Raghavendra Stores: ಕಿರುತೆರೆಯಲ್ಲೂ ಜಗ್ಗೇಶ್ ಮೋಡಿ.. ಇದೇ ವೀಕೆಂಡ್‌ನಲ್ಲಿ 'ರಾಘವೇಂದ್ರ ಸ್ಟೋರ್ಸ್'!
ವೀಕೆಂಡ್ ಬಂತು ಅಂದ್ರೆ ಜನರು ಓಟಿಟಿ, ಇಲ್ಲವೇ ಟಿವಿ ಕಡೆ ಮೋಡಿ ಮಾಡುತ್ತಾರೆ. ಈಗ ಮತ್ತೊಂದು ವೀಕೆಂಡ್ ಬಂದಿದೆ. ವಾರಾಂತ್ಯದಲ್ಲಿ ಮತ್ತೊಮ್ಮೆ ಪ್ರೇಕ್ಷಕರನ್ನು ಮೋಡಿ ಮಾಡುವುದಕ್ಕೆ ಸ್ಟಾರ್ ಸುವರ್ಣ ಸಜ್ಜಾಗಿ ನಿಂತಿದೆ. ಅದೂ ನವರಸ ನಾಯಕ ಜಗ್ಗೇಶ್ ಸಿನಿಮಾದೊಂದಿಗೆ..
ಜಗ್ಗೇಶ್ ಸಿನಿಮಾ ಅಂದ್ರೆ ನಗುವಿಗೇನು ಮೋಸವಿರಲ್ಲ. ನವರಸ ನಾಯಕನ ಸಿನಿಮಾಗಳು ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸುತ್ತವೆ. ಅದರಲ್ಲೊಂದು ಇತ್ತೀಚೆಗೆ ತೆರೆಕಂಡ ಸಿನಿಮಾ 'ರಾಘವೇಂದ್ರ ಸ್ಟೋರ್ಸ್'. ಈ ಸಿನಿಮಾ ಥಿಯೇಟರ್ ಹಾಗೂ ಓಟಿಟಿಯಲ್ಲಿ ಪ್ರಸಾರಗೊಂಡ ಬಳಿಕ ಕಿರುತೆರೆಯ ವೀಕ್ಷಕರಿಗಾಗಿ ಪ್ರಸಾರವಾಗುತ್ತಿದೆ.

'ರಾಘವೇಂದ್ರ ಸ್ಟೋರ್ಸ್' ಸಿನಿಮಾವನ್ನು ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡಿದೆ. ಹೀಗಾಗಿ ಈ ಸಿನಿಮಾ ಮೂಲಕ ಕಿರುತೆರೆ ವೀಕ್ಷಕರು ಮನರಂಜನೆಯನ್ನು ನಿರೀಕ್ಷೆ ಮಾಡಬಹುದು. ಹಾಸ್ಯ, ತುಂಟತನ, ಶೃಂಗಾರ, ವೇದನೆ, ಭಾವುಕತೆ ಎಲ್ಲವೂ ಈ ಸಿನಿಮಾದಲ್ಲಿ ಸೇರಿದೆ.
ತಂದೆ ಗುಂಡ ಭಟ್ಟರ 'ರಾಘವೇಂದ್ರ ಸ್ಟೋರ್ಸ್'ನಲ್ಲಿ ಜಗ್ಗೇಶ್ ಅಡುಗೆ ಭಟ್ಟ ಕಮ್ ಸಪ್ಲೆಯರ್. ಇನ್ನೂ ಬ್ರಹ್ಮಚಾರಿಯೇ ಆಗಿರುವ ಹಯವದನನ ಮದುವೆಯ ಪ್ರಸಂಗವನ್ನು ಹಾಸ್ಯಮಯವಾಗಿ ಭಾವನಾತ್ಮಕವಾಗಿ ಹೇಳಲಾಗಿದೆ. ಅಡುಗೆಯನ್ನೇ ಉದ್ಯೋಗ ಮಾಡಿಕೊಂಡಿರುವವರಿಗೆ ಹುಡುಗಿ ಸಿಗೋದಿಲ್ಲ ಅನ್ನೋದನ್ನು ಮುಂದಿಟ್ಟುಕೊಂಡು ಹಾಸ್ಯ ಭರಿತ ಸನ್ನಿವೇಶಗಳೊಂದಿಗೆ ಸಂತೋಷ್ ಆನಂದ್‌ರಾಮ್ ಕಥೆಯನ್ನು ಹೆಣೆದಿದ್ದರು.

ಈ ಸಿನಿಮಾದಲ್ಲಿ ನವರಸ ನಾಯಕ ಜಗ್ಗೇಶ್ ಜೊತೆ ಪ್ರಮುಖ ಪಾತ್ರದಲ್ಲಿ ಶ್ವೇತಾ ಶ್ರೀವಾತ್ಸವ್ ನಟಿಸಿದ್ದಾರೆ. ಇವರೊಂದಿಗೆ ರವಿಶಂಕರ್ ಗೌಡ, ಅಚ್ಯುತ್ ಕುಮಾರ್, ದತ್ತಣ್ಣ, ಮಿತ್ರಾ ಸೇರಿದಂತೆ ಇನ್ನು ಅನೇಕ ಕಲಾವಿದರು ನಟಿಸಿದ್ದಾರೆ. ಈ ವರ್ಷ ತೆರೆಕಂಡ ಸಿನಿಮಾಗಳ ಪೈಕಿ ಕುಚೇಷ್ಟೆ ಇಲ್ಲದ ಬೆಸ್ಟ್ ಕಾಮಿಡಿ ಸಿನಿಮಾ ಆಗಿದೆ.
ಥಿಯೇಟರ್ ಹಾಗೂ ಓಟಿಟಿಯಲ್ಲಿ ಪ್ರದರ್ಶನ ಕಂಡ ಬಳಿಕ ಹೊಂಬಾಳೆ ಫಿಲಂಸ್ 'ರಾಘವೇಂದ್ರ ಸ್ಟೋರ್ಸ್' ಸಿನಿಮಾವನ್ನು ನಿರ್ಮಿಸಿದೆ. ಇದೇ ಮೊದಲ ಬಾರಿಗೆ ಕಿರುತೆರೆಯಲ್ಲಿ ಈ ಸಿನಿಮಾ ಪ್ರಸಾರ ಆಗಲಿದೆ.
ಜಗ್ಗೇಶ್ ಮ್ಯಾನರಿಸಂ, ಕಾಮಿಡಿ ಡೈಲಾಗ್‌ಗಳ ಜೊತೆ ಒಂದೊಳ್ಳೆ ಸಂದೇಶವನ್ನು ನೀಡುತ್ತಾ ಕಿರುತೆರೆ ವೀಕ್ಷಕರಿಗೆ ಕಚಗುಳಿಯನ್ನಿಡಲು ಕಿರುತೆರೆಗೆ ಬರುತ್ತಿದೆ. ಸುವರ್ಣ ವರ್ಲ್ಡ್ 'ರಾಘವೇಂದ್ರ ಸ್ಟೋರ್ಸ್' ಪ್ರೀಮಿಯರ್ ಮೂವಿ ಇದೇ ಭಾನುವಾರ ಜುಲೈ 23 ರಂದು ಸಂಜೆ 6.30 ಕ್ಕೆ ಪ್ರಸಾರ ಆಗಲಿದೆ.


Click it and Unblock the Notifications











