ಕಿರುತೆರೆಯಲ್ಲಿ ಇದೇ ಮೊದಲ ಬಾರಿಗೆ ಅಪ್ಪಟ ಕನ್ನಡ ಸಿನಿಮಾ 'ಕೆರೆಬೇಟೆ' ಪ್ರಸಾರ; ಎಲ್ಲಿ? ಯಾವಾಗ?
ಕನ್ನಡ ಚಿತ್ರರಂಗದ ಶೋಚನೀಯ ಸ್ಥಿತಿಯಲ್ಲಿದೆ. ಕಳೆದ ಒಂದೂವರೆ ಎರಡು ವರ್ಷಗಳಿಂದ ಕನ್ನಡದಲ್ಲಿ ಒಂದೇ ಒಂದು ಮೆಗಾ ಹಿಟ್ ಸಿನಿಮಾ ಬಂದಿಲ್ಲ. 'ಕೆಜಿಎಫ್ 2', 'ಕಾಂತಾರ' ಸಿನಿಮಾ ಬಳಿಕ ಕನ್ನಡದಲ್ಲಿ ಗೆದ್ದಿದ್ದು ಬೆರಳೆಣಿಕೆಯಷ್ಟು ಸಿನಿಮಾಗಳು ಮಾತ್ರ. ಹೀಗಾಗಿ ಓಟಿಟಿ ಹಾಗೂ ಸ್ಯಾಟಲೈಟ್ ಎರಡರಲ್ಲೂ ಕನ್ನಡ ಸಿನಿಮಾಗಳಿಗೆ ಕ್ಯಾರೆ ಎನ್ನುತ್ತಿಲ್ಲ. ಕೆಲವೇ ಕೆಲವು ಸಿನಿಮಾಗಳನ್ನು ಆಯ್ದು ಖರೀದಿ ಮಾಡಲಾಗುತ್ತಿದೆ.
ಈ ಒಂದೂವರೆ ಎರಡು ವರ್ಷಗಳಲ್ಲಿ ತೆರೆಕಂಡ ಕನ್ನಡದ ಕೆಲವು ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ದೊಡ್ಡ ಚಮತ್ಕಾರ ಮಾಡದ ಇರಬಹುದು. ಆದರೆ, ವಿಮರ್ಶಕರಿಗೆ ಮೆಚ್ಚುಗೆ ಪಡೆದುಕೊಂಡಿವೆ. ಫಿಲ್ಮ್ ಫೆಸ್ಟಿವಲ್‌ಗಳಲ್ಲಿ ಚಪ್ಪಾಳೆಗಳನ್ನು ಗಿಟ್ಟಿಸಿಕೊಂಡಿವೆ. ದೊಡ್ಡ ದೊಡ್ಡ ಫಿಲ್ಮ್ ಮೇಕರ್ಸ್ ಈ ಸಿನಿಮಾವನ್ನು ನೋಡಿ ಮೆಚ್ಚಿಕೊಂಡಿದ್ದಾರೆ. ಅಂತಹ ಸಿನಿಮಾಗಳಲ್ಲಿ ಒಂದು 'ಕೆರೆಬೇಟೆ'. ಗೌರಿ ಶಂಕರ್, ಬಿಂದು, ಗೋಪಾಲ್ ದೇಶಪಾಂಡೆ, ಸಂಪತ್ ಕುಮಾರ್, ಹರಿಣಿ ಸೇರಿದಂತೆ ಜನಪ್ರಿಯರ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

ಗೌರಿ ಶಂಕರ್ ನಟಿಸಿ, ನಿರ್ಮಿಸಿದ್ದ 'ಕೆರೆಬೇಟೆ' ಒಳ್ಳೆಯ ವಿಮರ್ಶೆ ಸಿಕ್ಕಿತ್ತು. ಸಿನಿಪ್ರೇಮಿಗಳು ಸ್ವಯಂ ಪ್ರೇರಿತರಾಗಿ ಈ ಸಿನಿಮಾವನ್ನು ಮೆಚ್ಚಿ ಪ್ರಚಾರ ಮಾಡಿದ್ದರು. ಪ್ರತಿಷ್ಠಿತ ಗೋವಾ ಫಿಲ್ಮ್ ಫೆಸ್ಟಿವಲ್‌ನಲ್ಲಿ ಈ ಸಿನಿಮಾ ಗಮನ ಸೆಳೆದಿತ್ತು. ಎಷ್ಟೇ ಸಿನಿಮಾಗಳು ಇನ್ನೂ ಸ್ಯಾಟಲೈಟ್ ಹಕ್ಕುಗಳು ಮಾರಾಟ ಆಗದೇ ಹಾಗೇ ಇವೆ. ಇಂತಹ ಸನ್ನಿವೇಶದಲ್ಲಿ 'ಕೆರೆಬೇಟೆ' ಸಿನಿಮಾದ ಹಕ್ಕನ್ನು ಕಲರ್ ಕನ್ನಡ ಖರೀದಿ ಮಾಡಿ ಮೊದಲ ಬಾರಿಗೆ ಕಿರುತೆರೆಯಲ್ಲಿ ಪ್ರಸಾರ ಮಾಡುತ್ತಿದೆ.
ಒಟಿಟಿ ಪ್ಲಾಟ್‌ಫಾರ್ಮ್‌ಗಳು ಹಾಗೂ ಮನರಂಜನಾ ವಾಹಿನಿಗಳೂ ಕನ್ನಡ ಸಿನಿಮಾಗಳನ್ನು ಖರೀದಿಸುವುದನ್ನು ನಿಲ್ಲಿಸಿ ಎರಡು ವರ್ಷಗಳ ಮೇಲಾಗಿದೆ. ಇದೂವರೆಗೂ ಕೆಲವೇ ಕೆಲವು ಸಿನಿಮಾಗಳ ಸ್ಯಾಟಲೈಟ್ ಹಕ್ಕುಗಳು ಸೇಲ್ ಆಗಿವೆ. ಅದನ್ನೂ ಸಿಕ್ಕಾಪಟ್ಟೆ ಲೆಕ್ಕ ಹಾಕಿ ಖರೀದಿ ಮಾಡಲಾಗಿದೆ. ಅಂತ ಕೆಲವೇ ಕೆಲವು ಸಿನಿಮಾಗಳಲ್ಲಿ 'ಕೆರೆಬೇಟೆ' ಕೂಡ ಒಂದು. ದಿಗ್ಗಜರ ಸಿನಿಮಾಗಳನ್ನು ಇಟ್ಟು ಈ ಸಿನಿಮಾವನ್ನು ಯಾಕೆ ಖರೀದಿ ಮಾಡಿದರು? ಈ ಪ್ರಶ್ನೆಗೆ ಸಿನಿಮಾದ ನಾಯಕ ಹಾಗೂ ನಿರ್ಮಾಪಕರ ಕೊಡುವ ಉತ್ತರ ಹೀಗಿದೆ.
"ನನ್ನ ಗಮನಕ್ಕೆ ಬಂದ ಹಾಗೆ ಕಳೆದ ಒಂದೂವರೆ ವರ್ಷದಲ್ಲಿ ಸುಮಾರು 500 ರಿಂದ 600 ಸಿನಿಮಾಗಳು ಬಿಡುಗಡೆಯಾಗಿವೆ. ಅದರಲ್ಲಿ ಕೇವಲ ಬೆರಳೆಣಿಕೆಯಷ್ಟು ಅಂದರೆ, ಅಂದಾಜು 15 ಸಿನಿಮಾಗಳನ್ನು ಕನ್ನಡದ ಮನರಂಜನಾ ವಾಹಿನಿಗಳು ಖರೀದಿ ಮಾಡಿರಬಹುದು. ಕನ್ನಡದ ಹೆಸರಾಂತ ಸ್ಯಾಟಲೈಟ್ ಚಾನೆಲ್ ಗಳಾಗಿರುವ ಉದಯ ಟಿವಿ, ಸುವರ್ಣ ಟಿವಿ, ಕಲರ್ಸ್ ಕನ್ನಡ, ಜೀ ಕನ್ನಡ ಖರೀದಿ ಮಾಡಿದೆ. ಅದರಲ್ಲೂ ಒಂದು ದೊಡ್ಡ ನಾಯಕ ನಟರ ಸಿನಿಮಾಗಳನ್ನು ಖರೀದಿಸಿದೆ. ಇಲ್ಲವೇ ಪ್ರಭಾವೀ ನಟ ಸಿನಿಮಾಗಳನ್ನು ಖರೀದಿ ಮಾಡಲಾಗಿದೆ." ಎನ್ನುತ್ತಾರೆ ನಟ ಗೌರಿ ಶಂಕರ್.

ಇಂತಹ ಪರಿಸ್ಥಿತಿಯಲ್ಲಿ ಕಲರ್ಸ್ ಕನ್ನಡ ಅಪ್ಪಟ ಮಲೆನಾಡು ಸೊಗಡಿನ ಸಿನಿಮಾ 'ಕೆರೆಬೇಟೆಯನ್ನು ಖರೀದಿಸಿ ಪ್ರಸಾರ ಮಾಡುತ್ತಿದೆ. ಇದೇ ಮೇ 25ರಂದು ಬೆಳಗ್ಗೆ 11.30ಕ್ಕೆ ಮೊದಲ ಬಾರಿಗೆ ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್ ಮಾಡುತ್ತಿದೆ. ಚಿತ್ರಮಂದಿರದಲ್ಲಿ ಯಾರೆಲ್ಲ ಮಿಸ್ ಮಾಡಿಕೊಂಡಿದ್ದರೋ, ಅವರು ಕೆರೆಬೇಟೆಯನ್ನು ಕಿರುತೆರೆಯಲ್ಲಿ ನೋಡುವ ಅವಕಾಶವಿದೆ. ದಿಗ್ಗಜರೇ ಮೆಚ್ಚಿದ ಸಿನಿಮಾ ಕಿರುತೆರೆಯಲ್ಲಿ ಜೋರಾಗಿ ಸದ್ದು ಮಾಡುತ್ತಾ ಅನ್ನೋ ಕುತೂಹಲ ಎಲ್ಲರಲ್ಲೂ ಇದೆ.
ಇನ್ನು ಸಿನಿಮಾದ ಕಥೆಯ ಕಡೆಗೆ ಬರೋದಾರೇ, 'ಕೆರೆಬೇಟೆ' ಅನ್ನೋದು ಮಲೆನಾಡಿನ ಭಾಗದ ಬಹುತೇಕ ಕಡೆ ನಡೆಯುವ ಒಂದು ಸಂಪ್ರದಾಯ ಕ್ರೀಡೆ. ಬೇಸಿಗೆಯಲ್ಲಿ ಅಲ್ಲಿನ ಹಳ್ಳಿಯ ಜನರು ಒಟ್ಟಾಗಿ ಸೇರಿಕೊಂಡು ಕೂಣಿ, ಬಲೆ ಹಿಡಿದು ಕೆರೆಗೆ ಇಳಿಯುತ್ತಾರೆ. ಪೈಪೋಟಿಗೆಗೆ ಬಿದ್ದು ಮೀನು ಹಿಡಿಯುತ್ತಾರೆ. ಎಲ್ಲರಿಗಿಂತ ಹೆಚ್ಚು ಮೀನು ಹಿಡಿಯಬೇಕೆಂಬ ಹುರುಪು, ಧಾವಂತ ಎಲ್ಲರಲ್ಲೂ ಇರುತ್ತೆ. ಈ ಹಿನ್ನೆಲೆಯನ್ನಿಟ್ಟುಕೊಂಡು ಈ ಸಿನಿಮಾದ ಕಥೆಯನ್ನು ಹೆಣೆಯಲಾಗಿದೆ.


Click it and Unblock the Notifications











