ಕ್ಯಾರೆಕ್ಟರ್ ಹೆಸರನ್ನೇ ಟೈಟಲ್ ಆಗಿ ಇಟ್ಟು ಗೆದ್ದ ಧಾರಾವಾಹಿಗಳ ಬಗ್ಗೆ ನಿಮಗೆ ಗೊತ್ತೇ?
ಕನ್ನಡದಲ್ಲಿ ಧಾರಾವಾಹಿಗಳನ್ನು ಪ್ರಸಾರ ಮಾಡುವ ಸಾಕಷ್ಟು ವಾಹಿನಿಗಳಿವೆ. ಉದಯ, ಕಲರ್ಸ್ ಕನ್ನಡ, ಝೀ ಕನ್ನಡ, ಸುವರ್ಣ ಹೀಗೆ ಹತ್ತು ಹಲವು ವಾಹಿನಿಗಳು ತಮ್ಮದೇ ಆದ ರೀತಿಯಲ್ಲಿ ಯಶಸ್ವಿ ಧಾರಾವಾಹಿಗಳನ್ನು ಪ್ರೇಕ್ಷಕರಿಗೆ ತಲುಪಿಸುತ್ತಿವೆ.
ಅಂತಹ ಚಾನೆಲ್‌ಗಳಲ್ಲಿ ಕಲರ್ಸ್ ಕನ್ನಡವೂ ಒಂದು. ಅದರಲ್ಲೂ ಈ ಬರಹದಲ್ಲಿ ನಾವು ಹೇಳ ಹೊರಟಿರುವ ವಿಷಯ ಏನೆಂದರೆ, ನಾಯಕ ನಾಯಕಿಯರ ಹೆಸರನ್ನೇ ಶೀರ್ಷಿಕೆಯನ್ನಾಗಿ ಇಟ್ಟುಕೊಂಡ ಅದೆಷ್ಟೋ ಧಾರಾವಾಹಿಗಳು ಕನ್ನಡದಲ್ಲಿ ಪ್ರಸಾರವಾಗುತ್ತವೆ. ಸೀರಿಯಲ್ ಹೆಸರು ಕೇಳಿದರೆ ಸಾಕು, ನಾಯಕ ನಾಯಕಿಯ ಹೆಸರನ್ನು ನೆನಪಿಸಿಕೊಳ್ಳಬಹುದಾದಷ್ಟು ಸಾಮ್ಯತೆ ಈ ಟೈಟಲ್‌ಗಳಿಗೆ ಇರುತ್ತವೆ. ಈಗ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಅಂತಹ ಧಾರಾವಾಹಿಗಳನ್ನು ನೋಡೋಣ ಬನ್ನಿ.

ಚುಕ್ಕಿ ತಾರೆ
ಸೋಮವಾರದಿಂದ ಶನಿವಾರ ಪ್ರತಿದಿನ ಸಂಜೆ 6 ಗಂಟೆಗೆ ಪ್ರಸಾರವಾಗುವ ಈ ಧಾರಾವಾಹಿಗೆ ಸಾಕಷ್ಟು ಪ್ರೇಕ್ಷಕರಿದ್ದಾರೆ. ಚುಕ್ಕಿ ಎಂಬ ಪುಟ್ಟ ಹುಡುಗಿ ಈ ಸೀರಿಯಲ್‌ನ ಕಥಾನಾಯಕಿ. ಆಕೆಯ ಹೆಸರಿನಲ್ಲೇ ಈ ಧಾರಾವಾಹಿಯ ಶೀರ್ಷಿಕೆಯೂ ಇದೆ. ಇತ್ತೀಚಿಗಷ್ಟೇ ಆರಂಭವಾಗಿರುವ ಈ ಧಾರಾವಾಹಿ ಮನೆ ಮನವನ್ನು ತಲುಪುವಲ್ಲಿ ಯಶಸ್ವಿಯಾಗಿ ಮುಂದುವರಿಯುತ್ತಿದೆ. ಇನ್ನು ಈ ಧಾರಾವಾಹಿಯ ಆರಂಭದಲ್ಲಿ ಖ್ಯಾತ ಗಾಯಕ, ಕನ್ನಡಿಗರ ನೆಚ್ಚಿನ ನವೀನ್ ಸಜ್ಜು ಚುಕ್ಕಿಯ ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ಭಾಗ್ಯಲಕ್ಷ್ಮಿ
ಈಗಾಗಲೇ ಕನ್ನಡಿಗರ ನೆಚ್ಚಿನ ಧಾರಾವಾಹಿಗಳಲ್ಲಿ ಒಂದಾಗಿರುವ 'ಭಾಗ್ಯಲಕ್ಷ್ಮಿ' ಪ್ರತಿದಿನ ಸಂಜೆ ಏಳರಿಂದ ಏಳುವರೆಯ ತನಕ ಪ್ರಸಾರವಾಗುವ ಸೀರಿಯಲ್. ಈ ಧಾರಾವಾಹಿ ಮತ್ತು ಏಳೂವರೆಗೆ ಮೂಡಿ ಬರುವ 'ಲಕ್ಷ್ಮಿಬಾರಮ್ಮ' ಈ ಮೊದಲು ಒಂದೇ ಧಾರಾವಾಹಿಯಾಗಿ ಪ್ರಸಾರಗೊಳ್ಳುತ್ತಿತ್ತು. ಇಲ್ಲೂ ಕೂಡ ನಾಯಕಿಯ ಹೆಸರನ್ನೇ ಶೀರ್ಷಿಕೆಯಾಗಿ ಇಟ್ಟುಕೊಳ್ಳಲಾಗಿದೆ. ಸಾಕಷ್ಟು ಜನ ಮನ್ನಣೆಯನ್ನು ಪಡೆದಿರುವ ಇದರಲ್ಲಿ ನಾಯಕಿ ಭಾಗ್ಯ ಉತ್ತಮ ಸೊಸೆಯಾಗಿ, ಪತ್ನಿಯಾಗಿ, ಮಗಳಾಗಿ, ತಾಯಿಯಾಗಿ ಇಡೀ ಮನೆಗೆ ಭಾಗ್ಯಲಕ್ಷ್ಮಿಯಂತೆಯೇ ಇದ್ದಾಳೆ.
'ಲಕ್ಷ್ಮೀ ಬಾರಮ್ಮ'
'ಲಕ್ಷ್ಮೀ ಬಾರಮ್ಮ' ಎಂಬ ಹೆಸರಿನ ಧಾರಾವಾಹಿ ಈ ಹಿಂದೆಯೂ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿತ್ತು. ಪ್ರೇಕ್ಷಕರಿಗೆ ಬಹಳಷ್ಟು ಹತ್ತಿರವಾಗಿದ್ದ ಆ ಧಾರಾವಾಹಿಯಂತೆಯೇ ಈಗ ಮೂಡಿ ಬರುತ್ತಿರುವ ಸೀರಿಯಲ್ 'ಲಕ್ಷ್ಮಿಬಾರಮ್ಮ' ಕೂಡ ಮೆಚ್ಚುಗೆಯನ್ನು ಪಡೆದಿದ್ದು, ಇದರೊಂದಿಗೆ ಟಿಆರ್‌ಪಿಯಲ್ಲಿ ಟಾಪ್ ಐದರಲ್ಲಿ ಸ್ಥಾನವನ್ನು ಗಿಟ್ಟಿಸಿಕೊಂಡಿದೆ. ಇಲ್ಲೂ ಕೂಡ ಉಳಿದ ಧಾರಾವಾಹಿಗಳಂತೆ ಕಥಾನಾಯಕಿ ಲಕ್ಷ್ಮಿಯ ಹೆಸರನ್ನೇ ಶೀರ್ಷಿಕೆಯಾಗಿ ಉಪಯೋಗಿಸಲಾಗಿದೆ.

ಶ್ರೀ ಗೌರಿ
ಎಷ್ಟೋ ಬಾರಿ ದೇವತೆಗಳ ಹೆಸರು ಅಥವಾ ಹಳೇ ಹೆಸರು ಈಗಿನವರಿಗೆ ಮತ್ತೆ ಇಷ್ಟವಾಗುತ್ತಿರುವುದನ್ನು ನಾವು ಕಾಣಬಹುದು. ಅದಕ್ಕೆ ಉದಾಹರಣೆ ಎಂಬಂತೆ ಧಾರಾವಾಹಿಗಳ ಹೆಸರು, ಪಾತ್ರದ ಹೆಸರೂ ಹಾಗೆ ಇರುತ್ತವೆ. ನಾವು ಇಷ್ಟು ಹೊತ್ತು ನೋಡಿದಂತಹ ಧಾರಾವಾಹಿಯ ಹೆಸರುಗಳಂತೆಯೇ ಪ್ರತಿದಿನ 8.30 ರಿಂದ 9 ಗಂಟೆಗೆ ತನಕ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ 'ಶ್ರೀ ಗೌರಿ' ಧಾರವಾಹಿಯೂ ನಾಯಕಿಯ ಹೆಸರನ್ನೇ ಶೀರ್ಷಿಕೆಯನ್ನಾಗಿಸಿಕೊಂಡಿದೆ. ತಮ್ಮ ಅದ್ಭುತ ನಟನೆಯ ಮೂಲಕ, ಕಥಾ ಹಂದರದ ಮೂಲಕ ಗಮನಸೆಳೆಯುತ್ತಿರುವ ಈ ಧಾರಾವಾಹಿ ಟಿ ಆರ್ ಪಿ ಯಲ್ಲಿಯೂ ಮುಂದಿದ್ದು ಸಾಕಷ್ಟು ಪ್ರೇಕ್ಷಕರನ್ನು ಗಳಿಸಿಕೊಂಡಿದೆ.
ರಾಮಾಚಾರಿ
ಇದು ನಾಯಕನ ಹೆಸರನ್ನು ಶೀರ್ಷಿಕೆಯಾಗಿರಿಸಿರುವ ಧಾರಾವಾಹಿ. ಇದರಲ್ಲಿ ನಾಯಕಿಯ ಪಾತ್ರದ ಹೆಸರು ಚಾರುಲತಾ. ರಾಮಾಚಾರಿ ಹೆಸರಿನೊಂದಿಗೆಯೇ ಬೆಸೆದುಕೊಂಡಿರುವ ಚಾರು, ಕಿರುತೆರೆ ಪ್ರೇಕ್ಷಕರ ಫೇವರೆಟ್ ಜೋಡಿಗಳಲ್ಲಿ ಒಂದಾಗಿದೆ. ಒಟ್ಟಿನಲ್ಲಿ ಬೇರೆ ವಾಹಿನಿಗಳನ್ನು ಕೂಡ ಹೀಗೆ ಗಮನಿಸಿದರೆ ಹೆಚ್ಚಿನವು ನಾಯಕ ಅಥವಾ ನಾಯಕಿಯ ಹೆಸರಿಗೆ ಸಂಬಂಧಿಸಿದ ಶೀರ್ಷಿಕೆಗಳೇ ಆಗಿರುತ್ತವೆ.


Click it and Unblock the Notifications











