ಜೊತೆ ಜೊತೆಯಲಿ ಧಾರಾವಾಹಿ ನಿರ್ದೇಶಕ ಆರೂರು ಜಗದೀಶ್ ಆಸ್ಪತ್ರೆಗೆ ದಾಖಲು
ಜನಪ್ರಿಯ ಧಾರಾವಾಹಿ 'ಜೊತೆ ಜೊತೆಯಲಿ' ನಿರ್ದೇಶಕ ಆರೂರು ಜಗದೀಶ್ ಅವರನ್ನು ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಜಗದೀಶ್ ಅವರಿಗೆ ಅನಾರೋಗ್ಯ ಸಮಸ್ಯೆ ಉಂಟಾಗಿದ್ದು ಸುಮಾರು ಒಂದು ವಾರದಿಂದ ಅವರು ಮಣಿಪಾಲದ ಕಸ್ತೂರ ಬಾ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Recommended Video
ಜಗದೀಶ್ ಅವರು ಅನಾರೋಗ್ಯಕ್ಕೆ ತುತ್ತಾಗಿರುವ ಸಂಗತಿಯನ್ನು ಅವರ ಪತ್ನಿ ಹಾಗೂ ಜೆಎಸ್ ಪ್ರೊಡಕ್ಷನ್‌ನ ಮಾಲೀಕರಾದ ನಿರ್ಮಾಪಕಿ ಸ್ಮಿತಾ ಜಗದೀಶ್ ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ್ದಾರೆ.
ಆರೂರು ಜಗದೀಶ್ ಅವರ ಫೇಸ್‌ಬುಕ್ ಪುಟದಲ್ಲಿ ಈ ವಿಷಯ ಹಂಚಿಕೊಂಡಿರುವ ಸ್ಮಿತಾ, ಕೆಲವು ಒಳಾಂಗ ಸಮಸ್ಯೆಗಳಿಂದಾಗಿ ಜಗದೀಶ್ ಅವರನ್ನು ಒಂದು ವಾರದಿಂದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ನಿಮ್ಮ ಸಂದೇಶಗಳಿಗೆ ಪ್ರಸ್ತುತ ಸ್ಪಂದಿಸುವ ಸ್ಥಿತಿಯಲ್ಲಿ ಅವರು ಇಲ್ಲ. ಹೀಗಾಗಿ ನಿಮ್ಮ ಎಲ್ಲರ ಜನ್ಮದಿನದ ಶುಭ ಹಾರೈಕೆಗಳಿಗೆ ನಾನು ಪ್ರತಿಕ್ರಿಯೆ ನೀಡುತ್ತಿದ್ದೇನೆ ಎಂದು ಸ್ಮಿತಾ ಹೇಳಿದ್ದಾರೆ.

ಉಡುಪಿ ಜಿಲ್ಲೆಯ ಬ್ರಹ್ಮಾವರದವರಾದ ಆರೂರು ಜಗದೀಶ್ ಅವರು ಭಾನುವಾರ ಜನ್ಮದಿನ ಆಚರಿಸಿಕೊಳ್ಳಬೇಕಿತ್ತು. ಆದರೆ ಆಸ್ಪತ್ರೆಯಲ್ಲಿರುವ ಕಾರಣದಿಂದ ಅವರು ಹುಟ್ಟುಹಬ್ಬ ಆಚರಿಸಿಕೊಳ್ಳಲು ಸಾಧ್ಯವಾಗಿಲ್ಲ. ಲಾಕ್ ಡೌನ್ ಬಳಿಕ ಸರ್ಕಾರದ ಮಾರ್ಗಸೂಚಿಗಳಿಗೆ ಅನುಗುಣವಾಗಿ ಧಾರಾವಾಹಿ ಚಿತ್ರೀಕರಣ ಪ್ರಾರಂಭವಾಗಿತ್ತು. ಈಗ ಲಾಕ್ ಡೌನ್ ಇರುವ ಕಾರಣದಿಂದ ಮತ್ತೆ ಚಿತ್ರೀಕರಣ ನಿಲ್ಲಿಸಲಾಗಿದೆ ಎನ್ನಲಾಗಿದೆ.


Click it and Unblock the Notifications











