ನಾಲ್ಕು ಗಂಟೆಗಳ ಮಹಾ ಮನರಂಜನೆ 'ಕ್ವಾಟ್ಲೆ ಕಿಚನ್ ಗ್ರಾಂಡ್ ಫಿನಾಲೆ'ಯ ಹೈಲೈಟ್ಸ್ ಏನು?
ಕಿರುತೆರೆಯಲ್ಲಿ ವೀಕೆಂಡ್ ಬಂತು ಅಂದರೆ ಮನರಂಜನೆಗೇನು ಕೊರತೆ ಇರೋದಿಲ್ಲ. ತಮ್ಮ ವೀಕ್ಷಕರನ್ನು ರಂಜಿಸುವುದಕ್ಕೆ ಭಿನ್ನ-ವಿಭಿನ್ನ ಕಾರ್ಯಕ್ರಮಗಳನ್ನು ರೆಡಿ ಮಾಡಿಟ್ಟುಕೊಳ್ಳುತ್ತಲೇ ಇರುತ್ತಾರೆ. ಅದರಲ್ಲೂ ರಿಯಾಲಿಟಿ ಶೋ, ಕಾಮಿಡಿ ಶೋ, ಮ್ಯೂಸಿಕ್ ಶೋ ಅಂತ ಹತ್ತು ಹಲವು ಕಾರ್ಯಕ್ರಮಗಳು ಇರುತ್ತವೆ. ಇಂತಹ ಕಾರ್ಯಕ್ರಮದಲ್ಲಿ ಕಲರ್ಸ್ ಕನ್ನಡದ ಕಾಮಿಡಿ ಕುಕ್ಕಿಂಗ್ ಶೋ 'ಕ್ವಾಟ್ಲೆ ಕಿಚನ್' ವಿಭಿನ್ನವಾಗಿ ನಿಂತಿತ್ತು.
ಇಷ್ಟು ದಿನ ಕಿರುತೆರೆ ವೀಕ್ಷಕರಿಗೆ ಹೊಸ ರುಚಿಯನ್ನು ಪರಿಚಯಿಸುತ್ತಾ ಕಾಮಿಡಿ ಮೂಲಕ ಮನರಂಜಿಸುತ್ತಿದ್ದ ಕಾಮಿಡಿ ಕುಕ್ಕಿಂಗ್ ಶೋ 'ಕ್ವಾಟ್ಲೆ ಕಿಚನ್'. ಇದು ಅಡುಗೆ ಹಾಗೂ ಹಾಸ್ಯದ ನವಿರಾದ ಮಿಶ್ರಣ ಆಗಿತ್ತು. ಈಗ ಈ ಶೋ ಗ್ರ್ಯಾಂಡ್ ಫಿನಾಲೆಯ ಹಂತಕ್ಕೆ ಬಂದು ನಿಂತಿದೆ. ಬಿಗ್ ಬಾಸ್ ಕನ್ನಡ ಸೀಸನ್ 12 ಆರಂಭ ಆಗುವುದಕ್ಕೂ ಮುನ್ನ ವೀಕೆಂಡ್‌ನಲ್ಲಿ ಪ್ರಸಾರ ಆಗುತ್ತಿದ್ದ ಮತ್ತೊಂದು ಶೋಗೆ ಅಂತ್ಯ ಹಾಡುತ್ತಿದೆ.

ಕಾಮಿಡಿ ಕುಕ್ಕಿಂಗ್ ಶೋ 'ಕ್ವಾಟ್ಲೆ ಕಿಚನ್' ಅದ್ಧೂರಿಯಾಗಿ ಮುಗಿಸುವುದಕ್ಕೆ ಕಲರ್ಸ್ ಕನ್ನಡ ಸಿದ್ಧತೆಗಳನ್ನು ಮಾಡಿಕೊಂಡಿದೆ. ಇದು ಬರೋಬ್ಬರಿ ನಾಲ್ಕು ಗಂಟೆಗಳ ಮಹಾ ಮನರಂಜನೆ. ಫಿನಾಲೆಗೆ ತಲುಪಿರುವ ಆರು ಮಂದಿ ಫೈನಲಿಸ್ಟ್‌ಗಳು, ಅವರ ನಡುವೆ ಪೈಪೋಟಿ, ಸೆಲೆಬ್ರೆಟಿಗಳ ಎಂಟ್ರಿ ಇವೆಲ್ಲವೂ ಈ ನಾಲ್ಕು ಗಂಟೆಗಳ ಮಹಾಮನರಂಜನೆಯಲ್ಲಿ ನೋಡುವುದಕ್ಕೆ ಸಿಗುತ್ತೆ. ಈ ಕಾರ್ಯಕ್ರಮದ ಸ್ವರೂಪ ಏನೇನಿರುತ್ತೆ ಅಂತ ನೋಡುವುದಾರೇ.
ಕ್ವಾಟ್ಲೆ ಕಿಚನ್‌ಗೆ 'ಸು ಫ್ರಮ್ ಸೋ' ಟೀಮ್
ಬಿಗ್ ಬಾಸ್ ಕನ್ನಡ 12 ಆರಂಭ ಆಗುವುದಕ್ಕೂ ಮುನ್ನ ಕಾಮಿಡಿ ಕುಕ್ಕಿಂಗ್ ಶೋ 'ಕ್ವಾಟ್ಲೆ ಕಿಚನ್'ಗೆ ಗ್ರ್ಯಾಂಡ್ ಫಿನಾಲೆ. ಇದೇ ಶನಿವಾರ (ಸೆಪ್ಟೆಂಬರ್ 27) ಸಂಜೆ 6 ರಿಂದ ರಾತ್ರಿ 10 ರ ವರೆಗೆ ಭರಪೂರ ಮನರಂಜನೆ ನೀಡುವ ಕುಕ್ಕಿಂಗ್ ಶೋನ ಗ್ರಾಂಡ್ ಫಿನಾಲೆ ಕಾರ್ಯಕ್ರಮ ಪ್ರಸಾರವಾಗಲಿದೆ. ನೂರಕ್ಕೆ ನೂರು ಕಾಮಿಡಿ ಕುಕ್ಕಿಂಗ್ ಶೋ 'ಕ್ವಾಟ್ಲೆ ಕಿಚನ್'ನ ಈ ಮಹಾ ಸಂಚಿಕೆಯಲ್ಲಿ 'ಸು ಫ್ರಮ್ ಸೋ' ಸಿನಿಮಾತಂಡ ಭಾಗಿಯಾಗುತ್ತಿದೆ. ರಾಜ್ ಬಿ ಶೆಟ್ಟಿ, ರವಿಯಣ್ಣ ಖ್ಯಾತಿಯ ಶನೀಲ್ ಗೌತಮ್, ಜೆಪಿ ತುಮಿನಾಡ್ ಗೆಸ್ಟ್‌ಗಳಾಗಿ ಆಗಮಿಸಿದ್ದಾರೆ. ಇವರಿಗೆ ಕ್ವಾಟ್ಲೆ ಕೊಡಲಿದೆ ಈ ತಂಡ.
ಫೈನಲಿಸ್ಟ್‌ಗಳು ಯಾರು? ಗೆದ್ದೋರಿಗೆಷ್ಟು?
'ಕ್ವಾಟ್ಲೆ ಕಿಚನ್' ಗ್ರ್ಯಾಂಡ್ ಫಿನಾಲೆಗೆ ಆರು ಮಂದಿ ಕುಕ್‌ಗಳು ಪ್ರವೇಶ ಪಡೆದಿದ್ದಾರೆ. ಇಲ್ಲಿ ಎರಡು ರೌಂಡ್‌ನ ಮಹಾ ಪೈಪೋಟಿ ಇರುತ್ತೆ. ಇದರಲ್ಲಿ ಒಬ್ಬರನ್ನು ವಿನ್ನರ್ ಅಂತ ಘೋಷಿಸಲಾಗುತ್ತೆ. ಬೆಳ್ಳುಳ್ಳಿ ಕಬಾಬ್ ಚಂದ್ರು, ಆರ್ ಕೆ ಚಂದನ್, ದಿಲೀಪ್ ಶೆಟ್ಟಿ, ಕಾವ್ಯಾ ಗೌಡ, ಶರ್ಮಿತಾ ಗೌಡ, ರಾಘವೇಂದ್ರ ಫಿನಾಲೆಗೆ ಪ್ರವೇಶ ಪಡೆದಿರುವ ಆರು ಮಂದಿ. ಈ ಆರು ಮಂದಿಯಲ್ಲಿ ವಿನ್ನರ್ ಯಾರು? ಟ್ರೋಫಿ ಜೊತೆಗೆ ಐದು ಲಕ್ಷ ಗೆಲ್ಲೋ ಅದೃಷ್ಟವಂತರು ಯಾರು? ಎಂಬ ಪ್ರಶ್ನೆಗೆ ಮಾಹಾ ಸಂಚಿಕೆ ಉತ್ತರ ಸಿಗಲಿದೆ.
ಮಹಾ ಸಂಚಿಕೆಯಲ್ಲಿ ಏನೇನಿರುತ್ತೆ?
'ಕ್ವಾಟ್ಲೆ ಕಿಚನ್' ಶೋನಲ್ಲಿ ನಟಿ ಶ್ರುತಿ ಹಾಗೂ ಕಳೆದ 25 ವರ್ಷಗಳಲ್ಲಿ ಪಾಕಶಾಸ್ತ್ರ ಮತ್ತು ಕಿರುತೆರೆಯ ಹಲವು ಪ್ರಸಿದ್ಧ ಶೋಗಳಲ್ಲಿ ಜನಪ್ರಿಯ ಚೆಫ್ ಕೌಶಿಕ್ ತೀರ್ಪುಗಾರರಾಗಿ ಇದ್ದಾರೆ. ಕಿಚನ್ ಸ್ಟಾರ್‌ಗಳು ಮತ್ತು ಕ್ಯಾಟ್ಲೆಗಳ ಮೋಜು ಮಸ್ತಿಯ ಈ ಜಗಳಬಂದಿ ಕಾರ್ಯಕ್ರಮವನ್ನು ಅನುಪಮಾ ಗೌಡ ಮತ್ತು ಕುರಿ ಪ್ರತಾಪ್ ನಿರೂಪಣೆ ಮಾಡಲಿದ್ದಾರೆ.
ಬಿಗ್ ಬಾಸ್ ಲಿಸ್ಟ್ ಅನೌನ್ಸ್?
ಇನ್ನು 'ಕ್ವಾಟ್ಲೆ ಕಿಚನ್' ಗ್ರ್ಯಾಂಡ್ ಫಿನಾಲೆಯಲ್ಲಿ ಬಿಗ್ ಬಾಸ್‌ಗೆ ಹೋಗುವ ಕೆಲವು ಹೆಸರುಗಳನ್ನು ಅನಾವರಣ ಮಾಡಲಾಗುತ್ತೆ ಎನ್ನುವ ಸುದ್ದಿ ಓಡಾಡುತ್ತಿದೆ. ಇನ್ನು ಫಿನಾಲೆಗೆ ಬಂದಿರುವ ಆರು ಮಂದಿಯಲ್ಲಿ ಕೆಲವರು ಬಿಗ್ ಬಾಸ್ ಮನೆಗೆ ಹೋಗುತ್ತಾರೆಂಬ ವದಂತಿ ಕೂಡ ಹಬ್ಬಿದೆ. ಹೀಗಾಗಿ ಈ ವೀಕೆಂಡ್ ಕಿರುತೆರೆ ವೀಕ್ಷಕರಿಗೆ ಭರಪೂರ ಮನರಂಜನೆ ಸಿಗೋದು ಗ್ಯಾರಂಟಿ.


Click it and Unblock the Notifications











