ಬಿಗ್ ಬಾಸ್ ಕನ್ನಡ 12 ಶೋ ಒಂದು ದಿನ ಸ್ಥಗಿತ; ನಷ್ಟ ಆಗಿದ್ದು ಎಷ್ಟು ಲಕ್ಷ ಗೊತ್ತೇ?
ಬಿಗ್ ಬಾಸ್ ಕನ್ನಡ ಸೀಸನ್ 12ಕ್ಕೆ ಆರಂಭದಲ್ಲಿಯೇ ವಿಘ್ನಗಳು ಎದುರಾಗಿದೆ. ಬಿಗ್ ಬಾಸ್ ಸೆಟ್ಟು ಹಾಕಿರುವ ಜಾಲಿವುಡ್ ಸ್ಟುಡಿಯೋಗೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ನೋಟಿಸ್ ನೀಡಿ ಸೀಲ್ ಮಾಡಿದೆ. ಹೀಗಾಗಿ ಬಿಗ್ ಬಾಸ್ ಶೋ ಅನ್ನು ಅನಿವಾರ್ಯವಾಗಿ ಸ್ಥಗಿತಗೊಳಿಸಬೇಕಿದೆ. ಈ ಅವಾಂತರದಿಂದ ಬಿಗ್ ಬಾಸ್ ಶೋ ಒಂದು ದಿನದ ಶೂಟಿಂಗ್ ಸ್ಥಗಿತಗೊಂಡಿದೆ. ಒಂದು ದಿನದ ಅಂತರದಲ್ಲಿ ಬಿಗ್ ಬಾಸ್ ಎಪಿಸೋಡ್‌ಗಳನ್ನು ಶೂಟ್ ಮಾಡಲಾಗುತ್ತಿತ್ತು. ಆದ್ರೀಗ ಒಂದು ದಿನ ಸ್ಥಗಿತಗೊಂಡಿದ್ದು, ಶೋ ಮೇಲೆ ದೊಡ್ಡ ಪರಿಣಾಮವನ್ನೇ ಬೀರಲಿದೆ.
ಒಂದು ದಿನ ಬಿಗ್ ಬಾಸ್ ಶೋ ನಿಂತರೆ ವಾಹಿನಿ ಭಾರೀ ನಷ್ಟ ಆಗುತ್ತೆ ಎಂದು ಮಾಜಿ ಸ್ಪರ್ಧಿಗಳು ಅಭಿಪ್ರಾಯ ಪಟ್ಟಿದ್ದಾರೆ. ಹಾಗೇ ಈ ಶೋಗಾಗಿ ಕೆಲಸ ಮಾಡುವವರು ಉದ್ಯೋಗ ವಂಚಿತರಾಗುತ್ತಾರೆ. ಇದರಿಂದ ದೊಡ್ಡ ಸಮಸ್ಯೆ ಉಲ್ಬಣ ಆಗುತ್ತೆ ಎಂದು ಅಭಿಪ್ರಾಯ ವ್ಯಕ್ತವಾಗಿದೆ. ಬಿಗ್ ಬಾಸ್ ಮಾಜಿ ಸ್ಪರ್ಧಿ ಪ್ರಶಾಂತ್ ಸಂಬರ್ಗಿ ಮಾಧ್ಯಮಗಳಿಗೆ ನೀಡಿದ ಹೇಳಿಕೆಯಲ್ಲಿ ಒಂದು ದಿನ ಶೂಟಿಂಗ್ ಸ್ಥಗಿತದಿಂದ ಎಷ್ಟು ನಷ್ಟ ಆಗುತ್ತೆ? ಅನ್ನೋದನ್ನು ಹೇಳಿದ್ದಾರೆ.

ಬಿಗ್ ಬಾಸ್ ಆರಂಭ ಆದ ಬಳಿಕ ಮಧ್ಯದಲ್ಲಿ ನಿಂತ ಉದಾಹರಣೆಗಳೇ ಇಲ್ಲ. ಕೋವಿಡ್ ಸಮಯ ಒಂದನ್ನು ಹೊರತು ಪಡಿಸಿದರೆ, ಉಳಿಸದ ಸಮಯದಲ್ಲಿ ಬಿಗ್ ಬಾಸ್ ಕನ್ನಡ ಸರಾಗವಾಗಿ ಮುಂದುವರೆದಿದೆ. ಇದೇ ಮೊದಲ ಬಾರಿಗೆ ಬಿಗ್ ಬಾಸ್ ನಿಂತಿರೋದು. ಹೀಗಾಗಿ ಸಹಜವಾಗಿ ಕಿರುತೆರೆ ವೀಕ್ಷಕರಲ್ಲಿ ನಿರಾಸೆ ಮೂಡಿತ್ತು. ಒಂದ್ವೇಳೆ ಬಿಗ್ ಬಾಸ್ 15 ರಿಂದ 20 ದಿನ ನಿಂತರೆ ಗತಿಯೇನು ಅಂತ ಆತಂಕ ಪಟ್ಟುಕೊಂಡಿದ್ದರು.
ಬಿಗ್ ಬಾಸ್ ಕನ್ನಡದ ಮಾಜಿ ಸ್ಪರ್ಧಿ ಪ್ರಶಾಂತ್ ಸಂಬರ್ಗಿ ಟಿವಿ9ಗೆ ನೀಡಿದ ಸಂದರ್ಶನದಲ್ಲಿ ಹಲವು ಇಂಟ್ರೆಸ್ಟಿಂಗ್ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಈ ಬಾರಿ ಬಾರೀ ಬದಲಾವಣೆ ಆಗೋದು ಕನ್ಫರ್ಮ್ ಎಂದು ಹೇಳಿದ್ದಾರೆ. ಸಾಕಷ್ಟು ಹಣ ಹರಿದು ಬರುತ್ತಿದೆ. ಈ ಕಾರಣಕ್ಕೆ ದೊಡ್ಡ ಸಕ್ಸಸ್ ಮಾಡುವುದಕ್ಕೆ ಕಲರ್ಸ್ ಕನ್ನಡ ಪ್ಲ್ಯಾನ್ ಮಾಡಿದೆ ಎಂದು ಹೇಳಿದ್ದಾರೆ.
"ಈ ಬಾರಿ ವೈಲ್ಡ್ ಕಾರ್ಡ್ ಎಂಟ್ರಿ ಕೊಡುವವರು ಇರುತ್ತಾರೆ. ತುಂಬಾ ಜನರನ್ನು ಆಚೆ ಹಾಕುತ್ತಾರೆ. ಈ ಬಾರಿ ಬಿಗ್‌ಬಾಸ್‌ಗೆ ಪ್ರಾಯೋಜಕರು ಹೆಚ್ಚಾಗಿದ್ದಾರೆ. ಒಂದೊಳ್ಳೆ ಪ್ರಾಡಕ್ಟ್ ಕೊಡಬೇಕು ಅಂತ ಕ್ರಿಯೇಟಿವ್ ಟೀಮ್‌ಗೆ ಒಂದು ಒತ್ತಡವಿದೆ. ಆ ಕಂಟೆಂಟ್ ಅನ್ನು ಕೊಡುವುದಕ್ಕೆ ಕಲಾವಿದರು ಬೇಕು. ಕಲಾವಿದರು ಬೇಕು ಅಂದರೆ, ಅವರಿಗೆ ಎಕ್ಸ್‌ಪೀರಿಯನ್ಸ್ ಆಗಿರಬೇಕು. ಹೀಗಾಗಿ ಅನಾನುಭವಿಗಳ ಜೊತೆ ಅನುಭವಿಗಳನ್ನು ಹಾಕಬಹುದು ಅಂತ ಅನಿಸುತ್ತಿದೆ" ಎಂದು ಪ್ರಶಾಂತ್ ಸಂಬರ್ಗಿ ಹೇಳಿದ್ದಾರೆ.
ಇನ್ನು ಬಿಗ್ ಬಾಸ್ ಮನೆಯೊಳಗೆ ಇರುವವರಿಗೆ ಈ ಘಟನೆ ಶಾಕ್ ಕೊಟ್ಟಿರುತ್ತೆ ಎಂದೂ ಅಭಿಪ್ರಾಯ ಪಟ್ಟಿದ್ದಾರೆ. "ದಿಢೀರನೇ ಮನೆಯಿಂದ ಹೊರಗೆ ಕಳುಹಿಸಿದಾಗ ಶಾಕಿಂಗ್ ಆಗಿರುತ್ತೆ. ಬೆಂಕಿ ಅವಘಡ ಅಂದುಕೊಂಡ್ರಾ? ಏನೋ ಆಗಿದೆ ಅಂದುಕೊಂಡ್ರಾ? ಗೊತ್ತಿಲ್ಲ. ಆದರೆ, ಶಾಕಿಂಗ್ ಅಂತೂ ಆಗಿದ್ದರು. ಅವರೆಲ್ಲ 12 ದಿನಗಳ ಕಾಲ ಮೊಬೈಲ್, ಟಿವಿ, ಸಂಬಂಧಿಕ ಸಂಪರ್ಕದಿಂದ ಬದುಕಿರಬೇಕಾದರೆ, ಹೀಗಾಗಿ ಮನಸ್ಸು ಗೊಂದಲ ಆಗಿರುತ್ತೆ. ಆ ಮೇಲೆ ಬಿಗ್ ಬಾಸ್ ಸರ್ಕಾರದಿಂದ ಆರ್ಡರ್ ಬಂದಿದೆ ಎಂದು ಹೇಳಿರಬಹುದು." ಎಂದಿದ್ದಾರೆ.
ಇದರೊಂದಿಗೆ ಬಿಗ್ ಬಾಸ್ ಕನ್ನಡದ ಒಂದು ಎಪಿಸೋಡ್‌ಗೆ ಎಷ್ಟು ಖರ್ಚಾಗುತ್ತೆ ಅನ್ನೋದನ್ನೂ ರಿವೀಲ್ ಮಾಡಿದ್ದಾರೆ. "ಒಂದು ಎಪಿಸೋಡ್ ಪ್ರಸಾರ ಆಗಿಲ್ಲ ಅಂದರೆ, 30 ರಿಂದ 40 ಲಕ್ಷ ರೂಪಾಯಿ ನಷ್ಟ ಆಗುತ್ತೆ. ಜಾಹೀರಾತಿನಿಂದ ಬರುವ ಹಣ ಹಾಗೂ ಕಂಟೆಂಟ್‌ನಿಂದ ಬರುವ ಹಣ. ಹಾಗೇ ಪ್ರೊಡಕ್ಷನ್ ತಂಡ ಎಲ್ಲರಿಗೂ ಹಣವನ್ನು ಕೊಡಬೇಕಾಗುತ್ತೆ. ಹೀಗಾಗಿ ಇಷ್ಟಂತೂ ಲಾಸ್ ಆಗುತ್ತೆ" ಎನ್ನುತ್ತಾರೆ ಪ್ರಶಾಂತ್ ಸಂಬರ್ಗಿ.


Click it and Unblock the Notifications











