10 ವರ್ಷಗಳ ಬಳಿಕ ಜೀ ಕನ್ನಡಕ್ಕೆ ಮರಳಿದ ರಚಿತಾ ರಾಮ್: ಹೈದಾರಾಬಾದ್‌ನಲ್ಲಿ ಮಸ್ತ್ ಡ್ರಾಮ
ಡಿಂಪಲ್ ಕ್ವೀನ್ ರಚಿತಾ ರಾಮ್ ಕನ್ನಡ ಸಿನಿಮಾಗಳಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಕೈ ತುಂಬಾ ಸಿನಿಮಾಗಳನ್ನಿಟ್ಟುಕೊಂಡು ಬಿಡುವಿಲ್ಲದೆ ದುಡಿಯುತ್ತಿದ್ದಾರೆ. ಇಷ್ಟೆಲ್ಲಾ ಬ್ಯುಸಿಯಾಗಿದ್ದರೂ ರಚಿತಾ ರಾಮ್ ರಿಯಾಲಿಟಿ ಶೋವೊಂದನ್ನು ಒಪ್ಪಿಕೊಂಡಿದ್ದು, ಹೆಚ್ಚು ಕಡಿಮೆ 10 ವರ್ಷಗಳ ಬಳಿಕ ಮತ್ತೆ ಜೀ ಕನ್ನಡಕ್ಕೆ ಆಗಮಿಸುತ್ತಿದ್ದಾರೆ. ಕಿರುತೆರೆಯಿಂದಲೇ ವೃತ್ತಿ ಜೀವನ ಆರಂಭಿಸಿದ ರಚಿತಾ ಇತ್ತೀಚೆಗೂ ಕಿರುತೆರೆಯಲ್ಲಿ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ರಚಿತಾ ರಾಮ್ ಅಭಿನಯದ ಸಿನಿಮಾಗಳು ಒಂದೊಂದಾಗೇ ಬಿಡುಗಡೆಯಾಗುತ್ತಿವೆ. ಮುಂದಿನ ವಾರ ಜೋಗಿ ಪ್ರೇಮ್ ನಿರ್ದೇಶನದ 'ಏಕ್ ಲವ್ ಯಾ' ಸಿನಿಮಾ ಬಿಡುಗಡೆಯಾಗುತ್ತಿದ್ದು, ಈ ಸಿನಿಮಾ ಪ್ರಚಾರದಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಅತ್ತ ಹೊಸ ರಿಯಾಲಿಟಿ ಶೋ ಪ್ರೋಮೊ ಶೂಟ್‌ನಲ್ಲೂ ಭಾಗಿಯಾಗಿದ್ದಾರೆ. ಸದ್ಯ ಹೈದರಾಬಾದ್‌ನಲ್ಲಿ ಬೀಡುಬಿಟ್ಟಿರುವ ರಚಿತಾ ರಾಮ್ ಒಪ್ಪಿಕೊಂಡಿರುವ ರಿಯಾಲಿಟಿ ಶೋ ಯಾವುದು ನೋಡೋಣ ಬನ್ನಿ.

ರಚಿತಾ ರಾಮ್ ಡ್ರಾಮ ಜೂನಿಯರ್ಸ್ ಜಡ್ಜ್
ಜೀ ಕನ್ನಡದಲ್ಲಿ ಫೇಮಸ್ ರಿಯಾಲಿಟಿ ಶೋ ಡ್ರಾಮ ಜೂನಿಯರ್ಸ್. ಈ ಶೋ ನಾಲ್ಕನೇ ಸೀಸನ್ ಆರಂಭ ಆಗುತ್ತಿದೆ. ಈಗಾಗಲೇ ಮಕ್ಕಳು ವೇದಿಕೆ ಏರಲು ತುದಿಗಾಲಲ್ಲಿ ನಿಂತಿದ್ದಾರೆ. ಇತ್ತೀಚೆಗೆ ವಿಭಿನ್ನವಾದ ಪರಿಕಲ್ಪನೆಯಲ್ಲಿ ಪ್ರೋಮೊ ರಿಲೀಸ್ ಮಾಡಿದ್ದರು. ಡ್ರಾಮ ಜೂನಿಯರ್ಸ್ ಕ್ರೇಜಿಸ್ಟಾರ್ ರವಿಚಂದ್ರನ್ ಅವರನ್ನೇ ಕಿಡ್ನಾಪ್ ಮಾಡುವ ಪ್ರೋಮೊ ವೈರಲ್ ಆಗಿತ್ತು. ಈಗ ಕ್ರೇಜಿಸ್ಟಾರ್ ಜೊತೆ ಡಿಂಪಲ್ ಕ್ವೀನ್ ರಚಿತಾ ರಾಮ್ ಕೂಡ ಕಾಣಿಸಿಕೊಳ್ಳಲಿದ್ದಾರೆ. ಮೂವರು ತೀರ್ಪುಗಾರರಲ್ಲಿ ರಚಿತಾ ರಾಮ್ ಒಬ್ಬರಾಗಿ ಕಾಣಿಸಿಕೊಳ್ಳಲಿದ್ದಾರೆ.

ಹೈದರಾಬಾದ್‌ನಲ್ಲಿ ಪ್ರೋಮೊ ಶೂಟ್
ಡ್ರಾಮ ಜೂನಿಯರ್ಸ್ ಸೀಸನ್ 4ಗೆ ಜಡ್ಜ್ ಆಗಲು ರಚಿತಾ ರಾಮ್ ಒಪ್ಪಿದ್ದಾರೆ. ಹೀಗಾಗಿ ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ರಚಿತಾ ರಾಮ್‌ಗಾಗಿಯೇ ಪ್ರತ್ಯೇಕ ಪ್ರೋಮೊ ಶೂಟ್ ಮಾಡಲಾಗುತ್ತಿದೆ. ಈ ಪ್ರೋಮೊಗೆ 'ರೋಮಿಯೋ' ಸಿನಿಮಾ ನಿರ್ದೇಶಿಸಿದ್ದ ಪಿ ಸಿ ಶೇಖರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ವಿಭಿನ್ನ ಪರಿಕಲ್ಪನೆಯ ಈ ಪ್ರೋಮೊ ಶೀಘ್ರದಲ್ಲಿಯೇ ಅಭಿಮಾನಿಗಳು ನೋಡಲಿದ್ದಾರೆ.

ಮತ್ತೆ ಜೀ ಕನ್ನಡ ಶೋನಲ್ಲಿ ರಚಿತಾ
ರಚಿತಾ ರಾಮ್ 2012ರಲ್ಲಿ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಧಾರಾವಾಹಿಯೊಂದರಲ್ಲಿ ನಟಿಸಿದ್ದರು. ಅದುವೇ 'ಅರಸಿ'. 200ನೇ ಸಂಚಿಕೆ ಬಳಿಕ ಅರಸಿ ಧಾರಾವಾಹಿ ಎಂಟ್ರಿ ಕೊಟ್ಟಾಗ ರಚಿತಾ ಹೆಸರು ಬಿಂದಿಯಾ ರಾಮ್ ಎಂದಿತ್ತು. ಈ ಧಾರಾವಾಹಿ ಬಳಿಕ ರಚಿತಾ ರಾಮ್ ಸಿನಿಮಾಗಳ ಕಡೆ ಮುಖ ಮಾಡಿದ್ದರಿಂದ ಮತ್ತೆ ಧಾರಾವಾಹಿಯಲ್ಲಿ ಕಾಣಿಸಿಕೊಂಡಿರಲಿಲ್ಲ. ಅಲ್ಲದೆ ಜೀ ಕನ್ನಡದ ಯಾವುದೇ ರಿಯಾಲಿಟಿ ಶೋನಲ್ಲೂ ಅತಿಥಿಯಾಗಿ, ಜಡ್ಜ್ ಆಗಿ ಭಾಗವಹಿಸಿರಲಿಲ್ಲ. ಹೆಚ್ಚು ಕಡಿಮೆ 10 ವರ್ಷಗಳ ಬಳಿಕ ಮತ್ತೆ ಜೀ ಕನ್ನಡಕ್ಕೆ ಜಡ್ಜ್ ಆಗಿ ಆಗಮಿಸುತ್ತಿದ್ದಾರೆ. ಡ್ರಾಮ ಜೂನಿಯರ್ಸ್ ಜೊತೆ ಡಿಂಪಲ್ ಸ್ಮೈಲ್ ಕೊಡುತ್ತಾ ಕಾಣಿಸಿಕೊಳ್ಳಲಿದ್ದಾರೆ.

ಡ್ರಾಮ ಜೂನಿಯರ್ಸ್ 4ಗೆ ಜಡ್ಜ್‌ಗಳು ಯಾರು?
ಡ್ರಾಮ ಜೂನಿಯರ್ಸ್ ಸೀಸನ್ 4 ಗೆ ಯಾರು ಜಡ್ಜ್ ಆಗುತ್ತಾರೆ ಅನ್ನುವುದು ಮತ್ತಷ್ಟು ಕುತೂಹಲ ಕೆರಳಿಸಿದೆ. ಈಗಾಗಲೇ ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ರಚಿತಾ ರಾಮ್ ಡ್ರಾಮ ಜೂನಿಯರ್ಸ್ ಗೆಸ್ಟ್ ಅನ್ನುವುದು ಪಕ್ಕಾಗಿದೆ. ಆದರೆ, ಇನ್ನೊಬ್ಬರು ಜಡ್ಜ್ ಯಾರು ಎನ್ನುವುದು ಸದ್ಯ ಯಕ್ಷ ಪ್ರಶ್ನೆಯಾಗಿಯೇ ಉಳಿದಿದ್ದರೂ, ಹಿರಿಯ ಕಲಾವಿದೆ ಲಕ್ಷ್ಮಿ ಅವರೇ ಮುಂದುವರೆಯಬಹುದು ಎನ್ನಲಾಗುತ್ತಿದೆ. ಹೀಗಾಗಿ ಈ ಬಾರಿ ಡ್ರಾಮ ಜೂನಿಯರ್ಸ್‌ನಲ್ಲಿ ತೀರ್ಪುಗಾರರೂ ಗಮನ ಸೆಳೆಯಲಿದ್ದಾರೆ.


Click it and Unblock the Notifications











