ವೀಕೆಂಡ್‌ನಲ್ಲಿ 'ಗೋಲ್ಡನ್ ಗ್ಯಾಂಗ್' ಅಡ್ಡಾದೊಳಗೆ ಭರ್ಜರಿ 'ಹರಟೆ': ಗೆಸ್ಟ್ ಯಾರು?
ವೀಕೆಂಡ್ ಮೋಜು-ಮಸ್ತಿ. ಹೊರಗೆ ಸುತ್ತಾಟ, ಜೊತೆಯಲ್ಲೊಂದು ಊಟ. ಇವುಗಳ ಜೊತೆ ಮನೆಗೆ ಬಂದರೆ, ಟಿವಿಯಲ್ಲಿ 'ಗೋಲ್ಡನ್ ಗ್ಯಾಂಗ್'. ಕಳೆದ ಕೆಲವು ವಾರಗಳಿಂದ ವೀಕೆಂಡ್‌ನಲ್ಲಿ ಮಸ್ತ್ ಮಜಾ ನೀಡುತ್ತಿದೆ. ಸೆಲೆಬ್ರೆಟಿಗಳ ಸ್ನೇಹ, ತಮಾಷೆ, ಸಂಕಷ್ಟ ಎಲ್ಲವನ್ನೂ 'ಗೋಲ್ಡನ್ ಗ್ಯಾಂಗ್' ಅನಾವರಣ ಮಾಡಿತ್ತು. ಈ ವಾರ ಈ ಗೋಲ್ಡನ್ ಅಡ್ಡಾದಲ್ಲಿ ತಮ್ಮ ಮಾತುಗಳಿಂದಲೇ ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸುತ್ತಿದ್ದ ತಂಡ ಆಗಮಿಸುತ್ತಿದೆ.
ಜೀ ಕನ್ನಡ ಈಗಾಗಲೇ ಈ ವಾರದ 'ಗೋಲ್ಡನ್ ಗ್ಯಾಂಗ್' ಗ್ಯಾಂಗ್‌ನಲ್ಲಿ ಅತಿಥಿಗಳು ಯಾರು ಎಂಬುದನ್ನು ರಿವೀಲ್ ಮಾಡಿದೆ. ಈಗಾಗಲೇ ಪ್ರೋಮೋ ರಿಲೀಸ್ ಆಗಿದ್ದು, ಕಿರುತೆರೆ ವೀಕ್ಷಕರು ಈ ವಿಶೇಷ ಎಪಿಸೋಡ್ ನೋಡಲು ಕಾತುರದಿಂದ ಕಾದು ಕೂತಿದ್ದಾರೆ. ಪ್ರೋಮೊ ರಿಲೀಸ್ ಆಗುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ನೆಟ್ಟಿಗರು ಈ ಶೋ ಬಗ್ಗೆ ಕಮೆಂಟ್ ಮಾಡುತ್ತಿದ್ದು, ಕಾತುರದಿಂದ ಕಾಯುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ.

ಹರಟೆ ತಂಡದಿಂದ ಮಸ್ತ್ ಕಾಮಿಡಿ
ಇಲ್ಲಿವರೆಗೂ 'ಗೋಲ್ಡನ್ ಗ್ಯಾಂಗ್'ನಲ್ಲಿ ಸೆಲೆಬ್ರೆಟಿಗಳು ಹಾಗೂ ಅವರ ಫ್ರೆಂಡ್‌ಶಿಫ್ ಅನ್ನು ತೋರಿಸಲಾಗಿತ್ತು. ತಾರೆಯರು ಬಾಲ್ಯ, ಅವರು ಬೆಳೆದು ಬಂದ ಹಾದಿ. ಚಿತ್ರರಂಗದ ಗೆಳೆಯರು. ಅವರೊಂದಿಗಿನ ಮಸ್ತಿ ಎಲ್ಲವನ್ನೂ ಮೆಲುಕು ಹಾಕಲಾಗಿತ್ತು. ಈ ಬಾರಿ ಜೀ ಕನ್ನಡ ಕೊಂಚ ಬದಲಾವಣೆ ಮಾಡಿಕೊಂಡಿದೆ. ಫಾರ್ ಎ ಚೇಂಜ್ ಹರಟೆ ತಂಡವನ್ನು 'ಗೋಲ್ಡನ್ ಗ್ಯಾಂಗ್' ಅಡ್ಡಾಗೆ ಕರೆದುಕೊಂಡು ಬಂದಿದೆ.

ಹರಟೆ ಗ್ಯಾಂಗ್‌ನಲ್ಲಿ ಇರುವವರು ಯಾರು?
ಈ ಹಿಂದೆ ತಮ್ಮ ಮಾತುಗಳಲ್ಲೇ ಮೋಡಿ ಮಾಡಿದ ಕಲಾವಿದರಿವರು. ಕಿರಿಯರಿಂದ ಹಿರಿಯರವರೆಗೂ ಈ ಕಲಾವಿದರು ಯಾರು ಎಂಬುದು ಗೊತ್ತಿದೆ. ಅಂದ್ಹಾಗೆ ಗೋಲ್ಡನ್ ಗ್ಯಾಂಗ್‌ನಲ್ಲಿ ಗಂಗಾವತಿ ಪ್ರಾಣೇಶ್, ಪ್ರೊಫೆಸರ್ ಕೃಷ್ಣೇಗೌಡ, ಸುಧಾ ಬರಗೂರು, ಗುಂಡುರಾವ್, ರಿಚರ್ಡ್ ಲೂಯೀಸ್ ತಮ್ಮ ಮಾತುಗಳಿಂದಲೇ ಮೋಡಿ ಮಾಡಲಿದ್ದಾರೆ. ಈಗಾಗಲೇ ಪ್ರೋಮೊಗಳು ಕಿರು ತೆರೆ ವೀಕ್ಷಕರನ್ನು ಗಮನ ಸೆಳೆಯುತ್ತಿದೆ. ಹೀಗಾಗಿ ಕಿರುತೆರೆ ವೀಕ್ಷಕರು ಕೂಡ 'ಹರಟೆ ಗ್ಯಾಂಗ್' ಕಾಮಿಡಿ ನೋಡಲು ಕಾದು ಕೂತಿದೆ.

ಅಚ್ಚ ಕನ್ನಡದ ಕಾರ್ಯಕ್ರಮ
ಒಂದ್ಕಡೆ ಮಾತಿನ ಮಲ್ಲ ಗೋಲ್ಡನ್ ಸ್ಟಾರ್ ಗಣೇಶ್. ಇನ್ನೊಂದು ಕಡೆ ಅಚ್ಚ ಕನ್ನಡದಲ್ಲಿಯೇ ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸುವ ಶೂರರು. ಹೀಗಾಗಿ ಈ ವಾರಾಂತ್ಯದಲ್ಲಿ ಅಚ್ಚ ಕನ್ನಡದಲ್ಲೇ ಒಂದು ಸುಂದರವಾದ ಟಾಕ್ ಶೋ ನೋಡಲು ಸಿಗಲಿದೆ. ಮಾತಲ್ಲೇ ಮೋಡಿ ಮಾಡುತ್ತಾ ಹರಟೆ ಗ್ಯಾಂಗ್ ಕಿರುತೆರೆ ವೀಕ್ಷಕರನ್ನು ನಗಿಸಲು ಬರುತ್ತಿದೆ. ಮಾತುಕತೆ, ವಾದ-ವಿವಾದ, ಚರ್ಚೆ ಎಲ್ಲವೂ ಇರುತ್ತೆ. ಈ ವಾರ ಕಿರುತೆರೆ ವೀಕ್ಷಕರಿಗೆ ಮನರಂಜನೆ ಗ್ಯಾರಂಟಿ.

ಭಾಷೆ, ತಮಾಷೆ, ಹರಟೆ
ಕನ್ನಡದ ಅಭಿಮಾನಿಗಳಿಗೆ ಈ ಶೋ ಸಿಕ್ಕಾಪಟ್ಟೆ ಖುಷಿ ಕೊಡುತ್ತೆ. ಇದೂವರೆಗೂ 'ಹರಟೆ' ನೋಡದೆ ಇರುವವರಿಗೆ ಜೀ ಕನ್ನಡದಲ್ಲಿ ಹರಟೆ ಗ್ಯಾಂಗ್ ಮಸ್ತ್ ಮಜಾ ನೀಡಲಿದೆ. ಈ ಬಾರಿ ಗೋಲ್ಡನ್ ಗ್ಯಾಂಗ್‌ನಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರು ಸೇರಿದಂತೆ ಮನೆಮಂದಿಯೆಲ್ಲಾ ಕೂಡ ಚಂದದೊಂದು ಕಾರ್ಯಕ್ರಮ ನೋಡಲು ಅವಕಾಶವಿದೆ.


Click it and Unblock the Notifications











