆದಿದ್ದರು.
ನಂತರ ರಾಕೇಶ್ ಅವರೊಡನೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಪ್ರಿಯಾಂಕಾ ಸದ್ಯ ನಟನೆಯಿಂದ ದೂರವಿದ್ದಾರೆ. ದೂರದ ಲಂಡನ್‌ನಲ್ಲಿ ಪತಿಯೊಡನೆ ವಾಸಿಸುತ್ತಿರುವ ಪ್ರಿಯಾಂಕಾ ಎಂ.ಟೆಕ್ ಪದವೀಧರೆ ಹೌದು. ಎಂ.ಟೆಕ್ ವಿದ್ಯಾರ್ಥಿನಿಯಾಗಿದ್ದಾಗಲೇ ಮಾಡೆಲಿಂಗ್‌ನ ನಂಟು ಬೆಳೆಸಿಕೊಂಡ ಪ್ರಿಯಾಂಕಾ, ಶಿಲ್ಪಾ ಚೌಧರಿ ಹಾಗೂ ಪ್ರಸಾದ್ ಬಿದ್ದಪ್ಪ ಅವರಿಂದ ಮಾಡೆಲಿಂಗ್ ಕುರಿತ ತರಬೇತಿಯನ್ನು ಪಡೆದುಕೊಂಡರು.
ಮುಂದೆ 'ಮಿಸ್ ಕರ್ನಾಟಕ' ಸ್ಪರ್ಧೆಗೆ ಆಯ್ಕೆಯಾದ ಈಕೆ ನಟನೆಗೆ ಕಾಲಿಟ್ಟಿದ್ದು 'ಗಿರಗಿಟ್ಲೆ' ಸಿನಿಮಾದ ಮೂಲಕ. 'ಗಿರಗಿಟ್ಲೆ' ಯಲ್ಲಿ ಶ್ರೀನಗರ ಕಿಟ್ಟಿಯೊಂದಿಗೆ ನಟಿಸಿದ ಈಕೆ ನಂತರ 'ಬಿಲ್ ಗೇಟ್ಸ್' ಸಿನಿಮಾದಲ್ಲಿ ಎರಡನೇ ನಾಯಕಿಯಾಗಿ ಮೋಡಿ ಮಾಡಿದರು. ನಂತರ ಕಿರುತೆರೆಗೆ ಪಾದಾರ್ಪಣೆ ಮಾಡಿದ ಪ್ರಿಯಾಂಕಾ ಚಿಂಚೋಳಿ ಅಭಿನಯಿಸಿದ್ದು ಬೆರಳೆಣಿಕೆಯಷ್ಟು ಧಾರಾವಾಹಿಗಳಲ್ಲಿ ಅಷ್ಟೇ ಆದರೂ ತಮ್ಮ ಮುದ್ದಾದ ನಟನೆಯ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದಿರುವ ಬೆಡಗಿ.
ಸದ್ಯ ಕಿರುತೆರೆಯಿಂದ, ನಟನೆಯಿಂದ ದೂರವಿರುವ ಪ್ರಿಯಾಂಕಾ ಚಿಂಚೋಳಿ ಮತ್ತೆ ಅಭಿನಯಕ್ಕೆ ಮರಳುತ್ತಾರಾ? ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಾರಾ ಎಂಬೆಲ್ಲ ಪ್ರಶ್ನೆಗಳಿಗೆ ಮುಂದಿನ ದಿನಗಳಲ್ಲಿ ಉತ್ತರ ಸಿಗಬೇಕಿದೆ.


Click it and Unblock the Notifications











