Lakshmi Nivasa: ಅಪ್ಪನ ಸ್ವಾಭಿಮಾನಕ್ಕೆ ಕೊಂಕು ನುಡಿದ ಮಕ್ಕಳು; ಸವಾಲೆಸೆದು ಹೊರಟ ತಂದೆ
ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ಜನಪ್ರಿಯ ಧಾರಾವಾಹಿಗಳಲ್ಲಿ 'ಲಕ್ಷ್ಮಿ ನಿವಾಸ' ಕೂಡ ಒಂದು. ಶ್ರೀನಿವಾಸ ಹಾಗೂ ಲಕ್ಷ್ಮಿಯ ಕಷ್ಟಗಳನ್ನು, ಕುಟುಂಬದ ಸಮಸ್ಯೆಗಳಿಗೆ ವೀಕ್ಷಕರು ಮನಸು ಕರಗುತ್ತಿವೆ. ತಂದೆ ತಾಯಿಯನ್ನು ದೂರು ಮಾಡಿರುವ ಮಕ್ಕಳ ವಿರುದ್ಧ ವೀಕ್ಷಕರ ಕಣ್ಣುಗಳು ಕೆಂಪಾಗಿವೆ. ಮಕ್ಕಳು ನೋಡಿಕೊಳ್ಳಬೇಕಾದ ಸಮಯದಲ್ಲಿ ತಂದೆ ಕಷ್ಟ ಪಟ್ಟು ಕೆಲಸ ಮಾಡುತ್ತಿರುವುದಕ್ಕೆ ಮರುಗುತ್ತಿದ್ದಾರೆ. ಇಂದಿನ (ಆಗಸ್ಟ್ 11) ಎಪಿಸೋಡ್ ಕೂಡ ಅಷ್ಟೇ ಶ್ರೀನಿವಾಸ್ ಸ್ವಾಭಿಮಾನಕ್ಕೆ ಸಂತೋಷ್ ಸವಾಲೆಸೆದಿದ್ದಾನೆ.
'ಲಕ್ಷ್ಮಿ ನಿವಾಸ' ಒಂದೇ ಟ್ರ್ಯಾಕ್‌ನಲ್ಲಿ ನಡೆಯುವ ಕಥೆಯಲ್ಲ. ಒಂದು ಕಡೆ ಶ್ರೀನಿವಾಸ ಹಾಗೂ ಲಕ್ಷ್ಮಿಯ ಬದುಕಿನ ಬವಣೆಗಳು ಸಾಗುತ್ತಿದ್ದರೆ, ಇನ್ನೊಂದು ಕಡೆ ಜಾಹ್ನವಿ, ವಿಶ್ವ ಹಾಗೂ ಜಯಂತ್ ತ್ರಿಕೋನ ಪ್ರೇಮಕಥೆ ನಡೆಯುತ್ತಿದೆ. ಮತ್ತೊಂದು ಕಡೆ ಭಾವನಾ ಹಾಗೂ ಸಿದ್ದೇಗೌಡರ ಸ್ಟೋರಿ ನಡೆಯುತ್ತಿದೆ. ಒಂದೊಂದು ಎಪಿಸೋಡ್‌ನಲ್ಲೂ ಇಬ್ಬೊಬ್ಬರ ಕಥೆ ಹೈಲೈಟ್ ಆಗುತ್ತಾ ಮುಂದೆ ಸಾಗುತ್ತಿದೆ.

ಇವತ್ತಿನ ಎಪಿಸೋಡ್‌ನಲ್ಲಿ ಶ್ರೀನಿವಾಸ್ ಮಕ್ಕಳ ಮೇಲೆ ಗರಂ ಆಗಿದ್ದಾರೆ. ಮಗ ಸಂತೋಷ್ ಆಡಿದ ಕೊಂಕು ಮಾತಿಗೆ ತಂದೆಯ ಸ್ವಾಭಿಮಾನದ ಕಟ್ಟೆಯೊಡೆದಿದೆ. ಮಕ್ಕಳಿಬ್ಬರ ಸಮ್ಮುಖದಲ್ಲಿ ಶ್ರೀನಿವಾಸ್ ಕೆರಳಿ ಕೆಂಡವಾಗಿದ್ದಾರೆ. ಇಬ್ಬರೂ ಮಕ್ಕಳಿಗೂ ಸವಾಲೆಸೆದು ಮಗನ ಕಚೇರಿಯಿಂದ ಹೊರಟು ಹೋಗಿದ್ದಾರೆ. ಅಷ್ಟಕ್ಕೂ ತಂದೆ ಮಕ್ಕಳ ನಡುವೆ ಏನಾಯ್ತು? ಶ್ರೀನಿವಾಸ್ ತನ್ನ ಮಗನಿಗೆ ಸವಾಲೆಸೆದಿದ್ದು ಯಾಕೆ?ತಿಳಿಯುವುದಕ್ಕೆ ಮುಂದೆ ಓದಿ.
ಡಿಲೇವರಿ ಕೆಲಸ ಮಾಡುತ್ತಿರೋ ತಂದೆ
ಈ ವಯಸ್ಸಿನಲ್ಲಿ ಮಕ್ಕಳಿಬ್ಬರು ಕೈ ಬಿಟ್ಟಾಗ ಶ್ರೀನಿವಾಸ್ ಜೀವನ ಸಾಗಿಸುವುದಕ್ಕೆ ದುಡಿಮೆಗೆ ಇಳಿದಿದ್ದಾರೆ. ತನಗೆ ಸಿಕ್ಕ ಕೆಲಸವನ್ನು ಮಾಡಿ ಜೀವನವನ್ನು ಸಾಗಿಸುತ್ತಿದ್ದಾರೆ. ಈಗ ಡಿಲೇವರಿ ಬಾಯ್ ಆಗಿ ಕೆಲಸ ಮಾಡುತ್ತಿರುವ ಶ್ರೀನಿವಾಸ್ ಮಗ ಸಂತೋಷ್‌ಗೆ ಆರ್ಡರ್ ಮಾಡಿದನ್ನು ಕೊಡಲು ಬರುತ್ತಾರೆ. ಆ ವೇಳೆ ತಂದೆಯ ಕೆಲಸವನ್ನು ಹಂಗಿಸುವಂತೆ ಮಾತುಗಳನ್ನು ಆಡುತ್ತಾನೆ. ಇದರಿಂದ ನೊಂದ ಶ್ರೀನಿವಾಸ್ ಮಗನಿಗೆ ಸವಾಲೆಸೆದು ಹೊರಟು ಹೋಗುತ್ತಾರೆ.
ಗಂಡನಾಗಿ ಅಮ್ಮನ್ನು ನೋಡಿಕೊಳ್ಳುವ ಯೋಗ್ಯತೆ ಇಲ್ವಾ?
"ಈ ರೀತಿಯೆಲ್ಲ ಸಂಪಾದನೆ ಮಾಡುವುದಕ್ಕೆ ಗೊತ್ತಾಗುತ್ತೆ. ಅಮ್ಮನನ್ನು ಕಂಡೋರ ಮನೆಗೆ ಬಿಡಬಾರದು ಅಂತ ಗೊತ್ತಾಗುವುದಿಲ್ಲವೇ. ಗಂಡನಾಗಿ ಅಮ್ಮನನ್ನು ನೋಡಿಕೊಳ್ಳುವ ಯೋಗ್ಯತೆ ಇಲ್ವಾ? ಸಾಮರ್ಥ್ಯ ಇಲ್ವಾ? ಕಾಲೇಜು ಹುಡುಗನ ಹಾಗೆ ಕೆಲಸ ಮಾಡಿಕೊಂಡು.. ಏನೋ ದೊಡ್ಡ ಕೆಲಸ ಮಾಡುತ್ತಿದ್ದೇನೆ ಎಂದು ಲುಕ್ ಬೇರೆ ಕೊಡುತ್ತಿದ್ದೀರ" ನಿಮಗೆ ಎಂದು ಸಂತೋಷ್ ಕೊಂಕು ಮಾತುಗಳನ್ನು ಆಡುತ್ತಾನೆ. ಆಗ ಶ್ರೀನಿವಾಸ್ ಕೆರಳಿ ಕೆಂಡವಾಗುತ್ತಾರೆ.
ಮಗನ ವಿರುದ್ಧ ಕೆಂಡಕಾರಿದ ತಂದೆ
"ಮಾತಿನ ಮೇಲೆ ನಿಗಾ ಇಟ್ಟುಕೊಂಡು ಮಾತಾಡು. ಇದೇನು ದೊಡ್ಡ ಕೆಲಸ ಅಂತ ಹೇಳುತ್ತಿದ್ದೀಯ. ಮಾಡೋ ಕೆಲಸ ಶ್ರದ್ಧೆಯಿಂದ ಮಾಡಿದರೆ, ಪ್ರತಿಯೊಂದು ಕೆಲಸನೂ ಘನತೆಯ ಕೆಲಸನೇ ಆಗಿರುತ್ತೆ. ನಾನೇನು ಕಳ್ಳತನ ಮಾಡಿಕೊಂಡು, ಸುಳ್ಳು ಹೇಳಿಕೊಂಡು ಕೆಲಸ ಮಾಡುತ್ತಿಲ್ವಲ್ಲ. ನನ್ನ ಕೈಯಲ್ಲಿ ಏನಾಗುತ್ತೋ ಆ ಕೆಲಸ ಮಾಡುತ್ತಿದ್ದೇನೆ. ನಮ್ಮಂತವರು ತಂದು ಕೊಟ್ಟರೆ ತಾನೇ ಹೊಟ್ಟೆ ತುಂಬೋದು." ಎಂದು ಹೇಳುತ್ತಾ ಮಕ್ಕಳನ್ನು ಕಷ್ಟ ಪಟ್ಟು ಸಾಕಿ ಸಲಹಿದ್ದನ್ನು ನೆನಪಿಸಿಕೊಂಡಿದ್ದಾರೆ.
ಮಗನಿಗೆ ತಂದೆಯ ಸವಾಲು
"ನಿಮ್ಮ ತಾಯಿ ನೋಡಿಕೊಳ್ಳುವುದಕ್ಕೆ ಸಾಮರ್ಥ್ಯ ಇಲ್ಲ. ಯೋಗ್ಯತೆಯಿಲ್ಲ ಅಂತ ಹೇಳಿದ್ರಾ? ನಿನಗೆ ತಾಯಿ ಆಗುವುದಕ್ಕಿಂತ ಮುಂಚೆ ನನ್ನ ಹೆಂಡ್ತಿ. ನಿನ್ನ ಹತ್ತಿರ ಹೇಳಿಸಿಕೊಂಡು ನಾನು ನನ್ನ ಹೆಂಡತಿಯನ್ನು ಹೇಗೆ ನೋಡಿಕೊಳ್ಳಬೇಕು ಅಂತ ಹೇಳಿಸಿಕೊಳ್ಳಬೇಕಿಲ್ಲ. ಶ್ರೀನಿವಾಸ ಹೇಗೆ ಬದುಕುತ್ತಾನೆ ಅನ್ನೋದನ್ನು ನೀವೇ ನೋಡುತ್ತೀರ" ಎಂದು ಸವಾಲು ಹಾಕಿದ್ದಾರೆ. ತಂದೆ ಆಕ್ರೋಶ ಮಾತುಗಳಿಗೆ ಮಕ್ಕಳು ಕಂಗಾಲಾಗಿರೋದು ಅವರ ಮುಖಗಳಲ್ಲಿ ಎದ್ದು ಕಾಣುತ್ತಿತ್ತು.


Click it and Unblock the Notifications











