ಮೊದಲ ವಾರದಲ್ಲಿಯೇ ಟಿಆರ್‌ಪಿಯಲ್ಲಿ ಧೂಳೆಬ್ಬಿಸಿದ ಉಮಾಶ್ರೀಯ 'ಪುಟ್ಟಕ್ಕನ ಮಕ್ಕಳು'
ರಾಜಕೀಯ ಅಂತ ಬ್ಯುಸಿಯಾಗಿದ್ದ ಮಾಜಿ ಸಚಿವೆ ಉಮಾಶ್ರೀ ಇತ್ತೀಚೆಗೆ ಸಿನಿಮಾಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ. ರತ್ನನ್ ಪರಪಂಚ ಸಿನಿಮಾದ ಅದ್ಭುತ ಪಾತ್ರದ ಮೂಲಕ ಮತ್ತೆ ಚಿತ್ರರಂಗದಲ್ಲಿ ಹೊಸ ಮೆರುಗು ಮೂಡಿಸಿದ್ದ ಉಮಾಶ್ರೀ ಕಿರು ತೆರೆಗೂ ಮರಳಿದ್ದರು. ರಾಜಕೀಯದಿಂದ ಬಿಡುವು ಮಾಡಿಕೊಂಡು ಪುಟ್ಟಕ್ಕನಾಗಿ ತನ್ನ ಮೂವರು ಮಕ್ಕಳೊಂದಿಗೆ ಕರ್ನಾಟಕದ ಮನೆ ಮನೆಗಳಿಗೆ ಭೇಟಿ ನೀಡಲು ಮುಂದಾಗಿದ್ದರು.
ಮೂವರು ಹೆಣ್ಣು ಮಕ್ಕಳೊಂದಿಗೆ ಟ್ರ್ಯಾಕ್ಟರ್ ಏರಿ ಊರಲ್ಲಿ ಒಂದು ಸುತ್ತು ಹಾಕಿದ್ದ ಹಿರಿಯ ನಟಿ ಉಮಾಶ್ರೀಯನ್ನು ಪ್ರೇಕ್ಷಕರು ಹೊಗಳಿಕೊಂಡಾಡಿದ್ದಾರೆ. ಉಮಾಶ್ರೀ ಮತ್ತು ಗೋಳು, ಬದುಕು ಬವಣೆಯನ್ನು ಕಿರುತೆರೆಯಲ್ಲಿ ಬಿಂಬಿಸಲಾಗಿತ್ತು. ಉಮಾಶ್ರೀ ಸ್ಮಾಲ್ ಸ್ಕ್ರೀನ್‌ಗೆ ಕಮ್ ಬ್ಯಾಕ್ ಮಾಡಿದ್ದಕ್ಕೂ ಸಾರ್ಥಕವೆನ್ನುವಂತೆ 'ಪುಟ್ಟಕ್ಕನ ಮಕ್ಕಳು' ಮೊದಲ ವಾರವೇ ಟಿಆರ್‌ಪಿಯಲ್ಲಿ ಭರ್ಜರಿ ದಾಖಲೆ ಮಾಡಿದೆ.

ಕಿರುತೆರೆಯಲ್ಲಿ ಮಾಜಿ ಸಚಿವೆ ಉಮಾಶ್ರೀ ಕಮಾಲ್
ಮಾಜಿ ಸಚಿವೆ ಹಾಗೂ ರಾಷ್ಟ್ರಪ್ರಶಸ್ತಿ ಪುರಸ್ಕೃತ ನಟಿ ಉಮಾಶ್ರೀ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಕಿರುತೆರೆಗೆ ಮರಳಿದ ಉಮಾಶ್ರೀಯನ್ನು ನೋಡಲು ಕರುನಾಡಿನ ಜನತೆ ಕಾತುರದಿಂದ ಕಾದು ಕೂತಿತ್ತು. ಮಂಡ್ಯ ಸಮೀಪದ ಹಳ್ಳಿಯೊಂದರಿಂದ ಆರಂಭ ಆಗುವ ಕಥೆಗೆ ವೀಕ್ಷಕರಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಹಿರಿಯ ನಟಿ ಉಮಾಶ್ರೀ ಹಾಗೂ ಅವರ ಹೆಣ್ಣು ಮಕ್ಕಳ ಕಥೆಗೆ ಮೊದಲ ವಾರದಲ್ಲೇ ಪ್ರೇಕ್ಷಕರು ಭಾರೀ ಮೆಚ್ಚುಗೆ ಗಳಿಸಿದ್ದಾರೆ. ಸಿನಿಮಾದಷ್ಟೇ ಲೀಲಾಜಾಲವಾಗಿ ಧಾರಾವಾಹಿಯಲ್ಲೂ ನಟಿಸಿರುವ ಉಮಾಶ್ರೀ ವೀಕ್ಷಕರಿಗೆ ತುಂಬಾನೇ ಇಷ್ಟ ಆಗಿದ್ದಾರೆ.

ಪುಟ್ಟಕ್ಕನ ಮಕ್ಕಳು ಧಾರಾವಾಹಿ ಟಿಆರ್‌ಪಿ ಎಷ್ಟು?
'ಪುಟ್ಟಕ್ಕನ ಮಕ್ಕಳು' ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿದೆ. 'ಪುಟ್ಟಕ್ಕನ ಮಕ್ಕಳು' ವಿನೂತನ ಮೆಗಾ ಧಾರಾವಾಹಿಯನ್ನು ಡಿಸೆಂಬರ್ 13 ರಿಂದ ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7.30ಕ್ಕೆ ಪ್ರಸಾರವಾಗುತ್ತಿದೆ. ಈ ಧಾರಾವಾಹಿಯನ್ನು ಜನರು ಮೆಚ್ಚಿಕೊಂಡಿದ್ದಾರೆ. ಮೊದಲ ವಾರವೇ ಈ ಧಾರಾವಾಹಿ 13.5 ಟಿಆರ್‌ಪಿ ಗಳಿಸಿ ಮೊದಲ ಸ್ಥಾನದಲ್ಲಿದೆ. ಆರಂಭದ ವಾರದಲ್ಲಿಯೇ ಈ ಇಷ್ಟೊಂದು ಟಿಆರ್‌ಪಿ ಗಳಿಸಿದ ಮೊದಲ ಧಾರಾವಾಹಿ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

ಮಂಡ್ಯದಲ್ಲಿ ಪುಟ್ಟಕ್ಕನ ಮಕ್ಕಳ ಬದುಕು
ಪುಟ್ಟಕ್ಕ ಮತ್ತು ಮಕ್ಕಳ ಬದುಕು ಆರಂಭ ಆಗುವುದೇ ಮಂಡ್ಯ ಜಿಲ್ಲೆ ದೇವಿಪುರ ಅನ್ನೋ ಗ್ರಾಮದಿಂದ. ಗಂಡು ಮಗುವಿಗೆ ಜನ್ಮ ನೀಡಲಿಲ್ಲವೆಂದು ಪುಟ್ಟಕ್ಕನ ಗಂಡ ಬೇರೊಂದು ಮದುವೆಯಾಗುತ್ತಾನೆ. ಸಹನ, ಸ್ನೇಹ ಮತ್ತು ಸುಮ ಎಂಬ ಮೂವರು ಹೆಣ್ಣು ಮಕ್ಕಳು ಪುಟ್ಟಕ್ಕನಿಗೆ ಆಸರೆಯಾಗಿ ನಿಲ್ಲುತ್ತಾರೆ. ಮೆಸ್ ನಡೆಸುವ ಪುಕ್ಕಟ್ಟ ಹಾಗೂ ಆಕೆಯ ಮಕ್ಕಳ ಬದುಕು ಇಲ್ಲಿಂದ ನಾನಾ ತಿರುವುಗಳನ್ನು ಪಡೆದುಕೊಳ್ಳುತ್ತಾ ಮುಂದೆ ಸಾಗುತ್ತದೆ.

ಪುಟ್ಟಕ್ಕನಿಗೆ ಬಡ್ಡಿ ಬಂಗಾರಮ್ಮ ಟಕ್ಕರ್
ಪುಟ್ಟಕ್ಕ ಇರುವ ಪಕ್ಕದೂರಿನಲ್ಲಿಯೇ ಸಾಲ ನೀಡುವ ಬಡ್ಡಿ ಬಂಗಾರ ಪಾತ್ರವೂ ಇದೆ. ಹಿರಿತೆರೆಯ ಈ ಫೇಮಸ್ ಪಾತ್ರ ಕಿರುತೆರೆಯಲ್ಲೂ ಸದ್ದು ಮಾಡುತ್ತಿದೆ. ಸುತ್ತಲಿನ ಹತ್ತೂರಿನ ಜನಕ್ಕೂ ಬಡ್ಡಿ ಬಂಗಾರಮ್ಮ ಕಂಡರೆ ಭಯ. ಹೀಗಾಗಿ ಪುಟ್ಟಕ್ಕ ಹಾಗೂ ಬಡ್ಡಿ ಬಂಗಾರಮ್ಮ ಮುಖಾಮುಖಿಯಾದರೆ ತಿರುವುಗಳು ಹೇಗಿರುತ್ತೆ ಎನ್ನುವುದನ್ನು ಊಹಿಸಿಕೊಳ್ಳಲು ಅಸಾಧ್ಯ. ಉಮಾಶ್ರೀ ಪುಟ್ಟಕ್ಕನ ಪಾತ್ರದಲ್ಲಿ ನಟಿಸಿದ್ದರೆ, ಇತ್ತ ಮಂಜುಭಾಷಿಣಿ ಬಡ್ಡಿ ಬಂಗಾರಮ್ಮನ ಪಾತ್ರದಲ್ಲಿ ನಟಿಸಿದ್ದಾರೆ. ಜೊತೆಜೊತೆಯಲಿ ಖ್ಯಾತಿಯ ಆರೂರು ಜಗದೀಶ್ ಈ ಧಾರಾವಾಹಿಯನ್ನು ನಿರ್ದೇಶಿಸುತ್ತಿದ್ದಾರೆ.


Click it and Unblock the Notifications











