Exclusive: FIR ಹಾಕಿಲ್ಲ, ವೈದ್ಯಕೀಯ ಪರೀಕ್ಷೆ ನಡೆದಿಲ್ಲ, ನಾವು ಗಲಾಟೆ ಮಾಡಿಲ್ಲ: 'ಗಟ್ಟಿಮೇಳ' ನಟ ರಕ್ಷಿತ್ ಪ್ರತಿಕ್ರಿಯೆ
ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಪ್ರಸಿದ್ಧ ಧಾರಾವಾಹಿ ಗಟ್ಟಿಮೇಳ ಖ್ಯಾತಿಯ ನಟ ರಕ್ಷಿತ್ ನಿನ್ನೆ (ಜನವರಿ 27)ರ ರಾತ್ರಿ ಕುಡಿದು ಗಲಾಟೆ ಮಾಡಿದ್ದಾರೆಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಕಿರುತೆರೆ ನಟ ರಕ್ಷಿತ್ ವಿರುದ್ಧ FIR ಕೂಡ ದಾಖಲಾಗಿದೆ ಎನ್ನಲಾಗಿದೆ. ಆದರೆ, ಈ ಆರೋಪಗಳನ್ನು ನಟ ರಕ್ಷಿತ್ ತಳ್ಳಿ ಹಾಕಿದ್ದು, ಫಿಲ್ಮಿ ಬೀಟ್ ಜೊತೆ ರಾತ್ರಿ ನಡೆದ ಘಟನೆ ಬಗ್ಗೆ ವಿವರಿಸಿದ್ದಾರೆ.
ಗಟ್ಟಿಮೇಳ ಮೇಳ ಶೂಟಿಂಗ್ ಮುಗಿಸಿ ಹಿಂತಿರುಗುವಾಗ, ಕರ್ಫ್ಯೂ ಜಾರಿಯಲ್ಲಿದ್ದರೂ ನಿಯಮ ಉಲ್ಲಂಘನೆ ಮಾಡಿದ್ದಾರೆ. ಕೆಂಗೇರಿ ಸಮೀಪದ ಹೊಟೇಲ್‌ನಲ್ಲಿ ಮದ್ಯ ಸೇವನೆ ಮಾಡಿ ರಕ್ಷಿತ್ ಹಾಗೂ ಅವರ ಸ್ನೇಹಿತರ ಜೊತೆ ಸೇರಿಕೊಂಡು ಗಲಾಟೆ ಮಾಡಿದ್ದಾರೆ. ಹೀಗಾಗಿ ಅವರ ಮೇಲೆ ಎಫ್‌ಐಆರ್ ದಾಖಲಾಗಿದ್ದು, ವೈದ್ಯಕೀಯ ಪರೀಕ್ಷೆ ಕೂಡ ಮಾಡಲಾಗಿದೆ ಎಂದು ಮಾಧ್ಯಮಗಳು ವರದಿಯನ್ನು ಮಾಡಿವೆ. ಈ ಘಟನೆ ಬಗ್ಗೆ ರಕ್ಷಿತ್ ಫಿಲ್ಮಿಬೀಟ್‌ಗೆ ಪ್ರತಿಕ್ರಿಯಿಸಿದ್ದರೆ.

ನಿನ್ನೆ ರಾತ್ತಿ ನಡೆದ ಘಟನೆ ಏನು?
"ಘಟನೆ ನಡೆದಿದ್ದು ಇಷ್ಟೆ. ಫೆಬ್ರವರಿ 1ಕ್ಕೆ ನಾನು ನಿರ್ಮಾಪಕನಾಗಿ ಒಂದು ವರ್ಷ ಆಗುತ್ತೆ. ನಮ್ಮ ಸಂಸ್ಥೆ ಓಪನ್ ಮಾಡಿ ಒಂದು ವರ್ಷ ಆಗುತ್ತೆ. ನಿನ್ನೆ ಒಂಬತ್ತೂವರೆ, ಒಂಬತ್ತು ಕಾಲ್‌ಗೆ ಶೂಟಿಂಗ್ ಮುಗಿಸಿದ್ವಿ. ಇನ್ನು ಮೂರು ನಾಲ್ಕು ದಿನ ಶೂಟಿಂಗ್ ಇಲ್ಲ. ನಮ್ಮ ಇಡೀ ತಂಡ ಮತ್ತು ಅವರ ಫ್ಯಾಮಿಲಿ ನಾವೆಲ್ಲಾ ಜಿಂಜರ್ ಎನ್ನುವ ಹೊಟೇಲ್‌ಗೆ ಹೋಗಿದ್ವಿ. ಹೊಟೇಲ್ ಅವರ ತಪ್ಪಲ್ಲ. ನಾವು ಬರುವುದು ಲೇಟ್ ಆಗುತ್ತೆ. ಊಟ ಎತ್ತಿಡಿ. ಕರ್ಫ್ಯೂ ಇದೆ ಅಂತ ನಮಗೆ ಗೊತ್ತಿದೆ. ತುಂಬಾ ಲೇಟ್ ಆದರೆ, ಬಂದು ಪಾರ್ಸೆಲ್ ತೆಗೆದುಕೊಂಡು ಹೋಗುತ್ತೇವೆ. ಇಲ್ಲವಾದರೆ ಅಲ್ಲೇ ತಿನ್ನುತ್ತೇವೆ ಅಂತ ಹೇಳಿದ್ದೆ. ನಾವು ಹೋಗುವಷ್ಟರಲ್ಲಿ 10.30 ಆಗಿತ್ತು. ಪೊಲೀಸರು ಬಂದರು. ಆಗ ಅವರೊಂದಿಗೆ ಮಾತಾಡಿದೆ. ಅವರು ನೀವೇ ಹೀಗೆ ನಿಯಮ ಮುರಿದರೆ ಹೇಗೆ ಅಂತ ಹೇಳಿ ಹೋದರು. ಅಲ್ಲಿಗೆ ಆ ಘಟನೆ ಮುಗೀತು." ಎಂದು ರಕ್ಷಿತ್ ಘಟನೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಪೊಲೀಸರ ಮೇಲೆ ಕೈ ಮಾಡಿಲ್ಲ
"ನಾವು ಊಟ ಮಾಡುತ್ತಿದ್ದೆವು. ಅದು ಬಿಟ್ಟರೆ, ಡ್ರಿಂಕ್ಸ್ ಬಾಟಲ್ ಕೂಡ ಇರಲಿಲ್ಲ. ಅದನ್ನೂ ವಿಡಿಯೋ ಮಾಡಿಕೊಂಡಿದ್ದೇವೆ. ಕಾನೂನು ಪದವಿ ಓದಿರುವ ನಾನು ಯಾಕೆ ಪೊಲೀಸರಿಗೆ ಹೊಡೆಯೊಕೆ ಹೋಗಲಿ. ಸರ್ಕಲ್ ಇನ್ಸ್‌ಪೆಕ್ಟರ್ ಜೊತೆ ಮಾತಾಡಿದಾಗ ಅವರೂ ಕೂಡ ಕುಡಿದಿಲ್ಲ ಎಂದು ಹೇಳಿದ್ದಾರೆ. ಇನ್ನೆಷ್ಟು ಸಾಕ್ಷಿ ಕೊಡಬೇಕು. ನಾವು ಮೋಜು-ಮಸ್ತಿ ಏನೂ ಮಾಡಿಲ್ಲ. FIR ದಾಖಲಾಗಿಲ್ಲ. ವೈದ್ಯಕೀಯ ಪರೀಕ್ಷೆನೂ ಮಾಡಿಲ್ಲ. ಹಾಗೇನಾದರೂ ಆಗಿದ್ದರೆ, ದಾಖಲೆಗಳು ಇರಬೇಕಿತ್ತು. ಅದ್ಯಾವುದೂ ಇಲ್ಲ. ನಾನು ಪ್ರತಿದಿನ ಮಲಗುವುದು ಮೂರು ಗಂಟೆ. ಈ ಕಡೆ ನಿರ್ಮಾಣನೂ ಮಾಡಬೇಕು. ಅತ್ತ ನಟನೆನೂ ಮಾಡುತ್ತಿದ್ದೇನೆ. ಹತ್ತು ವರ್ಷದಿಂದ ಕಿರುತೆರೆಯಲ್ಲಿ ನಂಬರ ಒನ್ ಆಗಿ ಉಳಿದುಕೊಳ್ಳುವುದಕ್ಕೆ ನಾನು ಪಟ್ಟಿರುವ ಶ್ರಮ ನನಗೆ ಗೊತ್ತಿದೆ." ಅಂತಾರೆ ನಟ ರಕ್ಷಿತ್.

ಅಪ್ಪ ಅಮ್ಮ ನೊಂದುಕೊಳ್ಳುತ್ತಾರೆ
"ಇದೊಂದು ಘಟನೆ ಅಲ್ಲ. ಸುನಿಲ್ ಗವಾಸ್ಕರ್ ಜೊತೆ ನಮ್ಮ ಫೋಟೊ ಬಳಸಿಕೊಂಡಿದ್ದಕ್ಕೆ ಡ್ರಗ್ ಕೇಸ್‌ನಲ್ಲಿ ಸಿಕ್ಕಿಸಿದ್ದರು. ನಾನು ಸಾಮಾನ್ಯವಾಗಿ ಈ ವಿಚಾರವಾಗಿ ಮಾತನಾಡುವುದಿಲ್ಲ. ನನಗೂ ಹೆಂಡ್ತಿ ಇದ್ದಾರೆ. ಅಪ್ಪ-ಅಮ್ಮ ಇದ್ದಾರೆ. ಅವರು ಇಂತಹ ವಿಚಾರಗಳು ಬಂದಾಗ ಸುಮ್ಮನೆ ನೊಂದುಕೊಳ್ಳುತ್ತಾರೆ." ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಗಾಜಿನ ಮನೆಯಲ್ಲಿ ನಿಂತಿರುವುದು ಗೊತ್ತಿದೆ.
"ನಾನು ಆಕ್ಟರ್ ಅಂದ್ಮೇಲೆ ಗಾಜಿಮನೆಯಲ್ಲಿ ನಿಂತಿದ್ದೀನಿ ಅನ್ನುವುದು ನನಗೆ ಗೊತ್ತಿದೆ. ಆದರೆ, ನನಗೂ ಮನೆಯಿದೆ. ವಯಸ್ಸಾಗಿರುವ ತಂದೆ-ತಾಯಿ ಇದ್ದಾರೆ. ನಾನು ನನ್ನ ಅತ್ತೆ ಮಾವ ಅವರಿಗೆ ಉತ್ತರ ಕೊಡಬೇಕು. ಅವರ ಮಗಳನ್ನು ಮದುವೆ ಮಾಡಿಕೊಟ್ಟಿದ್ದಾರೆ. ಅವರು ಏನು ಅಂದುಕೊಳ್ಳಲ್ಲ. ಕರ್ಫ್ಯೂ ಇದ್ದಾಗ ಊಟಕ್ಕೆ ಹೋದ್ವಿ ಅಷ್ಟೇ. ಇದ್ರಲ್ಲಿ FIR ಆಗುವಂತಹ ವಿಷ್ಯ ಏನಿದೆ? ನಾವೇನು ಕ್ರಿಮಿನಲ್‌ಗಳಾ?" ಅಂತ ಗಟ್ಟಿಮೇಳ ನಟ ರಕ್ಷಿತ್ ಪ್ರಶ್ನೆ ಮಾಡಿದ್ದಾರೆ.


Click it and Unblock the Notifications











