'ಬೃಂದಾವನ' ಸೀರಿಯಲ್ ಮುಗಿಯೋಕೆ ವರುಣ್ ಆರಾಧ್ಯ ಕಾರಣವೇ? ಏನಂತಾರೆ 'ಪವಿತ್ರ ಬಂಧನ' ನಟಿ?
ಬಿಗ್ ಬಾಸ್ ಮುಗಿಯುತ್ತಿದ್ದಂತೆ ಕಲರ್ಸ್ ಕನ್ನಡ ಹೊಚ್ಚ ಹೊಸ ಧಾರಾವಾಹಿಗಳನ್ನು ಪರಿಚಯಿಸುತ್ತಿದೆ. ತನ್ನ ಕಿರುತೆರೆ ವೀಕ್ಷಕರನ್ನು ಹಾಗೇ ಸೆಳೆದಿಟ್ಟುಕೊಳ್ಳುವುದಕ್ಕೆ 'ಪವಿತ್ರ ಬಂಧನ' ಸೀರಿಯಲ್ ಶುರುವಾಗಿದೆ. ಬಿಗ್ ಬಾಸ್ ಕನ್ನಡ ಸೀಸನ್ 12ರ ಹ್ಯಾಂಡ್‌ಸಮ್ ಹಂಕ್ ಸೂರಜ್ ಈ ಧಾರಾವಾಹಿಗೆ ಹೀರೋ. ಹಾಗೇ ಈ ಹಿಂದೆ ಬಂದಿದ್ದ 'ಬೃಂದಾವನ' ಧಾರಾವಾಹಿಯ ನಟಿ ಅಮೂಲ್ಯ ಇದಕ್ಕೆ ನಾಯಕಿ.
ಈಗಾಗಲೇ 'ಪವಿತ್ರ ಬಂಧನ' ಧಾರಾವಾಹಿಯ ಪ್ರೋಮೊಗಳು, ತುಣುಕುಗಳು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ. ಈ ಸೀರಿಯಲ್ ಮೂಲಕ ನಟಿ ಅಮೂಲ್ಯ ಮತ್ತೆ ಕಮ್‌ಬ್ಯಾಕ್ ಮಾಡಿದ್ದಾರೆ. ಈ ಹಿಂದೆ 'ಬೃಂದಾವನ' ಸೀರಿಯಲ್ ಮಾಡಿದ್ದ ಅಮೂಲ್ಯ ಈ ಧಾರಾವಾಹಿಗೆ ನಾಯಕಿಯಾಗಿದ್ದಾರೆ. ಈ ವೇಳೆ ಅಮೂಲ್ಯ ತನ್ನ ಹೊಸ ಧಾರಾವಾಹಿ 'ಪವಿತ್ರ ಬಂಧನ' ಹಾಗೂ 'ಬೃಂದಾವನ' ಧಾರಾವಾಹಿ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

'ಬೃಂದಾವನ' ಸೀರಿಯಲ್ ಮುಗಿದು ಎರಡು ವರ್ಷಗಳಾದ್ಮೇಲೆ ಈ ಪ್ರಾಜೆಕ್ಟ್ ಮಾಡುತ್ತಿರೋ ಅಮೂಲ್ಯ ಎರಡು ವರ್ಷ ತೆಲುಗು ಸೀರಿಯಲ್‌ನಲ್ಲಿ ಬ್ಯುಸಿಯಾಗಿದ್ದರು. ಈಗ ಒಪ್ಪಿಕೊಂಡಿರುವ 'ಪವಿತ್ರ ಬಂಧನ' ಅಮೂಲ್ಯ ಅವರಿಗೆ ಕಲರ್ಸ್ ಕನ್ನಡದಲ್ಲಿ ಮೂರನೇ ಪ್ರಾಜೆಕ್ಟ್. ಈ ವೇಳೆ ಫಿಲ್ಮಿಬೀಟ್ ಕನ್ನಡಕ್ಕೆ ನೀಡಿದ ಸಂದರ್ಶನದಲ್ಲಿ 'ಬೃಂದಾವನ' ಸೀರಿಯಲ್ ಮುಗಿಯುವುದಕ್ಕೆ ವರುಣ್ ಆರಾಧ್ಯ ಕಾರಣನಾ? ಅಲ್ವಾ? ಅನ್ನೋದನ್ನು ಬಹಿರಂಗ ಪಡಿಸಿದ್ದಾರೆ.
ಮೊದಲಿಗೆ 'ಪವಿತ್ರ ಬಂಧನ' ಮೂಲಕ ಮತ್ತೆ ಕಮ್‌ಬ್ಯಾಕ್ ಮಾಡಿದ್ದು, ಸೂರಜ್ ಸೀರಿಯಲ್‌ಗೆ ಎಂಟ್ರಿ ಕೊಟ್ಟಿದ್ದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. "ಸೂರಜ್ ಅವರು ಬಿಗ್ ಬಾಸ್‌ನಿಂದ ಎಲಿಮಿನೇಟ್ ಆಗಿ ಡೈರೆಕ್ಟ್ ಆಗಿ ನಮ್ಮ ಸೀರಿಯಲ್‌ಗೆ ಬಂದರು. ನಮಗೆ ತುಂಬಾ ಜನ ಹೀರೋ ಅಂತ ಸೆಲೆಕ್ಟ್ ಆಗಿ ಆಗಿ ಶೂಟಿಂಗ್‌ಗೆ ಬರೋ ತನಕ ಯಾರೂ ಬರುತ್ತಲೇ ಇರಲಿಲ್ಲ. ಕೊನೆಗೆ ಋಣ ಇದ್ದಿದ್ದು ಸೂರಜ್ ಅವರಿಗೆ ಅನಿಸುತ್ತೆ. ಬಿಗ್ ಬಾಸ್‌ನಿಂದ ಜನಪ್ರಿಯತೆ ಪಡೆದುಕೊಂಡು ಸೀದಾ ನಮ್ಮ ಸೀರಿಯಲ್‌ಗೆ ಬಂದಿದ್ದು ನಮಗೆ ಪ್ಲಸ್ ಪಾಯಿಂಟ್. ಆ ಲೈಮ್ ಲೈಟ್‌ನಿಂದ ಸೀದಾ ಸೀರಿಯಲ್‌ಗೆ ಬಂದಿದ್ದು ಖುಷಿ ವಿಚಾರ." ಎಂದು ಹೇಳಿದ್ದಾರೆ.
ಇನ್ನು 'ಪವಿತ್ರ ಬಂಧನ' ಸೀರಿಯಲ್ ಮೂಲಕ ಲಂಗ-ಧಾವಣಿಯಿಂದ ಚೂಡಿದಾರದವರೆಗೂ ತಮ್ಮ ಪಾತ್ರ ಬಂದಿದ್ದಕ್ಕೆ ಖುಷಿಯಾಗಿದ್ದಾರೆ. "ಹಿಂದೆ ಮಾಡಿದ ಎರಡು ಪ್ರಾಜೆಕ್ಟ್‌ಗಳು ಸೀರೆ, ಲಂಗ-ಧಾವಣಿಯಲ್ಲೇ ಇತ್ತು. ದಾಸ ಪುರಂದರ ಪೌರಾಣಿಕ ಶೋ ಆಗಿದ್ದರಿಂದ ಕಂಪ್ಲೀಟ್ ಡಿಫ್ರೆಂಟ್ ಆಗಿತ್ತು. ಈ ಬಾರಿ ಪವಿತ್ರ ಬಂಧನದಲ್ಲಿ ಜೂಡಿದಾರ ಬಂದು ಅಪ್‌ಗ್ರೇಡ್ ಆಗಿದ್ದೀನಿ. ಪಾತ್ರ ಕೂಡ ಯಾರಾದರೂ ಬೈದರೆ ಅತ್ತು ಕೂರದೇ, ಯಾಕೆ ತಪ್ಪಾಗಿದೆ ಅಂತ ಕೇಳುವಂತಹ ಪಾತ್ರವಿದು. ಇಂತಹ ಪಾತ್ರ ಮಾಡುತ್ತಿರೋದು ಇದೇ ಮೊದಲು" ಎನ್ನುತ್ತಾರೆ.
ಇನ್ನು 'ಬೃಂದಾವನ' ದಿಢೀರನೇ ಅಂತ ಕಂಡಿದ್ದಕ್ಕೆ ವರುಣ್ ಆರಾಧ್ಯ ಕಾರಣ ಎಂಬ ಟೀಕೆಗಳು ಕೇಳಿ ಬಂದಿದ್ದವು. ಅದಕ್ಕೆ ಆ ಧಾರಾವಾಹಿಗೂ ನಾಯಕಿಯಾಗಿದ್ದ ಅಮೂಲ್ಯ ಪ್ರತಿಕ್ರಿಯಿಸಿದ್ದಾರೆ. ಒಂದು ಸೀರಿಯಲ್ ಅಂತ್ಯ ಕಾಣುವುದಕ್ಕೆ ಆರ್ಟಿಸ್ಟ್ ಕಾರಣವಲ್ಲ ಎಂದಿದ್ದಾರೆ. "ಒಂದು ಸೀರಿಯಲ್ ಶುರು ಆಗುವುದಕ್ಕೆ ಆಗಲಿ, ಇಲ್ಲ ಮುಗಿಯುವುದಕ್ಕೆ ಆಗಲಿ ಆರ್ಟಿಸ್ಟ್‌ಗಳು ಕಾರಣ ಅಲ್ವೇ ಅಲ್ಲ. ಪ್ರಾಜೆಕ್ಟ್ ತೆಗೆದುಕೊಳ್ಳುವಾಗ ಕಥೆ ಹಾಗೂ ಪಾತ್ರ ಹೀಗಿದೆ ಅಂತ ವಿವರಿಸುತ್ತಾರೆ. ಅದಕ್ಕೆ ನಾವು ಸೂಟ್ ಆಗುತ್ತೇವೆ ಅನ್ನೋ ಹಾಕಿದ್ದರೆ, ಅದಕ್ಕೆ ಆಯ್ಕೆ ಮಾಡುತ್ತಾರೆ. ಬೇರೆಯವರ ಬಗ್ಗೆ ನಾನು ಹೇಳುವುದಕ್ಕೆ ಆಗುವುದಿಲ್ಲ. ನನಗೆ ಸಿಕ್ಕಿರುವ ಪ್ರಾಜೆಕ್ಟ್ ಅನ್ನು ನಾನು ಪ್ರಾಮಾಣಿಕವಾಗಿಯೇ ಮಾಡಿಕೊಂಡು ಬಂದಿದ್ದೇನೆ." ಎಂದು ನಟಿ ಅಮೂಲ್ಯ ಹೇಳಿದ್ದಾರೆ.
ಇನ್ನು "ಸೀರಿಯಲ್ ಚೆನ್ನಾಗಿ ಒಡ್ತಾ ಇಲ್ವಾ ಅನ್ನೋದು ನನ್ನ ಕೈಯಲ್ಲಿ ಇಲ್ಲ. ನಾನು ಅದರ ಬಗ್ಗೆ ಜಾಸ್ತಿ ತಲೆ ಕೆಡಿಸಿಕೊಳ್ಳುವುದಕ್ಕೆ ಹೋಗುವುದಿಲ್ಲ. ಪರ್ಫಾಮೆನ್ಸ್ ಚೆನ್ನಾಗಿಲ್ಲ ಅಂದರೆ, ಅದನ್ನು ತಿದ್ದಿಕೊಳ್ಳುವುದಕ್ಕೆ ಟ್ರೈ ಮಾಡುತ್ತೇನೆ ಹೊರತು, ನೀವು ಮಾಡಿದ ಪ್ರಾಜೆಕ್ಟ್ ಓಡಲಿಲ್ಲ.. ಇದೂ ಓಡುವುದಿಲ್ಲವೇನೋ ಅಂತ ಹೇಳಿದರೆ, ಅದು ನನ್ನ ಕೈಯಲ್ಲಿ ಇಲ್ಲ. ಯಾಕಂದ್ರೆ ಒಂದು ಪ್ರಾಜೆಕ್ಟ್ ಶುರುವಾಗುವುದಕ್ಕೂ ನಾನು ಕಾರಣವಲ್ಲ. ಅದು ಮುಗಿಯುವುದಕ್ಕೂ ನಾನು ಕಾರಣವಲ್ಲ. ಒಂದು ಪ್ರಾಜೆಕ್ಟ್ ಮುಗಿಯುವುದಕ್ಕೆ ಆರ್ಟಿಸ್ಟ್ ಕಾರಣ ಆಗುವುದೇ ಇಲ್ಲ" ಎಂದು ನಟಿ ಅಮೂಲ್ಯ ಹೇಳಿದ್ದಾರೆ.


Click it and Unblock the Notifications











