'ಮಾಯಾಮೃಗ' ಬಳಿಕ ಕಿರುತೆರೆಗೆ ಎಂಟ್ರಿ ಕೊಟ್ಟ ಅವಿನಾಶ್; ಎಷ್ಟು ಎಪಿಸೋಡ್‌ನಲ್ಲಿ ಇರ್ತಾರೆ?
ಕನ್ನಡದ ಹಿರಿಯ ನಟರನ್ನು ಕಿರುತೆರೆಗೆ ಕರೆದುಕೊಂಡು ಬರುವ ಪ್ರಕ್ರಿಯೆ ನಡೆಯುತ್ತಿದೆ. ಮನರಂಜನಾ ವಾಹಿನಿಗಳು ಕಾಂಪಿಟೇಷನ್‌ಗೆ ಬಿದ್ದು ಹಿರಿಯ ನಟರನ್ನು ಧಾರಾವಾಹಿಗಳ ಕಡೆಗೆ ಸೆಳೆಯುತ್ತಿದ್ದಾರೆ. ಈಗಾಗಲೇ ಜೀ ಕನ್ನಡದಲ್ಲಿ ಉಮಾಶ್ರೀ, ಸುಧಾರಾಣಿ, ಶ್ವೇತಾ ಅಂತ ನಟಿಯರು ಎಂಟ್ರಿ ಕೊಟ್ಟಿದ್ದರು. ಹಾಗೇ ಸ್ಟಾರ್ ಸುವರ್ಣ ಕೂಡ ಹಿರಿಯ ನಟರನ್ನು ಸ್ಮಾಲ್ ಸ್ಕ್ರೀನ್‌ಗೆ ಕರೆದುಕೊಂಡು ಬರುತ್ತಿದ್ದಾರೆ.
ಸ್ಟಾರ್ ಸುವರ್ಣ ಹೊಸ ಹೊಸ ಧಾರಾವಾಹಿಗಳನ್ನು ವೀಕ್ಷಕರ ಮುಂದಿಡುವುದಕ್ಕೆ ಹೊರಟಿದೆ. ಅದರಲ್ಲೊಂದು 'ವಸುದೇವ ಕುಟುಂಬ'. ಈ ಧಾರಾವಾಹಿ ಮೂಲಕ ಹಿರಿಯ ನಟ ಅವಿನಾಶ್ ಅವರನ್ನು ಸೆಳೆದಿದ್ದಾರೆ. ಕನ್ನಡ ಸೇರಿದಂತೆ ಪರ ಭಾಷೆಯ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ಈ ಮೂಲಕ ಸುಮಾರು 27 ವರ್ಷಗಳ ಬಳಿಕ ಸೀರಿಯಲ್‌ಗೆ ಎಂಟ್ರಿ ಕೊಟ್ಟಿದ್ದಾರೆ.

ಈಗಾಗಲೇ ಸ್ಟಾರ್ ಸುವರ್ಣ ಈ ಧಾರಾವಾಹಿಯ ಪ್ರೋಮೋವನ್ನು ರಿಲೀಸ್ ಮಾಡಿದೆ. ಆ ಸೀರಿಯಲ್ ಪ್ರೋಮೋದಲ್ಲಿ ಅವಿನಾಶ್ ಕೂಡ ಕಾಣಿಸಿಕೊಂಡಿದ್ದಾರೆ. ಸಿನಿಮಾಗಳಲ್ಲಿ ಪೋಷಕ ಪಾತ್ರದಲ್ಲಿ ನಟಿಸುತ್ತಿದ್ದ ಹಿರಿಯ ನಟ ಇಲ್ಲೂ ಕೂಡ ತಂದೆ ಪಾತ್ರದಲ್ಲಿ ನಟಿಸಿದ್ದಾರೆ. ಹಾಗಿದ್ದರೆ, ಅವಿನಾಶ್ ಎಷ್ಟು ಎಪಿಸೋಡ್‌ಗಳಲ್ಲಿ ಇರುತ್ತಾರೆ? ಅವರ ಪಾತ್ರವೇನು? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.
'ವಸುದೇವ ಕುಟುಂಬ'ಕ್ಕೆ ಅವಿನಾಶ್ ಎಂಟ್ರಿ
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಹೊಸ ಧಾರಾವಾಹಿ 'ವಸುದೇವ ಕುಟುಂಬ' ಶೀಘ್ರದಲ್ಲಿಯೇ ಪ್ರಸಾರ ಆಗಲಿದೆ. ಅದರ ಪ್ರೋಮೋ ಈಗಾಗಲೇ ರಿಲೀಸ್ ಆಗಿದೆ. ಈ ಧಾರಾವಾಹಿ ಮೂಲಕ ಅವಿನಾಶ್ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ಈ ಹಿಂದೆ 'ಸ್ನೇಹದ ಕಡಲಲ್ಲಿ' ಧಾರಾವಾಹಿಯಲ್ಲಿ ಮತ್ತೊಬ್ಬ ಹಿರಿಯ ನಟ ಸುಮನ್ ಅವರನ್ನು ಕರೆದುಕೊಂಡಿ ಬಂದಿದ್ದರು. ಸುಮಾರು ಎರಡು ತಿಂಗಳ ಕಾಲ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದರು. ಈಗ ಅವಿನಾಶ್ ಸರದಿ. 'ವಸುದೇವ ಕುಟುಂಬ'ದಲ್ಲಿ ವಸುದೇವನಾಗಿ ಅವಿನಾಶ್ ಕಾಣಿಸಿಕೊಳ್ಳಲಿದ್ದಾರೆ.
27 ವರ್ಷಗಳ ಬಳಿಕ ಎಂಟ್ರಿ
ಹಿರಿಯ ನಟ ಅವಿನಾಶ್ 27 ವರ್ಷಗಳ ಹಿಂದೆ ಅಂದೆ ಅಂದರೆ, 1998ರಲ್ಲಿ ಜನಪ್ರಿಯ ಧಾರಾವಾಹಿ 'ಮಾಯಾಮೃಗ'ದಲ್ಲಿ ನಟಿಸಿದ್ದರು. ಆ ಬಳಿಕ ಅವಿನಾಶ್ ಕಿರುತೆರೆಯಲ್ಲಿ ಕಾಣಿಸಿಕೊಂಡಿರಲಿಲ್ಲ. ಸಿನಿಮಾಗಳಲ್ಲಿಯೇ ಬ್ಯುಸಿಯಾಗಿದ್ದ ಈ ನಟ ಈಗ ಸ್ಟಾರ್ ಸುವರ್ಣ ಧಾರಾವಾಹಿ ಮೂಲಕ ಎಂಟ್ರಿ ಕೊಡುತ್ತಿದ್ದಾರೆ. ಪ್ರೋಮೋ ನೋಡಿ ಕಿರುತೆರೆ ವೀಕ್ಷಕರು 'ವಸುದೇವ ಕುಟುಂಬ'ವನ್ನು ಯಾವಾಗ ಕಣ್ತುಂಬಿಕೊಳ್ಳುತ್ತೇವೋ ಎಂದು ಕಾತುರದಿಂದ ಕಾಯುತ್ತಿದ್ದಾರೆ.

ಪ್ರೋಮೋದಲ್ಲಿ ಏನಿದೆ?
'ವಸುದೇವ ಕುಟುಂಬ' ಪ್ರೋಮೋದಲ್ಲಿ ಅವಿನಾಶ್ ತಮ್ಮ ನಾಲ್ವರು ಹೆಣ್ಣು ಮಕ್ಕಳೊಂದಿಗೆ ಕಾಣಿಸಿಕೊಂಡಿದ್ದಾರೆ. ಹೆಣ್ಣು ಮಕ್ಕಳ ಬಗ್ಗೆ ಹೆಮ್ಮೆಯನ್ನು ವ್ಯಕ್ತಪಡಿಸುವ ಅವಿನಾಶ್ ಈ ಪ್ರೋಮೊದಲ್ಲಿ ಅದೃಶ್ಯರಾಗುತ್ತಾರೆ. ಅದ್ಯಾಕೆ ಅದೃಶ್ಯರಾಗುತ್ತಾರೆ? ವಸುದೇವ ಕುಟುಂಬದಲ್ಲಿ ಏನಾಗುತ್ತಿದೆ? ಅನ್ನೋದನ್ನು ತಿಳಿಯುವುದಕ್ಕೆ ಧಾರಾವಾಹಿ ಪ್ರಸಾರ ಆಗಬೇಕಿದೆ. ಈ ಮೂಲಕ ಅವಿನಾಶ್ ಧಾರಾವಾಹಿಯ ಎಷ್ಟು ಎಪಿಸೋಡ್‌ಗಳಲ್ಲಿ ಕಾಣಿಸಿಕೊಳ್ಳುತ್ತಾರೆ? ಅನ್ನೋ ಕುತೂಹಲವಿದೆ.
ಎಷ್ಟು ಎಪಿಸೋಡ್‌ನಲ್ಲಿ ಇರ್ತಾರೆ?
ಕಿರುತೆರೆ ಮೂಲಗಳ ಪ್ರಕಾರ, ಅವಿನಾಶ್ ಆರಂಭದಲ್ಲಿ 40 ರಿಂದ 50 ಎಪಿಸೋಡ್‌ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಒಂದು ವೇಳೆ ಸ್ಕ್ರಿಪ್ಟ್ ಡಿಮ್ಯಾಂಡ್ ಮಾಡಿದ್ದಲ್ಲಿ. ಅವಿನಾಶ್ ಅವರನ್ನು ಮುಂದುವರೆಸುವ ಸಾಧ್ಯತೆಯಿದೆ ಎನ್ನಲಾಗಿದೆ. ಆದರೆ, ಈ ಬಗ್ಗೆ ಧಾರಾವಾಹಿ ತಂಡವಾಗಲಿ, ಸ್ಟಾರ್ ಸುವರ್ಣ ಆಗಲಿ ಅಧಿಕೃತವಾಗಿ ಮಾಹಿತಿಯನ್ನು ಹಂಚಿಕೊಂಡಿಲ್ಲ. ಸದ್ಯ ಪ್ರೋಮೋ ರಿಲೀಸ್ ಆಗಿದ್ದು, ಆಗಸ್ಟ್ ತಿಂಗಳಲ್ಲಿ ಪ್ರಸಾರ ಆಗಲಿದೆ ಎಂದು ಹೇಳಲಾಗಿದೆ.


Click it and Unblock the Notifications











